ನೀವು ನಮ್ಮ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮಾಜದ ಮಹಿಳೆಯರು ತೊಡುವ ವಿಭಿನ್ನ ಶೈಲಿಯ ಉಡುಗೆ ಅದರ ಜೊತೆಗೆ ವರ್ಣರಂಜಿತ ಮಣಿಸರಗಳನ್ನು ಗಮನಿಸಿರಬಹುದು. ಅವರು ಧರಿಸುವ ಪ್ರತಿಯೊಂದು ವರ್ಣದ ಮಣಿಸರಕ್ಕೆ ಅದರದ್ದೇ ಆದ ಅರ್ಥಗಳಿವೆಯಂತೆ. ಹಾಗೆಯೇ ನಮ್ಮ ಲಂಬಾಣಿ, ಬಂಜಾರ ಸಮಾಜಗಳ ಮಹಿಳೆಯರೂ ಬೇರೆ ಬೇರೆ ಶೈಲಿಯ ಉಡುಗೆಗಳ ಜೊತೆಗೆ ಮಣಿಸರಗಳನ್ನು ಧರಿಸುತ್ತಾರೆ. ಇದು ಅವರ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಅವರ ಉಡುಗೆಯನ್ನು ಆಕರ್ಷಣೀಯವನ್ನಾಗಿಸುತ್ತದೆ.

ಇದೇ ರೀತಿಯ ಬಣ್ಣ ಬಣ್ಣ ಮಣಿಸರಗಳನ್ನು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುವ ಅಲ್ಲಿಯ ಮೂಲ ನಿವಾಸಿಗಳು ಧರಿಸುತ್ತಾರೆ. ನಮಗೆ ಆಫ್ರಿಕಾ ಎಂದ ಕೂಡಲೇ ನೆನಪಾಗುವುದು ಅಲ್ಲಿಯ ಬುಡಕಟ್ಟು ಜನಾಂಗ, ಕಾಡು ಪ್ರಾಣಿಗಳು, ಬಡತನ ಮತ್ತು ಗಂಭೀರ ರೋಗಗಳು. ದಕ್ಷಿಣ ಆಫ್ರಿಕಾದಲ್ಲಿ ಯುರೋಪಿಯನ್ನರ ಆಕ್ರಮಣಕ್ಕೆ ಮೊದಲು ವಿಭಿನ್ನವಾದ ಸಂಸ್ಕೃತಿ ಇತ್ತು. ಅತ್ಯಂತ ದೊಡ್ಡದಾದ ಬುಡಕಟ್ಟು ಸಮಾಜ ವಾಸವಾಗಿತ್ತು. ಅವರ ದೈವ ದೇವರ ಉಪಾಸನೆ, ಆಹಾರ, ವಿಭಿನ್ನ ಉಡುಗೆ ತೊಡುಗೆಗಳು, ನೃತ್ಯಗಳು, ಸಂಗೀತ, ಹಾಡುಗಳು, ಜನರ ದೈನಂದಿನ ಜೀವನ ಎಲ್ಲವೂ ನಮ್ಮ ಅನಿಸಿಕೆಗಿಂತಲೂ ಭಿನ್ನವಾಗಿತ್ತು. ಬಡತನ ತಾಂಡವವಾಡುತ್ತಿದ್ದರೂ ಅವರ ಉಡುಗೆ ತೊಡುಗೆಗಳು ಮಾತ್ರ ಕಲರ್ ಫುಲ್ ಆಗಿತ್ತು.

ನಾವು ದಕ್ಷಿಣ ಆಫ್ರಿಕಾದ ಬಾವುಟವನ್ನೇ ಗಮನಿಸಿದರೆ ಅದರಲ್ಲಿ ಹಲವಾರು ವರ್ಣಗಳಿವೆ. ಅದೇ ರೀತಿ ಅಲ್ಲಿಯ ಮೂಲ ನಿವಾಸಿಗಳು ತಮ್ಮ ವಸ್ತ್ರ ವಿನ್ಯಾಸವನ್ನು ಮಾಡಿಕೊಂಡಿದ್ದರು. ಇದರಲ್ಲಿ ಪ್ರಮುಖವಾದದ್ದು ಝುಲು ಅಥವಾ ಜುಲು (Zulu) ಮಣಿಕಟ್ಟುಗಳು. ನೀವು ಈ ಬಗೆಯ ಮಣಿಗಟ್ಟುಗಳನ್ನು ಆಫ್ರಿಕಾದ ಮೂಲ ನಿವಾಸಿಗಳ ಫೋಟೋಗಳಲ್ಲಿ ಖಂಡಿತವಾಗಿಯೂ ನೋಡಿರುತ್ತೀರಿ. ಇವುಗಳು ಸಣ್ಣ ಸಣ್ಣ ಮಣಿಗಳನ್ನು ಪೋಣಿಸಿ ಮಾಡಿದ ಸರಗಳು. ಒಂದು ಸಮಯದಲ್ಲಿ ಝುಲು ಮಣಿ ಸರಗಳು ಅಲ್ಲಿಯ ಜನರ ಟ್ರೆಂಡ್ ಆಗಿತ್ತು. ಆಫ್ರಿಕಾದ ಜನರಿಗೆ ಅದು ತಮ್ಮ ಗುರುತು, ಸಾಧನೆ ಮತ್ತು ಸಮುದಾಯವನ್ನು ತಿಳಿಸುವ ಸುಲಭ ಸಾಧನವಾಗಿತ್ತು. ಝುಲು ಮಣಿಗಟ್ಟಿನ ಪ್ರಮುಖ ಅಂಶವೆಂದರೆ ಅದರ ವರ್ಣರಂಜಿತ ವಿನ್ಯಾಸ.

zulu.jpeg

ಕಾಲಕ್ಕೆ ತಕ್ಕ ಕೋಲ ಕಟ್ಟುವ ಹಾಗೆ ಈಗಿನ ಝುಲು ಮಹಿಳೆಯರು ಪ್ಲಾಸ್ಟಿಕ್ ನಿಂದ ತಯಾರಿಸಿದ ವರ್ಣರಂಜಿತ ಮಣಿಗಳನ್ನು ತಮ್ಮ ಅಲಂಕಾರಕ್ಕೆ ಬಳಸಿಕೊಳ್ಳುತ್ತಾರೆ. ಮೊದಲು ಮೂಳೆ, ಪ್ರಾಣಿಗಳ ಕೊಂಬು, ಹೊಳೆಯುವ ಕಲ್ಲುಗಳು, ಚಿಪ್ಪುಗಳು, ಕೆಲವು ಬಗೆಯ ಬೀಜಗಳು, ಹೊಳೆಯುವ ಮರದ ತುಂಡು ಇತ್ಯಾದಿಗಳಿಂದ ಮಣಿಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಈ ಮಣಿಗಳನ್ನು ದಾರದಲ್ಲೋ, ಬಳ್ಳಿಯಲ್ಲೋ ಕಟ್ಟಿ ಅಲಂಕಾರಿಕವಾಗಿ ತಮ್ಮ ಕತ್ತಿನ ಸುತ್ತ ಹಾಕಿಕೊಳ್ಳುತ್ತಿದ್ದರು. ಈಗ ಮಣಿಗಳಿಂದಲೇ ಇಡೀ ಮೈಗೆ ಉಡುಗೆಯನ್ನು ಮಾಡಿ ಧರಿಸಿಕೊಳ್ಳುತ್ತಾರೆ. ಹದಿನೆಂಟನೇ ಶತಮಾನದ ಕೊನೆಯಲ್ಲಿ ವಸಾಹತುಶಾಹಿಗಳ ಆಗಮನದಿಂದಾಗಿ ಗಾಜು ಮತ್ತು ಸಿರಾಮಿಕ್ ವಸ್ತುಗಳಿಂದ ತಯಾರಿಸಿದ ಮಣಿಗಳನ್ನು ಧರಿಸಲು ಪ್ರಾರಂಭಿಸಿದರು. ಸಮಯ ಕಳೆದಂತೆ ದೇಶ ಸ್ವತಂತ್ರವಾದ ಬಳಿಕ ಝುಲು ಮಣಿಗಟ್ಟುಗಳನ್ನು ಶುಭ ಕಾರ್ಯಗಳಿಗೆ ಹೋಗುವಾಗ ಅಥವಾ ಇನ್ನಿತರ ಸಮಾರಂಭಗಳಲ್ಲಿ ಧರಿಸಲು ಪ್ರಾರಂಭಿಸಿದರು. 

(ಆಧಾರ)

ಚಿತ್ರ ಕೃಪೆ: ಇನ್ಸ್ಟಾಗ್ರಾಂ ತಾಣಗಳು