ಒಂದು ದಶಕದ ಹಿಂದೆ ಗೋಬಿ ಮಂಚೂರಿ ಎನ್ನುವ ಖಾದ್ಯ ಬಹು ಜನಪ್ರಿಯವಾಗಿತ್ತು. ಸ್ಟಾರ್ ಹೋಟೇಲ್ ಗಳಿಂದ ಬೀದಿ ಬದಿಯ ಫಾಸ್ಟ್ ಫುಡ್, ಢಾಬಾದವರೆಗೆ ಗೋಬಿ ಮಂಚೂರಿಯ ಘಮ ಪಸರಿಸಿತ್ತು. ಚೈನೀಸ್ ಫಾಸ್ಟ್ ಫುಡ್ ಎನ್ನುವ ಗಾಡಿಗಳು ಬೀದಿ ಬೀದಿಯಲ್ಲೂ ಕಾಣಸಿಗಲು ಪ್ರಾರಂಭವಾಗಿದ್ದವು. ಆಗೆಲ್ಲಾ ಚೈನೀಸ್ ಫುಡ್ ಎನ್ನುವ ಕ್ರೇಜ್. ಚೈನಾ ದೇಶದಲ್ಲಿ ತಯಾರಾಗದ ಖಾದ್ಯಗಳೂ ಚೈನೀಸ್ ಫುಡ್ ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತಿದ್ದವು. ಕ್ರಮೇಣ ಈ ಹುಚ್ಚು ಕಡಿಮೆಯಾಯಿತು. ಈಗ ಗೋಬಿ ಮಂಚೂರಿ ತಿನ್ನುವವರು ಬಹಳಷ್ಟು ಕಡಿಮೆಯಾಗಿದ್ದಾರೆ. ಆದರೆ ಅದರ ಬದಲು ಇಟಾಲಿಯನ್, ಕೊರಿಯನ್, ಮಂಗೋಲಿಯನ್, ಸ್ವಿಸ್, ಥಾಯಿ ಆಹಾರಗಳು ಜನಪ್ರಿಯಗೊಳ್ಳುತ್ತಿವೆ. 

ಇಟಲಿಯ ಜನಪ್ರಿಯ ಆಹಾರಗಳಲ್ಲಿ ಗ್ನೋಚಿಯೂ ಒಂದು. ಇಟಾಲಿಯನ್ ಫುಡ್ ವಿಭಾಗದಲ್ಲಿ ನೂರಾರು ವಿಧದ ಆಹಾರ ವೈವಿದ್ಯಗಳಿವೆ. ನಾವು ತಿನ್ನುವ ಹಲವಾರು ತಿನಸುಗಳು ಇಟಾಲಿಯನ್ ಮೂಲದ್ದೇ ಆಗಿವೆ. ಇಟಾಲಿಯನ್ ಬಾಣಸಿಗರಿಗಾಗಿ ಸ್ಟಾರ್ ಹೋಟೇಲ್ ಗಳು ಪ್ರತ್ಯೇಕ ಅಡುಗೆ ಮನೆಯನ್ನೇ ನಿರ್ಮಿಸಿಕೊಟ್ಟಿವೆ. ಕೆಲವು ಇಟಾಲಿಯನ್ ಆಹಾರಗಳು ಭಾರತೀಯರ ನಾಲಿಗೆಯನ್ನು ಚಪ್ಪರಿಸುವಷ್ಟು ಬೇಡಿಕೆ ಕುದುರಿಸಿವೆ. 

ಇಟಲಿಗರ ಆಹಾರದಲ್ಲಿ ಪ್ರಸಿದ್ಧವಾದದ್ದು ಬಟಾಟೆ (ಆಲೂಗೆಡ್ಡೆ) ಯಿಂದ ತಯಾರಿಸಲಾಗುವ ಗ್ನೋಚಿ ಎಂಬ ಆಹಾರ. ಬಟಾಟೆ ಜೊತೆ ಮೈದಾ, ಮೊಟ್ಟೆ, ನೀರು, ಉಪ್ಪು ಸೇರಿಸಿ ಸುಲಭವಾಗಿ ಗ್ನೋಚಿಯನ್ನು ತಯಾರಿಸಬಹುದು. ಇದರಲ್ಲೂ ಕ್ಲಾಸಿಕ್ ಇಟಾಲಿಯನ್ ಗ್ನೋಚಿ ಎನ್ನುವ ಖಾದ್ಯವು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದನ್ನು ಬಟಾಟೆಯ ಹಿಟ್ಟಿನಿಂದ ತಯಾರಿಸುತ್ತಾರೆ. ಬಟಾಟೆಯನ್ನು ಮೊದಲಿಗೆ ಚೆನ್ನಾಗಿ ಬೇಯಿಸಿ ನಂತರ ಕತ್ತರಿಸಿಕೊಂಡು ಪಾನ್ ನಲ್ಲಿ ಹುರಿಯ ಬೇಕು. ಅದಕ್ಕೆ ಮೊಟ್ಟೆ, ಮೈದಾ, ಉಪ್ಪು ಮತ್ತು ನೀರು ಬೆರೆಸಿಕೊಂಡು ಸರಿಯಾಗಿ ಮ್ಯಾಶ್ ಮಾಡಿ, ಕಂದು ಬಣ್ಣ ಬರುವ ತನಕ ಹುರಿದರೆ ನಿಮ್ಮ ಗ್ನೋಚಿ ತಯಾರು. ರುಚಿಯನ್ನು ಹೆಚ್ಚಿಸುವ ಅಗತ್ಯವಿದ್ದಲ್ಲಿ ಇದಕ್ಕೆ ವಿವಿಧ ಬಗೆಯ ಸಾಸ್ ಗಳನ್ನು ಹಾಕಿ ತಿನ್ನಬಹುದು. 

ಬಟಾಟೆಯಿಂದ ಕೇವಲ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ರುಚಿಕರವಾದ ಇಟಾಲಿಯನ್ ಗ್ನೋಚಿಯನ್ನೂ ತಯಾರಿಸಬಹುದು ಎನ್ನುವುದು ಇಟಲಿಯನ್ನರ ಅಭಿಮತ. ಹಾಗಾದರೆ ಇನ್ನೇಕೆ ತಡ ಈಗಲೇ ಗ್ನೋಚಿ ತಯಾರಿಸಿ ಬಾಯಿಯನ್ನು ಚಪ್ಪರಿಸಿಕೊಂಡು ತಿನ್ನಿ !

(ಆಧಾರ)

ಚಿತ್ರ ಕೃಪೆ: ಲವ್ ಆಂಡ್ ಲೆಮನ್ಸ್ ಜಾಲತಾಣ