ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಶೀಘ್ರದಲ್ಲೇ ವಿಶ್ವದ ಶೇಕಡ ೩ರಷ್ಟು ವಿದ್ಯುತ್‌ ಮತ್ತು ಕುಡಿಯಲು ಅಗತ್ಯ ಇರುವುದಕ್ಕಿಂತ ಹೆಚ್ಚಿನ ನೀರನ್ನು ಬಳಸಬಹುದು ಎಂದು ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಭಾಗವಾಗುತ್ತಿದೆಯಾದರೂ, ಅದರ ಹಿಂದೆ ಕೆಲಸ ಮಾಡುವ ಡೇಟಾ ಸೆಂಟರ್‌ಗಳು ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಭಾರಿ ಪ್ರಮಾಣದಲ್ಲಿ ಲೂಟಿ ಮಾಡುತ್ತಿವೆ. ಒಂದು ಸಣ್ಣ ಎಐ ಚಾಟ್‌ ಬಾಟ್‌ಗೆ ನಾವು ಕೇಳುವ ಪ್ರಶ್ನೆಯಿಂದ ಹಿಡಿದು ದೊಡ್ಡ ಎಐ ಮಾದರಿಗಳ ತರಬೇತಿಯವರೆಗೆ ಪ್ರತಿಯೊಂದಕ್ಕೂ ಅಪಾರ ಪ್ರಮಾಣದ ವಿದ್ಯುತ್ ಮತ್ತು ನೀರು ಬೇಕಾಗುತ್ತದೆ. ಜಾಗತಿಕ ವಿದ್ಯುತ್‌ ಬಳಕೆಯಲ್ಲಿ ಶೇಕಡ ೩ ಎಂದರೆ ಅದು ಇಡೀ ಜಪಾನ್ ಅಥವಾ ಜರ್ಮನಿಯಂತಹ ದೊಡ್ಡ ದೇಶಗಳು ಬಳಸುವ ಒಟ್ಟು ವಿದ್ಯುತ್‌ಗೆ ಸಮನಾಗಿರುತ್ತದೆ. ನಾವು ಬಳಸುವ ಚಾಟ್ ಬಾಟ್‌ಗಳು, ಇಮೇಜ್ ಜನರೇಟರ್‌ಗಳು ಮತ್ತು ಸರ್ಚ್ ಇಂಜಿನ್‌ಗಳ ಹಿಂದೆ ಹಗಲಿರುಳು ಕೆಲಸ ಮಾಡುವ ಲಕ್ಷಾಂತರ ಸೂಪರ್ ಕಂಪ್ಯೂಟರ್‌ಗಳಿರುತ್ತವೆ. ಇವುಗಳಿಗೆ ನಿರಂತರ ವಿದ್ಯುತ್ ಬೇಕು.

ಗೂಗಲ್‌ನಲ್ಲಿ ಒಂದು ಸಾಮಾನ್ಯ ಎಐ ಹುಡುಕಾಟ ನಡೆಸುವುದಕ್ಕಿಂತ, ಚಾಟ್‌ ಬಾಟ್‌ನಲ್ಲಿ ಒಂದು ಪ್ರಶ್ನೆಗೆ ಉತ್ತರ ಪಡೆಯಲು ಕನಿಷ್ಠ ೧೦ ಪಟ್ಟು ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಜಗತ್ತಿನ ಬಹುತೇಕ ವಿದ್ಯುತ್ ಇಂದಿಗೂ ಕಲ್ಲಿದ್ದಲು ಮತ್ತು ನೈಸರ್ಗಿಕ ಉತ್ಪಾದನೆಯಾಗುತ್ತಿದೆ. ಎಐಗಾಗಿ ವಿದ್ಯುತ್ ಬಳಕೆ ಹೆಚ್ಚಾದಂತೆ ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗಿ, ಜಾಗತಿಕ ತಾಪಮಾನ ಮತ್ತಷ್ಟು ಏರಿಕೆಯಾಗುತ್ತದೆ. ಡೇಟಾ ಸೆಂಟರ್‌ಗಳಲ್ಲಿರುವ ಸಾವಿರಾರು ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳು ನಿರಂತರವಾಗಿ ಕೆಲಸ ಮಾಡುವಾಗ ಭಾರಿ ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಈ ಕಂಪ್ಯೂಟರ್‌ಗಳನ್ನು ತಂಪಾಗಿಡಲು ಕೋಟ್ಯಂತರ ಲೀಟ‌ರ್ ಶುದ್ಧ ನೀರಿನ ಅಗತ್ಯವಿರುತ್ತದೆ. ವಿಶ್ವಸಂಸ್ಥೆ ಹೇಳುವಂತೆ, ಮನುಷ್ಯರ ಕುಡಿಯುವ ನೀರಿಗಿಂತ ಹೆಚ್ಚಿನ ನೀರನ್ನು ಈ ಯಂತ್ರಗಳನ್ನು ತಂಪಾಗಿಸಲು ಬಳಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಎಐ ಜೊತೆ ನಡೆಸುವ ಪ್ರತಿ ೨೦ರಿಂದ ೫೦ ಪ್ರಶೋತ್ತರಗಳ ಸಂಭಾಷಣೆಗೆ ಸುಮಾರು ಅರ್ಧ ಲೀಟರ್ ನೀರು ಖರ್ಚಾಗುತ್ತದೆ.

ಜಗತ್ತಿನಾದ್ಯಂತ ಈಗಾಗಲೇ ಅಂತರ್ಜಲ ಮಟ್ಟ ಕುಸಿಯುತ್ತಿದೆ. ವಿಶ್ವದ ಪ್ರಮುಖ ನಗರಗಳು ನೀರಿನ ಅಭಾವ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಡೇಟಾ ಸೆಂಟರ್ ಗಳು ಸ್ಥಳೀಯ ಜಲಮೂಲಗಳನ್ನು ಬಳಸಿಕೊಂಡರೆ, ಜನಸಾಮಾನ್ಯರಿಗೆ ಕುಡಿಯುವ ನೀರಿನ ತತ್ವಾರ ಎದುರಾಗುತ್ತದೆ. ಅಲ್ಲದೆ, ಹಸಿರುಮನೆ ಅನಿಲಗಳ ಹೆಚ್ಚಳದಿಂದಾಗಿ ಅಕಾಲಿಕ ಮಳೆ, ಭೀಕರ ಬರಗಾಲ ಮತ್ತು ತಾಪಮಾನ ಏರಿಕೆಯಂತಹ ಸಮಸ್ಯೆಗಳು ತೀವ್ರಗೊಳ್ಳುತ್ತವೆ. ಅಮೆರಿಕ ಅಥವಾ ಯುರೋಪ್‌ನ ತಂತ್ರಜ್ಞಾನ ಕಂಪನಿಗಳು ತಮ್ಮ ಡೇಟಾ ಸೆಂಟರ್‌ಗಳನ್ನು ಏಷ್ಯನ್ ದೇಶಗಳಲ್ಲಿ ಅಥವಾ ಆಫ್ರಿಕಾದಲ್ಲಿ ಸ್ಥಾಪಿಸುತ್ತಿವೆ. ಇದರಿಂದ ಆ ದೇಶಗಳ ತಂತ್ರಜ್ಞಾನ ಮುಂದುವರಿಯಬಹುದು, ಆದರೆ ಅಲ್ಲಿನ ಸ್ಥಳೀಯ ನೀರು ಮತ್ತು ವಿದ್ಯುತ್ ಖಾಲಿಯಾಗುತ್ತದೆ. ಹಾಗಾಗಿ, ಕಂಪನಿಗಳು ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಡೇಟಾ ಸೆಂಟರ್‌ಗಳನ್ನು ಸಂಪೂರ್ಣವಾಗಿ ಸೌರಶಕ್ತಿ ಮತ್ತು ಪವನಶಕ್ತಿ ಮೂಲಕ ನಿರ್ವಹಿಸುವ ಬಗ್ಗೆ ಚಿಂತನೆ ನಡೆಯಬೇಕಿದೆ. ಮೈಕ್ರೋಸಾಫ್ಟ್‌ನಂತಹ ಕಂಪನಿಗಳು ಈಗಾಗಲೇ ಸಮುದ್ರದ ತಳಭಾಗದಲ್ಲಿ ಡೇಟಾ ಸೆಂಟರ್ ಇಟ್ಟು, ಸ್ವಾಭಾವಿಕ ತಣ್ಣನೆಯ ನೀರನ್ನೇ ಬಳಸಿ ತಂಪಾಗಿಸುವ ಪ್ರಯೋಗಗಳನ್ನು ನಡೆಸುತ್ತಿವೆ. ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಭೂಮಿಯ ಉಳಿವೂ ಅಷ್ಟೇ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೦೬-೨೦೨೬