ಗೃಹ ಪ್ರವೇಶ, ಹುಟ್ಟು ಹಬ್ಬ, ಮದುವೆ, ಉಪನಯನ, ವಾರ್ಷಿಕೋತ್ಸವ ಇತ್ಯಾದಿ ಶುಭ ಕಾರ್ಯಕ್ರಮಗಳಿಗೆ ಹೋಗುವಾಗ ಏನು ಉಡುಗೊರೆ ನೀಡುವುದು ಎನ್ನುವುದು ಎಲ್ಲರಿಗೂ ಅನಿಸುವುದಿದೆ. ಹಲವರು ಏನಾದರೂ ಕೊಡಬೇಕಲ್ಲಾ ಎಂದು ಅಗತ್ಕಕ್ಕೆ ಬೀಳದ ವಸ್ತುಗಳನ್ನು ನೀಡಿದ್ದೂ ಇದೆ. ಈ ಉಡುಗೊರೆ ನೀಡುವ ಸಂಪ್ರದಾಯ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ. ಹೂವಿನ ಬೊಕೆ, ಅಲಂಕಾರಿಕ ವಸ್ತುಗಳು ಇವೆಲ್ಲಾ ಅಲ್ಲಿ ಸಾಮಾನ್ಯ ಉಡುಗೊರೆಯ ವಸ್ತುಗಳು. ಸ್ವೀಡನ್ ದೇಶದವರು ಮಾತ್ರ ಡಾಲಾ ಕುದುರೆ (Dala Horse) ಅಥವಾ ಡಲೆಕಾರ್ಲಿಯನ್ ಹಾರ್ಸ್ ಎನ್ನುವ ವಸ್ತುವನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ.
ಏನಿದು ಡಾಲಾ ಹಾರ್ಸ್? ಹಾರ್ಸ್ ಎಂದರೆ ಕುದುರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾದರೆ ಸ್ವೀಡನ್ ದೇಶದಲ್ಲಿ ಸಮಾರಂಭಗಳಿಗೆ ಉಡುಗೊರೆಯಾಗಿ ಕುದುರೆಯನ್ನು ಕೊಡುತ್ತಾರಾ? ಎಂದು ಅಚ್ಚರಿ ಪಡಬೇಡಿ. ಈ ಡಾಲಾ ಹಾರ್ಸ್ ಎಂದರೆ ಮರದ ಕಟ್ಟಿಗೆಯಲ್ಲಿ ಕೊರೆದು ಬಣ್ಣ ಬಳಿದ ಕುದುರೆಯ ಆಕೃತಿ. ನಮ್ಮ ಚನ್ನಪಟ್ಟಣದ ಗೊಂಬೆಯ ರೀತಿಯದ್ದು ಅನ್ನಬಹುದು. ಹೆಚ್ಚಾಗಿ ಈ ಮರದ ಕಟ್ಟಿಗೆಯ ಕುದುರೆಯ ಬಣ್ಣ ಕೆಂಪು ಆಗಿರುತ್ತದೆ. ಆದರೆ ಸಮಯ ಕಳೆದಂತೆ ಈಗಿನ ತಲೆಮಾರು ಕಿತ್ತಳೆ, ಬಿಳಿ, ಹಸಿರು, ನೀಲಿ ಹಾಗೂ ಹಳದಿ ಬಣ್ಣದ ಕುದುರೆ ಆಕೃತಿಯನ್ನೂ ಉಡುಗೊರೆಯಾಗಿ ನೀಡಲು ಪ್ರಾರಂಭಿಸಿದ್ದಾರೆ. ಆದರೂ ಕೆಂಪು ಬಣ್ಣದ ಕುದುರೆಯ ಗೊಂಬೆಗೇ ಹೆಚ್ಚಿನ ಬೇಡಿಕೆ.
ಈ ಡಾಲಾ ಕುದುರೆಯನ್ನು ಉಡುಗೊರೆಯಾಗಿ ಕೊಡುವ ಸಂಸ್ಕೃತಿ ಸ್ವೀಡನ್ ನಲ್ಲಿ ಸುಮಾರು ೧೭ನೇ ಶತಮಾನದಲ್ಲಿ ಚಾಲ್ತಿಗೆ ಬಂತು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಸರಿಯಾದ ವರ್ಷ ತಿಳಿಯದೇ ಇದ್ದರೂ ಮಧ್ಯ ಸ್ವೀಡನ್ ನ ಬರ್ಗ್ ಕರ್ಲಾಸ್ ಎನ್ನುವ ಗ್ರಾಮದಲ್ಲಿ ಈ ಬಗೆಯ ಕೆತ್ತನೆಯನ್ನು ಸುಮಾರು ೧೬೨೩ರಲ್ಲಿ ಪ್ರಾರಂಭಿಸಿದರು ಎನ್ನಲಾಗುತ್ತದೆ. ಈ ಗ್ರಾಮ ಪೀಠೋಪಕರಣ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಇವರು ತಮ್ಮ ಎಲ್ಲಾ ಕೆತ್ತನೆಯ ಕೆಲಸ ಮುಗಿದ ಬಳಿಕ ಉಳಿದ ಮರದ ತುಂಡುಗಳಲ್ಲಿ ಈ ಬಗೆಯ ಕುದುರೆಯ ಆಕೃತಿಗಳನ್ನು ಕೆತ್ತಿ ಅದಕ್ಕೆ ಅಲಂಕಾರ ಮಾಡುತ್ತಿದ್ದರು. ಇದರಲ್ಲಿ ಅತೀ ಸಣ್ಣ ಗಾತ್ರದಿಂದ ಹಿಡಿದು ವಿವಿಧ ಗಾತ್ರಗಳ ಕುದುರೆಯ ಆಕೃತಿ ಇರುತ್ತಿತ್ತು. ಕ್ರಮೇಣ ಈ ಕುದುರೆಯ ಕಲಾಕೃತಿಗಳು ಖ್ಯಾತಿಯನ್ನು ಪಡೆದವು. ಅವುಗಳ ಖ್ಯಾತಿ ಬರ್ಗ್ ಕರ್ಲಾಸ್ ಗ್ರಾಮದ ಹತ್ತಿರದ ವಟ್ನಾಸ್, ನುಸ್ನಾನ್ ಹಾಗೂ ರಿಸಾ ಗ್ರಾಮಗಳಿಗೂ ತಲುಪಿತು. ಅಲ್ಲಿಯ ಕುಶಲ ಕರ್ಮಿಗಳೂ ಇಂತಹ ಕುದುರೆಗಳನ್ನು ತಯಾರು ಮಾಡಲು ಪ್ರಾರಂಭಿಸಿದರು.

೧೭೧೬ರಲ್ಲಿ ಈ ಡಾಲಾ ಹಾರ್ಸ್ ಆಕೃತಿಗಳನ್ನು ರಾಷ್ಟ್ರೀಯ ಆಟಿಕೆಗಳೆಂದು ಘೋಷಿಸಲಾಯಿತು. ಮಕ್ಕಳಿಗೆ ಅಚ್ಚುಮೆಚ್ಚಾಗಿರುವ ಈ ಡಾಲಾ ಹಾರ್ಸ್ ಗೆ ಬಹು ಬೇಡಿಕೆ ಇದೆ. ೨೦ ನೇ ಶತಮಾನದ ಹೊತ್ತಿಗೆ ಈ ಡಾಲಾ ಹಾರ್ಸ್ ಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ವಿಶ್ವದಲ್ಲೇ ಅತೀ ದೊಡ್ಡ ಡಾಲಾ ಹಾರ್ಸ್ ಸ್ವೀಡನ್ ದೇಶದಲ್ಲೇ ಇದೆ. ಅದು ಅವೆಸ್ತಾ ಎನ್ನುವ ನಗರದಲ್ಲಿದೆ. ಅದರ ಎತ್ತರ ೪೨ ಅಡಿ ೭ ಇಂಚು ಹಾಗೂ ಉದ್ದ ೪೨ ಅಡಿಗಳಷ್ಟಿದೆ. ಡಾಲಾ ಹಾರ್ಸ್ ಮನೆಯಲ್ಲಿರುವುದು ಶುಭ ಸಂಕೇತ ಎಂದು ಸ್ವೀಡನ್ ಜನರು ನಂಬಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಆತ್ಮೀಯರಿಗೆ ಡಾಲಾ ಹಾರ್ಸ್ ಗಳನ್ನು ಉಡುಗೊರೆಯಾಗಿ ನೀಡುತ್ತಾ ಬಂದಿದ್ದಾರೆ.
(ಆಧಾರ)
ಚಿತ್ರ ಕೃಪೆ: ವೀಕಿಪೀಡಿಯಾ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!