ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದ ೧೫ ಪ್ರಮುಖ ಆಹಾರೋತ್ಪನ್ನ ಸಂಸ್ಥೆಗಳಿಗೆ ನೋಟಿಸ್ ನೀಡಿರುವುದು ಸರಕಾರದ ಅತ್ಯಂತ ಸ್ವಾಗತಾರ್ಹ ಮತ್ತು ಸಕಾಲಿಕ ಕ್ರಮವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಅನೇಕ ಪೇಯಗಳು, ಹೆಲ್ತ್ ಸಪ್ಲಿಮೆಂಟ್ಗಳು ಹಾಗೂ ಸಿದ್ಧ ಆಹಾರ ವಸ್ತುಗಳ ಉತ್ಪಾದಕ ಕಂಪೆನಿಗಳು ತಮ್ಮ ಉತ್ಪನ್ನಗಳ ಪೌಷ್ಟಿಕಾಂಶಗಳ ಬಗ್ಗೆ ಸುಳ್ಳು ಅಥವಾ ಅರೆಬರೆ ಮಾಹಿತಿ ನೀಡಿ ಗ್ರಾಹಕರನ್ನು ವಂಚಿಸುತ್ತಿರುವುದು ಬಹಿರಂಗ ರಹಸ್ಯ. ಈ ಕಾರ್ಪೊರೆಟ್ ವಂಚನೆಯಿಂದಾಗಿ ಸಾರ್ವಜನಿಕರು ನಿಧಾನ ಗತಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಬೊಜ್ಜು ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು ಇಂದು ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದಕ್ಕೆ ಇಂತಹ ಸಂಸ್ಕರಿತ ಆಹಾರಗಳೇ ಪ್ರಮುಖ ಕಾರಣ ಎಂಬುದು ತಜ್ಞರ ಎಚ್ಚರಿಕೆಯಾಗಿದೆ.
ಉತ್ಪನ್ನಗಳ ಹೆಸರು, ಆಹಾರದ ಲೇಬಲ್ಗಳ ಮೂಲಕ ಗ್ರಾಹಕರ ದಾರಿ ತಪ್ಪಿಸುತ್ತಿರುವ ಆರೋಪದಡಿ ೧೫ ಆಹಾರೋತ್ಪನ್ನ ಸಂಸ್ಥೆಗಳಿಗೆ ಭಾರತೀಯ ಆಹಾರ ಸುರಕ್ಷ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ನೋಟಿಸ್ ನೀಡಿದೆ. ಉತ್ಪನ್ನಗಳ ಉತ್ಪಾದನೆಯ ವಿಧಾನ, ಬ್ಲ್ಯಾಂಡ್ ಹೆಸರು, ಉತ್ಪನ್ನದ ಹೆಸರಿನಲ್ಲಿ ಆರೋಗ್ಯಕರ, ಸಾವಯವ ಎಂದು ಹೇಳುವ ಮೂಲಕ ಈ ಸಂಸ್ಥೆಗಳು ಎಫ್ಎಸ್ಎಸ್ಎಐ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂದು ಪ್ರಾಧಿಕಾರ ಹೇಳಿದೆ. ಅದರಂತೆ ಈ ಆಹಾರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ
ಅತ್ಯಂತ ಕಳವಳಕಾರಿ ಸಂಗತಿಯೆಂದರೆ, 'ಆಯುರ್ವೇದ ಸತ್ವ' ಅಥವಾ 'ನೈಸರ್ಗಿಕ ಉತ್ಪನ್ನ' ಎಂಬ ಹಣೆಪಟ್ಟಿಯ ಅಡಿಯಲ್ಲಿ ಇಂತಹ ಪರೋಕ್ಷ ವಂಚನೆಗಳು ಅವಿಶ್ರಾಂತವಾಗಿ ನಡೆಯುತ್ತಿವೆ. ಭಾರತೀಯರಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಮೇಲಿರುವ ವಿಶ್ವಾಸ ಮತ್ತು ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಈ ಸಂಸ್ಥೆಗಳು, ರಾಸಾಯನಿಕಯುಕ್ತ ಪದಾರ್ಥಗಳನ್ನು ಪರಿಸರಸ್ನೇಹಿ ಎಂಬಂತೆ ಬಿಂಬಿಸುತ್ತಿವೆ. ಅಮಾಯಕ ಗ್ರಾಹಕರು ಸೆಲೆಬ್ರಿಟಿಗಳ ಹೊಗಳಿಕೆ ಮತ್ತು ಬಣ್ಣ ಬಣ್ಣದ ಜಾಹೀರಾತುಗಳನ್ನು ಕುರುಡಾಗಿ ನಂಬಿ, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಿದು ಅನಾರೋಗ್ಯವನ್ನು ಕೊಂಡುಕೊಳ್ಳುತ್ತಿದ್ದಾರೆ.
ಈ ಅಕ್ರಮ ದಂಧೆಗೆ ಕೇವಲ ನೋಟಿಸ್ ನೀಡುವುದರಿಂದಷ್ಟೇ ಶಾಶ್ವತ ಪರಿಹಾರ ಸಿಗದು. ಗ್ರಾಹಕರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳು ಅತ್ಯಗತ್ಯವಾಗಿವೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಕಾಯ್ದೆಗಳನ್ನು ಕೇವಲ ಕಾಗದದ ಮೇಲಷ್ಟೇ ಉಳಿಸದೆ. ನಿಯಮ ಉಲ್ಲಂಘಿಸುವ ಕಂಪೆನಿಗಳ ವಿರುದ್ಧ ಕಠಿನ ಕಾನೂನು ಕ್ರಮ ಹಾಗೂ ಭಾರೀ ದಂಡ ವಿಧಿಸಬೇಕು. ಆವಶ್ಯಕತೆಯಿದ್ದರೆ ಅಂತಹ ಉತ್ಪನ್ನಗಳ ಪರವಾನಿಗೆಯನ್ನೇ ರದ್ದುಗೊಳಿಸಬೇಕು.
ಪ್ರತಿಯೊಂದು ಆಹಾರದ ಪ್ಯಾಕೆಟ್ ಮೇಲೆಯೂ ಅದರಲ್ಲಿ ಬಳಸಿರುವ ಸಕ್ಕರೆ, ಉಪ್ಪು ಮತ್ತು ರಾಸಾಯನಿಕಗಳ ಪ್ರಮಾಣವನ್ನು ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಹಾಗೂ ಎದ್ದುಕಾಣುವ ಗಾತ್ರದಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಮಾಡಬೇಕು. ಮಾತ್ರವಲ್ಲದೆ ಇವುಗಳು ಪೊಟ್ಟಣದಲ್ಲಿ ತಿಳಿಸಿದಂತೆಯೇ ಸರಿಯಾಗಿ ಇದೆಯೇ ಎಂಬುದನ್ನು ಆಗಾಗ ಆ ವಸ್ತುಗಳ ವೈಜ್ಞಾನಿಕ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬೇಕು. ಜಾಹೀರಾತುಗಳ ಹಿಂದಿರುವ ಸತ್ಯಾಸತ್ಯವನ್ನು ಅರಿಯುವಂತೆ ಮತ್ತು ಉತ್ಪನ್ನಗಳ ಲೇಬಲ್ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸರಕಾರ, ಶಾಲಾ-ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಮ್ಮಿಕೊಳ್ಳಬೇಕು.
ಆರ್ಥಿಕ ಲಾಭವೊಂದನ್ನೇ ಗುರಿಯಾಗಿಸಿಕೊಂಡು ಜನರ ಜೀವದೊಂದಿಗೆ ಆಟವಾಡುವ ಇಂತಹ ಸಂಸ್ಥೆಗಳಿಗೆ ಲಗಾಮು ಹಾಕುವುದು ನಾಗರಿಕ ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯ. ಸರಕಾರದ ಈ ಕಠಿನ ನಡೆ ಆಹಾರ ವಲಯದಲ್ಲಿ ಪಾರದರ್ಶಕತೆ ಮತ್ತು ನೈತಿಕತೆ ತರಲು ಭದ್ರವಾದ ನಾಂದಿಯಾಗಲಿ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೬-೦೬-೨೦೨೬
ಚಿತ್ರ ಕೃಪೆ: AI ತಂತ್ರಜ್ಞಾನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!