ಈ ವರ್ಷದ ಮುಂಗಾರು ತುಸು ಕಷ್ಟಕರವಾಗಿರಲಿದೆ. 'ಎಲ್ ನಿನೋ' ಚಂಡಮಾರುತ ಈಕ್ವೆಟೋರಿಯಲ್ ಫೆಸಿಫಿಕ್ ಸಾಗರ ಭಾಗದಲ್ಲಿ ರೂಪುಗೊಳ್ಳಲಾರಂಭಿಸಿದ್ದು, ಪರಿಣಾಮ ಭಾರತ ಉಪಖಂಡದಲ್ಲಿ ಜೂನ್ ಅವಧಿಯ ಮಳೆ ಪ್ರಮಾಣ ವಾಡಿಕೆಗಿಂತಲೂ ಬಹಳ ಕಡಿಮೆ ಇರಲಿದೆ. ಬದಲಾಗಿ ಬಿಸಿಗಾಳಿಯ ಹೊಡೆತ ಹೆಚ್ಚಲಿದೆ ಎಂದು ಹವಾಮಾನ ವರದಿ ಹೇಳಿದೆ. ಕೇರಳ ಕರಾವಳಿಗೆ ಮೇ ೨೬ರಂದು ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಈ ಮೊದಲು ಅಂದಾಜಿಸಿತ್ತು. ಆದರೆ ಈಗ ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಎಲ್ ನಿನೋ ಕಾರಣದಿಂದಾಗಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ (ದೀರ್ಘಾವಧಿ ಸರಾಸರಿ) ಶೇ. ೯೨ರಿಂದ ಶೇ.೯೦ಕ್ಕೆ ಇಳಿಸಲಾಗಿದೆ. ಪರಿಣಾಮ ಜೂನ್ ತಿಂಗಳಲ್ಲಿ ಸಾಮಾನ್ಯ ಕ್ಕಿಂತ ಕಡಿಮೆ ಮಳೆಯಾಗಲಿದೆ. ಜತೆಗೆ ಹೆಚ್ಚುವರಿ ಉಷ್ಣ ಅಲೆ ದಿನಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಈ ಸಲ ಬೇಸಿಗೆ ಕೂಡ ತುಸು ಹೆಚ್ಚುವರಿ ಉಷ್ಣಾಂಶವನ್ನೇ ದಾಖಲಿಸಿದೆ. ಹೀಗೆ ಬೇಸಿಗೆ ಮಳೆಗಾಲ ಎರಡೂ ಪ್ರತಿಕೂಲವಾದರೆ, ಮೊದಲ ಕಷ್ಟಕರ ದಿನಗಳು ಎದುರಾಗುವುದು ಕೃಷಿಕರಿಗೆ. ಜೂನ್- ಜುಲೈಯಲ್ಲಿ ವಾಡಿಕೆಯಂತೆ ಮಳೆಯಾಗದೆ ಹೋದರೆ ಖಾರಿಫ್ ಬೆಳೆಗಳಿಗೆ ತೊಂದರೆಯಾಗುತ್ತದೆ. ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು. ಆಹಾರ ಬೆಳೆಗಳ ನಾಟಿ ಹಾಗೂ ಇಳುವರಿ ಎರಡೂ ನೆಲಕಚ್ಚಲಿದೆ. ಈಗಾಗಲೇ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದು ಕೂಡ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮಳೆ ಕೊರತೆಯನ್ನು ಎದುರಿಸಲು ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ರೈತರ ನಂತರ ಇದರ ದುಷ್ಪರಿಣಾಮ ಎಲ್ಲ ಬಗೆಯ ಗ್ರಾಹಕರ ಮೇಲೆ ಆಗಲಿದೆ. ಸರಕಾರ ಎಲ್ಲರ ಹಿತರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೀರಿನ ಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಗೆ ಸರಕಾರಗಳು ಸಜ್ಜಾಗಬೇಕಿದೆ. ಅಣೆಕಟ್ಟುಗಳಲ್ಲಿ ಕೊರತೆಯಾದರೆ ನಗರಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಆಗಬಹುದು, ಸಾರ್ವಜನಿಕರು ಮಳೆ ನೀರು ಸಂಗ್ರಹ ಅಳವಡಿಸಿಕೊಳ್ಳುವುದು ಉತ್ತಮ. ನೀರಿನ ಮಿತ ಬಳಕೆ ಎಲ್ಲದಕ್ಕಿಂತ ಒಳ್ಳೆಯದು. ಸರಕಾರಗಳಂತೆ ಪ್ರಜೆಗಳಿಗೂ ಈ ಸನ್ನಿವೇಶವನ್ನು ಎದುರಿಸಬೇಕಾದ ಜವಾಬ್ದಾರಿ ಇದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೩೦-೦೫-೨೦೨೬
ಚಿತ್ರ ಕೃಪೆ: ಬೆಂಗಳೂರು ಮಿರರ್ ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!