ಇಂದು ವಿಮಾನ ಪ್ರಯಾಣ ಎಂದರೆ ಸಾಮಾನ್ಯ ಜನರಿಗೂ ಸುಲಭವಾದ ಸಂಗತಿ. ದೇಶದ ಒಳಗೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲವೇ ಗಂಟೆಗಳಲ್ಲಿ ತಲುಪುವುದು ದಿನನಿತ್ಯದ ವ್ಯವಹಾರವಾಗಿದೆ. ಆದರೆ ನೂರು ವರ್ಷಗಳ ಹಿಂದೆ? ಆಕಾಶದಲ್ಲಿ ವಾಣಿಜ್ಯ ಪ್ರಯಾಣ ಎಂಬುದೇ ಕನಸು ಆಗಿತ್ತು. ಆ ಕನಸು ನನಸಾದ ಐತಿಹಾಸಿಕ ಕ್ಷಣವನ್ನು ನೋಡೋಣ.
ನಿಮಗೆ ಗೊತ್ತಿರುವ ಹಾಗೆ ಡಿಸೆಂಬರ್ ೧೭, ೧೯೦೩ರಲ್ಲಿ ವಿಲ್ಬರ್ ರೈಟ್ ಮತ್ತು ಆರ್ವಿಲ್ಲೆ ರೈಟ್ (Wright brothers) ಕೇವಲ ೧೨ ಸೆಕೆಂಡುಗಳ ಕಾಲ ೧೨೦ ಅಡಿ ದೂರ ಹಾರುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಕೇವಲ ಹದಿನೆರಡು ಸೆಕೆಂಡುಗಳ ಹಾರಾಟವಾಗಿದ್ದರೂ ಭವಿಷ್ಯದ ವಿಮಾನಯಾನಕ್ಕೆ ನಾಂದಿ ಹಾಡಿತು. ಈಗಂತೂ ಹಲವಾರು ಗಂಟೆಗಳ ಕಾಲ ಎಲ್ಲೂ ನಿಲುಗಡೆ ಇಲ್ಲದೇ ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸುತ್ತವೆ.
ವಿಶ್ವದ ಮೊದಲ ವಾಣಿಜ್ಯ ವಿಮಾನ ಪ್ರಯಾಣ ಆರಂಭವಾದದ್ದು ಯಾವಾಗ ಗೊತ್ತೇ? ೧೯೧೪ರ ಜನವರಿ ೧ರಂದು ಅಮೆರಿಕದ ಫ್ಲೋರಿಡಾದಲ್ಲಿ ಈ ಇತಿಹಾಸ ರಚನೆಯಾಯಿತು. ಸೈಂಟ್ ಪೀಟರ್ಸ್ ಬರ್ಗ್ ನಗರದಿಂದ ಟ್ಯಾಂಪಾ ನಗರಕ್ಕೆ ಸುಮಾರು ೪೨ ಕಿಲೋಮೀಟರ್ ದೂರವನ್ನು ಕೇವಲ ೨೩ ನಿಮಿಷಗಳಲ್ಲಿ ಕ್ರಮಿಸಿದ ವಿಮಾನವು ವಿಶ್ವದ ಮೊದಲ ವಾಣಿಜ್ಯ ವಿಮಾನ ಹಾರಾಟವಾಗಿ ಗುರುತಿಸಲ್ಪಟ್ಟಿದೆ.
ಈ ಐತಿಹಾಸಿಕ ಹಾರಾಟವನ್ನು ನಡೆಸಿದವರು ಪೈಲಟ್ ಟೋನಿ ಜಾನಸ್ (Tony Jannus). ೫೬೭ ಕೆಜಿ ತೂಕದ, ೮ ಮೀಟರ್ ಉದ್ದ ಮತ್ತು ೧೩ ಮೀಟರ್ ಅಗಲದ ಈ ವಿಮಾನವನ್ನು ರೈಲಿನ ಮೂಲಕ ಸಾಗಾಟ ನಡೆಸಿ ಸೈಂಟ್ ಪೀಟರ್ಸ್ ಬರ್ಗ್ ಗೆ ತರಲಾಗಿತ್ತು. ಈ ವಿಮಾನದ ವಿಶೇಷತೆ ಗೊತ್ತಾ? ಇದರಲ್ಲಿ ಇದ್ದದ್ದು ಕೇವಲ ಒಂದು ಪ್ರಯಾಣಿಕ ಸೀಟು ಮಾತ್ರ. ವಿಮಾನದಲ್ಲಿ ಕೇವಲ ಒಂದೇ ಸೀಟು ಇದ್ದ ಕಾರಣ, ಪ್ರಯಾಣಿಕರ ಟಿಕೆಟ್ ಅನ್ನು ಹರಾಜು ಮಾಡ ಬೇಕಾಯಿತು !
ಹರಾಜಿನಲ್ಲಿ ಸುಮಾರು ಮೂರು ಸಾವಿರ ಜನರು ಭಾಗವಹಿಸಿದ್ದರು. ಅಂತಿಮವಾಗಿ ಸೈಂಟ್ ಪೀಟರ್ಸ್ ಬರ್ಗ್ ನ ಮಾಜಿ ಮೇಯರ್ ಅಬ್ರಾಮ್ ಸಿ. ಫಿಲ್ (Abram C. Pheil) ಎಂಬ ವ್ಯಕ್ತಿ ೪೦೦ ಡಾಲರ್ ಪಾವತಿಸಿ ಹರಾಜು ಟಿಕೆಟ್ ಗೆದ್ದರು. ಆ ಸಮಯದಲ್ಲಿ ಅದು ಭಾರೀ ಮೊತ್ತವಾಗಿತ್ತು. ಇಂದಿನ ಮೌಲ್ಯದಲ್ಲಿ ಹೊಂದಿಸಿದರೆ ಸುಮಾರು ರೂಪಾಯಿ ಆರು ಲಕ್ಷಕ್ಕಿಂತಲೂ ಹೆಚ್ಚು.

ಮೊದಲ ವಾಣಿಜ್ಯ ಪ್ರಯತ್ನದ ರೋಚಕ ಕಥೆ : ಮೊದಲ ಬಾರಿ ಹಾರಿಸುವಾಗ ವಿಮಾನವು ನೀರಿನ ಮೇಲ್ಮೈನಿಂದ ಸಾಕಷ್ಟು ಎತ್ತರಕ್ಕೆ ಏಳಲಿಲ್ಲ. ಎಂಜಿನ್ ಸಮಸ್ಯೆಯಿಂದಾಗಿ ಪೈಲಟ್ ಅರ್ಧದಾರಿಯಲ್ಲೇ ವಿಮಾನವನ್ನು ಕೆಳಗೆ ಇಳಿಸಬೇಕಾಯಿತು. ಆದರೆ ಕೆಲವು ಭಾಗಗಳ ದುರಸ್ತಿಗಳ ನಂತರ ಮತ್ತೆ ಹಾರಾಟ ಪ್ರಾರಂಭವಾಯಿತು. ಟ್ಯಾಂಪಾದಲ್ಲಿ ಇಳಿದಾಗ ೩,೫೦೦ಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪೈಲಟ್ ಮತ್ತು ಪ್ರಯಾಣಿಕರನ್ನು ಸ್ವಾಗತಿಸಿದರು.
ಈ ವಿಮಾನದ ಇನ್ನೊಂದು ಮಾದರಿ 14-Benoist Airboat ವಿಮಾನವು ಗಂಟೆಗೆ ೧೦೩ ಕಿಲೋಮೀಟರ್ ವೇಗವನ್ನು ತಲುಪುತ್ತಿತ್ತು. ಮೊದಲು ಹರಾಜು ಮಾಡಿದ್ದ ಟಿಕೆಟ್ ಗೆ ನಂತರದ ದಿನಗಳಲ್ಲಿ ಬೆಲೆ ನಿಗದಿಯಾಯಿತು. ಆಗ ದರವು ಕೇವಲ ಐದು ಡಾಲರ್ (ಪ್ರಸ್ತುತ ಮೌಲ್ಯದಲ್ಲಿ ಸುಮಾರು ಏಳು ಸಾವಿರ ರೂಪಾಯಿಗಳು) ಆಗಿತ್ತು. ದಿನಕ್ಕೆ ಎರಡು ಬಾರಿ, ವಾರದಲ್ಲಿ ೬ ದಿನಗಳು ಈ ಸೇವೆ ಲಭ್ಯವಿತ್ತು.
ಪೈಲಟ್ ಟೋನಿ ಜಾನಸ್ ಅವರ ಸಹೋದರ ರೋಜರ್ ಜಾನಸ್ ಕೂಡ ಈ ಹಾರಾಟಗಳನ್ನು ನಡೆಸಿದ್ದರು. ಒಟ್ಟು ನಾಲ್ಕು ತಿಂಗಳ ಕಾಲ ಚಾಲ್ತಿಯಲ್ಲಿದ್ದ ಈ ವಿಮಾನ ಸೇವೆಯಲ್ಲಿ ೧,೨೦೫ ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು. ಹೀಗೆ ಒಂದು ಸಣ್ಣ ಧೈರ್ಯದ ಹಾರಾಟವು ಇಂದು ನಾವು ಕಾಣುವ ಲಕ್ಷಾಂತರ ವಿಮಾನಗಳ ದೊಡ್ಡ ಉದ್ಯಮಕ್ಕೆ ಬುನಾದಿ ಹಾಕಿತು. ಆ ನೂರು ವರ್ಷಗಳ ಹಿಂದಿನ ಆರು ಲಕ್ಷದ ಟಿಕೆಟ್ ಮತ್ತು ಪ್ರಯಾಣಿಗ ಫಿಲ್ ಇಂದಿಗೂ ಆಕಾಶಯಾನ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿದಿದ್ದಾರೆ. ಆಕಾಶದಲ್ಲಿ ಮೊದಲ ಹೆಜ್ಜೆ ಇಟ್ಟ ಆ ಧೈರ್ಯಶಾಲಿ ಪ್ರಯಾಣಿಕನಿಗೆ ಮತ್ತು ಹಾರಾಟ ನಡೆಸಿದ ಪೈಲೆಟ್ ಗೆ ನಮನವನ್ನು ಸಲ್ಲಿಸಲೇಬೇಕು ಅಲ್ಲವೇ?
(ಆಧಾರ)
ಚಿತ್ರ ಕೃಪೆ: ಸ್ಪೇಸ್ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!