ಇತ್ತೀಚೆಗೆ ನಮ್ಮನ್ನೆಲ್ಲಾ ಅಗಲಿದ ಗಾನ ಸರಸ್ವತಿ ಎಸ್ ಜಾನಕಿ ಬಗ್ಗೆ ಬಹಳಷ್ಟು ಲೇಖನಗಳು ಮತ್ತು ಮಾಹಿತಿಗಳು ವಿವಿಧ ಪತ್ರಿಕೆಗಳು, ದೂರದರ್ಶನ, ಸಾಮಾಜಿಕ ಜಾಲತಾಣಗಳಲ್ಲಿ ಬಂದಿವೆ. ಆದರೂ ಕೆಲವೊಂದು ಸ್ವಾರಸ್ಯಕರವಾದ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಪ್ರಕಟಿಸುತ್ತಿದ್ದೇನೆ. ಓದುವಂತಾಗಲಿ…
***
ಶ್ರೀಕೃಷ್ಣನ ಚಿತ್ರ ಮತ್ತು ಕರ್ಚೀಫ್
ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೆಲವರು ತಾವು ನಂಬಿದ ಸಂಗತಿಗಳನ್ನು ಬಿಡಲು ಒಪ್ಪುವುದಿಲ್ಲ. ಇಡೀ ಜಗತ್ತೇ ಅವರನ್ನು ಮೂಢನಂಬಿಕೆಯ ದಾಸಯ್ಯ ಎಂದರೂ ಅವರು ಅದನ್ನು ಬಿಡಲಾರರು. ಅವರಿಗೆ ಅದರಿಂದ ಪ್ರಯೋಜನವಾಗಿದೆ ಮತ್ತು ಆ ನಂಬಿಕೆ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ ಎಂದಾದರೆ ಅದನ್ನು ನಂಬಿದರೆ ತಪ್ಪೇನು ಇಲ್ಲ ಅಲ್ಲವೇ? ಕೆಲವರಿಗೆ ಪ್ರತೀ ದಿನ ದೇವಸ್ಥಾನಕ್ಕೆ ಹೋಗಬೇಕು, ಕೆಲವರಿಗೆ ತಮ್ಮ ಇಷ್ಟದ ವಸ್ತುಗಳನ್ನು ಪರ್ಸ್ ನಲ್ಲಿ ಇರಿಸಿಕೊಳ್ಳಬೇಕು, ಬೆಳಿಗ್ಗೆ ಎದ್ದ ಕೂಡಲೇ ಅದೃಷ್ಟದ ಚಿತ್ರ ನೋಡಬೇಕು ಹೀಗೆ ಹತ್ತು ಹಲವು ನಂಬಿಕೆಗಳು ಇರುತ್ತವೆ. ನಮ್ಮ ಜಾನಕಮ್ಮನವರೂ ಇದರಿಂದ ಹೊರತಾಗಿರಲಿಲ್ಲ. ಅವರು ಎಲ್ಲಿಗೆ ಹೋದರೂ ಅವರ ಬಳಿ ಇಷ್ಟದ ದೇವರು ಶ್ರೀಕೃಷ್ಣನ ಚಿತ್ರ ಅಥವಾ ಮೂರ್ತಿ, ಕರ್ಚೀಫ್ ಇದ್ದೇ ಇರುತ್ತಿತ್ತು.
ಜಾನಕಮ್ಮ ತಮ್ಮ ಹಾಡುಗಳ ಒಂದು ಪುಟ್ಟ ಡೈರಿ ಮಾಡಿಕೊಂಡಿದ್ದರು. ಅದರಲ್ಲಿ ಶ್ರೀಕೃಷ್ಣನ ಚಿತ್ರ ಇರಿಸಿಕೊಳ್ಳುತ್ತಿದ್ದರು. ಯಾವುದೇ ಸಂದರ್ಭದಲ್ಲೂ ಅದನ್ನು ಅವರು ಬಿಟ್ಟು ಹೋದದ್ದೇ ಇಲ್ಲ. ಅವರು ಆಸ್ಪತ್ರೆಯಲ್ಲಿರುವಾಗಲೂ ಶ್ರೀಕೃಷ್ಣನ ವಿಗ್ರಹ ಇರಿಸಿಕೊಂಡಿದ್ದರಂತೆ. ಹಾಡುಗಳ ರೆಕಾರ್ಡಿಂಗ್ ಸಮಯದಲ್ಲಂತೂ ಅವರಿಗೆ ಕರ್ಚೀಫ್ (ಕರವಸ್ತ್ರ) ಬೇಕಾಗಿತ್ತು. ಅದಿಲ್ಲದೇ ಹಾಡುತ್ತಲೇ ಇರಲಿಲ್ಲ.
ಈ ವಿಷಯವನ್ನು ಹೇಗೋ ತಿಳಿದ ಅವರ ಸಮಕಾಲೀನ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ತಮಾಷೆಗಾಗಿ ಜಾನಕಮ್ಮನವರ ಕರ್ಚೀಫ್ ಅನ್ನು ಅಡಗಿಸಿ ಇಟ್ಟರಂತೆ. ಅದೇ ದಿನ ಜಾನಕಮ್ಮನವರಿಗೆ ಹಾಡಿನ ರೆಕಾರ್ಡಿಂಗ್ ಇತ್ತು. ಕರ್ಚೀಫ್ ಇಲ್ಲವೆಂದು ತಿಳಿದು ಗಾಬರಿಯಾದ ಜಾನಕಮ್ಮನ ಗಂಟಲಿನಿಂದ ಸ್ವರವೇ ಹೊರಡಲಿಲ್ಲ. ಇವರ ಪರಿಸ್ಥಿತಿಯನ್ನು ನೋಡಿದ ಸಂಗೀತ ನಿರ್ದೇಶಕರು ಇನ್ನಷ್ಟು ಗಾಬರಿಯಾದರು. “ಏನಾಯಿತು ಮೇಡಮ್, ಏನಾದರೂ ತಪ್ಪಾಯಿತಾ? ಎನ್ನುತ್ತಾ ಜಾನಕಮ್ಮನವರ ಬಳಿ ಕೇಳುತ್ತಿದ್ದರು. ಜಾನಕಮ್ಮನವರು ತಮ್ಮ ಕರ್ಚೀಫ್ ಹುಡುಕುತ್ತಿದ್ದರು. ಕಡೆಗೆ ಇವರ ಪೇಚಾಟ ನೋಡಲಾಗದೇ ಕರ್ಚೀಫ್ ತಂದುಕೊಟ್ಟರಂತೆ ಎಸ್ ಪಿ ಬಿ. ಹೀಗಿದ್ದರು ಜಾನಕಮ್ಮ.
***
ಬಣ್ಣದ ಸೀರೆಗೆ ವಿದಾಯ
ಮೈಸೂರಿನವರೇ ಆದ ರಾಮ್ ಪ್ರಸಾದ್ ಅವರ ಜೊತೆ ವಿವಾಹವಾದ ಬಳಿಕ ಬಣ್ಣ ಬಣ್ಣದ ಸೀರೆಗಳನ್ನು ಇಷ್ಟ ಪಟ್ಟು ಜಾನಕಿಯವರು ಧರಿಸುತ್ತಿದ್ದರು. ಆದರೆ ೧೯೯೭ರಲ್ಲಿ ರಾಮ್ ಪ್ರಸಾದ್ ನಿಧನ ಹೊಂದಿದ ಬಳಿಕ ಬಣ್ಣಗಳ ಬಗ್ಗೆ ವೈರಾಗ್ಯ ಹೊಂದಿ ಕೇವಲ ಬಿಳಿ ಬಣ್ಣದ ಸೀರೆಯನ್ನೇ ಧರಿಸುತ್ತಿದ್ದರು. ಈ ವಿಷಯ ತಿಳಿಯದ ಕಲಾವಿದೆ ಜಯಶ್ರೀ ಒಮ್ಮೆ ಜಾನಕಿಯವರನ್ನು ಭೇಟಿಯಾದಾಗ ಬಣ್ಣದ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ಕೊಟ್ಟರಂತೆ. ಆಗ ಜಾನಕಿಯವರು ಹೇಳಿದರಂತೆ, ‘ತಪ್ಪು ತಿಳಿಯ ಬೇಡ ಜಯಶ್ರೀ, ನಾನು ಯಜಮಾನರ ನಿಧನದ ಬಳಿಕ ಬಣ್ಣದ ಸೀರೆಗಳನ್ನು ಉಡುವುದನ್ನು ಬಿಟ್ಟಿದ್ದೇನೆ. ನನ್ನ ಬಳಿ ಇದ್ದ ಮುನ್ನೂರಕ್ಕೂ ಹೆಚ್ಚು ಸೀರೆಗಳನ್ನು ದಾನ ಮಾಡಿ ಬಿಟ್ಟೆ. ನೀನು ಕೊಟ್ಟ ಸೀರೆಯನ್ನು ನಾನು ಯಾರಿಗಾದರೂ ಕೊಟ್ಟು ಬಿಡುವೆ. ಬೇಸರಿಸಬೇಡ’ ಜಯಶ್ರೀಯವರು ಮತ್ತೊಮ್ಮೆ ಜಾನಕಿಯವರನ್ನು ಭೇಟಿಯಾದಾಗ ಬಿಳಿ ಬಣ್ಣದ ಸೀರೆಯನ್ನೇ ಉಡುಗೊರೆಯಾಗಿ ಕೊಟ್ಟರಂತೆ. ಬಹಳ ಸಂತೋಷದಿಂದ ಜಾನಕಿಯವರು ಸ್ವೀಕಾರ ಮಾಡಿದರಂತೆ.
ಜಾನಕಿಯವರು ಪತಿಯ ನಿಧನದ ಬಳಿಕ ಯಾವುದೇ ಸಭೆ, ಸಮಾರಂಭಗಳಲ್ಲಿ ಸರಳವಾಗಿ, ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳದೇ ಬಿಳಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಅವರ ಹಣೆಯ ಮೇಲೆ ವಿಭೂತಿ, ಮುಖದ ಮೇಲೊಂದು ಮಗುವಿನ ಮುಗ್ಧ ಮುಗುಳ್ನಗೆ ಎದ್ದು ಕಾಣಿಸುತ್ತಿತ್ತು.
***
ಮೈಸೂರಿನಲ್ಲೇ ಮೊದಲ ಹಾಗೂ ಕೊನೆಯ ಹಾಡು!
ರಾಜ್ಯದಲ್ಲಿ ಎಸ್ ಜಾನಕಿ ಅವರ ಸಾರ್ವಜನಿಕ ಕಾರ್ಯಕ್ರಮ ಮೊದಲ ಬಾರಿ ಆಯೋಜನೆಯಾದದ್ದು ಮೈಸೂರಿನಲ್ಲಿ. ಅಚ್ಚರಿಯೆಂದರೆ ಕೊನೆಯ ಕಾರ್ಯಕ್ರಮಕ್ಕೂ ಮೈಸೂರೇ ಸಾಕ್ಷಿಯಾಯಿತು. ಮೈಸೂರಿನಲ್ಲೇ ಜಾನಕಿಯಮ್ಮ ತಮ್ಮ ಕೊನೆಯ ದಿನಗಳನ್ನು ಕಳೆದರು. ಕೊನೆಯುಸಿರು ಎಳೆದರು. ಮೈಸೂರಿನ ಸೆಳೆತ ಹಾಗಿತ್ತು.
೧೯೫೨ರಲ್ಲಿ ಸಂಗೀತ ನಿರ್ದೇಶಕರಾದ ಜಿ ಕೆ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಿ ಬಿ ಶ್ರೀನಿವಾಸ್ ಜೊತೆ ಮೈಸೂರಿನಲ್ಲಿ ಎಸ್ ಜಾನಕಿ ಹಾಡಿದ್ದರು. ಮೈಸೂರಿನಲ್ಲಿ ೨೦೧೭ರಲ್ಲಿ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮ ನೀಡುವ ಸಮಯದಲ್ಲಿ ಮೊದಲ ಹಾಡು ಹಾಡಿದ ಸಂದರ್ಭವನ್ನು ಎಸ್ ಜಾನಕಿಯವರೇ ನೆನಪು ಮಾಡಿಕೊಂಡಿದ್ದರು. ಆದರೆ ಅವರಿಗೆ ೧೯೫೭ರಲ್ಲಿ ಮೈಸೂರಿನ ಯಾವ ಪ್ರದೇಶದಲ್ಲಿ ತಮ್ಮ ಕಾರ್ಯಕ್ರಮ ಆಯೋಜನೆಯಾಗಿತ್ತು ಎಂಬ ಸಂಗತಿ ಮರೆತು ಹೋಗಿತ್ತು. ದೊಡ್ಡ ಮೈದಾನ, ನಾಲ್ಕು ರಸ್ತೆಗಳು ಸೇರುವ ಸ್ಥಳ ಎಂದು ತಮಗೆ ನೆನಪಿದ್ದ ಸಂಗತಿಗಳನ್ನು ಹೇಳಿದ್ದರು. ಆ ಬಳಿಕ ಮೈಸೂರಿನಲ್ಲಿ ಹಾಡಲು ಬಹು ಕಾಲ ಅವಕಾಶ ಸಿಗಲೇ ಇಲ್ಲ. ಆ ಅವಕಾಶ ಮತ್ತೆ ಸಿಕ್ಕಿದ್ದು ೨೦೧೭ರಲ್ಲಿ. ಅದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಯಿತು. ಮೈಸೂರಿನ ಮಾನಸ ಗಂಗೋತ್ರಿಯ ಬಯಲು ಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಆಗ ಅವರು ತಮ್ಮ ಸಾಕು ಮಗ ನವೀನ್ ಅವರ ಮನೆಯಲ್ಲಿ ವಾಸವಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯವು ಎಸ್ ಜಾನಕಿಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ೨೦೨೬ರ ಜನವರಿ ತಿಂಗಳಲ್ಲಿ ಜಾನಕಿಯವರ ಮಗ ಮುರಳಿಕೃಷ್ಣ ನಿಧನದ ಬಳಿಕ ಬಹಳಷ್ಟು ಸಮಯವನ್ನು ಅವರು ಮೈಸೂರಿನಲ್ಲೇ ಕಳೆಯುತ್ತಿದ್ದರು.
***
ರಾಷ್ಟ್ರಪತಿಗಳಿಂದಲೇ ಬಹುಮಾನ
ತಮ್ಮ ಮೂರನೇ ವಯಸ್ಸಿಗೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದ್ದ ಎಸ್ ಜಾನಕಿಯವರು ನಾದಸ್ವರ ವಿದ್ವಾನ್ ಪೈಡಿಸ್ವಾಮಿ ಅವರ ಶಿಷ್ಯೆ. ಮೂರು ವಿಧದ ಅಂದರೆ ಮಗುವಿನ, ಹರೆಯದ ಯುವತಿ ಹಾಗೂ ವೃದ್ಧೆಯ ಧ್ವನಿಗಳಲ್ಲಿ ಹಾಡಬಲ್ಲ ಅದ್ಭುತ ಪ್ರತಿಭೆಯನ್ನು ಇವರು ಹೊಂದಿದ್ದರು. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ವೇದಿಕೆಗಳಲ್ಲಿ ಹಾಡಲು ಪ್ರಾರಂಭಿಸಿದ ಎಸ್ ಜಾನಕಿ ಹಿಂದಿರುಗಿ ನೋಡಿದ್ದೇ ಇಲ್ಲ. ೧೯೫೬ರಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ಜಾನಕಿಯವರಿಗೆ ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಅವರು ಬಹುಮಾನ ನೀಡಿ ಬೆನ್ನುತಟ್ಟಿದ್ದರು.
***
(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)
ಚಿತ್ರ ಕೃಪೆ: ಎಸ್ ಜಾನಕಿ, ಎಸ್ ಪಿ ಬಿ ಹಳೆಯ ಚಿತ್ರ ಫೇಸ್ಬುಕ್ ನಲ್ಲಿ ಕಂಡದ್ದು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!