ಮಳೆಗಾಲ ಪ್ರಾರಂಭವಾದೊಡನೆಯೇ ಮಲೆನಾಡು, ಕರಾವಳಿ ಭಾಗಗಳಲ್ಲಿ ಕೆಸುವಿನ ಎಲೆಗಳು ಹುಟ್ಟಿಕೊಳ್ಳುತ್ತವೆ. ಉಳಿದ ಸಮಯದಲ್ಲೂ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕೆಸು (ಪತ್ರೋಡೆ ಎಲೆ) ವಿನ ಎಲೆ ಇದ್ದೇ ಇರುತ್ತದೆ. ಮನೆಯಲ್ಲಿ ತರಕಾರಿ ಇಲ್ಲದ ಸಮಯದಲ್ಲಿ ಈ ಕೆಸುವಿನ ಎಲೆಯಿಂದ ಪತ್ರೋಡೆ ಎನ್ನುವ ರುಚಿಕರವಾದ ಖಾದ್ಯವನ್ನು ಮಾಡುತ್ತಾರೆ. ಕೆಲವು ಕಡೆ ಎಲೆಯ ಮೇಲೆ ಮಸಾಲೆಯನ್ನು ಹಚ್ಚಿ, ಸುರುಳಿ ಸುತ್ತಿ ಬೇಯಿಸಿ, ತುಂಡರಿಸಿ ತಿನ್ನುತ್ತಾರೆ. ಕೆಲವರು ಎಲೆಗಳನ್ನೇ ಸಣ್ಣ ಸಣ್ಣ ತುಂಡು ಮಾಡಿ ಅದನ್ನು ನೇರವಾಗಿ ಮಸಾಲೆಗೆ ಹಾಕಿ ಬೇಯಿಸಿ ತಿನ್ನುತ್ತಾರೆ. ಸುರುಳಿ ಸುತ್ತಿದ ಪತ್ರೋಡೆಯನ್ನು ಸ್ವಲ್ಪ ತೆಂಗಿನ ಎಣ್ಣೆ ಹಾಕಿ ತವಾದ ಮೇಲೆ ಹುರಿದು ತಿಂದರೆ ಅದರ ರುಚಿ ಅಸದಳ. 

ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರಿಗೆ ಕೆಸುವಿನ ಎಲೆಗಳು ಹೊಸದೇನಲ್ಲ. ಮಳೆಗಾಲದಲ್ಲಿ ಪ್ರಕೃತಿ ಹೇರಳವಾಗಿ ಬೆಳೆಯುವ ಈ ಎಲೆಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಪರಂಪರೆ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ. ರುಚಿಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಕೆಸುವಿನ ಎಲೆಗಳು ಬಹಳ ಉಪಯುಕ್ತವೆಂದು ಪೌಷ್ಟಿಕ ತಜ್ಞರು ಅಭಿಪ್ರಾಯಪಡುತ್ತಾರೆ.

patrode.jpeg

ಕೆಸುವಿನ ಎಲೆ ಮತ್ತು ದಂಟಿನಲ್ಲಿ ವಿಟಮಿನ್ C, ವಿಟಮಿನ್ A, ಕ್ಯಾಲ್ಸಿಯಂ, ಫಾಸ್ಪರಸ್, ನಾರು (ಫೈಬರ್) ಮತ್ತು ಕ್ಯಾಲ್ಸಿಯಂ ಆಕ್ಸಲೇಟ್ ಸೇರಿದಂತೆ ಹಲವು ಪೋಷಕಾಂಶಗಳು ಅಡಕವಾಗಿವೆ. ಈ ಹಿನ್ನೆಲೆಯಲ್ಲೇ, ಕೆಸುವಿನ ಎಲೆಗಳಲ್ಲಿ ಇರುವ ಔಷಧೀಯ ಗುಣಗಳ ಬಗ್ಗೆ ಇಲ್ಲಿ ತಿಳಿಯೋಣ.

ಕರುಳಿನ ಕ್ಯಾನ್ಸ‌ರ್ ಅಪಾಯ ಕಡಿಮೆ ಮಾಡಲು ಸಹಕಾರಿ: ಕೆಸುವಿನ ಎಲೆಗಳು 'ವಿಟಮಿನ್ C' ಯ ಉತ್ತಮ ಮೂಲವಾಗಿವೆ. ಇದು ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿನ ಹಾನಿಕಾರಕ ಮುಕ್ತ ರಾಡಿಕಲ್‌ಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, 'ವಿಟಮಿನ್ C' ಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಕಾರಿಯಾಗಿದೆ. ನಿಯಮಿತ ಹಾಗೂ ಸಮತೋಲಿತ ಪ್ರಮಾಣದಲ್ಲಿ ಕೆಸುವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ.

ಕೆಸುವಿನ ಎಲೆಗಳಲ್ಲಿ ಸಮೃದ್ಧವಾಗಿರುವ 'ವಿಟಮಿನ್ ಎ' ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ. ಇದು ದೃಷ್ಟಿಯನ್ನು ಕಾಪಾಡಲು, ವಯಸ್ಸಿನೊಂದಿಗೆ ಬರುವ ಮ್ಯಾಕ್ಯುಲ‌ರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ವಿಟಮಿನ್ A ಕಣ್ಣಿನ ಕಾರ್ನಿಯಾವನ್ನು ಆರೋಗ್ಯವಾಗಿಡುವ ಮೂಲಕ ಸ್ಪಷ್ಟ ದೃಷ್ಟಿಗೆ ನೆರವಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ.

'ವಿಟಮಿನ್ C' ಅಧಿಕವಾಗಿರುವುದರಿಂದ, ಕೆಸುವಿನ ಎಲೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಟಿ'ಕೋಶಗಳು ಮತ್ತು ಫಾಗೋಸೈಟ್ ಗಳಂತಹ ರೋಗನಿರೋಧಕ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು 'ವಿಟಮಿನ್ C' ಅಗತ್ಯವಾಗಿರುತ್ತದೆ. ಇದರ ಕೊರತೆ ಇದ್ದರೆ ದೇಹವು ಸೋಂಕುಗಳ ವಿರುದ್ಧ ಸಮರ್ಪಕವಾಗಿ ಹೋರಾಡಲು ಸಾಧ್ಯವಾಗುವುದಿಲ್ಲ.

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ನೆರವು: ಕೆಸುವಿನ ಎಲೆಗಳಲ್ಲಿ ಸಪೋನಿನ್‌ಗಳು, ಟ್ಯಾನಿನ್‌ಗಳು, ಪ್ಲೇವನಾಯ್‌ಗಳು ಮತ್ತು ಕಾರ್ಬೋಹೈಡ್ರೆಟ್‌ಗಳು ಅಡಕವಾಗಿವೆ. ಇವುಗಳು ರಕ್ತದೊತ್ತಡವನ್ನು ನಿಯಂತ್ರಿಸಲು - ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಅಧಿಕ ರಕ್ತದೊತ್ತಡವು ಹೃದ್ರೋಗ ಮತ್ತು ಪಾರ್ಶವಾಯುವಿನ ಅಪಾಯವನ್ನು ಹೆಚ್ಚಿಸುವುದರಿಂದ, ಕೆಸುವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಹೃದಯದ ಆರೋಗ್ಯಕ್ಕೂ ಲಾಭಕರ.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ: ಕೆಲವು ಅಧ್ಯಯನಗಳ ಪ್ರಕಾರ, Colocasia esculenta ಸಸ್ಯದ ಅಂಶಗಳು ರಕ್ತದಲ್ಲಿನ ಗ್ಲಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದು ಮಧುಮೇಹ ಹೊಂದಿರುವವರಿಗೆ ಸಹಾಯಕವಾಗಬಹುದು. ಆದರೆ ಮಧುಮೇಹಿಗಳು ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದು ಸೂಕ್ತ.

ಎಚ್ಚರಿಕೆ ಅಗತ್ಯ: ಕೆಸುವಿನ ಎಲೆಗಳನ್ನು ಸದಾ ಚೆನ್ನಾಗಿ ಬೇಯಿಸಿ ಮಾತ್ರ ಸೇವಿಸಬೇಕು. ಕಚ್ಚಾ ಅಥವಾ ಅರೆಬೆಂದ ಎಲೆಗಳಿಂದ ಅಲರ್ಜಿಯಾಗಿ ತುರಿಕೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.

ತಜ್ಞರ ಸಲಹೆ : ಕೆಸುವಿನ ಎಲೆಗಳು ಪೌಷ್ಟಿಕ ಹಾಗೂ ಆರೋಗ್ಯಕಾರಿ ಆಹಾರವಾಗಿದ್ದರೂ, ಇವು ಔಷಧಿಗೆ ಪರ್ಯಾಯವಲ್ಲ, ಗಂಭೀರ ಕಾಯಿಲೆಗಳಿದ್ದಲ್ಲಿ ವೈದ್ಯಕೀಯ ಸಲಹೆ ಅತ್ಯಗತ್ಯವೆಂದು ತಜ್ಞರು ಎಚ್ಚರಿಸುತ್ತಾರೆ. ಕೆಸುವಿನ ಎಲೆಯ ಖಾದ್ಯಗಳು ಕೇವಲ ಮಳೆಗಾಲದಷ್ಟೇ ಅಲ್ಲದೇ ಬೇರೆ ಸಮಯದಲ್ಲೂ ತಿನ್ನಲು ಯೋಗ್ಯ. ಹಲವಾರು ವಿಧದ ಕೆಸುವಿನ ಎಲೆಗಳಿವೆ. ಅದರಲ್ಲಿ ಒಂದೆರಡು ಪ್ರಕಾರ ಕೇವಲ ಮಳೆಗಾಲದಲ್ಲಿ ಮಾತ್ರ ಹುಟ್ಟಿಕೊಳ್ಳುತ್ತವೆ. ಇವುಗಳನ್ನು ತಿನ್ನುವುದಕ್ಕೂ ಮೊದಲು ಜಾಗೃತೆ ವಹಿಸುವುದು ಅತ್ಯಗತ್ಯ. ಕೆಸುವಿನಲ್ಲಿ ಕಪ್ಪು ದಂಟಿನ ಕೆಸುವೂ ಒಂದು. ಇದರ ದಂಟಿನಿಂದಲೂ ರುಚಿಕರವಾದ ಖಾದ್ಯವನ್ನು ತಯಾರಿಸುತ್ತಾರೆ. ಕೆಸುವಿನ ಗಿಡದ ಅಡಿಯಲ್ಲಿ ಗೆಡ್ಡೆಗಳು ಬೆಳೆಯುತ್ತವೆ. ಇವುಗಳೂ ತಿನ್ನಲು ಯೋಗ್ಯ. ಕೆಲವು ಗೆಡ್ಡೆಗಳು ತುರಿಸುವ ಸಂಭವ ಇದ್ದರೂ ಉತ್ತಮ ರುಚಿಕರವಾದ ಖಾದ್ಯವನ್ನು ಇದರಿಂದ ತಯಾರಿಸಿಬಹುದು.

(ಆಧಾರ)

ಚಿತ್ರ ಕೃಪೆ: ವೀಕಿಪೀಡಿಯಾ ಜಾಲತಾಣ