ಗುರುಬ್ರರ್ಹಾ ಗುರುರ್ವಿಷ್ಣು: ಗುರುರ್ದೇ  ವೋ ಮಹೇಶ್ವರ:/

ಗುರು‌ಸ್ಸಾಕ್ಷಾತ್ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ://

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ ಗುರುಪೀಠದ ಆಚಾರ್ಯರಿಗೆ ಪೂಜೆ, ಗೌರವ, ಕೃತಜ್ಞತೆ ಸಲ್ಲಿಸುವ ದಿನವೇ ‘ಗುರು ಪೂರ್ಣಿಮೆ’. ಹಿಂದೂಗಳಿಗೆ ಮತ್ತು ಬೌದ್ಧರಿಗೆ ತುಂಬಾ ಪವಿತ್ರವಾದ ದಿನ. ಈ ದಿನ ಗುರುಗಳ ಬೋಧನೆ, ಮಾರ್ಗದರ್ಶನ ಎಂದಿಗಿಂತ ಸಾವಿರ ಪಟ್ಟು ಹೆಚ್ಚಾಗಿರುತ್ತದೆ ಮತ್ತು ಪ್ರಭಾವಶಾಲಿಯಾಗಿರುತ್ತದೆ ಎನ್ನುತ್ತಾರೆ ಬಲ್ಲವರು.

‘ಗು; ಮತ್ತು ‘ರು’ ಎಂಬುದು ಮೂಲಪದಗಳಾಗಿವೆ. ಸಂಸ್ಕೃತದಲ್ಲಿ ‘ಗು’ ಎಂದರೆ ಅಜ್ಞಾನ ಅಥವಾ ಅಂಧಕಾರ. ‘ರು’ ಎಂದರೆ ಕಳೆಯುವ ಅಥವಾ ದೂರ ಮಾಡುವ ಎಂಬರ್ಥದಲ್ಲಿ ಹೇಳುತ್ತಾರೆ. ಗುರು ನಮ್ಮ ಜೀವನದ ಅವಿಭಾಜ್ಯ ಅಂಗ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಸುಮ್ಮನೆ ದಾಸವರೇಣ್ಯರು ಹೇಳಿಲ್ಲ,ಅರಿತೇ ಹೇಳಿರುವರು. ಗುರು ಓರ್ವ ಹಿತೈಷಿ, ಮತ್ತೊಬ್ಬನ (ಶಿಷ್ಯರ) ಏಳ್ಗೆಗೆ ಸಹಕರಿಸುವವರು, ತಮ್ಮ ಶಿಷ್ಯರಿಗೆ ಬೋಧನೆ ಮಾಡುವವರು, ನೈತಿಕತೆಯ ಬೀಜವನ್ನು ಬಿತ್ತಿ, ಮೊಳಕೆಯೊಡೆಸಿ ಬೇಕಾದ ನೀರು ಗೊಬ್ಬರ ಹಾಕಿ ಪೋಷಿಸುವವರು. ಶಿಷ್ಯರ ಮನವನ್ನು, ಕೌಟುಂಬಿಕ ಹಿನ್ನಲೆಯನ್ನು ಅರಿತು ವ್ಯವಹರಿಸುವವರೇ ನಿಜವಾದ 'ಗುರು' ಅನ್ನಿಸಿಕೊಳ್ಳಲು ಯೋಗ್ಯತಾವಂತರು. ಅಂಥ ಗುರುವಿಗೆ ಶಿಷ್ಯರು ಪೂಜೆ ಮಾಡಿ ಕಾಣಿಕೆ ಸಮರ್ಪಿಸುವ, ಕೃತಜ್ಞತೆ ಸಲ್ಲಿಸುವ  ದಿನ.ವಿದ್ವಾಂಸರನ್ನು ಸ್ಮರಿಸುವ ದಿನ.

ಮಳೆಗಾಲದಲ್ಲಿ ನಾಲ್ಕು ತಿಂಗಳು ಚಾತುರ್ಮಾಸದಲ್ಲಿ ಬರುವ ಗುರು ಪೂರ್ಣಿಮೆ ಅತ್ಯಂತ ವಿಶೇಷ. ಮಠಾಧಿಪತಿಗಳು, ಸನ್ಯಾಸಿಗಳು, ಧರ್ಮಾಧ್ಯಕ್ಷರುಗಳು ಒಂದೇ ಸ್ಥಳದಲ್ಲಿದ್ದು, ಭಕ್ತಾದಿಗಳಿಗೆ ಪ್ರವಚನ ನೀಡುತ್ತಾರೆ. ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಸಂಭ್ರಮ. ಇದುವೇ 'ಗುರು ಶಿಷ್ಯ ಪರಂಪರೆ'. ಆಶ್ರಮಗಳಲ್ಲಿ,ಗುರು ಮಠಗಳಲ್ಲಿ 'ಗುರು ಪಾದುಕಾ ಪೂಜೆ' ನಡೆಸಿ, ಶಿಷ್ಯರು ತಮ್ಮನ್ನು ತಾವೇ ಗುರುವಿಗೆ ಸಮರ್ಪಣೆ ಮಾಡಿಕೊಳ್ಳುವ ದಿನ. ಹಿಂದೂ ಧರ್ಮದಲ್ಲಿ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯ,ಪೂಜೆ, ಗುರು ಹಿರಿಯರನ್ನು ಗೌರವಿಸುವುದು ಇವುಗಳಿಗೆಲ್ಲ ವಿಶೇಷ ಅರ್ಥವಿದೆ.

ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ/

ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ://

ಈ ದಿನ ೨೧೬ ಪುಟಗಳ ಶ್ಲೋಕ ಗುರುಗೀತಾಗಾಯನವನ್ನು,ಮಂತ್ರ ಪಠಣವನ್ನು ಶಿಷ್ಯ ವೃಂದದವರು ಸಾಮೂಹಿಕವಾಗಿ ಹೇಳುತ್ತಾರೆ. ಇದೇ ದಿನ ಮಹಾಭಾರತ ಕರ್ತೃ ಭಗವಾನ್ ವೇದವ್ಯಾಸರು ಪರಾಶರ ಮುನಿ ಮತ್ತು ಮೀನುಗಾರ ವಂಶದ ಸತ್ಯವತಿಯವರಿಗೆ ಜನಿಸಿ ಬಂದ ವಿಶೇಷ ದಿವಸ. ಪರಾಶರರು ಋಷಿಗಳು. ನಾಲ್ಕು ವೇದಗಳನ್ನು ಸಂಗ್ರಹಿಸಿ ,ವಿಭಾಗಿಸಿ ವೈದಿಕ ಅಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸರ ಜನ್ಮ ದಿವಸವಿಂದು. ಹಾಗಾಗಿ ವ್ಯಾಸಪೂರ್ಣಿಮೆ ಎಂದೂ ಆಚರಿಸುವರು. ಬೌದ್ಧ ಮತದತ್ತ ನಾವು ಕಣ್ಣಾಡಿಸಿದರೆ, ಭಗವಾನ್ ಬುದ್ಧನಿಗೆ ಮೊದಲ ಧರ್ಮೋಪದೇಶ ಆದ ದಿನ.ಉತ್ತರ ಪ್ರದೇಶದ ಸಾರನಾಥದಲ್ಲಿ ಮೊದಲ ಉಪದೇಶದ ಕುರುಹುಗಳು ಈಗಲೂ ಇವೆ.ಅದು ಗುರು ಪೌರ್ಣಿಮೆ ದಿನವೇ ಆಯಿತು.

ಯೋಗ ಸಂಪ್ರದಾಯದಲ್ಲಿ ಭಗವಾನ್ ಪರಶಿವನು ಸಪ್ತ ಋಷಿಗಳಿಗೆ ಯೋಗ ವಿದ್ಯೆ ಧಾರೆ ಎರೆದು ಪ್ರಥಮ ಗುರು ಎನಿಸಿದ ದಿನ. ಗುರುವಿನ ಬೋಧನೆ ಮತ್ತು ನಮ್ಮ ಸಾಧನೆ ಸಮ್ಮಿಳಿತವಾದಾಗ ಮಾತ್ರ ನಾವು ಪರಿಪೂರ್ಣರೆನಿಸಲು ಸಾಧ್ಯ.ಇಲ್ಲವಾದರೆ ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ’ ಆಗಬಹುದು. ‘ಖಾಲಿ ಕೊಡಗಳಾಗದೆ ತುಂಬಿದ ಕೊಡ’ ಗಳಾದಾಗ ಬೋಧಿಸಿದ ಗುರುವಿಗೂ ತೃಪ್ತಿ. ಹೊತ್ತು ಹೆತ್ತ ತಾಯಿ,ಸಾಕಿದ ತಂದೆ,ವಿದ್ಯೆ ಕಲಿಸಿ ತಿದ್ದಿ ತೀಡಿದ ಗುರು,ಹೊತ್ತ ಭೂಮಿತಾಯಿ ಇವರ ಋಣವನ್ನೆಲ್ಲ ತೀರಿಸಲು ಸಾಧ್ಯವಿಲ್ಲವಂತೆ. ’ಕೃತಜ್ಞತೆ ಮತ್ತು ಗೌರವ’ ಸಲ್ಲಿಸಬಹುದಲ್ಲವೇ?

ಹಿಂದೂ ಪರಂಪರೆಯ ಶ್ರೇಷ್ಠರೆನಿಸಿದ ಭಗವಾನ್ ವೇದವ್ಯಾಸರ ಜನ್ಮದಿನ ಸಹ. ಹಿಂದೂ ಪರಂಪರೆಯಲ್ಲಿ ಗುರುವಿಗೆ ಮಹತ್ತರ ಮತ್ತು ಮಹತ್ವದ ಸ್ಥಾನವಿದೆ. ಶ್ರೀ ರಾಮಕೃಷ್ಣ ಪರಮಹಂಸರು ‘ನಿಜವಾದ ಜ್ಞಾನದ ಬೆಳಕಿನಿಂದ ಪ್ರಕಾಶಿತನಾದವನೇ ಉತ್ತಮ ಗುರು, ಶಿಕ್ಷಕ’ ಎಂದರು.

ವಿದೇಶೇಷು ಮಾನ್ಯ: ಸ್ವದೇಶೇಷು ಧನ್ಯ:

ಸದಾಚಾರ ವೃತ್ತೇಷು ಮತ್ತೋನಚಾನ್ಯ:/

ಮನಶ್ಚೇನ್ನಲಗ್ನಂ ಗುರೋರಂಘ್ರಿಪದ್ಮೇ

ತತ: ಕಿಂ ತತ:ಕಿಂ ತತ:ಕಿಂ ತತ:ಕಿಂ//

ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ರಚಿಸಿದ ಶ್ರೀಗುರ್ವಷ್ಟಕದಲ್ಲಿ ಉಲ್ಲೇಖಿಸಿದಂತೆ ಜಾತಿ,ಮತ,ಧರ್ಮವನ್ನು ಮೀರಿ,ಜಗತ್ತಿನ ಸರ್ವರಿಗೂ ಇದು ಮಾರ್ಗದರ್ಶನವಾಗಿದೆ ಎನ್ನಬಹುದು. ಗೌರವಾನ್ವಿತರಾದ ಸಂತಶಿಶುನಾಳ ಶರೀಫರು ದೇಶಾದ್ಯಂತ ಸಂಚರಿಸುತ್ತಾ"ಗುರು ‌ಸೇವೆಯ ಮಾಡೋ ನೀನು, ಪಾಮರ ಮೂಢಾ"ಎಂದು ಅಜ್ಞಾನಿಗಳಿಗೆ 'ಗುರುಸೇವೆ'ಯ ಕರೆಯಿತ್ತದ್ದನ್ನು ಓದಿದ ನೆನಪಿದೆ. ಗುರು ಗೋವಿಂದ ಭಟ್ಟರ ಶಿಷ್ಯರಾದ ಶ್ರೀಯುತರು"ಗುರುವೆ ಬಿನ್ನಪವುದ್ಧರಿಸೋ ಮರೆಹೊಕ್ಕೆ ನಿನ್ನಯ ಪಾದಕ್ಕೆ"ಎನ್ನುತ್ತಾ ಶ್ರೀಗುರುಪಾದಗಳಿಗೆ ಶರಣರಾಗಿದ್ದಾರಂತೆ. ಉ.ಕರ್ನಾಟಕದ ಗಾಣಗಾಪುರ ಕ್ಷೇತ್ರವು ಶ್ರೀ ದತ್ತಾತ್ರೇಯರ ಮಹಿಮಾನ್ವಿತ ಕೇಂದ್ರವಾಗಿದೆ. ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಪರಂಪರೆಯ ಎಮಠಗಳಲ್ಲಿ ಶ್ರೀಗುರುಪಾದುಕೆಗಳಿಗೆ ವಿಶೇಷಪೂಜೆ ಸಲ್ಲಿಸಲಾಗುತ್ತದೆ. ಶ್ರೀ ಗುರು ನಮನದಿಂದ, ಪಾದಪೂಜೆಯಿಂದ ಮನಸ್ಸಿನ ಕ್ಲೇಶ ದೂರವಾಗಿ, ಶಾಂತಿ,ನೆಮ್ಮದಿ ಸಿಗುವುದೆಂಬ ನಂಬಿಕೆಯಿದೆ. ಶಿಷ್ಯರ, ಶರಣು ಹೊಕ್ಕವರ ಜ್ಞಾನ ತೇಜಸ್ಸಿನ ಉದ್ದೀಪನವಾಗಿ ಉತ್ತಮನಾಗಿ ಸಮಾಜದಲ್ಲಿ ಬದುಕಲು ಅನುಗ್ರಹಿಸುವರು.

ಅಖಂಡೇಶ್ವರ ವಚನವೊಂದರಲ್ಲಿ ಶ್ರೀ ಗುರುಕಾರುಣ್ಯದ ಬಗ್ಗೆ ಇಂತಿದೆ

ಗುರುಚರಣವ ಪೂಜಿಸಿ ಎನ್ನ ಹಸ್ತಂಗಳು ಪರುಷವಾದವು

ಗುರುಚರಣವ ನೋಡಿ ಎನ್ನ ಕಂಗಳು ಪರುಷವಾದವು

ಗುರುಚರಣವ ಹಾಡಿ,ಹರಸಿ ಎನ್ನ ಜಿಹ್ವೆ ಪರುಷವಾಯಿತು

ಗುರುಚರಣವ ನೆನೆದು ಎನ್ನ ಮನ ಪರುಷವಾಯಿತು

ಗುರುಚರಣವ ಧ್ಯಾನಿಸಿ ಎನ್ನ ಭಾವ ಪರುಷವಾಯಿತು ನೋಡಾ ಅಖಂಡೇಶ್ವರಾ//

ಮಂತ್ರಾಲಯದ ಶ್ರೀಗುರುರಾಘವೇಂದ್ರ ಯತಿವರೇಣ್ಯರನ್ನು ಈ ಸಂದರ್ಭದಲ್ಲಿ ನೆನಪಿಸಬಹುದು. ಜೀವನದಲ್ಲಿ ನೊಂದವರಿಗೆ, ಕಷ್ಟಗಳಲ್ಲೇ ಮುಳುಗಿದ್ದವರಿಗೆ, ಬಡತನ ಹಸಿವಿನಲ್ಲಿ ದಿಕ್ಕೇ ತೋಚದಿದ್ದಾಗ, ಅನಾರೋಗ್ಯ ಪೀಡಿತರಿಗೆ ನಂಬಿದ ಶ್ರೀ ಗುರುಗಳ ಪಾದಚರಣಗಳೇ ಸಾಕ್ಷಾತ್ ದೇವರಂತೆ. ಗುರು-ಶಿಷ್ಯ ಸಂಬಂಧವೆಂದರೆ ತೆರೆದ ಪುಸ್ತಕದಂತೆ. ಗುರುಸೇವೆ ತಪಸ್ಸಿಗೆ ಸಮವಂತೆ. ಗುರು ದೃಷ್ಟಿಯು ಲಭಿಸಿ ಮೊದಲು ಮಾನವರಾಗಲು ಪ್ರಯತ್ನಿಸೋಣ. ನಮ್ಮ ಪರಂಪರೆಯಲ್ಲಿ ಹೊತ್ತು ಹೆತ್ತ ತಾಯಿ ಮೊದಲ ಗುರು, ಅನಂತರದ ಗೌರವ ತಂದೆಗೆ. ಅನಂತರ ವಿದ್ಯೆ ಕಲಿಸಿದ ಗುರುಗಳಿಗೆ, ಆಚಾರ್ಯರಿಗೆ ಗುರುಗಳ ಸ್ಥಾನ. 'ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋ ಭವ' ಉಪನಿಷತ್ತಿನ ಉಲ್ಲೇಖ. ಈ ಪಂಚಭೂತಗಳಿಂದಾದ ಶರೀರಕ್ಕೆ ಅನ್ನವಿತ್ತವರು, ಭಯದಿಂದ ರಕ್ಷಿಸಿ ಪೊರೆದವರು, ಜನ್ಮಕ್ಕೆ ಕಾರಣನಾದ ತಂದೆ ಸಹ ಗುರು ಸಮಾನರಂತೆ. ಅಂತೆಯೇ ಮನೆಯ ಹಿರಿಯಣ್ಣ ಗುರು ಸಮಾನನೆಂದು, ಗುರು ಗೌರವ ಪಡೆಯಲು ಅರ್ಹನೆಂದು ಮಹಾಭಾರತದಲ್ಲಿ ಇದೆ. ಪ್ರಕೃತಿಯನ್ನು ಗುರುವೆಂದು ಪೂಜಿಸುವುದು ನಮ್ಮ ಸಂಪ್ರದಾಯ. ಪ್ರಕೃತಿಯಿಲ್ಲದಿರೆ ನಾವಿಲ್ಲ ಅಲ್ಲವೇ?

ನಮ್ಮ ಬದುಕಿನ ಪಲ್ಲಟಕ್ಕೆ, ಜೀವನ ಶಿಕ್ಷಣಕ್ಕೆ, ದಾರಿಗೆ, ಬೆಳಕಾದ ಗುರುವೃಂದದವರ ಚರಣಾರವಿಂದಗಳನ್ನು ನೆನೆಯುತ್ತಾ, ನಮ್ಮ ಸೇವೆಯ ಮೂಲಕ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವ ಈ ‘ಗುರು ಪೌರ್ಣಿಮಾ’ ದಿನವನ್ನು ಆಚರಿಸುವ ಮೂಲಕ ಕೃತಾರ್ಥರಾಗೋಣ. ಗುರುವೇ ನಮಃ

(ವಿವಿಧ ಮೂಲಗಳಿಂದ ಸಂಗ್ರಹ)

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ