ಕರ್ನಾಟಕ ಲೋಕಸೇವಾ ಆಯೋಗ (ಕೆ ಪಿ ಎಸ್ ಸಿ) ವು ಭ್ರಷ್ಟಾಚಾರಕ್ಕೆ, ಅಕ್ರಮಗಳಿಗೆ ಇನ್ನೊಂದು ಹೆಸರಿನಂತಾಗಿರುವುದು ಈಗಾಗಲೆ ತಿಳಿದಿರುವ ಸಂಗತಿಯ. ಇದೀಗ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಅಮಾನತು ಮಾಡಿರುವ ಘಟನೆಯಿಂದ ಈಗಾಗಲೆ ಹಲವಾರು ಕಳಂಕಗಳನ್ನು ಹೊತ್ತಿರುವ ಕೆ ಪಿ ಎಸ್ ಸಿಗೆ ಮತ್ತೊಮ್ಮೆ ಮಸಿ ಬಳಿದಂತಾಗಿದೆ. ಶಿವಶಂಕರಪ್ಪ ಸಾಹುಕಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿರುವ ರಾಜ್ಯಪಾಲರು ಅವರ ವಿರುದ್ಧದ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟಿನ ಗಮನಕ್ಕೆ ತರುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದ್ದಾರೆ. ಶಿವಶಂಕರಪ್ಪ ಸಾಹುಕಾರ ಅವರು ತಮ್ಮ ಪುತ್ರಿಗೆ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆ ಸಿಗುವಂತೆ ಮಾಡಲು ನಿಯಮಗಳನ್ನು ಉಲ್ಲಂಘಿಸಿದ ಹಾಗೂ ತಮ್ಮ ವಾರ್ಷಿಕ ಆದಾಯವನ್ನು ಕೇವಲ ೪೦,೦೦೦ ರೂಪಾಯಿ ಎಂದು ತೋರಿಸಿ ಮಾಹಿತಿಗಳನ್ನು ಮುಚ್ಚಿಟ್ಟ, ಸುಳ್ಳು ಜಾತಿಪತ್ರ ನೀಡಿದ ಆರೋಪಕೆ ಗುರಿಯಾಗಿದ್ದಾರೆ. ಇದೀಗ ಅವರ ಪುತ್ರಿಯ ಹೆಸರನ್ನು ಕೂಡಾ ನೇಮಕಾತಿ ಪಟ್ಟಿಯಿಂದ ಕೈಬಿಡಲಾಗಿದೆ.
ಕೆ ಪಿ ಎಸ್ ಸಿ ಪಾಲಿಗೆ ಇದೇನೂ ಹೊಸ ಹಗರಣವಲ್ಲ. ಕಳೆದೆರಡು ದಶಕಗಳಿಂದಲೇ ಕೆ ಪಿ ಎಸ್ ಸಿ ಒಂದಿಲ್ಲೊಂದು ಹಗರಣಗಳಲ್ಲಿ ಸಿಲುಕುತ್ತಲೇ ಬಂದಿದೆ. ಕೆ ಪಿ ಎಸ್ ಸಿ ಯಾವುದೇ ಒಂದು ಪರೀಕ್ಷೆಯನ್ನೂ ಸರಿಯಾಗಿ, ಅಕ್ರಮವಿಲ್ಲದೆ ನಡೆಸಿದ ಉದಾಹರಣೆಯಿಲ್ಲ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಕೂಡಾ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ, ನೇಮಕಾತಿ ವಿಳಂಬ, ಉತ್ತರ ಪತ್ರಿಕೆ ತಿರುಚುವಿಕೆ ಮುಂತಾದ ಅಪಸವ್ಯಗಳು ನಡೆಯುತ್ತಲೇ ಬಂದಿವೆ. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಗಳು ಕೋರ್ಟ್ ಮೆಟ್ಟಿಲೇರಿದ, ರದ್ದುಗೊಂಡ, ಮರುಪರೀಕ್ಷೆ ನಡೆಸಬೇಕಾದ ಪ್ರಸಂಗಗಳೂ ಸೃಷ್ಟಿಯಾಗಿವೆ. ಇವೆಲ್ಲದರಿಂದಾಗಿ ನಿಜವಾಗಿ ತೊಂದರೆಗೆ ಸಿಲುಕುವವರು ಪ್ರತಿಭಾನ್ವಿತ ಅಭ್ಯರ್ಥಿಗಳು, ಅವರು ಪ್ರತಿಬಾರಿಯೂ ಅವಕಾಶವಂಚಿತರಾಗುತ್ತಾರೆ. ಕೆ ಪಿ ಎಸ್ ಸಿಯಲ್ಲಿ ಹುದ್ದೆಗಳು 'ಮಾರಾಟ'ವಾಗುತ್ತಿರುವ ಕಾರಣದಿಂದಾಗಿ ಬಡವರ್ಗದ ಮತ್ತು ಮಧ್ಯಮ ವರ್ಗದ ಅಭ್ಯರ್ಥಿಗಳೂ ಸರಕಾರಿ ನೌಕರಿ ಪಡೆಯುವ ಪರಿಸ್ಥಿತಿಯಿಲ್ಲವಾಗುತ್ತಿದೆ.
ಕೆ ಪಿ ಎಸ್ ಸಿಯಲ್ಲಿ ಇಂತಹ ಹಗರಣಗಳು ನಡೆದಾಗಲೆಲ್ಲ ಅದಕ್ಕೆ ಸುಧಾರಣೆ ತರುವ ಮಾತುಗಳು ಮುನ್ನೆಲೆಗೆ ಬರುತ್ತವೆ. ಅದಕ್ಕಾಗಿ ಸಮಿತಿಗಳು ನೇಮಿಸಲ್ಪಡುತ್ತವೆ. ಈಗಾಗಲೆ ಪಿ.ಸಿ. ಹೋಟಾ ಸಮಿತಿಯು ಕೆಪಿಎಸ್ಸಿ ಕಾರ್ಯವೈಖರಿಯಲ್ಲಿ ಸುಧಾರಣೆಗಾಗಿ ಹಲವಾರು ಶಿಫಾರಸುಗಳನ್ನು ಮಾಡಿದೆ. ಸರಕಾರ ಕೂಡಾ ಕಳೆದ ವರ್ಷ ಕರ್ನಾಟಕ ಲೋಕಸೇವಾ ಆಯೋಗ ಮಸೂದೆಯನ್ನು ಅನುಮೋದಿಸಿದೆ. ದುರಂತವೆಂದರೆ ಇಂತಹ ಶಿಫಾರಸುಗಳು ಅನುಷ್ಠಾನಗೊಳ್ಳದಿರುವುದೇ ಮುಖ್ಯ ಸಮಸ್ಯೆ. ಕೆಪಿಎಸ್ಸಿ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವುದು ಕಠಿಣ ಕಾರ್ಯವೇನಲ್ಲ. ಆದರೆ ಅದಕ್ಕೆ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿ ಬೇಕು. ಕೆಪಿಎಸ್ಸಿಯೊಳಗಿನ ಭ್ರಷ್ಟ ವ್ಯವಸ್ಥೆ ಗುಡಿಸಲ್ಪಟ್ಟು, ಅದು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರತಿಭಾವಂತರಿಗೆ ಅರ್ಹತೆಯ ಆಧಾರದಲ್ಲಿಯೇ ಸಿಗುವಂತಾಗಬೇಕು. ಆಗ ಇಡೀ ಸರಕಾರಿ ಯಂತ್ರದ ಕಾರ್ಯವೈಖರಿ ಕೂಡಾ ಭಾರೀ ಸುಧಾರಣೆ ಕಾಣಬಲ್ಲುದು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೬-೦೭-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!