ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ ಅದನ್ನು ಬಳಸಿಕೊಂಡು ಬದುಕುತ್ತದೆ ಎಂಬ ವಿಚಾರವನ್ನು ನಾವೆಲ್ಲಾ ಕೇಳಿದ್ದೇವೆ. ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ. ಯಾವುದೇ ನೀರು, ಆಹಾರ ಇಲ್ಲದ ಪ್ರದೇಶಗಳಲ್ಲಿ ಬೆಳೆಯುವ ಪಾಪಸುಕಳ್ಳಿ ಗಿಡ ತನ್ನ ಕಾಂಡದಲ್ಲಿ ಆಹಾರವನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬಳಕೆ ಮಾಡುತ್ತದೆ. ಈ ಸಸ್ಯಗಳಿಗೆ ಎಲೆ ಇಲ್ಲ. ಇದರ ಮುಳ್ಳೇ ಎಲೆ. ಎಲೆ ಇದ್ದರೆ ಆಹಾರ ಬಳಕೆ ಜಾಸ್ತಿ.

ಇದೇ ತೆಂಗಿನ ಮರದ ವಿಚಾರಕ್ಕೆ ಬಂದಾಗ, ಈ ಮರವೂ ಬರ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಬದುಕಲು ತನ್ನ ಶರೀರದಲ್ಲಿ ಒಂದು ವ್ಯವಸ್ಥೆಯನ್ನು ಇಟ್ಟುಕೊಂಡಿದೆ ಎಂದರೆ ತಪ್ಪಾಗಲಾರದು. ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (BOLE) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ. ಬಯಲು ಸೀಮೆಯಲ್ಲಿ ವರ್ಷದಲ್ಲಿ ಹೆಚ್ಚೆಂದರೆ ಮೂರು ನಾಲ್ಕು ಸಲ ಒಳ್ಳೆಯ ಮಳೆ ಬರುತ್ತದೆ. ಉಳಿದಂತೆ ವರ್ಷವಿಡೀ ಬೇಸಿಗೆಯೇ ಅಧಿಕ ತಾಪಮಾನ ಮತ್ತು ಆ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಬಳಕೆಯೂ ಇರುತ್ತದೆ. ಈ ಪ್ರದೇಶಗಳಲ್ಲಿ ತೆಂಗಿಗೆ ನೀರಾವರಿ ನೀಡಿ ಬೆಳೆಸುತ್ತಾರೆ. ವರ್ಷವಿಡೀ ನೀರಾವರಿ ಇರುತ್ತದೆ. ಕೆಲವೊಂದು ಸಮಯದಲ್ಲಿ ನೀರಾವರಿಯ ವ್ಯತ್ಯಾಸಗಳಾದರೂ, ಮರ ಸೊರಗದೇ ಉಳಿಯುತ್ತದೆ. ಇದಕ್ಕೆ ಕಾರಣ ಆ ಮರಗಳಲ್ಲಿ ಇರುವ ಬೊಡ್ಡೆ.

ತೆಂಗಿನ ಮರಕ್ಕೆ ಬೊಡ್ಡೆ ಅಗತ್ಯವಾಗಿ ಬರಲೇಬೇಕು. ಎಲ್ಲಾ ಪ್ರದೇಶಗಳಲ್ಲೂ ಅದು ಏಕಪ್ರಕಾರವಾಗಿ ಬಾರದೇ ಇರಬಹುದು, ಸಾಧಾರಣ ಪ್ರಮಾಣದಲ್ಲಾದರೂ ಇರಬೇಕು. ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಅದರ ಎಳೆ ಪ್ರಾಯದ ಆರೈಕೆ ಮತ್ತು ನಾಟಿ ಕ್ರಮದಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ತೆಂಗಿನ ಸಸಿ ನೆಟ್ಟು ಸಮರ್ಪಕವಾಗಿ ಆರೈಕೆ ಮಾಡಿದರೆ ೧೨-೧೮ ಎಲೆಗಳು (ಗರಿಗಳು) ಬಂದ ತರುವಾಯ ಅದಕ್ಕೆ ಕಾಂಡ ಮೂಡಲು ಪ್ರಾರಂಭವಾಗುತ್ತದೆ. ಈ ಪ್ರಾಯದಲ್ಲಿ ಮಾಡುವ ಉತ್ತಮ ಆರೈಕೆಯಲ್ಲಿ ಗರಿಗಳ ಉದ್ದ ಮತ್ತು ಅದರ ಎಲೆಗಳ ಅಗಲ ನಿರ್ಧರಿತವಾಗುತ್ತವೆ. ನೀರಾವರಿ-ಗೊಬ್ಬರ ಎಲೆಗಳು ಉತ್ತಮವಾಗಿ ಮೂಡಲು ಸಹಕಾರಿಯಾದ ಅಂಶಗಳು. ಒಂದು ಆರೋಗ್ಯವಂತ ತೆಂಗಿನ ಮರ ವರ್ಷಕ್ಕೆ ೧೨ ಗರಿಗಳನ್ನು ಬಿಡುತ್ತದೆ ಎಂದು ಅಂದಾಜಿಸಲಾಗಿದೆ. ಸುಮಾರು ೧೮ ಎಲೆಗಳು ಮೂಡಿದ ತರುವಾಯ ಬುಡ ಭಾಗದಲ್ಲಿ ಗಡ್ಡೆಯಂತಹ ಆಕಾರದ ಬೊಡ್ಡೆ ಬೆಳವಣಿಗೆ ಪ್ರಾರಂಭವಾಗುತ್ತದೆ. ಇದು ಸುಮಾರು ೩-೪ ವರ್ಷದ ತನಕವೂ ಮುಂದುವರಿಯುತ್ತಾ ಕ್ರಮೇಣ ಅದು ನೈಜ ಕಾಂಡದ ಆಕಾರಕ್ಕೆ ಬರುತ್ತದೆ. ಬೊಡ್ಡೆ ಸುಮಾರಾಗಿ ೨-೪ ಅಡಿ ಎತ್ತರದ ತನಕವೂ ಸುಮಾರು ೪-೬ ಅಡಿ ಸುತ್ತಳತೆ ತನಕವೂ ಇರುತ್ತದೆ. ಈ ಬೊಡ್ಡೆಯ ಕೆಳಸ್ಥರದಲ್ಲಿ ಬೇರುಗಳು ಮೂಡುತ್ತಿರುತ್ತವೆ. ತೆಂಗಿನ ಸಸಿಯನ್ನು ನಾಟಿ ಮಾಡುವಾಗ ಮಣ್ಣಿನ ಗುಣವನ್ನು ಅವಲಂಬಿಸಿ ಎಷ್ಟು ಆಳದ ಹೊಂಡವನ್ನೂ ಮಾಡಬಹುದು. ತೀರಾ ಸಡಿಲ ಮಣ್ಣು ಆಗಿದ್ದಲ್ಲಿ ತುಂಬಾ ಆಳದ ಅಗಲದ ಹೊಂಡದ ಅಗತ್ಯ ಇರುವುದಿಲ್ಲ. 

ಗಟ್ಟಿ ಮಣ್ಣಾದರೆ ಮಣ್ಣಿನ ಸಡಿಲತೆಯ ಸಲುವಾಗಿ ಅಗಲ ಮತ್ತು ಆಳದ ಹೊಂಡವನ್ನು ಮಾಡಬೇಕು. ಈ ಹೊಂಡವನ್ನು ಮುಕ್ಕಾಲು ಪಾಲಿಗೂ ಹೆಚ್ಚು ಮತ್ತೆ ಮಣ್ಣು ತುಂಬಿಸಿ ಮೇಲು ಸ್ಥರದಲ್ಲಿ ಸಸ್ಯವನ್ನು ನಾಟಿ ಮಾಡಬೇಕು. ಹೀಗೆ ಮಾಡಿದಾಗ ಆ ಸಸಿಯ ಬೇರುಗಳಿಗೆ ತಕ್ಷಣ ಬೆಳವಣಿಗೆಗೆ ಅನುಕೂಲ್ಲವಾಗುವ ಮಣ್ಣು ದೊರೆಯುತ್ತದೆ. ಸಮರ್ಪಕವಾಗಿ ಎಲೆಗಳು ಬೆಳವಣಿಗೆ ಹೊಂದಲು ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ತೆಂಗಿನ ಸಸಿ ನೆಡುವಾಗ ಆಳದ ಹೊಂಡ ಮಾಡಿ ತಳಭಾಗದಲ್ಲಿ ನಾಟಿ ಮಾಡುವುದುಂಟು. ಈ ವಿಧಾನದಲ್ಲಿ ನಾಟಿ ಮಾಡಿದಾಗ ಸಸಿಗಳಿಗೆ ಬೇರು ಬಿಡಲು ಸಮರ್ಪಕವಾಗ ಅನುಕೂಲ ಸ್ಥಿತಿ ದೊರೆಯದೆ ಬೇರಿನ ಬೆಳವಣಿಗೆ ಕುಂಠಿತವಾಗುತ್ತದೆ. ಸಸಿಯ ಬೆಳವಣಿಗೆ ಕ್ಷೀಣವಾಗುತ್ತದೆ.

ತೆಂಗು ಬೆಳೆಯುವವರು ಸಸಿನೆಡುವಾಗ ಆಳದ ಹೊಂಡ ಮಾಡಿ ತಳ ಭಾಗದಲ್ಲಿ ನಾಟಿ ಮಾಡಿದರೆ ಬುಡ ಭಾಗದಕ್ಕೆ ಶಕ್ತಿ ದೊರೆಯುತ್ತದೆ. ತೇವಾಂಶ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದು ತಿಳಿದಿದ್ದರೆ ಅದು ತಪ್ಪು. ತೆಂಗಿನ ಸಸಿಯ ಬೇರುಗಳು ತಳಕ್ಕೆ ಇಳಿಯುವುದಿಲ್ಲ. ಅದು ಮೇಲುಸ್ಥರದಲ್ಲಿ ಹಬ್ಬಿ ಬೆಳೆಯುವ ಗುಣ ಹೊಂದಿದ ಬೇರಿನ ರಚನೆ. ತೆಂಗಿನ ಮರದ ಬೇರುಗಳು ಮೇಲುಸ್ಥರದಲ್ಲಿ ಹಬ್ಬಿ ಬೆಳೆದಾಗ ಮರ ಗಾಳಿಗೆ ಅಡ್ಡ ಮಗುಚಿ ಬೀಳುತ್ತದೆ ಎಂಬ ಅಂಜಿಕೆ ಬೇಕಾಗಿಲ್ಲ. ತೆಂಗಿನ ಮರ ಮಗುಚಿ ಬೀಳುವಿಕೆಯ ಪ್ರಮಾಣ ತುಂಬಾ ಕಡಿಮೆ. ಆಳಕ್ಕೆ ನಾಟಿ ಮಾಡಿದಾಗ ಬೇರುಗಳ ಬೆಳೆವಣಿಗೆಗೆ ತುಂಬಾ ಅಡ್ಡಿ ಉಂಟಾಗುತ್ತದೆ. ಬೇರಿನ ಶ್ವಾಸೋಚ್ಛಾಸ ಕ್ರಿಯೆಗೆ ಅಡ್ಡಿಯಾಗಿ ಮರದ ಬೆಳೆವಣಿಗೆ ಕುಂಠಿತವಾಗುತ್ತದೆ. ಒಂದು ತೆಂಗಿನ ಮರ ಅನುಕೂಲ ಪರಿಸ್ಥಿತಿಯಲ್ಲಿ ೮೦೦೦ ತನಕ ಬೇರುಗಳನ್ನು ಬಿಡುತ್ತದೆ. ಹಿಂದೆ ತೆಂಗನ್ನು ಪ್ಲಾಂಟೇಶನ್ ರೀತಿಯಲ್ಲಿ ನೆಡುತ್ತಿರಲಿಲ್ಲ. ಆ ಸಮಯದಲ್ಲಿ ಗದ್ದೆಯ ದೊಡ್ಡ ಹುಣಿ (ಕಟ್ಟ ಹುಣಿ) ಯಲ್ಲಿ ನಾಟಿ ಮಾಡುತ್ತಿದ್ದರು. ಅಲ್ಲಿ ಆಳದ ಹೊಂಡ ಮಾಡಲು ಅನುಕೂಲ ಇಲ್ಲ. ಹೊಂಡ ಮಾಡಿದರೂ ಸಡಿಲ ಮಣ್ಣಿನಲ್ಲಿ ಬೇರುಗಳು ಹುಣಿಯ ಹೊರಭಾಗಕ್ಕೆ ಪ್ರಸರಿಸಿ ಅಲ್ಲಿ ಆಹಾರದ ಜೊತೆಗೆ ಶ್ವಾಸೋಚ್ಚಾಸ ಕ್ರಿಯೆಯನ್ನೂ ನಡೆಸುತ್ತವೆ. ಆದ ಕಾರಣ ಅಂತಹ ಮರಗಳಲ್ಲಿ ಬೊಡ್ಡೆಯೂ ಇರುತ್ತದೆ. ಇಳುವರಿಯೂ ಹೆಚ್ಚು ಬರುತ್ತದೆ. ಸಾಮಾನ್ಯವಾಗಿ ಇಂತಹ ಸನ್ನಿವೇಶದಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ನೀರಾವರಿ ಕಡಿಮೆಯಾದರೂ ಮರ ಉತ್ತಮ ಇಳುವರಿ ಕೊಡುತ್ತದೆ.

ಓದುಗರಲ್ಲಿ ವಿನಂತಿ: ನಮ್ಮ ಅವಿಭಜಿತ ದಕ್ಷಿಣ ಕನ್ನಡದಲ್ಲಿ ತೆಂಗಿನ ಮರದ ಕಾಂಡದ ಕೆಳಭಾಗಕ್ಕೆ ‘ಬೊಡ್ಡೆ’ ಎಂದು ಕರೆಯುತ್ತಾರೆ. ಅದೇ ನಿಮ್ಮ ಪ್ರದೇಶದಲ್ಲಿ ಅದಕ್ಕೆ ಬೇರೆ ಹೆಸರುಗಳಿರಬಹುದು. ಹಾಗಿದ್ದರೆ ದಯವಿಟ್ಟು ಅಭಿಪ್ರಾಯ (ಕಮೆಂಟ್) ವಿಭಾಗಕ್ಕೆ ಬರೆದು ತಿಳಿಸಿ.

ಮಾಹಿತಿ ಮತ್ತು ಚಿತ್ರ: ರಾಧಾಕೃಷ್ಣ ಹೊಳ್ಳ