ಕೀಟನಾಶಕ ಉತ್ಪಾದಕರು ಅದನ್ನು ಬಹಳ ಆಕರ್ಷಕ ಮತ್ತು ಉತ್ತಮ ಪ್ಯಾಕೇಟು ಹಾಗೂ ಬಾಟಲಿಗಳಲ್ಲಿ ಪ್ಯಾಕಿಂಗ್ ಮಾಡುವ ಮೂಲಕ ಅವರ ಉತ್ಪಾದನೆಯನ್ನು ಮಾರುಕಟ್ಟೆ ಮಾಡುತ್ತಾರೆ. ಈ ಪ್ಯಾಕೇಟುಗಳನ್ನು ನೋಡಿ ಆಕರ್ಷಿತರಾಗಿ ಕೃಷಿ ಕೆಲಸಗಾರರು ಅದನ್ನು ತಮ್ಮ ಕೈಚೀಲವಾಗಿ ಮತ್ತು ತಿಂಡಿ ತಿನಿಸು, ನೀರು ತರಲು, ವೀಳ್ಯದೆಲೆ ಕೈಚೀಲವಾಗಿ ಸಹ ಈ ಪ್ಯಾಕೇಟುಗಳನ್ನು ಬಳಸುವುದನ್ನು ಅಲ್ಲಲ್ಲಿ ಕಾಣಬಹುದು. ವಿಶೇಷವಾಗಿ ಶುಂಠಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಮತ್ತು ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಬಳಕೆಯಾಗುವ ಬೆಳೆ ಸಂರಕ್ಷಕ ಕೀಟ ರೋಗ ನಾಶಕಗಳು ಅಷ್ಟಿಷ್ಟಲ್ಲ. ಇವುಗಳ ಪ್ಯಾಕೇಟುಗಳು ಮತ್ತು ಬಾಟಲಿಗಳು ಹೊಲದಲ್ಲಿ ಅಲ್ಲಲ್ಲಿ ಬಿದ್ದುಕೊಂಡಿರುತ್ತವೆ. ಕೆಲವು ಬೆದರು ಬೊಂಬೆಗಳ ತರಹ ಕೆಲಸ ಮಾಡುವುದೂ ಇದೆ.
ಈ ಸಸ್ಯ ಸಂರಕ್ಷಕಗಳ ಪ್ಯಾಕೇಟುಗಳನ್ನು ಕೂಲಂಕುಷವಾಗಿ ಗಮನಿಸಿದರೆ ಇದರಲ್ಲಿ ಕೆಂಪು ಮಾರ್ಕಿನ ಕೀಟನಾಶಕಗಳ ಸಂಖ್ಯೆಯೇ ಹೆಚ್ಚಾಗಿದ್ದು, ನಮ್ಮ ದೇಶದಲ್ಲಿ ಈ ಶ್ರೇಣಿಯ ಕೀಟನಾಶಕಗಳನ್ನು ನಿಷೇಧಿಸಲಾಗಿದೆ. ಬರೇ ಕೆಂಪು ಮಾರ್ಕಿನವುಗಳಲ್ಲದೆ ಕೆಲವು ಹಳದಿ ಮಾರ್ಕಿನವುಗಳೂ ಸಹ ಈಗ ನಿಷೇಧಿಸಲ್ಪಟ್ಟಿವೆ.
ಈ ಕೀಟನಾಶಕಗಳನ್ನು ತಿಳುವಳಿಕೆ ಇಲ್ಲದ ಕೃಷಿ ಕೂಲಿ ಕಾರ್ಮಿಕರ ಕೈಯಲ್ಲಿ ಸೂಕ್ತ ಸುರಕ್ಷಾ ಉಡುಗೆಗಳನ್ನು ಕೊಡದೆ ಸಿಂಪರಣೆ ಮಾಡಿಸಲಾಗುತ್ತದೆ. ಇವುಗಳ ವಾಸನೆ ನೆರೆ ಹೊರೆಯ ನಿವಾಸಿಗಳಿಗೆ ಅಸಹನೀಯವಾಗುತ್ತಿದ್ದರೆ, ಬಳಕೆ ಮಾಡುವ ಕೆಲಸದವರಿಗೆ ಇದು ಇನ್ನೇನು ಸಮಸ್ಯೆಗಳನ್ನು ತರಬಹುದೋ? ಜೊತೆಗೆ ಇದರ ಮಿಶ್ರಣದ ಪ್ರಮಾಣ, ಸಿಂಪರಣಾ ವಿಧಾನ ಸಹ ಸರಿಯಾಗಿರುವುದಿಲ್ಲ. ಇಂತಹ ನಿಷೇಧಿಸಲ್ಪಟ್ಟ ಕೀಟನಾಶಕಗಳು ಕೆಲವು ನಕಲಿ ಪ್ಯಾಕೇಟುಗಳ ಮೂಲಕ ಮತ್ತು ಅಜ್ಞಾತ ಸಂಗ್ರಹ ಕೇಂದ್ರಗಳ ಮೂಲಕ ಸರಬರಾಜಾಗುತ್ತಿವೆ. ಹೆಚ್ಚಾಗಿ ಇದು ಗಡಿ ಭಾಗಗಳಾದ ಆಂಧ್ರ ಕರ್ನಾಟಕ, ತಮಿಳುನಾಡು ಕರ್ನಾಟಕ ಗಡಿಭಾಗಗಳಲ್ಲಿ ಕಂಡು ಬರುತ್ತಿದ್ದು, ತನಿಖೆಯ ಅಗತ್ಯವಿದೆ.
ಈ ರೀತಿ ನಿಷೇಧಿಸಲ್ಪಟ್ಟ ಕೀಟನಾಶಕಗಳಿಂದಾಗಿ ಅದು ಉತ್ಪನ್ನದಲ್ಲಿ ಉಳಿಕೆಯಾಗುವ ಎಲ್ಲಾ ಸಾಧ್ಯತೆಗಳಿದ್ದು, ನಮ್ಮ ದೇಶದ ಏಲಕ್ಕಿ ಬೇರೆ ಕಡೆಗೆ ರಫ್ತು ಆಗುತ್ತದೆ. ಅದರಲ್ಲಿ ಈ ಉಳಿಕೆ ಕಂಡು ಬಂದರೆ ಕೆಟ್ಟ ಹೆಸರೂ ಸಹ ಬರುವ ಸಾಧ್ಯತೆ ಇದೆ. ಎಲ್ಲಾ ರಫ್ತು ಕರಾರುಗಳು ರದ್ದಾಗಿ ಕೃಷಿಕರಿಗೆ ಅಪಾರ ನಷ್ಟ ಉಂಟಾಗುವ ಸಾಧ್ಯತೆಯೂ ಇದೆ. ಸಾಧ್ಯವಾದಷ್ಟು ಕೃಷಿಕರು ಸಾವಯವ ಕೃಷಿಯತ್ತ ಮುಖ ಮಾಡಬೇಕಾಗಿದೆ. ಇದರಿಂದ ಮಣ್ಣಿಗೆ, ಪರಿಸರಕ್ಕೆ ಹಾನಿಯಾಗುವುದಿಲ್ಲ. ಇಳುವರಿಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದರೂ ಜನರಿಗೆ ವಿಷ ಉಣಿಸುವ ಶಾಪದಿಂದ ಮುಕ್ತರಾಗುವಿರಿ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ವೀಕಿಪೀಡಿಯಾ ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!