ಜರ್ಮನಿಯಂಥ ತಂಪು ಹವಾಮಾನದ ಜಾಗದಲ್ಲಿ ಇಂದು ಬಿಸಿಗಾಳಿ ಮತ್ತು ಕಾಳಿಚ್ಚು ತಾಂಡವವಾಡುತ್ತಿದೆ. ಜರ್ಮನಿ ಮಾತ್ರ ಅಲ್ಲ ಇಡೀ ಯುರೋಪ್ ಇಂಥದ್ದೇ ಪರಿಸ್ಥಿತಿಯಲ್ಲಿ ಬೇಯುತ್ತಿದೆ. ಇತ್ತ ಭಾರತ ಸಹಿತ ಭೂಮಧ್ಯ ರೇಖೆಯ ಆಸುಪಾಸಿನ ದೇಶಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬರಗಾಲದ ಭೀತಿ ಎದುರಾಗಿದೆ. ಈಗಲೂ ಕಾಲ ಮಿಂಚಿಲ್ಲ ತತ್‌ಕ್ಷಣ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡರೆ ಈ ಭೂಮಿಯನ್ನು ವಾಸಯೋಗ್ಯ ಗ್ರಹವಾಗಿ ಮುಂದಿನ ಪೀಳಿಗೆಗಳಿಗೆ ನಾವು ಉಳಿಸಿಕೊಳ್ಳಬಹುದಾಗಿದೆ.

ಇವೆಲ್ಲವೂ ವಿಜ್ಞಾನಿಗಳು ದಶಕಗಳ ಹಿಂದೆಯೇ ನೀಡಿದ್ದ ಹವಾಮಾನ ವೈಪರೀತ್ಯದ ಎಚ್ಚರಿಕೆಯ ಸ್ಪಷ್ಟ ಮುನ್ಸೂಚನೆಗಳು. ನಾವು ಪ್ರಕೃತಿಗೆ ಮಾಡಿದ ದ್ರೋಹದ ಫಲವನ್ನು ನಾವೀಗ ಉಣ್ಣಲಾರಂಭಿಸಿದ್ದೇವೆ.

ಜಾಗತಿಕ ತಾಪಮಾನವು ಕೇವಲ ಒಂದು ದೇಶ ಅಥವಾ ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಇತ್ತೀಚೆಗಿನ ದತ್ತಾಂಶಗಳೇ ಸಾಕ್ಷಿ ಜಾಗತಿಕ ಕಾರ್ಬನ್ ಪ್ರೊಜೆಕ್ಟ್ ವರದಿಗಳ ಪ್ರಕಾರ, ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೆಡ್ ಪ್ರಮಾಣವು ಕೈಗಾರಿಕಾ ಕ್ರಾಂತಿಗಿಂತ ಮುಂಚಿನ ಅವಧಿಗೆ ಹೋಲಿಸಿದರೆ ಶೇ. ೫೦ಕ್ಕಿಂತ ಹೆಚ್ಚಾಗಿದೆ. ಐರೋಪ್ಯ ಒಕ್ಕೂಟದ ಕೊಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯ ಪ್ರಕಾರ, ಇತ್ತೀಚೆಗಿನ ವರ್ಷಗಳು ಇತಿಹಾಸದಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾದ ವರ್ಷಗಳಾಗಿವೆ. ಜರ್ಮನಿಯಲ್ಲಿ ತಾಪಮಾನವು ೪೦ ಡಿಗ್ರಿ ಸೆ. ದಾಟುತ್ತಿದ್ದರೆ, ಇತ್ತ ಭಾರತದಲ್ಲಿ ಮುಂಗಾರು ಮಳೆಯ ಕೊರತೆಯು ಶೇ. ೧೦ರಿಂದ ೧೫ರಷ್ಟುತಲುಪುತ್ತಿರುವುದು ಕೃಷಿ ವಲಯ ಹಾಗೂ ಜಲಮೂಲಗಳನ್ನು ತಲ್ಲಣಗೊಳಿಸಿದೆ.

ನಾವು ನೆನಪಿಡಬೇಕಾದ ವಿಷಯ ಎಂದರೆ, ಹವಾಮಾನ ವೈಪರೀತ್ಯ ಎಂಬುದು ಇನ್ನು ಮುಂದೆ ಕೇವಲ ಭವಿಷ್ಯದ ಆತಂಕವಲ್ಲ, ಅದು ನಮ್ಮ ದೈನಂದಿನ ಬದುಕನ್ನು ಮತ್ತು ಆರ್ಥಿಕತೆಯನ್ನು ನುಂಗುತ್ತಿರುವ ಕಟು ಸತ್ಯ. ಇಂತಹ ಪರಿಸರ ಏರುಪೇರುಗಳು ಕೇವಲ ಈ ವರ್ಷಕ್ಕೆ ಮುಗಿಯುವಂಥದ್ದಲ್ಲ, ಇನ್ನು ಮುಂದೆ ಇವುಗಳ ತೀವ್ರತೆ, ಪ್ರವಾಹಗಳು ಮತ್ತು ಬರಗಾಲದ ಆವರ್ತನ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಸಂಸ್ಥೆಯ ಅಂತರ್ ಸರಕಾರ ಹವಾಮಾನ ಬದಲಾವಣೆ ಸಮಿತಿ (ಐಪಿಸಿಸಿ) ವರದಿ ಸ್ಪಷ್ಟಪಡಿಸಿದೆ.

ನಾವು ವಾತಾವರಣಕ್ಕೆ ಸೂಸುವ ಹಸುರುಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸದಿದ್ದರೆ, ಉಷ್ಣಾಂಶದ ಏರಿಕೆ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ನಾವೀಗ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಇದೆ. ಸರಕಾರಗಳ ಮಟ್ಟದಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಕಡಿತಗೊಳಿಸಿ, ಸೌರ ಮತ್ತು ಪವನ ಶಕ್ತಿಯಂತಹ ನವೀಕರ ಸಬಹುದಾದ ಇಂಧನಗಳಿಗೆ ತತ್ ಕ್ಷಣವೇ ಆದ್ಯತೆ ನೀಡಬೇಕು. ಹಸುರು ವಲಯಗಳನ್ನು ಹೆಚ್ಚಿಸಲು ಮತ್ತು ಅರಣ್ಯ ನಾಶ ತಡೆಯಲು ಕಠಿನ ಕಾನೂನು ಜಾರಿಗೆ ತರಬೇಕು. ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯಕ್ಕಿಳಿಸುವ ಗುರಿಯನ್ನು ಶೀಘ್ರವಾಗಿ ತಲುಪಬೇಕು. ನಾಗರಿಕರ ಮಟ್ಟದಲ್ಲಿ ಪ್ರತಿಯೊಬ್ಬ ನಾಗರಿಕನೂ ಕೇವಲ ಮೂಕಪ್ರೇಕ್ಷಕನಾಗದೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು, ಜಲಮೂಲಗಳ ಸಂರಕ್ಷಣ, ಸಾರ್ವಜನಿಕ ಸಾರಿಗೆಯ ಬಳಕೆ ಮತ್ತು ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸುವ ಮೂಲಕ ತನ್ನ ಕೊಡುಗೆ ನೀಡಬೇಕು. ಶಕ್ತಿಯ ಮಿತವ್ಯಯ ಬಳಕೆ ನಮ್ಮ ದೈನಂದಿನ ಶೈಲಿಯಾಗಬೇಕು.

ಭೂಮಿಯನ್ನು ಜೀವಿಸಬಲ್ಲ ಗ್ರಹವಾಗಿ ಉಳಿಸಿಕೊಳ್ಳಲು ಸರಕಾರಗಳು ಮತ್ತು ನಾಗರಿಕರು ಒಟ್ಟಾಗಿ ಜವಾಬ್ದಾರಿಯಿಂದ ಶ್ರಮಿಸದಿದ್ದರೆ, ಮುಂದಿನ ಪೀಳಿಗೆಗೆ ನಾವು ಕೇವಲ ಬೂದಿಯಾಗುತ್ತಿರುವ ವಾಸಯೋಗ್ಯವಲ್ಲದ ಭೂಮಿಯನ್ನಷ್ಟೇ ಉಳಿಸಲು ಸಾಧ್ಯ. ಈಗಲೂ ಕಾಲ ಮಿಂಚಿಲ್ಲ ಪ್ರಕೃತಿಯ ಈ ಕೊನೆಯ ಎಚ್ಚರಿಕೆಗೆ ನಾವು ತತ್‌ಕ್ಷಣವೇ ಸ್ಪಂದಿಸಬೇಕಾಗಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೩೦-೦೬-೨೦೨೬

ಚಿತ್ರ ಕೃಪೆ: ಎ ಐ ಸಹಕಾರ