ಒಂದೆಡೆ ಪಾಕಿಸ್ತಾನದ ಆರ್ಥಿಕತೆಯು ಚಿಂತಾಜನಕ ಸ್ಥಿತಿಯಲ್ಲಿದೆ. ಖಜಾನೆ ಬರಿದಾಗಿದೆ, ಸರಕಾರಿ ನೌಕರರಿಗೆ ಸಂಬಳ ನೀಡಲೂ ಸಾಲ ಪಡೆಯಬೇಕಾದ ಸ್ಥಿತಿಗೆ ಅಲ್ಲಿನ ಆರ್ಥಿಕತೆ ತಲುಪಿದೆ. ಇಂಥ ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆಯೂ, ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಏಕೈಕ ಅಜೆಂಡಾದಿಂದ ಪಾಕಿಸ್ತಾನ ಹೊರಬರುತ್ತಿಲ್ಲ ಎಂಬುದು ಪುನಃ ಸಾಬೀತಾಗಿದೆ. ದೇಶದ ಜನ ಹಸಿವಿನಿಂದ ನರಳುತ್ತಿದ್ದರೂ ಪರ್ವಾಗಿಲ್ಲ, ಆಡಳಿತಗಾರರು ಮಾತ್ರ ಯುದ್ದದ ಪಿತೂರಿಗಳನ್ನು ಹೆಣೆಯುವುದರಲ್ಲಿ ಮಗ್ನರಾಗಿರುವುದು ಪಾಕಿಸ್ತಾನದ ಯುದ್ಧೋನ್ಮಾದದ ಹುಟ್ಟುಗುಣಕ್ಕೆ ಸಾಕ್ಷಿ.

ಪಹಲ್ಗಾಮ್ ನರಮೇಧದಂಥ ಹೇಯ ಕೃತ್ಯವೆಸಗಿದಾಗ ಭಾರತ ನೆರೆಯ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲು ಅನಿವಾರ್ಯವಾಗಿ ನೀರು ನಿಯಂತ್ರಣದಂಥ ಕಠಿಣ ಕ್ರಮ ಕೈಗೊಂಡಿತು. 'ಮಾಡಿದ್ದುಣೋ ಮಹರಾಯ' ಎಂಬ ಸ್ಥಿತಿಯೇ ಪಾಕಿಸ್ತಾನಕ್ಕಾಯಿತಷ್ಟೇ. ಆದರೆ, ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು, ಪಾಕ್ ರಕ್ಷಣಾ ಸಚಿವ ಖಾಜಾ ಆಸಿಫ್ 'ನೀರಿನ ಭದ್ರತೆಗಾಗಿ ಯುದ್ಧಕ್ಕೂ ಸಿದ್ದ' ಎಂದು ಬೆದರಿಕೆ ಹಾಕುತ್ತಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಈಗ ವರದಿಯಾಗಿರುವಂತೆ, ಅಫಘಾನಿಸ್ತಾನ ಗಡಿಯಿಂದ ೫ ಬೆಟಾಲಿಯನ್ ಗಳನ್ನು ನಿಯಂತ್ರಣ ರೇಖೆಯತ್ತ (ಎಲ್‌ಒಸಿ) ಸ್ಥಳಾಂತರಿಸಿರುವುದು, ೩೫ ಡೋನ್ ನಿರೋಧಕ ಘಟಕಗಳನ್ನು ನಿಯೋಜಿಸಿರುವುದು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೇಲಿ ನಿರ್ಮಿಸಿರುವುದು ಪಾಕಿಸ್ತಾನದ ನೈಜ ಉದ್ದೇಶವನ್ನು ಬಯಲು ಮಾಡಿದೆ. ಒಂದೆಡೆ ಆರ್ಥಿಕ ದಿವಾಳಿತನ, ಇನ್ನೊಂದೆಡೆ ಭಾರತದ ವಿರುದ್ಧ ಎಲೆಕ್ಟ್ರಾನಿಕ್ ಯುದ್ಧಕ್ಕೆ ಸಿದ್ಧತೆ- ಇದು ಪಾಕಿಸ್ತಾನದ ವಿರೋಧಾಭಾಸದ ನೀತಿ.

ಅಚ್ಚರಿಯೆಂದರೆ, ಭಾರತದ 'ಆಪರೇಷನ್ ಸಿಂದೂರ'ದಲ್ಲಿ ಜಖಂಗೊಂಡಿದ್ದ ತನ್ನ ೧೧ ವಾಯುನೆಲೆಗಳನ್ನು ದುರಸ್ತಿಪಡಿಸಲು ಪಾಕಿಸ್ತಾನ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಸುರಿದಿದೆ. ದೇಶದಲ್ಲಿ ಚಪಾತಿ, ರೋಟಿಗೆ ಹಾಹಾಕಾರವಿರುವಾಗ, ಯುದ್ಧವಿಮಾನಗಳ ದುರಸ್ತಿ ಮತ್ತು ಚೀನಾದಿಂದ ಹೊಸ ಫೈಟರ್‌ ಜೆಟ್ ಗಳನ್ನು ಖರೀದಿಸಲು ಇಸ್ಲಾಮಾಬಾದ್‌ಗೆ ಹಣ ಎಲ್ಲಿಂದ ಬಂತು? ಅಂತಾರಾಷ್ಟ್ರೀಯ ನೆರವನ್ನು ಉಗ್ರವಾದ ಮತ್ತು ಯುದ್ಧ ಸನ್ನದ್ಧತೆಗೆ ಪಾಕಿಸ್ತಾನ ಬಳಸಿಕೊಂಡಿತೇ? ಅಮೆರಿಕ- ಇರಾನ್ ನಡುವೆ ಸಂಧಾನಕಾರರಾಗುವ ನಾಟಕವಾಡುತ್ತಲೇ, ತಾನು ಮಾತ್ರ ಯುದ್ಧದ ಕಿಚ್ಚು ಹಚ್ಚಿಕೊಳ್ಳುತ್ತಿರುವುದು ಪಾಕ್‌ನ ದ್ವಿಮುಖ ನೀತಿಗೆ ಸಾಕ್ಷಿ.

ಪಾಕಿಸ್ತಾನದ ಇಂಥ ನೀಚ ಧೋರಣೆಗಳನ್ನು ಭಾರತವು ಬಲವಾಗಿ ಪ್ರತಿರೋಧಿಸಬೇಕಿದೆ. ಪಾಕಿಸ್ತಾನದ ಇಂಥ ಹುಚ್ಚು ಸಾಹಸಗಳು ಭಾರತಕ್ಕೆ ಹೊಸತೇನಲ್ಲ. ತಮ್ಮ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಭಾರತದೊಂದಿಗಿನ ಗಡಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವುದು ಆ ದೇಶದ ಹಳೆಯ ತಂತ್ರ. ಆದರೆ, ಪಾಕಿಸ್ತಾನವು ಒಂದನ್ನು ನೆನಪಿಟ್ಟುಕೊಳ್ಳಬೇಕು; ಭಾರತ ಈಗ ೧೯೭೧ ಅಥವಾ ಆ ನಂತರದ ಭಾರತವಲ್ಲ... 'ಆಪರೇಷನ್ ಸಿಂದೂರ' ಕಾಲಘಟ್ಟದ ಪರಾಕ್ರಮಶಾಲಿ ಭಾರತ.

ಪಾಕಿಸ್ತಾನದ ಆಡಳಿತಗಾರರು ಯುದ್ಧದ ವಿಷಬೀಜಗಳನ್ನು ಬಿತ್ತುವ ಬದಲು, ತಮ್ಮ ದೇಶದ ಜನರಿಗೆ ಮೊದಲು ಅನ್ನ ನೀಡಲಿ. ದ್ವೇಷವನ್ನೇ ರಾಜತಾಂತ್ರಿಕ ಮಾಡಿಕೊಂಡ ಎಷ್ಟೋ ದೇಶಗಳ ಸ್ಥಿತಿ ಜಾಗತಿಕ ಭೂಪಟದಲ್ಲಿ ಏನಾಗಿದೆ? ಪಾಕ್ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಭಾರತವು ತನ್ನ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನೆಲ್ಲ ತಿಳಿದೂ ಫಾಕ್ ಹೀಗೆ ವರ್ತಿಸುತ್ತಿದೆಯೆಂದರೆ, ಮೂರ್ಖತನವಲ್ಲದೆ ಮತ್ತೇನು?

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೫-೦೬-೨೦೨೬

ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಜಾಲತಾಣದಿಂದ