ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಿಸಿಕೊಂಡರೂ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸುರಕ್ಷಿತ ಬದುಕು ಬದುಕು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದಕ್ಕೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ ಸಿಆರ್ ಬಿ) ಬಿಡುಗಡೆ ಮಾಡಿರುವ ೨೦೨೪ರ ವರದಿಯೇ ಸಾಕ್ಷಿ, ದೇಶಾದ್ಯಂತ ಪ್ರತಿವರ್ಷ ಸರಾಸರಿ ೫೭ ಸಾವಿರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥ ಸಂಗತಿ. ಪ್ರಗತಿಪರ ರಾಜ್ಯವೆಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ೨೦೨೩ರಲ್ಲಿ ೧,೯೨೩ರಷ್ಟಿದ್ದ ಪ್ರಕರಣಗಳ ಸಂಖ್ಯೆ ೨೦೨೪ರಲ್ಲಿ ೨,೦೧೬ಕ್ಕೆ ಏರಿಕೆಯಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಅಂದಾಜು ೧೯ ಪ್ರಕರಣಗಳು ವರದಿಯಾಗುತ್ತಿರುವುದು ಸಾಮಾಜಿಕ ಸ್ವಾಸ್ಥ್ಯ, ಹದಗೆಡುತ್ತಿರುವುದರ ದ್ಯೋತಕವಾಗಿದೆ.
ವಿಶೇಷವಾಗಿ, ದಲಿತ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಚಿತ್ರಣ ಅತ್ಯಂತ ಭಯಾನಕವಾಗಿದೆ. ೨೦೨೪ರಲ್ಲೇ ೨೪೫ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೧೮ ವರ್ಷದೊಳಗಿನ ೧೬೩ ಹೆಣ್ಣುಮಕ್ಕಳು ಬಲಿಯಾಗಿರುವುದು ನಮ್ಮ ಕಾನೂನು ವ್ಯವಸ್ಥೆ ಮತ್ತು ಸಾಮಾಜಿಕ ಜಾಗೃತಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಮುಗ್ಧ ಮಕ್ಕಳ ಮೇಲೆ ನಡೆಯುತ್ತಿರುವ ಈ ಅಮಾನವೀಯ ಕೃತ್ಯಗಳು ಮನುಕುಲಕ್ಕೇ ಕಪ್ಪುಚುಕ್ಕೆಯಾಗಿವೆ. ಈ ಅಂಕಿಅಂಶಗಳು ಕೇವಲ ಸಂಖ್ಯೆಗಳಲ್ಲ; ಇವುಗಳ ಹಿಂದೆ ನೊಂದವರ ನೋವು, ಅವಮಾನ ಉಂಡ ಬದುಕಿನ ಕರಾಳ ಕಥೆಗಳಿವೆ. ಇಷ್ಟೆಲ್ಲಾ ಕಾನೂನುಗಳು ಮತ್ತು ರಕ್ಷಣೆಗಳ ನಡುವೆಯೂ ದೌರ್ಜನ್ಯಗಳ ಗ್ರಾಫ್ ಏರುಗತಿಯಲ್ಲಿ ಸಾಗುತ್ತಿರುವುದು ಆಡಳಿತ ವ್ಯವಸ್ಥೆಗೆ ಒಡ್ಡಿದ ದೊಡ್ಡ ಸವಾಲಾಗಿದೆ.
ಕರ್ನಾಟಕದ ಮಟ್ಟಿಗೆ ಸಮಾಧಾನಕರ ವಿಷಯವೆಂದರೆ ಪೊಲೀಸ್ ಇಲಾಖೆಯ ತನಿಖಾ ವೇಗ. ಶೇ.೮೩.೬ರಷ್ಟು ಪ್ರಕರಣಗಳಲ್ಲಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ ಸಲ್ಲಿಕೆಯಾಗುತ್ತಿರುವುದು ಉತ್ತರ ಭಾರತದ ಹಲವು ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಕೇವಲ ಚಾರ್ಜ್ ಶೀಟ್ ಸಲ್ಲಿಸುವುದರಿಂದ ನ್ಯಾಯ ದೊರೆತಂತಾಗುವುದಿಲ್ಲ. ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬವಾಗದಂತೆ ನೋಡಿಕೊಳ್ಳುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದು ಇಂದಿನ ತುರ್ತು ಅಗತ್ಯ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಂಥ ರಾಜ್ಯಗಳಲ್ಲಿ ದೌರ್ಜನ್ಯದ ಅಬ್ಬರ ಹೆಚ್ಚಿರಬಹುದು; ಆದರೆ, ಕರ್ನಾಟಕ ೮ನೇ ಸ್ಥಾನದಲ್ಲಿದೆ ಎಂದು ಸಮಾಧಾನಪಟ್ಟುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ, ಏಕೆಂದರೆ, ದೌರ್ಜನ್ಯ ಎನ್ನುವುದು ಯಾವುದೇ ರೂಪದಲ್ಲಿದ್ದರೂ ಅದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯೇ ಆಗಿದೆ.
ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಕೇವಲ ಕಾನೂನಿನ ಕೊರತೆಯಷ್ಟೇ ಕಾರಣವಲ್ಲ; ಸಃ ಬದಲಾಗಿ ನಮ್ಮ ಮನಸ್ಥಿತಿಗಳೂ ಕಾರಣ. ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ನಾವೆಷ್ಟೇ ಮುಂದುವರಿದಿದ್ದರೂ 'ಜಾತಿ' ಎಂಬ ವಿಷವರ್ತುಲದಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ, ಸರಕಾರಗಳು ಕೇವಲ ಅನುದಾನ ನೀಡುವುದಕ್ಕಷ್ಟೇ ಸೀಮಿತವಾಗದೆ, ದೌರ್ಜನ್ಯ ತಡೆ ಕಾಯಿದೆಯನ್ನು ನಿಷ್ಟುರವಾಗಿ ಜಾರಿಗೊಳಿಸಬೇಕಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗದ ಹೊರತು ಅಂಕಿಸಂಖ್ಯೆಗಳ ಈ ಏರಿಳಿತ ಅರ್ಥಹೀನ. ಈಗಲಾದರೂ ಸರಕಾರ, ನ್ಯಾಯಾಂಗ ಮತ್ತು ನಾಗರಿಕ ಸಮಾಜ ಎಚ್ಚೆತ್ತುಕೊಂಡು, ದಲಿತರ ಮೇಲಿನ ಈ ದಮನಕಾರಿ ಪ್ರವೃತ್ತಿಗೆ ಶಾಶ್ವತ ತಡೆ ಹಾಕುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ ಈ 'ಅಪರಾಧದ ಹಸಿವು' ನಮ್ಮ ಸಾಂಸ್ಕೃತಿಕ ಘನತೆಯನ್ನೇ ನುಂಗಿ ಹಾಕಲಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೪-೦೫-೨೦೨೬
ಚಿತ್ರ ಕೃಪೆ: ನ್ಯೂಸ್ ಕ್ಲಿಕ್ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!