ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ, ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳವಣಿಗೆ ಇರುತ್ತದೆ. ತೆಂಗಿನ ವಿಚಾರದಲ್ಲೂ ಇದು ಪ್ರಸ್ತುತ ವಿಷಯ.

ನಾವು ನೆಟ್ಟು ಬೆಳೆಸುವ ತೆಂಗು ನಾಟಿ ಮಾಡಿ ನಾಲ್ಕರಿಂದ ಐದು ವರ್ಷಕ್ಕೆ ಫಸಲಿಗೆ ಆರಂಭವಾಗುತ್ತದೆ. ಆ ಸಮಯದವರೆಗೆ ಆ ಸಸಿ ಯಾವ ರೀತಿ ಫಲ ಕೊಡಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳಲಿಕ್ಕೆ ಬರುವುದಿಲ್ಲ. ಕೆಲವು ಸಸಿಗಳು ಎಳವೆಯಲ್ಲಿ ಸಹಜ ಬೆಳವಣಿಗೆಯನ್ನೇ ತೋರ್ಪಡಿಸಿದರೂ ಬೆಳೆದು ಫಸಲಿಗಾರಂಭಿಸಿದ ತರುವಾಯ ತನ್ನ ಅಂತರ್ಗತ ನ್ಯೂನ್ಯತೆಯನ್ನು ತೋರಿಸಿದರೆ ಮತ್ತೆ ಕೆಲವು ಸಸಿಗಳು ಬೆಳೆಯುತ್ತಿರುವ ಹಂತದಲ್ಲೇ ಅದರ ಬೆಳವಣಿಗೆ ವೈಪರೀತ್ಯವನ್ನು ತೋರಿಸುತ್ತದೆ. ಬೆಳವಣಿಗೆ ನ್ಯೂನತೆಯಲ್ಲಿ ಎಲೆಗಳ ರಚನೆ, ಶಿರ ಭಾಗದ ಬೆಳವಣಿಗೆ, ಕಾಂಡದ ಬೆಳವಣಿಗೆ, ಕಾಯಿಯ ಗಾತ್ರ ಮತ್ತು ಒಳ ರಚನೆ ಇವು ಮುಖ್ಯವಾದವುಗಳು. ಕೆಲವೊಂದು ಸಮಸ್ಯೆಗಳನ್ನು ಪೋಷಕಾಂಶದ ನಿರ್ವಹಣೆಯಿಂದ ಸರಿಪಡಿಸಬಹುದದರೂ ಕೆಲವು ಸಮಸ್ಯೆಗಳನ್ನು ಯಾವುದೇ ನಿರ್ವಹಣೆಯಲ್ಲಿ ಸಸಿಪಡಿಸಲಿಕ್ಕಾಗುವುದಿಲ್ಲ. ಇಂತಹ ಸಸಿಗಳನ್ನು ತೆಗೆದು ಬೇರೆ ಸಸಿ ನಾಟಿ ಮಾಡುವುದೊಂದೇ ಇದಕ್ಕಿರುವ ಪರಿಹಾರ.

ಕೆಲವು ಮಿತ್ರರು ಯಾವಾಗಲೂ ನಮ್ಮಲ್ಲಿ ಕೆಲವು ಸಲಹೆಗಳನ್ನು ಕೇಳುವುದುಂಟು "ನಮ್ಮ ತೆಂಗಿನ ಸಸಿ ಪೊಳ್ಳು ಕಾಯಿಯನ್ನೇ ಬಿಡುತ್ತದೆ, ಒಂದೂ ಒಳ್ಳೆ ಕಾಯಿ ಬಿಡುವುದಿಲ್ಲ. ಹಾಗೆಂದು ಮರ ಚೆನ್ನಾಗಿಯೇ ಇದೆ” ಎಂಬುದು ಕೆಲವರ ಪ್ರಶ್ನೆಯಾದರೆ ಮತ್ತೆ ಕೆಲವರು ನಮ್ಮ ತೆಂಗಿನ ಮರದ ಶಿರ ಭಾಗ ವಿಚಿತ್ರ ರೀತಿಯಲ್ಲಿ ಬೆಳೆಯುತ್ತಿದೆ. ಕಾಯಿಯೇ ಇಲ್ಲ. ಹೀಗೆಲ್ಲಾ ಪ್ರಶ್ನೆಗಳು. ಹೌದು, ಈ ಅಸಹಜತೆಯನ್ನು ಪ್ರತೀಯೊಬ್ಬ ಕೃಷಿಕನೂ ತಮ್ಮ ಹೊಲದಲ್ಲಿ ಅಥವಾ ಇನ್ಯಾವುದಾದರೂ ಕಡೆಯಲ್ಲಿ ಗಮನಿಸಿದ್ದಿರಬಹುದು. ಈ ಅಸಹಜ ಬೆಳವಣಿಗೆಗಳು ಅಪರೂಪದ್ದಾದರೂ ಅಂಥಹ ಮರಗಳು ಯಾರ ಹೊಲದಲ್ಲಿಯಾದರೂ ಇದ್ದರೆ ಅದು ನಾಳೆ ಸರಿಯಾಗಬಹುದು, ನಾಡಿದ್ದು ಆಗಬಹುದು ಎಂದು ಎಂದು ಅದನ್ನು ಹಾಗೇ ಉಳಿಸಿಕೊಳ್ಳುವ ಬದಲಿಗೆ ಆ ಮರವನ್ನು ಕಡಿದು ಬೇರೆ ಸಸಿ ನೆಟ್ಟರೆ ಉತ್ತಮ.

Screenshot 2026-08-24 12.47.43 PM.png

ತೆಂಗಿನ ಮರಗಳಲ್ಲಿ ಸುಮಾರು ಶೇ. ೧-೨ ರ ಪ್ರಮಾಣದಲ್ಲಿ ಇಂತಹ ಅಸಹಜ ಬೆಳವಣಿಗೆಯ ನ್ಯೂನತೆ ಇರುತ್ತದೆ. ಕೆಲವು ಸಸಿಗಳು ಚೆನ್ನಾಗಿಯೇ ಬೆಳೆಯುತ್ತವೆ. ಆದರೆ ಕಾಯಿ ಕೊಡುವುದಿಲ್ಲ. ಮತ್ತೆ ಕೆಲವು ವಕ್ರ ವಕ್ರವಾಗಿ ಬೆಳೆದು ಅಸಹಜತೆಯನ್ನು ತೋರಿಸುತ್ತವೆ. ಇಂಥಃ ಸಮಸ್ಯೆ ತೆಂಗು ಬೆಳೆಯಲಾಗುವ ಎಲ್ಲಾ ಕಡೆಯಲ್ಲೂ ಇದೆ.

ಇದಕ್ಕೆ ಕಾರಣ ಆ ತೆಂಗಿನ ಬೀಜದ ವಂಶ ಗುಣ. ಕೆಲವೊಂದು ಮರಗಳು ತಿಗಣೆ ಜಾತಿಯ ಕೀಟಗಳ ಉಪಟಳದಿಂದ ಸ್ವಲ್ಪ ಅಸಹಜವಾಗಿ ಬೆಳೆಯಬಹುದಾದರೂ, ಶಾಶ್ವತವಾಗಿ ಇದೇ ರೀತಿಯಲ್ಲಿ ಬೆಳವಣಿಗೆ ತೋರ್ಪಡಿಸುವ ಮರಗಳೆಲ್ಲಾ ವಂಶಗುಣದ ತೊಂದರೆಗೆ ಒಳಗಾದವುಗಳಿರುತ್ತವೆ. ಈ ತೊಂದರೆಗಳಿಗೆ ಹಲವಾರು ಕಾರಣಗಳು ಇವೆ. ಆದರೆ ಸರಳವಾಗಿ ಹೇಳಬೇಕೆಂದರೆ ನಾವು ಆಯ್ಕೆ ಮಾಡುವ ಬೀಜದಲ್ಲಿ ಈ ತೊಂದರೆಯ ಮೂಲ ಗುಣ ಸೇರಿರುತ್ತದೆ.

ನಾವು ಆಯ್ಕೆ ಮಾಡುವ ಯಾವುದೇ ಬೀಜದಲ್ಲಿ ಒಂದು ಭ್ರೂಣ ಇರುತ್ತದೆ. ಈ ಭ್ರೂಣ ಸಸ್ಯದ ಮೊಳಕೆ ಹಾಗೂ ಅದರ ನಂತರದ ಬೆಳವಣಿಗೆಗೆ ಮೂಲ ಪ್ರೇರಕ. ಭ್ರೂಣಕ್ಕೆ ಉಂಟಾದ ಯಾವುದೇ ತೊಂದರೆ ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅಪರೂಪದಲ್ಲಿ ಒಂದು ತೆಂಗಿನ ಬೀಜ ಎರಡು - ಮೂರು - ನಾಲ್ಕು ಮೊಳಕೆ ಒಡೆಯುವುದನ್ನು ನಾವು ಕಂಡಿರಬಹುದು. ಇದಕ್ಕೆ ಕಾರಣ ಅಲ್ಲಿ ಅವಳಿ ಅಥವಾ ತ್ರಿವಳಿ ಬ್ರೂಣ ಇರಬಹುದು. ಅದೇ ರೀತಿಯಲ್ಲಿ ತೆಂಗಿನ ಸಸಿ ಬೆಳೆದು ಮರವಾಗುವ ಸಮಯದಲ್ಲಿ ಎರಡು ಟಿಸಿಲು ಒಡೆದುದನ್ನೂ ಕಂಡಿರಬಹುದು. ಇದಕ್ಕೆ ಕಾರಣ ಆ ಭ್ರೂಣವೇ ಹೊರತು ಬೇರೆ ಏನೂ ಅಲ್ಲ. ಭ್ರೂಣಕ್ಕೆ ಪ್ರಾಕೃತಿಕವಾಗಿ ಅಥವಾ ಭೌತಿಕವಾಗಿ ಏನಾದರೂ ತೊಂದರೆಗಳಾದಲ್ಲಿ ಇಂತಹ ಸಮಸ್ಯೆಗಳು ಉಂಟಾಗುತ್ತವೆ.

ಪ್ರಾಕೃತಿಕವಾಗಿ ಆಗುವ ಘಾಸಿ: ತೆಂಗಿನ ಮರದಲ್ಲಿ ಸಾಮಾನ್ಯವಾಗಿ ಕೃತಕ ಪರಾಗಸ್ಪರ್ಶದ ಮೂಲಕ ಕಾಯಿ ಕಚ್ಚುತ್ತದೆ. ಪರಾಗ ಕಣಗಳು ಆಯಾ ಕ್ರೋಮೋಸೋಮಿನ ವರ್ಗಕ್ಕೆ ಮಾತ್ರ ಹೊಂದಿಕೆಯಾಗುವುದಾದರೂ ಕೆಲವೊಮ್ಮೆ ಪರಾಗ ಕಣಗಳಲ್ಲಿ ಏನಾದರೂ ಸೂಕ್ಷ್ಮ ದೋಷಗಳಿದ್ದು ಅವುಗಳಿಂದ ಪರಾಗ ಸ್ಪರ್ಶ ಕ್ರಿಯೆ ನಡೆದರೆ ಅದರಿಂದ ಫಲಿಸಿದ ಕಾಯಿಗೆ ಆ ಗುಣ ವರ್ಗಾವಣೆಯಾಗಿ ಅದು ಸಸಿಯಾಗಿ ಮರವಾದಾಗ ಅದರ ನ್ಯೂನತೆಯು ಬೆಳವಣಿಗೆ ಅಥವಾ ಇನ್ಯಾವುದೇ ರೀತಿಯಲ್ಲಿ ತೋರ್ಪಡಬಹುದು. ಕಾಯಿಯ ಮೂರು ಕಣ್ಣುಗಳಲ್ಲಿ ಒಂದು ಮೆದು ಕಣ್ಣಾಗಿದ್ದು ಅದರ ಒಳಗೆ ಒಂದು ಅಕ್ಕಿಯ ತರಹ ಇರುವ ಭಾಗವೇ ಭ್ರೂಣ. ಈ ಭ್ರೂಣಕ್ಕೆ ಕಾಯಿಯ ಎಲ್ಲಾ ಮಾತೃ ಗುಣವೂ ಸೇರಿರುತ್ತದೆ. ಈ ಭ್ರೂಣವೇ ಬೆಳೆದು ಸಸಿಯಾಗುವ ಅಂಗವಾಗಿರುತ್ತದೆ. ಕೆಲವೊಂದು ಹವಾಮಾನ ವೈಪರೀತ್ಯಗಳಾದ ವಿಪರೀತ ಚಳಿ, ಮುಂತಾದವುಗಳ ಕಾರಣದಲ್ಲೂ ಭ್ರೂಣಕ್ಕೆ ಘಾಸಿ ಉಂಟಾಗುತ್ತದೆ. ಸಮರ್ಪಕವಾಗಿ ಪರಾಗ ಕಣಗಳು ದೊರೆಯದಿದ್ದರೂ ಕೆಲವೊಮ್ಮೆ ಭ್ರೂಣದ ಬೆಳವಣಿಗೆ ವ್ಯತ್ಯಾಸವಾಗುತ್ತದೆ. ಪಕ್ಕದಲ್ಲಿ ಯಾವುದೋ ಶಾರೀರಿಕ ತೊಂದರೆ ಒಳಗೊಂಡ ಮರ ಇದ್ದರೆ, ಅದರ ಪರಾಗ ಕಣಗಳು ಆರೋಗ್ಯವಂತ ಮರದ ಹೂವಿಗೆ ಲಭ್ಯವಾದರೂ ಸಹ ಅದರಲ್ಲಿ ನ್ಯೂನತೆ ಉಂಟಾಗಬಹುದು.

ಭೌತಿಕ ಕಾರಣಗಳು: ಮರದಲ್ಲಿ ಸಹಜವಾಗಿ ಆಗುವ ತೊಂದರೆಗಳಲ್ಲದೆ ನಮ್ಮ ಕೈಯಿಂದ ಆಗುವ ತೊಂದರೆಗಳಿಗೆ ಭೌತಿಕ ಕಾರಣಗಳು ಎನ್ನಬಹುದು. ಬೀಜಕ್ಕಿಡುವ ತೆಂಗಿನ ಕಾಯಿ ಯಾವ ಮರದ್ದು ಆಗಿರಬೇಕು. ಮರದ ಲಕ್ಷಣ ಹೇಗಿರಬೇಕು ಎಂಬಿತ್ಯಾದಿ ನಿಯಮಗಳು ಇವೆ. ಆ ನಿಯಮಕ್ಕನುಗುಣವಾಗಿ ಬೀಜದ ಕಾಯಿಯನ್ನು ಆರಿಸಬೇಕು. ಯಾವುದೇ ನಿರ್ಲಕ್ಷ ಮಾಡಬಾರದು. ತೆಂಗಿನ ಮರದಿಂದ ಕಾಯಿಯನ್ನು ಬೀಜಕ್ಕಾಗಿ ತೆಗೆಯುವಾಗ ಎತ್ತರದ ಮರಗಳಿಂದ ಕೆಳಕ್ಕೆ ಬೀಳಿಸುವಾಗ ಆ ಕಾಯಿಯ ಭ್ರೂಣಕ್ಕೆ ಹೊಡೆತ ಉಂಟಾಗಬಹುದು. ಇದನ ಇದನ್ನು ಬೀಜಕ್ಕೆ ಇಟ್ಟಾಗ ಅದರಲ್ಲಿ ವೈಪರೀತ್ಯಗಳು ಉಂಟಾಗುವ ಸಾಧ್ಯತೆ ಇದೆ. ಆದ ಕಾರಣ ಬೀಜದ ಕಾಯಿಯನ್ನು ಎತ್ತರದಿಂದ ಕೆಳಕ್ಕೆ ಹಾಕದೆ ಇಳಿಸಬೇಕು. 

ಮರದ ಬೆಳವಣಿಗೆಯ ಮಧ್ಯಂತರದಲ್ಲಿ ಕೆಲವು ನ್ಯೂನ್ಯತೆಗಳು ಉಂಟಾಗುತ್ತವೆ. ಇದಕ್ಕೆ ಸಹ ನಮ್ಮ ಕೆಲವು ಕೆಲಸ ಕಾರ್ಯಗಳು ಮತ್ತು ಕೆಲವು ಕೀಟ - ರೋಗದ ಸಮಸ್ಯೆಯು ಕಾರಣವಾಗುತ್ತದೆ. ತೆಂಗಿನ ಮರದಲ್ಲಿ ಒಂದೇ ಒಂದು ಮೊಳಕೆ ಇದ್ದು, ಅದು ಶಿರ ಭಾಗದ ಸುಳಿಯ ಎಡೆಯಲ್ಲಿ ಇರುತ್ತದೆ. ಯಾವುದಾದರೂ ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ಮರದ ಸುಳಿ ಭಾಗಕ್ಕೆ ಯಾವುದಾದರೂ ಮರದ ಗೆಲ್ಲುಗಳು ಬಿದ್ದು ಘಾಸಿ ಉಂಟಾದರೆ ಅಂತಹ ಮರಗಳು ಚೇತರಿಸಿಕೊಳ್ಳಲು ಸುಮಾರು ಮೂರು ವರ್ಷ ಬೇಕಾಗುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ಮೊಳಕೆ ಭಾಗಕ್ಕೆ ಏನಾದರೂ ಶಾಕ್ ತರಹದ ಅನುಭವಾದಲ್ಲಿ ಆ ಮರದ ಇಳುವರಿ . ಕ್ಷಮತೆ ಕುಗ್ಗಬಹುದು, ಶಿರಭಾಗ ಸಣಕಲಾಗಲೂಬಹುದು.

Screenshot 2026-08-24 12.49.01 PM.png

ಕೆಲವು ಕೀಟಗಳು ಶಿರಭಾಗದ ಮೆದು ಅಂಗಾಂಶಕ್ಕೆ ಹಾನಿ ಮಾಡಿ. ಅದನ್ನು ನಿರ್ವಹಣೆ ಮಾಡಿ ಸರಿಪಡಿಸಿದಾಗ ಕೆಲವೊಮ್ಮೆ ಮರದ ಮೊಳಕೆ ಭಾಗಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಗಿ ಆ ಮರದಲ್ಲಿ ನಂತರ ಇಳುವರಿ ಕ್ಷಮತೆ ಕಡಿಮೆಯಾಗಲೂಬಹುದು. ಮುಖ್ಯವಾಗಿ ಕೆಂಪು ಮೂತಿ ಹುಳ, ಕುರುವಾಯಿ ಕೀಟ, ಕೋರಿಡ್ ಬಗ್ ಮುಂತಾದ ಕೀಟಗಳಿಂದ ಹೀಗಾಗುತ್ತದೆ.

ತೆಂಗಿನ ಮರದಲ್ಲಿ ಪೊಳ್ಳು ಕಾಯಿಗಳೇ ಬಿಡುತ್ತಿದ್ದರೆ ಆ ಮರಕ್ಕೆ ಪೊಟಾಶಿಯಂ ಹಾಗೂ ಗಂಧಕ ಪೊಷಕಾಂಶಗಳನ್ನು ಕೊಟ್ಟು, ಮೂರು ವರ್ಷಗಳ ತನಕ ಇಳುವರಿಯನ್ನು ಗಮನಿಸಿರಿ. ಒಂದು ಮರದದಲ್ಲಿ ಸುಮಾರು ೩೬ ತಿಂಗಳ ಹಿಂದೆ ಹೂ ಗೊಂಚಲು ಮೂಡಲು ಪ್ರಾರಂಭವಾಗುತ್ತದೆ. ಆ ಸಮಯದಿಂದ ಅದಕ್ಕೆ ದೊರೆಯುವ ಪೋಷಕಗಳ ಮೇಲೆ ಅದರಲ್ಲಿ ಉಳಿಯುವ ಕಾಯಿಗಳು ಮತ್ತು ಉದುರುವ ಕಾಯಿಗಳ ಪ್ರಮಾಣ ಸುಮಾರಾಗಿ ನಿರ್ಧರಿತವಾಗಿರುತ್ತದೆ. ೩೬ ತಿಂಗಳ ಹಿಂದೆ ಕೊಡಮಾಡಲ್ಪಟ್ಟ ಪೋಷಕಗಳ ಫಲಿತಾಂಶ ಈಗ ದೊರೆಯುತ್ತದೆ ಆದ ಕಾರಣ ಕಳೆದ ವರ್ಷ ಗೊಬ್ಬರ ಯಥೇಚ್ಛವಾಗಿ ಕೊಟ್ಟಿದ್ದೇನೆ ಎಂದು ಈ ವರ್ಷವೇ ಫಸಲಿನ ನಿರೀಕ್ಷೆ ಬೇಡ. ಯಾವುದೇ ಪೋಷಕಗಳ ನ್ಯೂನತೆ ಸರಿಪಡಿಸಿ ಅದರ ಫಲಿತಾಂಶ ದೊರೆಯಲು ಕನಿಷ್ಟ ೩೬ ತಿಂಗಳು ಕಾಯಬೇಕು.

ತೆಂಗಿನ ಮರಕ್ಕೂ ಬೇರು ತಿನ್ನುವ ಹುಳದ ಉಪಟಳ ಇರುತ್ತದೆ. ಈ ಬೇರು ತಿನ್ನುವ ಹುಳುವಿನ ತೊಂದರೆ ಇದ್ದಲ್ಲಿ ಮರದಲ್ಲಿ ಎಷ್ಟೇ ಪೋಷಕಾಂಶಗಳ ನಿರ್ವಹಣೆ ಮಾಡಿದಾಗ್ಯೂ ಅಧಿಕ ಸಂಖ್ಯೆಯಲ್ಲಿ ಗರಿಗಳು ಇರುವುದಿಲ್ಲ. ಶಿರದ ಆಕಾರ ವಿರುದ್ಧ ಮಡಚಿದ ಛತ್ರಿಯಂತಿರುತ್ತದೆ. ಎಲೆಗಳು ತಿಳಿ ಹಸುರು ಬಣ್ಣದಲ್ಲಿರುತ್ತದೆ. ಇಂತಹ ಮರಗಳಲ್ಲಿ ಕಾಯಿ ಉದುರುವಿಕೆ, ಕೃಶ ಹೂಗೊಂಚಲು ಇರುತ್ತದೆ. ಇಂತಹ ಮರಗಳ ಕಾಂಡವೂ ಸಹ ವರ್ಷ ವರ್ಷ ಕಳೆದಂತೆ ಸಪುರವಾಗುತ್ತಾ ಬರುತ್ತದೆ. ಬೇರು ಹುಳದ ನಿವಾರಣೆಗೆ ಸೂಕ್ತ ಕ್ರಮ ಕೈಗೊಂಡ ತರುವಾಯ ಸುಮಾರು ೩೬ ತಿಂಗಳ ನಂತರ ಆ ಮರ ಸಹಜ ಬೆಳವಣಿಗೆಯನ್ನು ಹೊಂದಬಹುದು.

ಯಾವುದೇ ಕಾರಣಕ್ಕೆ ವಕ್ರ ವಕ್ರವಾಗಿ, ಸುರುಳಿ ಸುರುಳಿಯಾಗಿ ಬೆಳೆಯುವ ಮರಗಳು ನಾಳೆ ನಾಡಿದ್ದು ಸರಿಯಾಗುತ್ತದೆ ಎಂದು ಕಾಯುತ್ತಾ ಕುಳಿತು ಕೊಳ್ಳಬೇಡಿ. ಅದು ಅದರ ಶಾರೀರಿಕ ನ್ಯೂನತೆಯಾಗಿದ್ದು, ಅದು ಅದು ಎಂದಿಗೂ ಸರಿಯಾಗಲಾರದು. ಸರಿಯಾಗುವ ಸಾಧ್ಯತೆ ಇರುವ ಮರಗಳ ಲಕ್ಷಣ ಅದು ಸಹಜ ಬೆಳವಣಿಗೆಯನ್ನು ಹೊಂದಿದ್ದು, ಯಾವುದೋ ಪೋಷಕಗಳ ಅಸಮತೋಲನದಿಂದ ಹೀಗಾಗುತ್ತದೆ. ಆ ಪೋಷಕಾಂಶಗಳನ್ನು ಹೆಚ್ಚುವರಿಯಾಗಿ ಕೊಟ್ಟು, ಮೂರು ವರ್ಷ ಕಾಲ ಕಾದು ನಂತರ ಸುಧಾರಿಸದಿದ್ದಲ್ಲಿ ಅದನ್ನು ತೆಗೆದು ಬೇರೆ ಸಸಿ ನಾಟಿ ಮಾಡಿ.

ಈ ತೊಂದರೆಗಳಿಗೆ ಯಾರೂ ಕಾರಣವಲ್ಲ. ಇದು ಮಿನಿಮಮ್ ಲಾಸ್‌ನಲ್ಲಿ ಬರುವ ಸಮಸ್ಯೆಯಾಗಿದ್ದು, ಇಂತದ್ದು ಗುರುತಿಸಿ ತಕ್ಷಣ ತೆಗೆದು ಬೇರೆ ಸಸಿ ನಾಟಿ ಮಾಡುವುದರಿಂದ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಬೀಜದ ಗಿಡದಲ್ಲಿ ಎರಡು ಮೂರು ಸಸಿಗಳು ಬೆಳೆದು ಒಂದು ಉತ್ತಮ ಉಳಿದದ್ದು ಕೃಷ್ಣ ಬೆಳವಣಿಗೆಯನ್ನು ಹೊಂದಿತ್ತೆಂದಾದರೆ ಅಂತಹ ಬುಡದಲ್ಲಿ ಆರೋಗ್ಯವಾಗಿರುವ ಒಂದನ್ನೇ ಉಳಿಸಿಕೊಂಡು ಬೇರೆ ಸಸಿಗಳನ್ನು ಕಡಿದು ತೆಗೆಯಬಹುದು. ಆ ಸಮಯದಲ್ಲಿ ಮುಖ್ಯ ಸಸಿಗೆ ಗಾಯ ಆಗ ಕೂಡದು. ಒಂದು ವೇಳೆ ಎರಡೂ ಏಕ ಪ್ರಕಾರ ಬೆಳವಣಿಗೆ ಹೊಂದಿದ್ದರೆ ಅಂಥಹ ಸಸಿಗಳಲ್ಲಿ ಎರಡನ್ನೂ ಉಳಿಸಿಕೊಂಡು ಹೆಚ್ಚುವರಿ ಗೊಬ್ಬರ ಕೊಟ್ಟು ಸಾಕಬಹುದು.

ತೆಂಗು ಬೆಳೆಗಾರರು ಅನುತ್ಪಾದಕ ಮರಗಳನ್ನು ಉಳಿಸಿಕೊಂಡು ಅದು ಇಂದು ಸರಿಯಾಗುತ್ತದೆ. ನಾಳೆ ಸರಿಯಾಗುತ್ತದೆ ಎಂದು ಕಾದು ನೋಡುವುದು ಸರಿಯಲ್ಲ. ಎಲ್ಲಾ ಬೆಳೆಗಳಲ್ಲೂ ಇರುವಂತೆ ತೆಂಗಿನಲ್ಲೂ ಕೆಲವು ಅನುತ್ಪಾದಕ ಮರಗಳು ಇರುವುದು ಸಹಜ. ಅದನ್ನು ಗುರುತಿಸಿದ ಮೇಲೆ ತೆಗೆಯುವುದು ಉತ್ತಮ.

ಚಿತ್ರಗಳು ಮತ್ತು ಮಾಹಿತಿ ಸಹಕಾರ: ರಾಧಾಕೃಷ್ಣ ಹೊಳ್ಳ