ಹಲಸಿಗೂ ಈಗ ಶುಕ್ರ ದೆಸೆ ಪ್ರಾರಂಭವಾಗಿದೆ. ಮೊದಲಾದರೆ ಸೀಸನ್ (ಮಾರ್ಚ್- ಜುಲೈ) ನಲ್ಲಿ ಮಾತ್ರ ಸಿಗುತ್ತಿದ್ದ ಹಲಸು ಈಗ ವರ್ಷವಿಡೀ ಸಿಗುವಂತಾಗಿದೆ. ಅದಕ್ಕೆ ಒಂದೆಡೆ ನಮ್ಮ ತಂತ್ರಜ್ಞಾನವೂ ಕಾರಣ. ಇದರ ಜೊತೆಗೆ ಕೆಲವು ಅಪರೂಪದ ಎಲ್ಲಾ ಋತು (ಸರ್ವ ಋತು) ಗಳಲ್ಲಿ ಹಣ್ಣು ಬಿಡುವ ತಳಿಗಳ ಪರಿಷ್ಕರಣೆ. ಇದರಿಂದ ಹಣ್ಣು, ಕಾಯಿಗಳು ಸದಾ ಕಾಲ ಸಿಗುತ್ತಿವೆ. ತಂತ್ರಜ್ಞಾನದ ಕಡೆಗೆ ನೋಡುವುದಾದರೆ ಹಣ್ಣನ್ನು ಬಿಡಿಸಿ ಅದನ್ನು ಶೀತಲೀಕರಿಸಿ ಇಡುವ ಪದ್ಧತಿ, ಕಾಯಿಯ ಸೊಳೆಯನ್ನು ಉಪ್ಪು ನೀರಿನಲ್ಲಿ ಹಾಕಿಡುವ ಪದ್ಧತಿ, ಸೊಳೆಗಳಲ್ಲಿರುವ ನೀರಿನ ಅಂಶವನ್ನು ತೆಗೆದು ಒಣಗಿಸಿ/ ನಿರ್ಜಲೀಕರಿಸಿ (ಡ್ರೈ) ಇಡುವ ಪದ್ಧತಿಗಳಿಂದ ಈಗ ಹಲಸಿನ ಖಾದ್ಯವನ್ನು ಯಾವಾಗ ಬೇಕಾದರೂ ಸವಿಯಬಹುದು. ಆದರೆ ಸಂಗ್ರಹಿಸಿ ಇಡುವ ಹಲಸಿನ ಗುಣಮಟ್ಟವೂ ಉತ್ತಮವಾಗಿರಬೇಕಲ್ಲವೇ? ಇದಕ್ಕಾಗಿ ಹಲಸು ಕಾಯಿ ಬಿಡುವ ಮುಂಚೆಯೇ ಯೋಚಿಸಬೇಕು.

ಹಲಸಿನ ಮರಗಳು ಮಿಡಿ ಕಾಯಿ ಬಿಡಲು ಕೆಲವೆಡೆ ಪ್ರಾರಂಭವಾಗಿವೆ. ಇದಕ್ಕೆ ಅಕಾಲ ಮಳೆಯೂ ಕಾರಣವಾಗಿರಬಹುದು. ಆದರೆ ವಾಸ್ತವವಾಗಿ ಶಿವರಾತ್ರಿಯ ಸಮಯದ ಗಾಳಿ, ಚಳಿ ವಾತಾವರಣಕ್ಕೆ ಹಲಸಿನ ಮರದಲ್ಲಿ ಮಿಡಿಗಾಯಿ (ಕಳ್ಳಿಗೆ-ಹೂವು) ಬಿಡುತ್ತದೆ ಎಂಬುದು ನಮ್ಮ ಹಿರಿಯರ ಮಾತು. ನಿಜವಾಗಿ ಹಲಸಿನ ಮರವಾಗಲೀ, ಮಾವಿನ ಮರವಾಗಲೀ ಹೂ ಬಿಡುವುದಕ್ಕೆ ಈ ಸಮಯದ ಶುಷ್ಕ ವಾತಾವರಣವೇ ಕಾರಣ. ಮಳೆಗಾಲ ಕಳೆದ ಮೇಲೆ ಚಳಿಗಾಲ ಬರುವಾಗ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಒಣ ವಾತಾವರಣ ಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ಸಸ್ಯಗಳು ಹೂ ಬಿಡಲು ಸಜ್ಜಾಗುತ್ತವೆ.

ಹಲಸಿನ ಮರದಲ್ಲಿ, ಕೆಲವೊಮ್ಮೆ ವಾತಾವರಣದ ಅನುಕೂಲ ಹೊಂದಿಕೊಂಡು ಹೆಚ್ಚು ಕಡಿಮೆ ಮಿಡಿ ಕಾಯಿಗಳು ಬಿಡುವುದುಂಟು. ಹಗಲಿನ ಶುಷ್ಕ ವಾತಾವರಣ, ರಾತ್ರೆಯ ಚಳಿ ಹಲಸಿನಲ್ಲಿ ಮಿಡಿ ಕಾಯಿ (ಹೂವು) ಬಿಡಲು ಅನುಕೂಲಕರ ವಾತಾವರಣ. ಕಳೆದ ಕೆಲವು ವರ್ಷಗಳಿಂದ ಚಳಿ ಕಡಿಮೆ. ಗಾಳಿಯೂ ಕಡಿಮೆ ಆದ ಕಾರಣ ಹಲಸಿನ ಫಸಲು ಈ ತನಕ ಕಡಿಮೆ. ಇನ್ನು ಹೆಚ್ಚಾಗಲೂ ಬಹುದು. ಈಗಾಗಲೇ ಕೆಲವು ಕಡೆ ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಆಗಿವೆ. ಕಾಯಿಗಳು ಮಾರಾಟಕ್ಕೆ ಮಾರುಕಟ್ಟೆಗೂ ಬಂದಿವೆ. ಆದರೆ ಇನ್ನೂ ಕಾಯಿ ಬಿಡಲು ಸಮಯ ಇದೆ.

ಹಲಸಿನ ಮರದಲ್ಲಿ ಬಿಡುವ ಎಲ್ಲಾ ಮಿಡಿಗಳನ್ನೂ ಉಳಿಸಿದರೆ ಯಾವ ಕಾಯಿಗಳೂ ಪುಷ್ಟಿಯಾಗುವುದಿಲ್ಲ. ಮರದ ಪ್ರಾಯ ಮತ್ತು ಗಾತ್ರ ನೋಡಿಕೊಂಡು ಮರವೊಂದರಲ್ಲಿ ಹತ್ತರಿಂದ ಇಪತ್ತರಷ್ಟು ಮಾತ್ರವೇ ಕಾಯಿಗಳನ್ನು ಬೆಳೆಯಲು ಬಿಟ್ಟು ಉಳಿದವುಗಳನ್ನು ತೆಗೆದರೆ ಉಳಿದ ಕಾಯಿಗಳಿಗೆ ಹೆಚ್ಚುವರಿ ಪೋಷಕಾಂಶಗಳು ದೊರೆತು ಕಾಯಿ ಪುಷ್ಟಿಯಾಗುತ್ತದೆ. ಕಾಯಿಗಳನ್ನು ಎಳೆಯದಿರುವಾಗ ತೆಗೆದು ಅದನ್ನು ಪಲ್ಯ, ಸಾಂಬಾರು, ಉಪ್ಪಿನಕಾಯಿ ಮುಂತಾದ ಅಡುಗೆ ಬಳಕೆಗೆ ಉಪಯೋಗಿಸಬಹುದು. ಸುಮಾರಾಗಿ ಕಾಯಿಗಳು ಮೂಡಿ ೧೦-೧೫ ದಿನಗಳ ಒಳಗೇ ಅದನ್ನು ಹಿಚುಕ ಬೇಕು. ಒಂದು ಗೊಂಚಲಿನಲ್ಲಿ ಒಂದರಿಂದ ಹೆಚ್ಚು ಮಿಡಿಗಳಿದ್ದರೆ ಒಂದನ್ನು ಉಳಿಸಿದರೆ ಒಳ್ಳೆಯದು. ಸಾಧ್ಯವಾದಷ್ಟು ಕಾಂಡ ಹಾಗೂ ದಪ್ಪದ ಗೆಲ್ಲುಗಳಲ್ಲಿ ಬಿಡುವ, ಕೀಳಲು ಸುಲಭವಾಗುವಂತಿರುವ ಕಾಯಿಗಳನ್ನು ಉಳಿಸಿ ಮಿಕ್ಕವುಗಳನ್ನು ತೆಗೆಯಬೇಕು. ಆಗ ಕಾಯಿಗಳು ಚೆನ್ನಾಗಿ ಪುಷ್ಟಿಯಾಗಿ ಸರಿಯಾಗಿ ಬೆಳವಣಿಗೆ ಹೊಂದುತ್ತವೆ. ಮರದ ತಾಳಿಕೆಗಿಂತ ಅಧಿಕ ಸಂಖ್ಯೆಯಲ್ಲಿ ಕಾಯಿಗಳು ಬಿಟ್ಟರೆ ಅದರಲ್ಲಿ ನಿಷ್ಟ್ರಯೋಜಕ (ಪೊಳ್ಳು) ಕಾಯಿಗಳಾಗುವುದೇ ಅಧಿಕ. ಕಾಯಿಗಳು ಪೊಳ್ಳು ಆಗದೆ ಪೂರ್ಣ ಸೊಳೆಗಳಿಂದ ತುಂಬಿರಬೇಕು. ಆಗ ಅದರಲ್ಲಿ ಸೊಳೆಗಳ ಸಂಖ್ಯೆ ಹೆಚ್ಚು ಇರುತ್ತದೆ, ಇದಕ್ಕೆ ಕಾಯಿ ಬಿಟ್ಟ ನಂತರ ನೀರಾವರಿ ಮಾಡಬಹುದು.

12 (1).jpg

ಹಲಸಿನ ಕಾಯಿಯೊಳಗೆ ಕಾಯಿ ಕೊರಕ ಹುಳು ಪ್ರವೇಶಿಸಿ ಒಳಗೆ ತಿರುಳು ಭಾಗವನ್ನು ತಿಂದು ಹಾನಿಯನ್ನುಂಟು ಮಾಡುವುದು ಸಾಮಾನ್ಯ. ಇದನ್ನು ಬೆರ್ಪುರಿ ಎಂದು ತುಳು ಭಾಷೆಯಲ್ಲಿ ಕರೆಯುತ್ತಾರೆ. ಇದರಿಂದ ಹಲಸಿನ ನೋಟ ಕೆಡುತ್ತದೆ. ಇದರ ನಿಯಂತ್ರಣಕ್ಕಾಗಿ ಮಿಡಿ ಹಂತದಲ್ಲಿ. ಅಂದರೆ ಮಿಡಿ ಬಿಟ್ಟು ಮೂರು ನಾಲ್ಕು ದಿನಗಳೊಳಗೆ ಈ ಮಿಡಿಯ ಮೇಲೈಯನ್ನು ಯಾವುದಾದರೂ ಒಂದು ಹುಡಿ ರೂಪದ ಕೀಟ ನಾಶಕವನ್ನು (ಮೆಲಾಥಿಯಾನ್-ಕೆ ಒಥ್ರೀನ್) ಹತ್ತಿ ಬಟ್ಟೆಯೊಳಗೆ ಹಾಕಿ ಸವರಿದರೆ ಈ ಕಾಯಿಕೊರಕ ಹುಳ ಬಾಧಿಸುವುದಿಲ್ಲ.  ಹಲಸಿನ ಕಾಯಿ ಹಾಗೂ ಹಣ್ಣುಗಳಿಗೆ ಈಗ ಬೇಡಿಕೆ ಹೆಚ್ಚಳವಾಗುತ್ತಿದ್ದು ಉತ್ತಮ ಗುಣಮಟ್ಟದ ಕಾಯಿಗಳಿದ್ದಲ್ಲಿ ಹಲಸು ಮಾರಾಟ ಮಾಡಿಯೂ ಲಾಭ ಮಾಡಿಕೊಳ್ಳಬಹುದು. ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಬಹುದು. ಹಲಸಿನ ಸಂಸ್ಕರಣಾ ಘಟಕಗಳು ಹೆಚ್ಚುತ್ತಿರುವುದು ಹಲಸಿನ ಕಾಯಿ ಉಳಳ್ಳವರಿಗೆ ಅನುಕೂಲಕರವಾಗಿದ್ದು, ಹಲಸನ್ನು ಇನ್ನು ವಾಣಿಜ್ಯ ಉತ್ಪನ್ನವಾಗಿ ಪರಿಗಣಿಸಿ ಬೆಳೆ ತೆಗೆದರೆ ನಷ್ಟವಿಲ್ಲ. 

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ