ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯಾಕಾಂತ್ ರವರು ವ್ಯಕ್ತಪಡಿಸಿದ ಅಭಿಪ್ರಾಯ ಈಗ 'ಜಿರಳೆ ಜನತಾ ಪಾರ್ಟಿ' ಎಂಬ ಆನ್‌ಲೈನ್ ಅಭಿಯಾನಕ್ಕೆ ಕಾರಣವಾಗಿ, ದೇಶ-ವಿದೇಶಗಳಲ್ಲಿ ಸಂಚಲನ ಮೂಡಿಸಿದೆ. ಕೆಲವು ನಿರುದ್ಯೋಗಿ ಯುವಕರು ಮೀಡಿಯಾ, ಸೋಷಿಯಲ್ ಮೀಡಿಯಾ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಂತೆಯೂ ಆಡುತ್ತಾರೆ ಎಂದು ಟೀಕಿಸುವ ಭರದಲ್ಲಿ ಅವರನ್ನು ಸಿಜೆಐ ಅವರು ಜಿರಳೆಗಳಿಗೆ ಹೋಲಿಸಿ, ಬಳಿಕ ಸ್ಪಷ್ಟನೆಯನ್ನೂ ನೀಡಿದ್ದರು. ಇದನ್ನೇ ನೆಪವಾಗಿ ಇಟ್ಟುಕೊಂಡು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಪುಣೆಯ ವಿದ್ಯಾರ್ಥಿಯೊಬ್ಬರು ಕಾಕ್ರೋಚ್ ಜನತಾ ಪಾರ್ಟಿ ಎಂಬ ಅಭಿಯಾನ ಆರಂಭಿಸಿದರು. ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಹಾಗೂ ಇತರೆ ಪಕ್ಷಗಳಿಗಿಂತ ಜಿರಳೆ ಜನತಾಪಾರ್ಟಿ ವ್ಯಾಪಕ ಜನಬೆಂಬಲ ಗಿಟ್ಟಿಸಿಕೊಂಡಿದೆ. ಎರಡು ಕೋಟಿಗೂ ಅಧಿಕ ಮಂದಿ ಇನ್ಸ್ಟಾಗ್ರಾಂ ಪುಟವನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದರ ಜತೆಗೆ ಈ ಪಕ್ಷ ಒಂದು ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದು, ಅದು ಗಮನ ಸೆಳೆಯುತ್ತಿವೆ. ಅದರ ಬಗ್ಗೆ ಸಾಕಷ್ಟು ಚರ್ಚೆಯೂ ಆಗುತ್ತಿದೆ.

ಜಿರಳೆ ಜನತಾ ಪಕ್ಷದ ಬಗ್ಗೆ ಪರವಾದ ಅಭಿಪ್ರಾಯಗಳಷ್ಟೇ ವಿರೋಧ, ಟೀಕೆಗಳೂ ವ್ಯಕ್ತವಾಗುತ್ತಿವೆ. ಬಿಜೆಪಿ ಸರ್ಕಾರದ ವಿರುದ್ಧ ಜನರ ಆಕ್ರೋಶ ಈ ರೀತಿ ವ್ಯಕ್ತವಾಗುತ್ತಿದೆ ಎಂದು ವಿಪಕ್ಷಗಳು ದೂರಿದರೆ, ಪ್ರತಿಪಕ್ಷಗಳ ಪರವೂ ಜನರ ಒಲವು ಇಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದಂತೂ ಸ್ಪಷ್ಟ. ಜಿರಳೆ ಜನತಾ ಪಾರ್ಟಿಗೆ ವ್ಯಕ್ತವಾಗುತ್ತಿರುವ ಬೆಂಬಲವನ್ನು ಗಮನಿಸಿದರೆ, ತಮಿಳುನಾಡಿನ ಜನರು ಯಾವ ರೀತಿ ಎರಡು ಸಾಂಪ್ರದಾಯಿಕ ಪಕ್ಷಗಳನ್ನು ತಿರಸ್ಕರಿಸಿ ನಟ ವಿಜಯ್ ಅವರು ಸ್ಥಾಪಿಸಿದ ಹೊಸ ಪಕ್ಷವನ್ನು ಹೇಗೆ ಆಯ್ಕೆ ಮಾಡಿಕೊಂಡರೋ ಅದೇ ರೀತಿ ಪರ್ಯಾಯ ರಾಜಕೀಯ ವೇದಿಕೆಗೆ ಒಂದಷ್ಟು ಮಂದಿ ಹಾತೊರೆಯುತ್ತಿದ್ದಾರೆ ಎಂಬುದು ಸ್ಪಷ್ಟ, ಮುಂದೆ? ಅದು ಜಿರಳೆ ಜನತಾ ಪಾರ್ಟಿಯವರಿಗೂ ಗೊತ್ತಿಲ್ಲ. ಆನ್ ಲೈನ್ ಅಭಿಯಾನವೇ ಬೇರೆ, ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತವಾಗಿ ಪರಿವರ್ತಿಸುವುದೇ ಬೇರೆ. ಆನ್‌ಲೈನ್‌ನಲ್ಲಿ ವ್ಯಕ್ತವಾಗುತ್ತಿರುವ ಬೆಂಬಲದ ಕಾವನ್ನು ಕಾಕ್ರೋಚ್ ಜನತಾ ಪಾರ್ಟಿ ಮುಂದುವರಿಸಿಕೊಂಡು ಹೋಗುತ್ತಾ? ಅಥವಾ ಇದು ಒಂದು ಅಲೆಯಾಗಿ ಎದ್ದು ತಣ್ಣಗಾಗಿ ಹೋಗುತ್ತಾ ನೋಡಬೇಕು. 'ಜಿರಳೆ' ಎಂದು ಮುಖ್ಯ ನ್ಯಾಯಮೂರ್ತಿಗಳು ಬಣ್ಣಿಸಿದ್ದಕ್ಕೆ ಸಿಟ್ಟಾಗಿದ್ದ ಯುವಕರಿಗೆ 'ಜಿರಳೆ ಜನತಾ ಪಾರ್ಟಿ' ಎಂಬುದು ಆಕರ್ಷಕವಾಗಿ ಕಂಡಿರಬೇಕು. ಹೀಗಾಗಿ ಬೆಂಬಲವೂ ವ್ಯಕ್ತವಾಗಿರಬೇಕು. ಅದು ಮುಂದೆ ಯಾವ ರೂಪ ಪಡೆಯಲಿದೆ? ನೋಡಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೩-೦೫-೨೦೨೬

ಚಿತ್ರ ಕೃಪೆ: ಏಷ್ಯಾನೆಟ್ ಸುವರ್ಣ ನ್ಯೂಸ್ ಜಾಲತಾಣ