ಬಹಳಷ್ಟು ರೈತರು ತಾವು ಬೆಳೆದ ಬೆಳೆಗೆ ಎಷ್ಟೇ ಆರೈಕೆ ಮಾಡಿದರೂ ಫಸಲು ಇಲ್ಲ ಎನ್ನುತ್ತಾರೆ. ಇದಕ್ಕೆ ಒಂದು ಕಾರಣ ಸಸ್ಯದಲ್ಲಿ ಆಹಾರ ಸಂಗ್ರಹಿಸುವ ಬೇರುಗಳ ಕೊರತೆ. ಬೇರುಗಳು ಹುಟ್ಟಿದಷ್ಟೂ ನೀರು ಹೆಚ್ಚಾಗಿ ಅದು ಕೊಳೆತು ಹೋಗಿ ನಷ್ಟವಾಗುತ್ತವೆ. ಹೊಸ ಬೇರುಗಳು ಹುಟ್ಟಿ ಚಟುವಟಿಕೆ ಪ್ರಾರಂಭಿಸುವ ಸಮಯಕ್ಕೆ ಮತ್ತೆ ಅದೂ ಕೊಳೆಯುವುದಕ್ಕೆ ಪ್ರಾರಂಭವಾಗುತ್ತದೆ. ಬೇರುಗಳ ರಕ್ಷಣೆಗೆ ಸೂಕ್ತ ಬಸಿ ವ್ಯವಸ್ಥೆ ಮಾಡಿಕೊಂದರೆ ಸಸ್ಯ ಆರೋಗ್ಯ ಸುಧಾರಿಸಿ ಇಳುವರಿ ಬರುತ್ತದೆ.

ಸಸ್ಯಗಳಿಗೆ ನೀರು ಬೇಕು. ಅದು ಹೆಚ್ಚಾಗಲೂ ಬಾರದು. ಕಡಿಮೆಯಾಗಲೂ ಬಾರದು. ನೀರು ಹೆಚ್ಚಾದರೆ ಬೇರು ಕೊಳೆಯುತ್ತದೆ. ಕಡಿಮೆಯಾದರೆ ಬೇರು ಸೊರಗುತ್ತದೆ. ಮಳೆಗಾಲದ ಸನ್ನಿವೇಶ ಸಸ್ಯಗಳಿಗೆ ಒಮ್ಮೆ ನೀರಿನ ತೃಷೆಯನ್ನು ನೀಗಿಸುತ್ತದೆಯಾದರೂ ಮಳೆ ತೀವ್ರವಾದಂತೆ ಅದು ಸಸ್ಯದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಸಸ್ಯದ ಬೇರುಗಳ ಮೇಲೈಯಲ್ಲಿರುವ ಉಸಿರಾಟದ ಮತ್ತು ಅನಿಲ ವರ್ಗಾವಣೆಯ ಕೊಶಗಳು ನಿಷ್ಕ್ರಿಯವಾಗುತ್ತದೆ. ಇದು ಸಸ್ಯದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಸಸ್ಯಗಳಿಗೆ ಮುಂಗಾರು ಮಳೆ ಸಿಂಚನ ಮತ್ತು ಮಣ್ಣಿನ ಸಡಿಲತೆ ಎಷ್ಟು ಹಿತವಾಯಿತೋ ಅಷ್ಟೇ ಅಧಿಕ ಮಳೆಗೆ ಅದು ಮುಳುವಾಗುತ್ತದೆ.

beru.jpg

ಸಸ್ಯಗಳ ಬೇರಿಗೆ ಹೆಚ್ಚುವರಿ ನೀರು ನಿಂತಾಗ ಮಣ್ಣಿನ ಮೇಲ್ಪದರದಲ್ಲಿರುವ ಲವಣಾಂಶಗಳು ನೀರಿನಲ್ಲಿ ಕರಗಿ ಅದು ಬೇರಿನ ಸುತ್ತ ಒಂದು ರೀತಿಯ ಕವಚದಂತಹ ರಚನೆಯನ್ನು ಉಂಟು ಮಾಡುತ್ತದೆ. ಇದರಿಂದ ಉಸಿರುಕಟ್ಟುವಂತಹ ಸ್ಥಿತಿ ಉಂಟಾಗುತ್ತದೆ. ಉಸಿರಾಟ ಕ್ರಿಯೆಗೆ ಅಡ್ಡಿಯಾಗುತ್ತದೆ.ಮೊದಲು ಕವಲು ಬೇರುಗಳು ಕೊಳೆಯಲಾರಂಭಿಸಿ, ತೀವ್ರವಾಗಿದ್ದರೆ ಬಲಿತ ಬೇರುಗಳೂ ಸಹ ಜೀವ ಕಳಕೊಳ್ಳುತ್ತವೆ, ಆ ಸಮಯದಲ್ಲಿ ರೋಗಕಾರಕ ಶಿಲೀಂದ್ರ, ಬ್ಯಾಕ್ಟೀರಿಯಾಗಳು ಬೇರನ್ನು ಆಶ್ರಯಿಸುತ್ತವೆ. ಬೇರು ಕೊಳೆಯುತ್ತದೆ. ಫೈಟೋಪ್ತೆರಾ ಬೇರು ಕೊಳೆ ರೋಗ ಬರುವುದೂ ಇದೇ ಕಾರಣದಿಂದ. ಆ ಸಸಿ ಮತ್ತೆ ಮಳೆಗಾಲ ಕಳೆದ ನಂತರ ಹೊಸ ಬೇರು ಬಿಟ್ಟು ಅದು ಬೆಳೆದು ಆಹಾರ ಸ್ವೀಕರಿಸುವ ಸ್ಥಿತಿಗೆ ಬರಬೇಕು. ಮಳೆಗಾಲ ಕಳೆದ ತಕ್ಷಣ ಸಸಿಗಳು ಕೃಷವಾಗುವುದಕ್ಕೆ ಆದೂ ಒಂದು ಕಾರಣ. ಕೆಲವೊಮ್ಮೆ ಸಸಿಗಳು ಮಳೆಗಾಲ ಮುಗಿಯುವ ಸಮಯದಲ್ಲಿ ಸಾಯುವುದಕ್ಕೂ ಇದೇ ಕಾರಣ.  ಕಳೆದ ವರ್ಷ ಹಲವು ಕಡೆ ಅಡಿಕೆ ಮರಗಳು, ಸಸಿಗಳು ಸತ್ತು ಹೋಗಿದ್ದವು. ಇದಕ್ಕೆ ತಿಂಗಳ ತನಕವೂ ನಿರಂತರವಾಗಿ ಮಳೆ ಸುರಿದುದು ಮುಖ್ಯ ಕಾರಣ. ಇಡೀ ತಿಂಗಳು  ಮಳೆ ಸುರಿದ ಕಾರಣ ಮಣ್ಣಿನಲ್ಲಿ ಜಲ ಒಡೆದಿತ್ತು. ಎಷ್ಟೇ ಬಸಿಯುವಿಕೆ ವ್ಯವಸ್ಥೆ ಇದ್ದರೂ ಸಾಕಾಗದ ಪರಿಸ್ಥಿತಿ ಇತ್ತು. ಈ ಸನ್ನಿವೇಶದಲ್ಲಿ ಬೇರುಗಳ ಉಸಿರಾಟ ಕ್ರಿಯೆ (Respiration and exchange of gases)ಸಮರ್ಪಕವಾಗಿ ನಡೆಯಲು ಅಸಾಧ್ಯವಾಗಿ ಗಿಡದ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಹೆಚ್ಚಿನ ಕಡೆ ಇಳುವರಿ ಕಡಿಮೆಯಾಗುವುದಕ್ಕೆ ಇದೂ ಒಂದು ಕಾರಣ.

kerebadi.jpg

ಏನು ಪರಿಹಾರ: ನೆಲದಲ್ಲಿ ಜಲ ಒಡೆಯುವುದು ಅಧಿಕ ಮಳೆಯಾಗುವ ಪ್ರದೇಶದಲ್ಲಿ ಸಾಮಾನ್ಯವಾದುದು. ಮೇಲು ಸ್ಥರದಲ್ಲಿ ನೀರು ಇಲ್ಲದಂತೆ ಕಂಡರೂ ೨- ೩ ಅಳದಲ್ಲಿ ನೀರು ಇರುತ್ತದೆ.  ಅದನ್ನು ನಿರ್ವಹಣೆ ಮಾಡಿ ಸಮರ್ಪಕವಾಗಿ ಬಸಿಯುವಂತೆ ಮಾಡುವುದು ಅತೀ ಅವಶ್ಯಕ. ನೀರು ಎಷ್ಟೇ ನೆಲದಿಂದ ಮೇಲೇಳಲಿ. ಆ ನೀರು ಹೊರಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರೆ ಸಸ್ಯದ ಬೇರುಗಳ ಉಸಿರಾಟ ಕ್ರಿಯೆಗೆ ಅಡ್ಡಿಯಾಗದು. ಸಸ್ಯದ ಬೇರು ಎಷ್ಟು ಆಳಕ್ಕೆ ಹೋಗುತ್ತದೆಯೋ ಕನಿಷ್ಟ ಅಷ್ಟು ಆಳದ ತನಕ ಕಾಲುವೆ ಮಾಡಿ ನೆಲದಲ್ಲಿ ಜಿನುಗುವ ನೀರು ಚಲನೆಯಾಗಿ ಹೊರ ಹೊಗುವಂತೆ ಮಾಡಬೇಕು. ಕೆಲವರು ನಮ್ಮ ಹೊಲ, ಎತ್ತರದ ಪ್ರದೇಶದಲ್ಲಿ ಇದೆ. ಇಲ್ಲಿ ನೀರು ನಿಲ್ಲುವ ಪ್ರಮೇಯವೇ ಇಲ್ಲ ಎಂದು ಬಸಿ ವ್ಯವಸ್ಥೆಯನ್ನು ಮಾಡುವುದಿಲ್ಲ. ಅಂತಹ ಕಡೆ ಮೇಲೆ ನೋಡುವಾಗ ನೀರು ನಿಂತಿರದಿದ್ದರೂ ಸಹ ತಳ ಭಾಗದಲ್ಲಿ ನೀರು ನಿಂತು ಬೇರಿಗೆ ಹಾನಿ ಉಂಟಾಗುತ್ತದೆ. ಇನ್ನು ತಗ್ಗು ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ನೀರು ಬಸಿ ವ್ಯವಸ್ಥೆಯನ್ನು ಮಾಡದೆ ಯಾವುದೇ ಕೃಷಿ ಮಾಡುವುದು ವ್ಯರ್ಥ. ಅಡಿಕೆ, ತೆಂಗು, ಬಾಳೆ ಹಾಗೆಯೇ ಇನ್ಯಾವುದೇ ಕೃಷಿಯಾದರೂ ಸಹ ಎಲ್ಲಾ ಸಸಿಗಳ ಬುಡದಲ್ಲಿ ಸಂಗ್ರಹವಾಗುವ ನೀರು ಬಸಿಯಲ್ಪಡುವಂತೆ ಕಾಲುವೆಗಳನ್ನು ಮಾಡಬೇಕು. ಅಡಿಕೆ ಸಸಿ ನೆಡುವಾಗ ಎರಡು ಸಸಿಗಳ ಮಧ್ಯೆ ಒಂದು ಬಸಿಗಾಲುವೆಯನ್ನು ಅಗತ್ಯವಾಗಿ ಮಾಡಬೇಕು. ತೆಂಗಿನ ಸಸಿ ನಾಟಿ ಮಾಡುವಾಗ ಯಾವ ಪ್ರತೀ ಸಸಿಗೆ ನೀರು ಬಸಿಯುವ ವ್ಯವಸ್ಥೆ ಮಾಡಲೇ ಬೇಕು. ಯಾವುದೇ ಇತರ ಬೆಳೆಗಳಿದ್ದರೂ ಸಹ ನೀರು ಹೆಚ್ಚು ಸಮಯ ನಿಲ್ಲದ ತರಹ ನೀರು ಬಸಿಯುವ ವ್ಯವಸ್ಥೆಗಳನ್ನು ಮಾಡಿಕೊಂಡರೆ ಮರದ ಆರೋಗ್ಯ ಉತ್ತಮವಾಗಿರುತ್ತದೆ ಉತ್ತಮ ಫಸಲು ದೊರೆಯುತ್ತದೆ. ಸದಾ ನೀರು ನಿಲ್ಲಿಸಿಯೇ ಬೆಳೆಯುವ ಬೆಳೆಯಾದ ಭತ್ತಕ್ಕೂ ಸಹ ಎರಡು ದಿನ ನೀರು ನಿಲ್ಲಿಸಿ, ಮತ್ತೆರಡು ದಿನ ನೀರು ಬಸಿಯುತ್ತಾ ಇದ್ದರೆ ಭತ್ತದ ಪೈರು ಹೆಚ್ಚು ತೆಂಡೆ ಒಡೆಯುತ್ತದೆ, ಅಧಿಕ ಇಳುವರಿ ನೀಡುತ್ತದೆ.

ಬರೇ ಸಸ್ಯ/ಮರದ ಬೇರುಗಳಿಗೆ ನೀರು ಹೆಚ್ಚಾಗುವುದಕ್ಕೋಸ್ಕರ ಬಸಿ ಕಾಲುವೆ ಬೇಕು ಎನ್ನುವುದು ತಪ್ಪು ಅಭಿಪ್ರಾಯ. ಸಸ್ಯದ, ಮರದ ಬೇರುಗಳು ಉಸಿರಾಟ ಕ್ರಿಯೆ ನಡೆಸಲೂ ಸಹ ಅಲ್ಲಲ್ಲಿ ಉಸಿರಾಟಕ್ಕೆ ಅನುಕೂಲವಾಗುವ ಸನ್ನಿವೇಶಗಳು ಬೇಕಾಗುತ್ತವೆ. ಬಸಿಗಾಲುವೆಯ ಬದುಗಳಲ್ಲಿ ಸಸ್ಯದ ಬೇರುಗಳು ನಿಬಿಡವಾಗಿ ಇರುವುದನ್ನು ನಾವು ಗಮನಿಸಿರಬಹುದು. ಇದು ಅದೇ ಕಾರಣಕ್ಕಾಗಿ. ಈ ಭಾಗದಲ್ಲಿ ಅವುಗಳಿಗೆ ಬೇಕಾಗುವ ಆಮ್ಲಜನಕ ಹೇರಳವಾಗಿ ಲಭ್ಯವಾಗುತ್ತದೆ. ಆ ಸನಿಹದಲ್ಲಿರುವ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ ಮತ್ತು ಉತ್ತಮ ಇಳುವರಿಯನ್ನೂ ಕೊಡುತ್ತವೆ.

ಸಾಮಾನ್ಯವಾಗಿ ತಲೆಕೂದಲಿನ ತರಹದ ಬೇರುಗಳಿರುವ ಸಸ್ಯಗಳು ( ಕರಿಮೆಣಸು, ವೀಳ್ಯದೆಲೆ) ನೀರು ಹೆಚ್ಚು ಸಮಯ ನಿಂತಾಗ ಬೇಗನೆ ಕೊಳೆಯಲಾರಂಭಿಸುತ್ತವೆ. ಸುಮಾರು ಅರ್ಧ ಗಂಟೆ ಕಾಲ ನೀರು ನಿಲ್ಲುವ ಸನ್ನಿವೇಶ ಇದ್ದಲ್ಲಿ ಆ ಸಸ್ಯದ ಕೂದಲು ಬೇರುಗಳು ಕೊಳೆತು ಸಸ್ಯಕ್ಕೆ ಹಾನಿ ಉಂಟಾಗುತ್ತದೆ. ಹೆಚ್ಚಾಗಿ ಬಸಿಗಾಲುವೆ ಪಕ್ಕದಲ್ಲಿ ಇರುವ ಇಂಥಹ ಬಳ್ಳಿಗಳು ಬೇಗ ರೋಗಕ್ಕೆ ತುತ್ತಾಗುವುದಿಲ್ಲ.

ಇತ್ತೀಚೆಗೆ ಕಂಡು ಕೊಂಡ ಪ್ರಕಾರ ಬೇರು ವಲಯಕ್ಕೆ ಸಾಕಷ್ಟು ಆಮ್ಲಜನಕ ದೊರಕಿಸಿಕೊಡಲು ಅಂತರ್ಗತ ಬಸಿಗಾಲುವೆಗಳು ಸಹಕಾರಿಯಾಗುತ್ತವೆ. ಅಂತರ್ಗತ ಬಸಿಗಾಲುವೆ ಮಾಡಿದಲ್ಲಿ ಎಷ್ಟೇ ಜಲ ಒಡೆದರೂ ಸಹ ಅದು ತಕ್ಷಣ ಕಾಲುವೆಯ ಮೂಲಕ ಹೊರಹೋಗುವ ಕಾರಣ ಬಸಿಯುವಿಕೆ ನಿರಂತರವಾಗಿರುತ್ತದೆ. ಬೇರು ವಲಯಕ್ಕೆ  ಬೇಕಾಗುವ ಆಮ್ಲಜನಕದ ಲಭ್ಯತೆಯೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿರುತ್ತದೆ. ಬಸಿಗಾಲುವೆ ಇಲ್ಲದ ತೋಟ ಅದು ಗುಡ್ಡದ ತೋಟವೇ ಆಗಿದ್ದರೂ ಸಹ ಇಳುವರಿ ಕಡಿಮೆ, ಮರದ ಆಯುಷ್ಯವೂ ಕಡಿಮೆ. ಮರಕ್ಕೆ ಶಕ್ತಿಯೂ ಕಡಿಮೆ ಎಂಬುದು ಸತ್ಯ. 

(ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ)