ಈ ವರ್ಷ ಮಳೆಯ ತೀವ್ರ ಕೊರತೆಯ ಹಿನ್ನಲೆಯಲ್ಲಿ ವಾತಾವರಣದಲ್ಲಿ ಸೆಖೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಿಗೇ ಬಾಯಾರಿಕೆ, ಸುಸ್ತು ಕಾಡತೊಡಗುತ್ತದೆ. ಬಾಯಾರಿಕೆಗೆ ನೀರು ಅಮೃತವೇ ಆದರೂ ಪರ್ಯಾಯ ಮಾರ್ಗಗಳತ್ತ ಗಮನಿಸಿದರೆ ಮೊದಲಿಗೆ ನಮಗೆ ನೆನಪಾಗುವುದು ಕಬ್ಬಿನ ಹಾಲು ಮತ್ತು ಎಳನೀರು. ಎಳನೀರು ದರ ಈಗ ಕೈಗೆಟಕುತ್ತಿಲ್ಲ. ಅಷ್ಟೊಂದು ದುಬಾರಿ ದರ ನೀಡಿದ ಬಳಿಕವೂ ಅದರಲ್ಲಿ ಸಾಕಷ್ಟು ನೀರು ಮತ್ತು ಗಂಜಿ ಇಲ್ಲದೇ ಇರುವುದು ನಿರಾಶೆ ಮೂಡಿಸುತ್ತದೆ. ಈ ಕಾರಣಕ್ಕೆ ಕಬ್ಬಿನ ಹಾಲು ಉತ್ತಮ. ಐಸ್ ಬಳಸದೇ ಕುಡಿದರೆ ತುಂಬಾ ಉತ್ತಮ. ಐಸ್ ಬೇಕೇ ಆದರೆ ಆಹಾರ ಮಾನ್ಯತೆಯ (ಫುಡ್ ಗ್ರೇಡ್) ಐಸ್ ಬಳಸುವವರ ಬಳಿ ರಸವನ್ನು ಕುಡಿಯಿರಿ. 

ಏಕೆಂದರೆ ವಾಣಿಜ್ಯ ಬಳಕೆಗೆ ಉಪಯೋಗವಾಗುವ ಐಸ್ (ಮಂಜುಗೆಡ್ಡೆ) ಆರೋಗ್ಯಕ್ಕೆ ಉತ್ತಮವಲ್ಲ. ಇದಕ್ಕೆ ಬಳಕೆಯಾಗುವ ನೀರನ್ನು ಶುದ್ಧೀಕರಿಸಲಾಗಿರುವುದಿಲ್ಲ. ಐಸ್ ತಯಾರಿಕೆಗೆ ಬಳಕೆಯಾಗುವ ಪೆಟ್ಟಿಗೆಗಳು ಶುದ್ಧವಾಗಿರುವುದಿಲ್ಲ. ಈ ಕಾರಣದಿಂದ ಕಬ್ಬಿನ ಹಾಲಿಗೆ ಬಳಸುತ್ತಿರುವ ಐಸ್ ಯಾವುದು ಎಂದು ಮೊದಲೇ ಕೇಳಿ ಖಾತ್ರಿ ಪಡಿಸಿಕೊಳ್ಳುವುದು ಉತ್ತಮ.

ಬೇಸಿಗೆಯ ಬಿಸಿಲಿನಲ್ಲಿ ದೇಹ ಸುಸ್ತಾದಾಗ ಅಥವಾ ಬಾಯಾರಿಕೆ ಹೆಚ್ಚಾದಾಗ ಬಹುತೇಕರ ಮೊದಲ ಆಯ್ಕೆಯಾಗುವುದು ಕಬ್ಬಿನ ಹಾಲು. ರಸ್ತೆ ಬದಿಯ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಈ ನೈಸರ್ಗಿಕ ಪಾನೀಯ ಕೇವಲ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲ, ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳನ್ನು ನೀಡುವ ಗುಣಗಳನ್ನು ಹೊಂದಿದೆ. ಅದ್ದರಿಂದಲೇ ಕಬ್ಬಿನ ಹಾಲು ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಆರೋಗ್ಯ ಪಾನೀಯವಾಗಿ ಜನಪ್ರಿಯತೆ ಗಳಿಸುತ್ತಿದೆ. ಕಬ್ಬಿನ ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಅಡಕವಾಗಿವೆ. ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ,, ಪೊಟ್ಯಾಸಿಯಮ್ ಮತ್ತು ಹಾಗೂ ತಾಮ್ರದಂತಹ ಖನಿಜಾಂಶಗಳು ಇದರಲ್ಲಿದ್ದು, ದೇಹದ ವಿವಿಧ ಅಂಗಾಂಗಗಳ ಕಾರ್ಯನಿರ್ವಹಣೆಗೆ ನೆರವಾಗುತ್ತವೆ. ಜೊತೆಗೆ ನೈಸರ್ಗಿಕ ಸಕ್ಕರೆಯ ಅಂಶವಿರುವುದರಿಂದ ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ.

ಇಂದಿನ ಒತ್ತಡದ ಬದುಕಿನಲ್ಲಿ ಸುಸ್ತು ಮತ್ತು ಆಯಾಸ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಂದರ್ಭಗಳಲ್ಲಿ ಕಬ್ಬಿನ ಹಾಲಿನಲ್ಲಿರುವ ಸುಕ್ರೋಸ್ ದೇಹಕ್ಕೆ ತಕ್ಷಣ ಶಕ್ತಿ ನೀಡುವ ಮೂಲಕ ಚೈತನ್ಯವನ್ನು ಹೆಚ್ಚಿಸುತ್ತದೆ. ಜಿಮ್ ನಲ್ಲಿ ವ್ಯಾಯಾಮ, ಕ್ರೀಡೆ ಅಥವಾ ಹೆಚ್ಚು ಶ್ರಮದ ಕೆಲಸದ ಬಳಿಕ ಕಬ್ಬಿನ ಹಾಲು ಸೇವಿಸುವುದರಿಂದ ದೇಹದ ಶಕ್ತಿ ಮರುಪಡೆಯಲು ಸಹಕಾರಿಯಾಗುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವ ಸಾಧ್ಯತೆಯು ಹೆಚ್ಚು. ಕಬ್ಬಿನ ಹಾಲಿನಲ್ಲಿರುವ ಪೊಟ್ಯಾಸಿಯಮ್ ದೇಹದಲ್ಲಿ ದ್ರವ ಸಮತೋಲನ ಕಾಪಾಡಲು ನೆರವಾಗುತ್ತದೆ. ಇದರಿಂದ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಯನ್ನು ತಡೆಯಲು ಸಹಾಯವಾಗುತ್ತದೆ. ಬಿಸಿಲಿನ ತಾಪದಿಂದ ಬಳಲುವವರಿಗೆ ಇದು ಉತ್ತಮ ನೈಸರ್ಗಿಕ ಪರಿಹಾರವಾಗಿದೆ.

ಕಬ್ಬಿನ ಹಾಲಿನಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಅಂಶಗಳಿದ್ದು, ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತವೆ. ದೇಹದಲ್ಲಿನ ಹಾನಿಕಾರಕ ಫ್ರೀ ರಾಡಿಕಲ್‌ಗಳ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಜೊತೆಗೆ ತ್ವಚೆಯ ಕಾಂತಿ ಮತ್ತು ಆರೋಗ್ಯಕ್ಕೂ ಇದು ಪೂರಕವಾಗಿದೆ. ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುವವರಿಗೂ ಕಬ್ಬಿನ ಹಾಲು ಪ್ರಯೋಜನಕಾರಿ ಎನ್ನಲಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಿ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ. ಮಲಬದ್ಧತೆ, ಅಜೀರ್ಣ ಹಾಗೂ ಹೊಟ್ಟೆ ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಆರೋಗ್ಯಕ್ಕೆ ಲಾಭದಾಯಕವಾದ ಕಬ್ಬಿನ ಹಾಲನ್ನು ಮಿತವಾಗಿ ಸೇವಿಸುವುದು ಅತ್ಯಗತ್ಯ. ಇದರಲ್ಲಿ ನೈಸರ್ಗಿಕ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ಅತಿಯಾಗಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಮಧುಮೇಹ ಇರುವವರು ಅಥವಾ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಮಸ್ಯೆ ಹೊಂದಿರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸುವುದು ಉತ್ತಮ.

ಇದಲ್ಲದೆ, ರಸ್ತೆ ಬದಿಯ ಅಂಗಡಿಗಳಲ್ಲಿ ಕಬ್ಬಿನ ಹಾಲು ಸೇವಿಸುವಾಗ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ತಾಜಾ ಆಗಿ ತೆಗೆದ ಹಾಲನ್ನು ಮಾತ್ರ ಸೇವಿಸಬೇಕು. ಹೆಚ್ಚು ಸಮಯ ಇಟ್ಟುಕೊಂಡಿರುವ ಅಥವಾ ಅಶುಚಿಯಾದ ಪರಿಸರದಲ್ಲಿ ತಯಾರಿಸಲಾದ ಕಬ್ಬಿನ ಹಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಬ್ಬಿನ ಹಾಲು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ದೇಹಕ್ಕೆ ಶಕ್ತಿ, ತಾಜಾತನ ಹಾಗೂ ಹಲವು ಆರೋಗ್ಯ ಲಾಭಗಳನ್ನು ನೀಡಬಲ್ಲ ನೈಸರ್ಗಿಕ ಪಾನೀಯವಾಗಿದೆ. ಆದರೆ ಯಾವುದೇ ಆಹಾರ ಅಥವಾ ಪಾನೀಯದಂತೆ ಇದನ್ನೂ ಮಿತವಾಗಿ ಸೇವಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ವಾರಕ್ಕೆ ಒಂದೆರಡು ಬಾರಿ ಸ್ವಚ್ಛ ಮತ್ತು ತಾಜಾ ಕಬ್ಬಿನ ಹಾಲು ಸೇವಿಸುವುದರಿಂದ ಆರೋಗ್ಯಕರ ಜೀವನಶೈಲಿಗೆ ಪೂರಕವಾಗಬಹುದು.

ಈಗ ಪ್ರತಿಯೊಬ್ಬರೂ ತಮ್ಮ ಅಂಗಡಿಗಳಲ್ಲಿ ಅಳವಡಿಸಬಹುದಾದ ಸಣ್ಣ ಆಕಾರದ ಕಬ್ಬಿನ ಹಾಲು ತೆಗೆಯುವ ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಇದರಿಂದ ಹಳೆಯ ಸಾಂಪ್ರದಾಯಿಕ ಯಂತ್ರಗಳು ತೆರೆಯ ಮರೆಗೆ ಸರಿಯುತ್ತಿವೆ. ಕಬ್ಬು ಬೆಳೆಯುವ ಊರುಗಳಲ್ಲಿ ಆಲೆ ಮನೆಗಳಲ್ಲಿ ಕಬ್ಬಿನ ರಸ ತೆಗೆಯಲು ಎತ್ತು, ಕೋಣ ಮುಂತಾದ ಜಾನುವಾರುಗಳನ್ನು ಬಳಕೆ ಮಾಡುತ್ತಾರೆ. ಕಬ್ಬಿನ ಹಾಲು ಕುಡಿಯಿರಿ ಆದರೆ ಮೊದಲಿಗೆ ಸ್ವಚ್ಛತೆಗೆ ಗಮನ ನೀಡಿ.

(ಮಾಹಿತಿ ಸಂಗ್ರಹ)