‘ಮಂಗನಿಂದ ಮಾನವ’ ಎನ್ನುವುದು ಬಹಳ ಹಳೆಯ ಮಾತು. ಬಹಳಷ್ಟು ಮಂಗಗಳು ಮಾನವನಾದರೂ ರಾಜಕೀಯಕ್ಕೆ ಸೇರಿದ ಬಳಿಕ ಹಳೆಯ ಬುದ್ದಿ ಬಿಡದೇ ಪಕ್ಷದಿಂದ ಪಕ್ಷಕ್ಕೆ ಹಾರಾಡುತ್ತಲೇ ಇವೆ. ಇದು ತಮಾಷೆಯ ಸಂಗತಿ ಅಷ್ಟೇ. ಆದರೆ ಮಂಗನಿಗೆ ಹಾಗೂ ಮಾನವನಿಗೆ ಬಹಳಷ್ಟು ವಿಷಯಗಳಲ್ಲಿ ಸಾಮ್ಯತೆ ಇದೆ. ಮಂಗಳಲ್ಲಿ ಸಾಮಾನ್ಯ ಮಂಗಗಳು, ಸಿಂಗಳೀಕಗಳು, ಚಿಂಪಾಂಜಿಗಳು, ಗೊರಿಲ್ಲಾಗಳು, ಒರಂಗುಟಾನ್ ಗಳು ಹೀಗೆ ಹಲವಾರು ವಿಧಗಳಿವೆ. ಇವುಗಳಲ್ಲಿ ಚಿಂಪಾಂಜಿಗಳು ಹಾಗೂ ಮನುಷ್ಯ ಮಾತ್ರ ಬಣ್ಣಗಳನ್ನು ಗುರುತಿಸಬಲ್ಲದು ಎನ್ನುವುದು ವಿಜ್ಞಾನಿಗಳ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಒರಂಗುಟಾನ್ ಎನ್ನುವ ಮಂಗ ಪ್ರಬೇಧ ಮಾನವನಂತೆ ನಗುತ್ತದೆ ಎನ್ನುತ್ತಾರೆ. ಇದು ಎಷ್ಟು ಸತ್ಯ?

ಎಲ್ಲಾ ಪ್ರಾಣಿಗಳು ತಮ್ಮ ತಮ್ಮ ಭಾವನೆಗಳನ್ನು ತಮ್ಮದೇ ಆದ ವಿಧಾನಗಳಲ್ಲಿ ವ್ಯಕ್ತ ಪಡಿಸುತ್ತವೆ. ಕೋಪ, ಹಸಿವು, ಸಂತೋಷ, ಬೇಸರ ಎಲ್ಲವನ್ನೂ ಅವುಗಳು ಬೇರೆ ಬೇರೆ ವಿಧಾನಗಳಲ್ಲಿ ತೋರಿಸುತ್ತವೆ. ಆದರೆ ಅವುಗಳು ಮನುಷ್ಯರಂತೆ ನಗುತ್ತವೆಯೇ? ಇಲ್ಲ. ಆದರೆ ಸಂತೋಷವನ್ನು ಅವುಗಳು ಬೇರೆ ಬೇರೆ ಸನ್ನೆಗಳ ಮೂಲಕ ಅಥವಾ ಕಿರುಚಾಡುವುದರ ಮೂಲಕ ವ್ಯಕ್ತ ಪಡಿಸುತ್ತವೆ. ಆದರೆ ಒರಂಗುಟಾನ್ ಗಳು ಆಟವಾಡುವ ಸಮಯದಲ್ಲಿ ನಿಜಕ್ಕೂ ಮಾನವರಂತೆಯೇ ಹಲ್ಲು ಕಿರಿದು ನಗುತ್ತವೆಯಂತೆ. ಆದರೆ ಮಾನವನಂತೆ ಗಹಗಹಿಸಿ ನಗುವುದು ಅವುಗಳಿಗೆ ಸಾಧ್ಯವಿಲ್ಲ. 

ವಿಶೇಷವಾಗಿ ಆಟದ ಸಮಯದಲ್ಲಿ. ಅವುಗಳನ್ನು ಕಿಚಾಯಿಸಿದಾಗ, ತಮಾಷೆ ಮಾಡಿದಾಗ ಅಥವಾ ಒಂದು ಇನ್ನೊಂದರೊಂದಿಗೆ ಹೋರಾಡುವಾಗ, ಅವು ಚಿಕ್ಕ ಚಿಕ್ಕ ಶಬ್ದಗಳನ್ನು ಮಾಡುತ್ತವೆ. ವಿಜ್ಞಾನಿಗಳು ಇವುಗಳನ್ನು ನಗುವಿನ ಒಂದು ರೂಪವೆಂದು ಪರಿಗಣಿಸುತ್ತಾರೆ. ಆದರೆ ಇದು ಮಾನವರ ನಗುವಿನಂತೆ ಕಾಣುವುದಿಲ್ಲ. ಬದಲಾಗಿ ಜೋರಾದ ಉಸಿರಾಟದ ಶಬ್ಧಗಳ ರೂಪದಲ್ಲಿ ಭಾವನೆಗಳು ಹೊರಹೊಮ್ಮುತ್ತವೆ. ಆದರೂ ಈ ಸಂಕೇತಗಳು ಒರಂಗುಟಾನ್ ಗಳ ಉತ್ಸಾಹ ಮತ್ತು ಸಂತೋಷವನ್ನು ಸ್ಪಷ್ಟವಾಗಿ ಸೂಚಿಸುತ್ತವೆ.

ಒರಂಗುಟಾನ್ ನ ನಗುವು ಮುಖ್ಯವಾದ ಸಾಮಾಜಿಕ ಪಾತ್ರವನ್ನು ವಹಿಸುತ್ತದೆ. ಈ ಆಟದ ಶಬ್ದಗಳು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತವೆ. ವಿಶ್ವಾಸ ಮತ್ತು ಸಂತೋಷವನ್ನು ವ್ಯಕ್ತಪಡಿಸುತ್ತವೆ.

ಮನುಷ್ಯರಂತೆಯೇ ಒರಂಗುಟಾನ್ ಗಳಲ್ಲಿ ನಗುವುದು ಒಂದು ಬಗೆಯಲ್ಲಿ ಸಾಂಕ್ರಾಮಿಕವಾಗಿರುತ್ತದೆ. ಒಂದು ಒರಂಗುಟಾನ್ ತನ್ನ ಬಾಯಿ ತೆರೆದು ನಗುವುದನ್ನು ಅಥವಾ ಆಟವಾಡಲು ಕರೆಯನ್ನು ನೀಡಿದ ತಕ್ಷಣ, ಹತ್ತಿರದಲ್ಲಿರುವ ಇತರ ಒರಂಗುಟಾನ್ ಗಳಿಗೂ ಆ ಆನಂದ ಮತ್ತು ಉತ್ಸಾಹ ತ್ವರಿತವಾಗಿ ಹರಡುತ್ತದೆ. ಈ ರೀತಿಯ ನಗುವು ಪ್ರಾಣಿಗಳಲ್ಲಿ ಭಾವನಾತ್ಮಕ ಸಂವಹನದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಈಗ ಗೊತ್ತಾಯಿತಲ್ಲವೇ? ನಗು ಕೇವಲ ಮನುಷ್ಯನ ಸ್ವತ್ತಲ್ಲ. ಹಲವಾರು ಪ್ರಾಣಿಗಳಲ್ಲೂ ನಗುವಿನ ಭಾವನೆಗಳು ಇವೆ. ಆದರೆ ವ್ಯಕ್ತ ಪಡಿಸುವ ವಿಧಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.

(ಆಧಾರ)

ಚಿತ್ರ ಕೃಪೆ: ಅಡೋಬ್ ಸ್ಟಾಕ್ ಜಾಲತಾಣ