ಕಳೆದ ವಾರ ಅನಿರೀಕ್ಷಿತವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾಗೆ ಹೋಗಬೇಕಾಗಿ ಬಂತು. ಕುಮಟಾದ ರಥಬೀದಿಗಳಲ್ಲಿ ಬೆಳಗಿನ ಜಾವ ಗ್ರಾಮೀಣ ಭಾಗಗಳಿಂದ ಬರುವ ಮಹಿಳೆಯರು ತಮ್ಮಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳನ್ನು ಮಾರಾಟಕ್ಕೆ ತರುತ್ತಾರೆ ಎಂದು ಕೇಳಿದ್ದೆ. ಈ ಬಾರಿ ಸಮಯದ ಅಭಾವ ಇದ್ದರೂ ಮಾರುಕಟ್ಟೆಗೆ ಒಂದು ಸುತ್ತು ಹಾಕಿ ಬರೋಣ ಎಂದು ಹೊರಟೆ. ಶಾಂತೇರಿ ಕಾಮಾಕ್ಷಿ ರಾಮನಾಥ ದೇಗುಲದ ಎದುರು ಬಹಳಷ್ಟು ಮಹಿಳೆಯರು ನೆರೆದಿದ್ದರು. ಪ್ರತಿಯೊಬ್ಬರ ಬಳಿ ತಮ್ಮಲ್ಲೇ ಬೆಳೆದ ದೀವಿ ಹಲಸು (Breadfruit), ಬೆಂಡೆಕಾಯಿ, ಕಣಿಲೆ (ಎಳೆ ಬಿದಿರು), ನಾನಾ ಬಗೆಯ ಸೊಪ್ಪುಗಳು, ಕಾಟು ಮಾವಿನ ಹಣ್ಣುಗಳು, ನಾನಾ ಬಗೆಯ ಹೂವು, ಹೂಮಾಲೆಗಳು ಇದ್ದವು. 

WhatsApp Image 2026-07-29 at 9.25.35 AM.jpeg

ಇವುಗಳ ನಡುವೆ ನನಗೆ ಮಹಿಳೆಯೊಬ್ಬರು ಮಾರುತ್ತಿದ್ದ ಹಲಸಿನ ಕಾಯಿಯನ್ನೇ ಹೋಲುವ ಆಕಾರ ಹೊಂದಿದ್ದ ಕಾಯಿಗಳನ್ನು ಗಮನಿಸಿದೆ. ಆಕೆಯ ಬಳಿ ಆರು ಕಾಯಿಗಳು ಮಾತ್ರ ಇದ್ದವು. ಒಮ್ಮೆ ನೋಡುವಾಗ ವಿದೇಶಿ ಹಣ್ಣು ಡ್ಯುರಿಯನ್ ಹಾಗೆ ಕಂಡರೂ ಅದರ ಹಾಗೆ ಹೊರಮೈಯಲ್ಲಿ ಚೂಪಾದ ಮುಳ್ಳುಗಳಿಲ್ಲ, ಹೆಬ್ಬಲಸು ಹಾಗಿದ್ದರೂ ಬಣ್ಣದಲ್ಲಿ ಗಾಢ ಹಸಿರು, ಆಕಾರದಲ್ಲೂ ಸ್ವಲ್ಪ ದೊಡ್ಡದು. ಕುತೂಹಲದಿಂದ ಕೇಳಿದಾಗ ಆಕೆ ಅದರ ಹೆಸರು ಹೇಳಿದಳು ಆದರೆ ಸಂತೆಯ ಗದ್ದಲದಲ್ಲಿ ನನ್ನ ಕಿವಿಗೆ ಮುಟ್ಟಲೇ ಇಲ್ಲ. ಹಣ್ಣಾಗುತ್ತಾ ಕೇಳಿದರೆ ಇಲ್ಲ, ಪಲ್ಯಕ್ಕೆ ಉತ್ತಮ. ಚೆನ್ನಾಗಿರುತ್ತೆ ಅಂದಳು. ಏನಾದರಾಗಲಿ ನೋಡೇ ಬಿಡುವ ಅಂತ ಒಂದನ್ನು ಖರೀದಿಸಿದೆ. ಸುಮಾರು ಒಂದು ಕೆಜಿಯನ್ನು ಮೀರದ ತೂಕ. ಬೆಲೆ ೮೦ ರೂ. ಸ್ವಲ್ಪ ದುಬಾರಿ ಅನಿಸಿದರೂ ಅಪರೂಪದ ಕಾಯಿ ಎಂದು ತೆಗೆದುಕೊಂಡು ಬಂದೆ. ಗಡಿಬಿಡಿಯಲ್ಲಿ ಅದರ ಹೆಸರು ಮತ್ತೊಮ್ಮೆ ಕೇಳಲು ಮರೆತೆ.

WhatsApp Image 2026-07-31 at 6.08.57 PM.jpeg

ಮನೆಗೆ ತಂದ ಬಳಿಕ ಅಮ್ಮ ಬಹಳ ಯೋಚನೆ ಮಾಡಿ ಅವರ ಸಂಬಂಧದಲ್ಲಿ ಒಬ್ಬರು ಕುಮಟಾದಲ್ಲಿದ್ದರು. ಅವರ ಬಳಿ ಕೇಳುವೆ ಹೇಳಿದರು. ಹಾಗೆ ಕೇಳಿದಾಗ ಅವರು ನೀರು ಗುಜ್ಜೆ (ಎಳೇ ಹಲಸಿನ ಕಾಯಿಗೆ ತುಳುವಿನ ಹೆಸರು) ಆಗಿರ ಬೇಕು ಅಂದರು. ಅದರಿಂದ ಪೋಡಿ, ಪಲ್ಯ, ಸುಕ್ಕ ಎಲ್ಲಾ ಮಾಡಬಹುದು. ಒಂದು ರೀತಿಯಲ್ಲಿ ದೀವಿ ಹಲಸು (ದೀಗುಜ್ಜೆ) ಹೇಗೆ ಬಳಸುತ್ತೀರೋ ಹಾಗೇ ಬಳಸ ಬಹುದು ಎಂದರು. ಕಡೆಗೆ ನಾನು ಗೂಗಲ್ ಬಾಬಾನ ಮೊರೆ ಹೋದೆ. ಇದು ಫಿಲಿಫೈನ್ಸ್ ಮೂಲದ ಬೆಳೆ. ಇದಕ್ಕೆ ಕಾಮಾಂಸಿ (Kamansi) ಅಥವಾ ಬೀಜವಿರುವ ದೀವಿ ಹಲಸು (Seeded Breadfruit) ಎಂದು ಕರೆಯುತ್ತಾರೆ. ಕೆಲವರು ‘ಗಾಳಿ ಹಲಸು’ ಎಂದೂ ಕರೆಯುತ್ತಾರಂತೆ. ಪೋಡಿ ಮಾಡಿದಾಗ ತಿನ್ನಲು ರುಚಿಕರವಾಗಿಯೇ ಇತ್ತು. ಕುಮಟಾ ಕಡೆಗೆ ಹೋದಾಗ ಈ ಕಾಯಿ ಸಿಕ್ಕರೆ ಮರೆಯದೇ ತೆಗೆದುಕೊಂಡು ಪದಾರ್ಥ ಮಾಡಿ ಹೇಗಿದೆ ಎಂದು ತಿಳಿಸಿ. ಅಂದ ಹಾಗೆ ನಿಮ್ಮ ಕಡೆ ಈ ‘ನೀರು ಗುಜ್ಜೆ’ ಗೆ ಏನು ಹೇಳುತ್ತಾರೆ? ತಿಳಿಸಿ.