ಕಳೆದ ತಿಂಗಳು ದೇಶದ ನಾಲ್ಕು ರಾಜ್ಯಗಳಾದ ಪಶ್ಚಿಮ ಬಂಗಾಲ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭೆಗಳಿಗೆ ವಿವಿಧ ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಭಾರೀ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಲ ಮತ್ತು ಆಸ್ಸಾಂನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರೆ, ಕೇರಳದಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಎಲ್‌ ಡಿ ಎಫ್ ಕೊಚ್ಚಿಹೋಗಿದ್ದು ವಿಪಕ್ಷ ಮೈತ್ರಿಕೂಟವಾದ ಯು ಡಿ ಎಫ್ ಅಧಿಕಾರಕ್ಕೇರಿದೆ. ಇನ್ನು ಪುದುಚೇರಿಯಲ್ಲಿ ನಿರೀಕ್ಷೆಯಂತೆ ಎನ್‌ ಡಿ ಎ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ತಮಿಳುನಾಡಿನಲ್ಲಿ ಮಾತ್ರ ಫಲಿತಾಂಶ ಒಂದಿಷ್ಟು ಅಚ್ಚರಿಗೆ ಕಾರಣವಾಗಿದ್ದು ದ್ರಾವಿಡ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದಿದ್ದ ನಟ ವಿಜಯ್ ನೇತೃತ್ವದ ಟಿವಿಕೆ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಮುಖ್ಯಮಂತ್ರಿ ಗಾದಿಯ ಸನಿಹಕ್ಕೆ ತಲುಪಿದ್ದಾರೆ. ಒಟ್ಟಾರೆ ಈ ಫಲಿತಾಂಶದತ್ತ ಸೂಕ್ಷ್ಮ ದೃಷ್ಟಿ ಹರಿಸಿದ್ದೇ ಆದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದಿಷ್ಟು ಹಿನ್ನಡೆ ಕಂಡಿದ್ದ ಬಿಜೆಪಿ ಮರಳಿ ತನ್ನ ಬುನಾದಿಯನ್ನು ಸದೃಢಗೊಳಿಸಿಕೊಂಡಿರುವುದು ಸಾಬೀತಾಗುತ್ತಿದೆ. ಇದೇ ವೇಳೆ ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಕಳಪೆ ಸಾಧನೆ ಈ ಬಾರಿಯೂ ಮುಂದುವರಿದಿದ್ದು ಕೇರಳವನ್ನು ಹೊರತುಪಡಿಸಿದಂತೆ ಬೇರೆಲ್ಲ ರಾಜ್ಯಗಳಲ್ಲಿ ಪಕ್ಷ ಒಂದಂಕಿಯ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿದೆ.

ಈ ಬಾರಿ ಚುನಾವಣೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಲದ ಫಲಿತಾಂಶ ವಿಪಕ್ಷ ಪಾಳಯಕ್ಕೆ ಬಲುದೊಡ್ಡ ಹೊಡೆತ ನೀಡಿದೆ. ವಿಪಕ್ಷ ಕೂಟವಾದ ಕಾಂಗ್ರೆಸ್ ನೇತೃತ್ವದ ಐ ಎನ್‌ ಡಿ ಐ ಎಯ ಪ್ರಮುಖ ಪಾಲುದಾರ ಪಕ್ಷವಾಗಿದ್ದ ತೃಣಮೂಲ ಕಾಂಗ್ರೆಸ್ ಈ ಚುನಾವಣೆಯಲ್ಲಿ ಭಾರೀ ಸೋಲು ಕಂಡಿರುವುದು ಕೇವಲ ಆ ಪಕ್ಷಕ್ಕೆ ಮಾತ್ರವಲ್ಲದೆ ಇಡೀ ವಿಪಕ್ಷ ಪಾಳಯವನ್ನು ಚಿಂತೆಗೀಡು ಮಾಡಿದೆ. ಚುನಾವಣೆ ಘೋಷಣೆಗೂ ಮುನ್ನವೇ ಎಸ್‌ ಐ ಆ‌ರ್ ಸಹಿತ ವಿವಿಧ ವಿಷಯಗಳನ್ನು ಮುಂದಿಟ್ಟು ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ವಿರುದ್ಧ ಸಮರ ಸಾರಿದ್ದ ಮಮತಾ ಬ್ಯಾನರ್ಜಿ ಪ್ರತಿಯೊಂದು ಹಂತದಲ್ಲೂ ಹಿನ್ನಡೆ ಅನುಭವಿಸುತ್ತಲೇ ಬಂದರು. ಇನ್ನು ಅವರು ಕೇಂದ್ರದ ಆಡಳಿತಾರೂಢ ಬಿಜೆಪಿ ಬಿಜೆಪಿ ವಿರುದ್ಧ ಪುಂಖಾನುಪುಂಖವಾಗಿ ಮಾಡುತ್ತಲೇ ಬಂದ ಆರೋಪಗಳನ್ನಾವುದನ್ನೂ ಸಾಬೀತುಪಡಿಸುವುದಿರಲಿ, ಕನಿಷ್ಠ ತಮ್ಮ ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿಯೂ ವಿಫಲರಾದರು. ಇನ್ನು ಮಮತಾ ವಿರುದ್ಧದ ಆಡಳಿತ ವಿರೋಧಿ ಅಲೆ, ಕಾನೂನು ಸುವ್ಯವಸ್ಥೆಯ ವೈಫಲ್ಯ, ಅಲ್ಪಸಂಖ್ಯಾಕರು ಮತ್ತು ಬಾಂಗ್ಲಾ ನುಸುಳುಕೋರರ ಓಲೈಕೆ ನೀತಿಗಳು ಕೂಡ ಜನತೆಯ ಅಸಮಾಧಾನಕ್ಕೆ ಕಾರಣವಾಗಿದ್ದವು. ಸಹಜವಾಗಿಯೇ ರಾಜ್ಯದ ಮತದಾರರು ಸ್ಪಷ್ಟ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿಯನ್ನು ಅಧಿಕಾರಕ್ಕೇರಿಸುವ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗುತ್ತದೆ. ಅಸ್ಸಾಂನಲ್ಲಿನ ಹಾಲಿ ಬಿಜೆಪಿ ಆಡಳಿತದಿಂದ ಜನರು ಸಂತುಷ್ಟರಾಗಿದ್ದು ಮರಳಿ ಆಶೀರ್ವಾದ ಮಾಡಿದ್ದಾರೆ. ಕೇರಳದಲ್ಲಿ ಎಲ್ಲರ ನಿರೀಕ್ಷೆಯಂತೆ ಅಧಿಕಾರ ಬದಲಾವಣೆಯಾಗಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ದಶಕದ ಬಳಿಕ ಅಧಿಕಾರಕ್ಕೆ ಮರಳಿದೆ. ಕೇರಳದ ಫಲಿತಾಂಶವೊಂದೇ ಕಾಂಗ್ರೆಸ್‌ಗೆ ನಿಟ್ಟುಸಿರು ಬಿಡುವಂತೆ ಮಾಡಿದೆಯಾದರೂ

ಇಲ್ಲಿಯೂ ಯುಡಿಎಫ್ ಪಾಲುದಾರ ಪಕ್ಷಗಳ ಸಾಧನೆ ಗಮನೀಯ. ದೇಶದ ಭದ್ರತೆ, ಅಭಿವೃದ್ಧಿ, ಜನಹಿತದ ಸರಕಾರಕ್ಕೆ ಈ ಐದೂ ರಾಜ್ಯಗಳಲ್ಲೂ ಜನರು ಮಣೆ ಹಾಕಿದ್ದು, ಸೋಲು ಕಂಡಿರುವ ಪಕ್ಷಗಳು ಮತ್ತು ಮೈತ್ರಿಕೂಟಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಕೀಯವನ್ನು ಚುನಾವಣೆಗನ್ನ ಸೀಮಿತಗೊಳಿಸಿ, ಜನಕಲ್ಯಾಣ, ದೇಶ ರಕ್ಷಣೆಯ ಕಾರ್ಯದಲ್ಲಿ ಆಡಳಿತಾರೂಢ ಸರಕಾರಗಳೊಂದಿಗೆ ಕೈಜೋಡಿಸುವ ಜತೆಯಲ್ಲಿ ಎಡವಿದಾಗ ಸಮರ್ಥವಾಗಿ ಬಡಿದೆಚ್ಚರಿಸುವ ಕಾರ್ಯವನ್ನು ವಿಪಕ್ಷಗಳು ಮಾಡಿದ್ದೇ ಆದಲ್ಲಿ ಮುಂದಿನ ಚುನಾವಣೆಯ ಫಲಿತಾಂಶ ಮತ್ತೆ ಬದಲಾಗಬಹುದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೫-೦೫-೨೦೨೬

ಚಿತ್ರ ಕೃಪೆ: ದಿ ಪಯೋನೀರ್ ಜಾಲತಾಣ