ಬಾರಿ ಮಳೆ ಕೈಕೊಟ್ಟಿದೆ. ಕರ್ನಾಟಕದಲ್ಲಂತೂ ಜೂನ್ ಮತ್ತು ಜುಲೈ ಎರಡು ತಿಂಗಳಲ್ಲೂ ವಾಡಿಕೆಗಿಂತ ಬಹುಪಟ್ಟು ಕಡಿಮೆ ಮಳೆಯಾಗಿದೆ. ಜಲಾಶಯಗಳೂ ಬರಿದಾಗಿವೆ. ರಾಜ್ಯದ ಯಾವುದೇ ಜಲಾಶಯವೂ ಪೂರ್ಣವಾಗಿ ತುಂಬಿಲ್ಲ, ಸಾಲದೆಂಬಂತೆ ಎಲ್ ನಿನೋ ಪರಿಣಾಮವಾಗಿ ಮುಂದಿನ ದಿನಗಳಲ್ಲೂ ಹೆಚ್ಚಿನ ಮಳೆಯಾಗದು ಎಂಬ ಕರಾಳ ಭವಿಷ್ಯ ಕಾದು ಕೂತಿದೆ. ರಾಜ್ಯ ಸರಕಾರವೇ ರೈತರಿಗೆ ಈಗಲೇ ಬಿತ್ತನೆ ಮಾಡದಂತೆ, ಸ್ವಲ್ಪ ಕಾಲ ಕಾದುನೋಡುವಂತೆ ಸೂಚನೆ ನೀಡಿದೆ. ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ಹಾಗೂ ಸದ್ಯಕ್ಕೆ ಕೃಷಿ ಚಟುವಟಿಕೆಗಳಿಗೆ ಬಳಸದಂತೆಯೂ ಎಚ್ಚರಿಕೆಯ ನಿಲುವು ತಳೆದಿದೆ. ಪರಿಸ್ಥಿತಿ ಇಂತಿರುವಾಗ ಕಾವೇರಿ ನೀರು ನಿಯಂತ್ರಣ ಮಂಡಳಿಯು ಕರ್ನಾಟಕದಿಂದ ತಮಿಳುನಾಡಿಗೆ ೧೫ ದಿನಗಳ ಕಾಲ ದಿನಂಪ್ರತಿ ೩,೫೦೦ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿರುವುದು ಆಘಾತಕಾರಿ ಸುದ್ದಿಯೇ ಸರಿ. ಮುಂದಿನ ೧೫ ದಿನಗಳಲ್ಲಿ ಒಟ್ಟು ೪.೫ ಟಿಎಂಸಿ ನೀರು ಬಿಡಬೇಕೆಂಬುದು ಮಂಡಳಿಯ ಸೂಚನೆ.

ಮಂಡಳಿಯು ನಿಯಮಾನುಸಾರ ಆದೇಶ ನೀಡಿರಬಹುದಾದರೂ, ಕರ್ನಾಟಕವೇ ನೀರಿನ ಬರ ಅನುಭವಿಸುತ್ತಿರಬೇಕಾದರೆ, ತಮಿಳುನಾಡಿಗೆ ನೀರು ಬಿಡುವುದಾದರೂ ಎಲ್ಲಿಂದ ಎಂಬುದೇ ಮುಖ್ಯ ಪ್ರಶ್ನೆ. ಪ್ರತಿಬಾರಿ ಮಳೆ ಕೈಕೊಟ್ಟು ಕಾವೇರಿ ಕ್ಷೀಣವಾದಾಗ ತಮಿಳುನಾಡು ಜತೆಗಿನ ನದೀ ನೀರು ಹಂಚಿಕೆ ವಿವಾದ ತಲೆ ಎತ್ತುತ್ತದೆ. ಹೆಚ್ಚು ನೀರು ಬಿಡಬೇಕೆಂಬ ತಗಾದೆಯನ್ನು ತಮಿಳುನಾಡು ಎತ್ತುತ್ತದೆ. ವಿಪರ್ಯಾಸವೆಂದರೆ ಬಹುತೇಕ ಬಾರಿ ಕರ್ನಾಟಕಕ್ಕೆ ಪ್ರತಿಕೂಲಕರವಾದ ಆದೇಶಗಳನ್ನೇ ಕಾವೇರಿ ನೀರು ನಿಯಂತ್ರಣ ಮಂಡಳಿಯು ನೀಡುತ್ತದೆ. ಸಹಜವಾಗಿಯೇ ಇದು ರಾಜ್ಯದ ರೈತರಲ್ಲಿ ಅದರಲ್ಲೂ ಮುಖ್ಯವಾಗಿ ಕಾವೇರಿ ಜಲಾನಯನ ಪ್ರದೇಶದ ಕೃಷಿಕರಲ್ಲಿ ಆಕ್ರೋಶ ಸೃಷ್ಟಿಸುತ್ತದೆ. ಪ್ರತಿಭಟನೆ, ಧರಣಿ ಮುಂತಾದ ಬೆಳವಣಿಗೆಗಳಿಗೆ ಆಸ್ಪದ ಮಾಡಿಕೊಡುತ್ತದೆ.

ನದಿಯೆಂಬುದು ಇಡೀ ದೇಶದ ಆಸ್ತಿ, ನದಿ ನೀರು ಎಲ್ಲರಿಗೂ ಸಿಗಬೇಕು ಎಂಬುದು ನಿಜ. ಆದರೆ ಅನಾವೃಷ್ಟಿಯ ಕಾಲದಲ್ಲಿ ನೀರು ಹಂಚಿಕೆಯಲ್ಲೂ - ವಿವೇಕ ಮೂಡಬೇಕು. ಮಾನವೀಯ ನೆಲೆಯಲ್ಲಿ ನೀರು ಹಂಚಲ್ಪಡಬೇಕೇ ಹೊರತು ಹಕ್ಕಿನ ಪ್ರತಿಪಾದನೆ ಸಲ್ಲದು.

ತಮಿಳುನಾಡು ಪ್ರತಿಬಾರಿಯೂ ತನ್ನ ಹಕ್ಕಿನ ವಾದ ಮಂಡಿಸಿ ಕಾವೇರಿ ನೀರು ಪಡೆಯಲು ಯತ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ತನ್ನ ಪ್ರಜೆಗಳ ಹಿತಾಸಕ್ತಿ ರಕ್ಷಿಸಲು ಯೋಜಿತ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಂದಾಗಬೇಕಾಗಿದೆ. ಇದೇವೇಳೆ, ಸಂಕಷ್ಟದ ಸಮಯದಲ್ಲಿ ರಾಜ್ಯಗಳ ಮಧ್ಯೆ ನದೀ ನೀರು ಹಂಚಿಕೆಯ ಕುರಿತಂತೆ ಒಂದು ವೈಜ್ಞಾನಿಕ ಸೂತ್ರ ರೂಪಿಸುವುದಂತೂ ಆಗಲೇಬೇಕಾದ ಕಾರ್ಯ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೩೦-೦೭-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ