ಗಾನ ಸರಸ್ವತಿ ಎಸ್ ಜಾನಕಿ ನಿಧನ ಹೊಂದಿದರು ಎಂದು ಸುದ್ದಿ ಕೇಳಿದೊಡನೆಯೇ ಅವರು ಹಾಡಿದ ಹಾಡುಗಳ ನೆನಪಾಯಿತು. ಎಸ್ ಜಾನಕಿ ಮತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಹಾಡುಗಳೆಂದರೆ ಅದು ರಸದೌತಣವೇ ಸರಿ. ಇದೇ ಗುಂಗಿನಲ್ಲಿ ನಿನ್ನೆ ನನ್ನ ಅಕ್ಕನ ಜೊತೆ (ದೊಡ್ಡಪ್ಪನ ಮಗಳು) ಮಾತನಾಡುತ್ತಿರುವಾಗ ಈ ವಿಷಯ ಪ್ರಸ್ತಾಪವಾಯಿತು. ಆಕೆ ತನ್ನ ಮೊಬೈಲ್ ತೆಗೆದು ನನಗೊಂದು ಫೋಟೋ ತೋರಿಸಿದರು. ಅದರಲ್ಲಿ ಎಸ್ ಜಾನಕಿ ಕುಳಿತಿದ್ದರು. ಅವರ ಜೊತೆ ಇಬ್ಬರು ವ್ಯಕ್ತಿಗಳು ನಿಂತಿದ್ದರು. ಆ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬರು ಆಕೆಯ ಚಿಕ್ಕಮ್ಮನ ಪತಿ ಅಂದರೆ ಚಿಕ್ಕಪ್ಪನವರದ್ದಾಗಿತ್ತು. ಅವರ ಪರಿಚಯ ನನಗೂ ಇತ್ತು.
‘ಹೇ, ಚಿಕ್ಕಪ್ಪನಿಗೆ ಎಸ್ ಜಾನಕಿ ಎಲ್ಲಿ ಸಿಕ್ಕಿದರು?’ ಎಂದು ಅಚ್ಚರಿಯಿಂದ ಕೇಳಿದೆ.
‘ಜಾನಕಿಯವರನ್ನು ಭೇಟಿಯಾದದ್ದು ಮಾತ್ರವಲ್ಲ, ಅವರಿಗೆ ಮಾಡಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’‘ ಎಂದಾಗ ನನಗೆ ಈ ಬಗ್ಗೆ ತಿಳಿದುಕೊಳ್ಳುವ ಆಸೆಯಾಯಿತು.
ನಾನು ಬಿಡುವು ಮಾಡಿಕೊಂಡು ಆಕೆಯ ಚಿಕ್ಕಪ್ಪ ಕರುಣಾಕರ್ ಪೈ ಅವರಿಗೆ ಫೋನ್ ಮಾಡಿದೆ. ಅವರು ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದುಕೊಂಡು ಈಗ ನಿವೃತ್ತರಾಗಿದ್ದಾರೆ. ಅವರ ಬಳಿ ಜಾನಕಿಯಮ್ಮನ ಭೇಟಿ ಬಗ್ಗೆ ಮಾತನಾಡಿದಾಗ ಅವರು ತಮ್ಮ ನೆನಪಿನ ಗರಿಯನ್ನು ಬಿಚ್ಚಿಟ್ಟರು. ಅವರು ಹೇಳಿದ್ದು ಇಷ್ಟು…
“ಎಸ್ ಜಾನಕಿಯವರು ಜೂನ್ ೨೦೨೬ರ ಕೊನೆಯ ವಾರದಲ್ಲಿ ಮಂಗಳೂರು, ಉಡುಪಿಯ ದೇವಸ್ಥಾನಗಳ ಭೇಟಿಗಾಗಿ ಬಂದಿದ್ದರು. ಆ ಸಮಯ ಅವರು ಅವರ ಸಹೋದರಿಯ ಮಗಳ ಮನೆ (ಚಿಲಿಂಬಿ, ಮಂಗಳೂರು)ಯಲ್ಲಿ ಎರಡು ವಾರಗಳ ಕಾಲ ತಂಗಿದ್ದರು. ಅದೊಂದು ಫ್ಲಾಟ್. ಆ ಫ್ಲಾಟ್ ಕೆನರಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಸದಸ್ಯರಾದ ಸುಬ್ರಾಯ ಹೆಗ್ಡೆಯವರಿಗೆ ಸೇರಿತ್ತು. ಅವರೂ ಅದೇ ಫ್ಲಾಟ್ ನಲ್ಲಿ ವಾಸವಿದ್ದರು. ಜಾನಕಿಯಮ್ಮ ತಮ್ಮದೇ ಫ್ಲಾಟ್ ನಲ್ಲಿ ಇರುವಾಗ ಅವರಿಗೊಂದು ಸನ್ಮಾನ ಮಾಡಬಾರದೇಕೆ? ಎನ್ನುವ ಯೋಚನೆ ಅವರಿಗೆ ಬಂತು. ತಮ್ಮ ಸದಸ್ಯರ ಜೊತೆ ಮಾತನಾಡಿ ಒಪ್ಪಿಗೆ ಪಡೆದರು.
ಜಾನಕಿಯಮ್ಮನ ಒಪ್ಪಿಗೆ ಸಿಗುವುದೇ ಕಷ್ಟವಿತ್ತು. ಆದರೆ ಜಾನಕಿಯಮ್ಮನವರದ್ದು ದೊಡ್ಡ ಮನಸ್ಸು. ತುಂಬಾ ಜನರನ್ನು ಹಾಗೂ ಮಾಧ್ಯಮದವರನ್ನು ಕರೆಯಬಾರದು. ಎಲ್ಲೂ ಹೊರಗಡೆ ಸುದ್ದಿಯಾಗಬಾರದು ಎನ್ನುವ ಕರಾರಿನೊಂದಿಗೆ ಅವರು ಒಪ್ಪಿಗೆ ನೀಡಿದರು. ಜೂನ್ ಕೊನೆಯ ವಾರ ಒಂದು ದಿನ ಸಂಜೆ ಫ್ಲಾಟ್ ನಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು. ನನಗೂ ಕರೆ ಇತ್ತು ಅದರ ಜೊತೆ ಯಾರಿಗೂ ಹೇಳಬಾರದು ಎನ್ನುವ ಕಂಡೀಷನ್ ಸಹಾ ಇತ್ತು. ಅವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು, ಹಾಡು ಹಾಡಿ ಎಂದು ಬಲವಂತ ಮಾಡಬಾರದು ಎಂದು ಮೊದಲೇ ಹೇಳಲಾಗಿತ್ತು.
ಅದರಂತೆ ನಾನು ಆ ದಿನ ಕಾರ್ಯಕ್ರಮದ ಸ್ಥಳಕ್ಕೆ ಹೋದಾಗ ಜಾನಕಿಯಮ್ಮನವರು ನಿಧಾನವಾಗಿ ನಡೆದುಕೊಂಡು ಹಾಲ್ ನತ್ತ ಬರುತ್ತಿದ್ದರು. ಹಲವು ಭಾಷೆಗಳಲ್ಲಿ ಹಾಡನ್ನು ಹಾಡಿ, ವಿಶ್ವ ವಿಖ್ಯಾತಿಯನ್ನು ಗಳಿಸಿದ ಜಾನಕಿಯಮ್ಮ ನನ್ನ ಎದುರೇ ಇದ್ದಾರೆ ಎನ್ನುವುದನ್ನು ನಂಬಲೇ ಸಾಧ್ಯವಾಗಲಿಲ್ಲ. ಅವರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಬಹಳ ಸರಳತೆಯಿಂದ, ಆತ್ಮೀಯತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಬಳಿಕ ದೂರದಲ್ಲೇ ನಿಂತಿದ್ದ ನಮ್ಮನ್ನೆಲ್ಲಾ ಹತ್ತಿರ ಕರೆದು ಮಾತನಾಡಿಸಿದರು. ತಮ್ಮ ಮಗನ ಅಕಾಲಿಕ ಸಾವಿನ ನಂತರ ಅವರು ತುಂಬಾ ದುಃಖದಲ್ಲಿದ್ದಾರೆ ಎಂದು ಕೇಳಿದ್ದೆ. ಅದಕ್ಕಾಗಿ ಹೆಚ್ಚಿಗೆ ಮಾತನಾಡದೇ ದೂರದಲ್ಲೇ ನಿಂತಿದ್ದೆ. ನನ್ನನ್ನು ಮತ್ತು ನನ್ನ ಗೆಳೆಯರನ್ನು ಹತ್ತಿರ ಬರುವಂತೆ ಹೇಳಿದರು. ಫೋಟೋ ತೆಗೆಯುವಿರಾದರೆ ತೆಗೆಯಿರಿ ಎಂದು ಹೇಳಿ, ‘ಯಾಕಪ್ಪ ನಿಂತೇ ಇರುವಿರಿ? ಇಲ್ಲಿಯೇ ಕೂತುಕೊಳ್ಳಿ’ ಎಂದು ಬಲವಂತ ಮಾಡಿ ಅವರು ಕೂತ ಕುರ್ಚಿಯ ಕೈಗಳಲ್ಲಿ ಕೂರಿಸಿದರು.
ನನಗಂತೂ ಮಾತೇ ಹೊರಡಲಿಲ್ಲ. ಅವರ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡೆ. ಜಾನಕಿಯಮ್ಮನ ಒಂದು ಭೇಟಿಗಾಗಿ ವರುಷಾನುಗಟ್ಟಲೇ ಹಾತೊರೆಯುವವರಿದ್ದಾರೆ. ನನಗದು ಅನಾಯಾಸವಾಗಿ ದೊರೆತಿತ್ತು. ನನ್ನ ಭಾಗ್ಯಕ್ಕೆ ವಂದಿಸುತ್ತಾ ನಾನು ಮನೆಗೆ ಮರಳಿದೆ.”
ಇದು ಕರುಣಾಕರ ಪೈ ಅವರ ಮನದಾಳದ ಮಾತುಗಳು. ಅವರ ಮಾತು ನಿಜಕ್ಕೂ ಸತ್ಯ, ಏಕೆಂದರೆ ಜಾನಕಿಯಮ್ಮನನ್ನು ಭೇಟಿಯಾಗಬೇಕೆಂದು ಬಯಸಿ ತನ್ನ ತಾಯಿಯ ಚಿನ್ನಾಭರಣಗಳನ್ನು ಅಡವಿಟ್ಟ ನವೀನ್ ಎಂಬ ೧೩ ವರ್ಷದ ಹುಡುಗನ ಕಥೆಯನ್ನು ಇಂದಿನ ಪತ್ರಿಕೆಯಲ್ಲಿ ಓದಿದೆ. ಆ ಹುಡುಗನ ಪ್ರೀತಿ ದೊಡ್ದದು ಅದಕ್ಕಿಂತ ದೊಡ್ಡದು ಜಾನಕಿಯಮ್ಮನ ಔದಾರ್ಯ. ತನ್ನನ್ನು ಭೇಟಿಯಾದ ಆ ಹುಡುಗನನ್ನು ಕೊನೆಯ ತನಕ ತಮ್ಮ ಸಾಕು ಮಗನ ಸ್ಥಾನ ನೀಡಿ ಬೆಳೆಸಿದರು. ತಮ್ಮ ಕೊನೆಯ ದಿನಗಳನ್ನೂ ಆ ಮಗನ ಮನೆಯಲ್ಲೇ ಕಳೆದರು. ಇದು ಜಾನಕಮ್ಮನ ಹೆಗ್ಗಳಿಕೆ. ‘ನಗುವ ನಯನ ಮಧುರ ಮೌನ’ ಎನ್ನುವ ಪಲ್ಲವಿ ಅನುಪಲ್ಲವಿ ಚಿತ್ರದ ಹಾಡು ಸದಾಕಾಲ ನನ್ನ ಮನದಲ್ಲಿ ಗುನುಗುತ್ತಾ ಇರುತ್ತದೆ.
(ಜಾನಕಿಯಮ್ಮನ ಬದುಕಿನ ಇನ್ನಷ್ಟು ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಬರೆಯುವೆ)
ಕೃತಜ್ಞತೆಗಳು: ಶ್ರೀ ಕರುಣಾಕರ ಪೈ (ಚಿತ್ರದಲ್ಲಿ ಜಾನಕಿಯಮ್ಮನ ಬಲಬದಿ ಇರುವವರು)
ಪ್ರತಿಕ್ರಿಯೆ (3)
Very nice article. Must read 💯
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು ಕಿರಣ್
Wonderful article..highly recommended to everyone! 😊
ನಿಮ್ಮ ಅಭಿಪ್ರಾಯಕ್ಕೆ ಕೃತಜ್ಞತೆಗಳು ಆದಿತ್ಯ...