ನಾವು ದೋಸೆ, ಇಡ್ಲಿ ಮೊದಲಾದ ತಿಂಡಿಗಳನ್ನು ತಿನ್ನುವಾಗ ಅದರ ಜೊತೆ ಕೊಬ್ಬರಿ (ತೆಂಗಿನಕಾಯಿ) ಚಟ್ನಿ ಇದ್ದರೆ ಮಾತ್ರ ರುಚಿಕರವೆನಿಸುತ್ತವೆ. ಕೊಬ್ಬರಿ ಚಟ್ನಿ ತಿಂಡಿಗೆ ರುಚಿಯನ್ನು ಮಾತ್ರವಲ್ಲ ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ. ಪ್ರಮುಖವಾಗಿ ನಮ್ಮ ದಕ್ಷಿಣ ಭಾರತದ ಅಡುಗೆಯಲ್ಲಿ ತೆಂಗಿನಕಾಯಿ ಚಟ್ಟಿ ಪ್ರಮುಖ ಸ್ಥಾನ ಪಡೆದಿದ್ದು, ಇಡ್ಲಿ-ದೋಸೆಗಳ ಜೊತೆಗೆ ಇದು ಅವಿಭಾಜ್ಯ ಭಾಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಚಟ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಥವಾ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಲವರು ಅದನ್ನು ತಪ್ಪಿಸುತ್ತಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಇದು ಸಂಪೂರ್ಣ ತಪ್ಪು ಕಲ್ಪನೆ ಆಗಿದ್ದು, ಮಿತ ಪ್ರಮಾಣದಲ್ಲಿ ಸೇವಿಸಿದರೆ ಕೊಬ್ಬರಿ ಚಟ್ಟಿ ದೇಹಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ವರದಿಗಳ ಪ್ರಕಾರ, ತೆಂಗಿನಕಾಯಿಯಲ್ಲಿ ಇರುವ ಕ್ಯಾಲೊರಿಗಳನ್ನು ‘ಒಳ್ಳೆಯ ಕ್ಯಾಲೊರಿಗಳು’ ಎಂದು ಕರೆಯಲಾಗುತ್ತದೆ. ಇವು ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ, ದಿನವಿಡೀ ಶಕ್ತಿ ಮತ್ತು ಚೈತನ್ಯ ನೀಡಲು ಸಹಾಯ ಮಾಡುತ್ತವೆ. ಹೀಗಾಗಿ, ಇದು ಕೇವಲ ರುಚಿಗಷ್ಟೇ ಸೀಮಿತವಲ್ಲದೆ ಆರೋಗ್ಯಕರ ಆಹಾರವಾಗಿಯೂ ಪರಿಗಣಿಸಲಾಗಿದೆ.
ಹೃದಯ ಆರೋಗ್ಯದ ವಿಷಯದಲ್ಲಿ, ತೆಂಗಿನಕಾಯಿಯಲ್ಲಿರುವ ಲಾರಿಕ್ ಆಮ್ಲ ಮತ್ತು ಫೈಬರ್ ಪ್ರಮುಖ ಪಾತ್ರ ವಹಿಸುತ್ತವೆ. ಇವು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರ ಪರಿಣಾಮವಾಗಿ ರಕ್ತನಾಳಗಳಲ್ಲಿ ಆಡಚಣೆಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆ ಇಳಿಮುಖವಾಗುತ್ತದೆ. ಜೊತೆಗೆ, ಮಧ್ಯಮ-ಸರಪಳಿ ಟ್ರೈಗಿಸರೈಡ್ಗಳು (MCTs) ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವಲ್ಲಿ ಸಹಕಾರಿ. ಮೂಳೆಗಳ ಬಲವರ್ಧನೆಗೂ ತೆಂಗಿನಕಾಯಿ ಮಹತ್ವದ್ದಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಸಿಯಮ್ ಮತ್ತು ರಂಜಕದಂತಹ ಖನಿಜಾಂಶಗಳು ಸಮೃದ್ಧವಾಗಿದ್ದು, ಮೂಳೆಗಳು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಡಲು ನೆರವಾಗುತ್ತವೆ. ವಯಸ್ಸಿನೊಂದಿಗೆ ಬರುವ ಮೂಳೆ ದುರ್ಬಲತೆಯನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.
ಇದಲ್ಲದೆ, ತೆಂಗಿನಕಾಯಿಯಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಲಕ್ಷಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೀರ್ಣಕ್ರಿಯೆಯನ್ನು ಸುಧಾರಿಸಿ. ಕರುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಹೀಗಾಗಿ, ಇದು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ.
ತೆಂಗಿನಕಾಯಿ ಚಟ್ಟಿ ತಯಾರಿಸುವ ವಿಧಾನ ಸರಳವಾಗಿದೆ. ತಾಜಾ ತುರಿದ ತೆಂಗಿನಕಾಯಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಬೇಕು. ನಂತರ ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸಿನಕಾಯಿ ಮತ್ತು ಕರಿಬೇವುಗಳಿಂದ ಒಗ್ಗರಣೆ ಮಾಡಿ ಅದನ್ನು ಸೇರಿಸಿದರೆ ರುಚಿಕರವಾದ ಚಟ್ಟಿ ಸಿದ್ಧವಾಗುತ್ತದೆ. ಹಸಿ ಮೆಣಸಿನಕಾಯಿಯ ಬದಲು ಕೆಲವರು ಒಣಗಿದ ಕೆಂಪು ಮೆಣಸಿನಕಾಯಿಯನ್ನೂ ಬಳಸುತ್ತಾರೆ. ಇದರಿಂದ ಚಟ್ನಿಯ ಬಣ್ಣ ಕೆಂಪಗುತ್ತದೆ ಮತ್ತು ಸ್ವಲ್ಪ ಮಟ್ಟಿಗೆ ಖಾರವೂ ಆಗುತ್ತದೆ. ಕೆಲವು ಹೋಟೇಲುಗಳಲ್ಲಿ ಎರಡೂ ಬಗೆಯ ಚಟ್ನಿಗಳನ್ನು ದೋಸೆ, ಇಡ್ಲಿಯ ಜೊತೆ ನೀಡುವ ಕ್ರಮವಿದೆ.
ಮಿತವಾಗಿ ಸೇವಿಸಿದರೆ ಕೊಬ್ಬರಿ ಚಟ್ನ ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿದ್ದು, ಹೃದಯ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆಯವರೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದ ಅನಗತ್ಯ ಭಯಗಳನ್ನು ಬಿಟ್ಟು, ಈ ಸಾಂಪ್ರದಾಯಿಕ ಆಹಾರವನ್ನು ಸಮತೋಲನದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
(ಆಧಾರ)
AI ಮೂಲಕ ಚಿತ್ರ ರಚನೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!