‘ಹುಲಿಗೆ ಹೆದರದವರೂ ಜಿರಳೆಗೆ ಹೆದರುವರು’ ಎಂಬ ಮಾತೇ ಇದೆ. ಹೆಚ್ಚಾಗಿ ಮಹಿಳೆಯರು ಜಿರಳೆಗೆ ತುಂಬಾ ಹೆದರುತ್ತಾರೆ. ಜಿರಳೆಗೆ ಹೆದರುವುದು ಒಂದು ರೀತಿಯ ಮಾನಸಿಕ ಕಾಯಿಲೆಯೂ ಆಗಿರಬಹುದು ಎನ್ನುತ್ತಾರೆ ಮನೋವೈದ್ಯರು. ಏಕೆಂದರೆ ಜಿರಳೆ ಅತ್ಯಂತ ಪುಟ್ಟ ಜೀವಿ. ಅದು ಕಚ್ಚುವುದಿಲ್ಲ. ವಿಷಕಾರಿಯೂ ಅಲ್ಲ. ಸ್ವಲ್ಪ ಕಿರಿಕಿರಿಯಾಗುವಂತೆ ಮಾಡುತ್ತದೆ. ಇದರ ಹೆದರಿಕೆಯ ಹಿಂದಿನ ಕೆಲವು ಸಂಗತಿಗಳನ್ನು ಅರಿಯೋಣ ಬನ್ನಿ…

ಮನೆಯ ಅಡುಗೆ ಕೋಣೆಯಲ್ಲಿ ಅಥವಾ ಬಾತ್‌ ರೂಮ್‌ನಲ್ಲಿ ಹಠಾತ್ ಜಿರಳೆ ಓಡಾಡುವುದನ್ನು ನೋಡಿದ ಕ್ಷಣದಲ್ಲೇ ಹಲವರು ಬೆಚ್ಚಿಬಿದ್ದು ಕಿರುಚುತ್ತಾರೆ. ಕೆಲವರು ಕುರ್ಚಿ ಏರುತ್ತಾರೆ, ಇನ್ನೂ ಕೆಲವರು ಅಲ್ಲಿಂದ ಓಡಿಹೋಗುತ್ತಾರೆ! ವಿಶೇಷವಾಗಿ ಮಹಿಳೆಯರು ಜಿರಳೆ ಕಂಡರೆ ಹೆಚ್ಚು ಭಯಪಡುತ್ತಾರೆ ಎನ್ನುವ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಇದು ಕೇವಲ ಹಾಸ್ಯ ಅಥವಾ ದುರ್ಬಲತೆ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಇದರ ಹಿಂದೆ ವೈಜ್ಞಾನಿಕ, ಮಾನಸಿಕ ಮತ್ತು ಜೀವನಶೈಲಿಗೆ ಸಂಬಂಧಿಸಿದ ಹಲವಾರು ಕಾರಣಗಳಿವೆ.

ವಿಜ್ಞಾನದಲ್ಲಿ ಜಿರಳೆಗಳ ಮೇಲಿನ ಅತಿಯಾದ ಭಯವನ್ನು 'ಕ್ಯಾಟ್ಸರಿಡಾಫೋಬಿಯಾ' (Katsaridaphobia) ಎಂದು ಕರೆಯಲಾಗುತ್ತದೆ. ಜಿರಳೆಗಳ ಅನಿಯಮಿತ ಓಟ, ಹಠಾತ್ ದಿಕ್ಕು ಬದಲಿಸುವ ಸ್ವಭಾವ, ರೆಕ್ಕೆ ಬಡಿದು ಹಾರುವುದು ಮತ್ತು ಕೆಲವೊಮ್ಮೆ ಮೈಮೇಲೆ ಬೀಳುವಂತಹ ವರ್ತನೆಗಳು ನಮ್ಮ ಮೆದುಳಿಗೆ 'ಅಪಾಯ' ಎಂಬ ಸಂದೇಶವನ್ನು ಕಳುಹಿಸುತ್ತವೆ. ತಕ್ಷಣವೇ ದೇಹದಲ್ಲಿ 'Fight or Flight' ಪ್ರತಿಕ್ರಿಯೆ ಶುರುವಾಗಿ ನಾವು ಕಿರುಚುವುದು ಅಥವಾ ಓಡಿಹೋಗುವುದು ಸಹಜವಾಗುತ್ತದೆ.

ಜಿರಳೆಗಳ ಬಗ್ಗೆ ಜನರಲ್ಲಿ ಅಸಹ್ಯ ಭಾವನೆ ಮೂಡುವುದಕ್ಕೂ ದೊಡ್ಡ ಕಾರಣ ಇದೆ. ಏಕೆಂದರೆ ಅವು ಸಾಮಾನ್ಯವಾಗಿ ಚರಂಡಿ, ಕಸದ ಬುಟ್ಟಿ, ಕೊಳಚೆ ಜಾಗ ಮತ್ತು ತೇವಾಂಶ ಇರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಜಿರಳೆಗಳು ತಮ್ಮ ದೇಹದಲ್ಲಿ ಬ್ಯಾಕ್ಟಿರಿಯಾ ಮತ್ತು ಸೋಂಕುಕಾರಕ ಅಂಶಗಳನ್ನು ಹೊತ್ತು ತರುತ್ತವೆ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಇರುತ್ತದೆ. ಹೀಗಾಗಿ ಅವುಗಳನ್ನು ಕಂಡ ಕ್ಷಣದಲ್ಲೇ ದೇಹ ಮತ್ತು " ಮನಸ್ಸು ಅಸಹ್ಯ ಹಾಗೂ ಭಯದ ಪ್ರತಿಕ್ರಿಯೆ ನೀಡುತ್ತದೆ.

ಮನೋವಿಜ್ಞಾನ ತಜ್ಞರು ಹೇಳುವಂತೆ, ಬಾಲ್ಯದಲ್ಲಿ ಕಂಡ ಅನುಭವಗಳೂ ಈ ಭಯಕ್ಕೆ ಕಾರಣವಾಗುತ್ತವೆ. ಮನೆಯ ಹಿರಿಯರು ಅಥವಾ ತಾಯಿ ಜಿರಳೆ ಕಂಡು ಹೆದರು ತ್ತಿರುವುದನ್ನು ಮಕ್ಕಳು ನೋಡುತ್ತಾ ಬೆಳೆದರೆ, ಅವರ ಮೆದುಳಿನಲ್ಲಿ 'ಜಿರಳೆ ಎಂದರೆ ಅಪಾಯಕಾರಿ' ಎಂಬ ಕಲ್ಪನೆ ಸ್ವಯಂ ದಾಖಲಾಗಿ ‘Observational Fear Learning' ಎಂದು ಕರೆಯಲಾಗುತ್ತದೆ.

ಜಿರಳೆಗಳಿಗೆ ಮಹಿಳೆಯರೇ ಮಾತ್ರ ಭಯಪಡುತ್ತಾರೆ ಎಂಬ ಕಲ್ಪನೆ ಸಂಪೂರ್ಣ ಸತ್ಯವಲ್ಲ. ಅನೇಕ ಪುರುಷರೂ ಜಿರಳೆಗಳನ್ನು ಕಂಡು ಒಳಗೊಳಗೆ ಹೆದರುತ್ತಾರೆ. ಆದರೆ ಸಾಮಾಜಿಕವಾಗಿ ಮಹಿಳೆಯರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೊರಹಾಕುವುದರಿಂದ ಅವರ ಪ್ರತಿಕ್ರಿಯೆ ಹೆಚ್ಚು ಗೋಚರಿಸುತ್ತದೆ ಅಷ್ಟೇ ಎಂದು ಅಧ್ಯಯನಗಳು ಹೇಳುತ್ತವೆ.

ಜಿರಳೆಗಳ ಭಯ ಕಡಿಮೆ ಮಾಡಲು ಕೆಲವು ಸರಳ ಕ್ರಮಗಳು ಸಹಾಯಕವಾಗುತ್ತವೆ. ಅಡುಗೆ ಮನೆ ಮತ್ತು ಸ್ನಾನದ ಗೃಹವನ್ನು ಸದಾ ಸ್ವಚ್ಛವಾಗಿಡುವುದು ಬಹಳ ಮುಖ್ಯ. ರಾತ್ರಿ ಆಹಾರದ ತುಂಡುಗಳು ಅಥವಾ ತೇವಾಂಶ ಬಿಟ್ಟರೆ ಜಿರಳೆಗಳು ಹೆಚ್ಚಾಗಿ ಆಕರ್ಷಿತರಾಗುತ್ತವೆ. ಬೇವಿನ ಎಣ್ಣೆ, ಪುದೀನಾ ಎಣ್ಣೆ ಅಥವಾ ನೈಸರ್ಗಿಕ ಸ್ಟೇಗಳನ್ನು ಬಳಸುವುದರಿಂದ ಜಿರಳೆಗಳನ್ನು ದೂರವಿಡಬಹುದು. ಜೊತೆಗೆ 'ಜಿರಳೆಗಳು ಸಾಮಾನ್ಯವಾಗಿ ನೇರವಾಗಿ ದೈಹಿಕ ಹಾನಿ ಮಾಡುವುದಿಲ್ಲ' ಎಂಬ ಅರಿವು ಮನಸ್ಸಿನಲ್ಲಿ ಮೂಡಿಸಿಕೊಂಡರೆ ಭಯದ ಪ್ರಮಾಣವೂ ಕಡಿಮೆಯಾಗುತ್ತದೆ.

ತಜ್ಞರ ಪ್ರಕಾರ, ಜಿರಳೆ ಕಂಡು ಹೆದರುವುದು ದುರ್ಬಲತೆ ಅಥವಾ ನಾಚಿಕೆಪಡುವ ವಿಷಯವಲ್ಲ. ಅದು ನಮ್ಮ ಮೆದುಳು ಅಪಾಯವನ್ನು ತಪ್ಪಿಸಲು ಕೊಡುವ ಸಹಜ ರಕ್ಷಣಾತ್ಮಕ ಪ್ರತಿಕ್ರಿಯೆ ಮಾತ್ರ. ಆದರೂ ಸ್ವಚ್ಛತೆ ಕಾಪಾಡಿಕೊಂಡರೆ ಜಿರಳೆಗಳ ತೊಂದರೆ ಕಡಿಮೆ ಜಯಾಗುವುದಲ್ಲದೆ, ಆರೋಗ್ಯ ಮತ್ತು ಮನಶಾಂತಿ ಎರಡನ್ನೂ ಕಾಪಾಡಿಕೊಳ್ಳಬಹುದು! ಆದುದರಿಂದ ಮುಂದೆ ಎಂದಾದರೂ ನೀವು ಮನೆಯಲ್ಲಿ ಜಿರಳೆ ಕಂಡರೆ ಎದೆಗುಂದದೇ ಧೈರ್ಯವಾಗಿ ಹೊಡೆದು ಹಾಕಿ. ಜಿರಳೆ ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಹಾರಾಡುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಹೀಗೆ ಹಾರಾಡುವಾಗ ಅದು ನಿಮ್ಮ ಮೈ ಮೇಲೂ ಕುಳಿತುಕೊಳ್ಳಬಹುದು. ಆಗ ಹೆದರದೇ ಅದನ್ನು ಎದುರಿಸಿ. ನಮ್ಮ ಚರ್ಮಕ್ಕೆ ಅದರ ಕಾಲಿನ ಸ್ಪರ್ಷ ಒಂದು ರೀತಿಯ ಕಿರಿಕಿರಿ ಮಾಡುತ್ತದೆ. ಇದರಿಂದ ನಾವು ಅದಕ್ಕೆ ಹೆದರುವುದಕ್ಕಿಂತ ಹೆಚ್ಚಾಗಿ ಅಸಹ್ಯ ಪಟ್ಟುಕೊಳ್ಳುತ್ತೇವೆ ಎಂದು ಅನಿಸುತ್ತದೆ. ಏನಾದರಾಗಲಿ ಮುಂದಿನ ಸಲ ಜಿರಳೆ ಕಂಡಾಗ ಹೆದರದೇ ಕೊಂದು ಬಿಡಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ