ಜೀವನದಲ್ಲಿ ಬದುಕುವ ಆಸೆಯನ್ನೇ ಕಳೆದುಕೊಂಡು ನಿರಾಶಾವಾದಿಗಳಾಗಿರುವವರು ತಪ್ಪದೇ ನೋಡ ಬೇಕಾದ ಆಂಗ್ಲ ಚಿತ್ರ ‘ದಿ ಬಕೆಟ್ ಲಿಸ್ಟ್’ (The Bucket List). ಸಾಮಾನ್ಯವಾಗಿ ಇನ್ನು ಕೆಲವೇ ದಿನಗಳಲ್ಲಿ ಸಾವು ತನ್ನನ್ನು ಆವರಿಸಲಿದೆ ಎನ್ನುವಾಗ ಬಹಳಷ್ಟು ಮಂದಿ ಗಾಬರಿಗೊಳ್ಳುತ್ತಾರೆ, ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ, ಕೆಲವರು ಹೆದರಿಕೆಯಿಂದಲೇ ಜೀವವನ್ನೂ ಕಳೆದುಕೊಳ್ಳುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ನೋಡಲೇ ಬೇಕಾದ ಚಿತ್ರವಿದು. 

‘ದಿ ಬಕೆಟ್ ಲಿಸ್ಟ್’ ಸಿನೆಮಾವನ್ನು ನಿರ್ದೇಶನ ಮಾಡಿದ್ದು ರಾಬ್ ರೈನರ್. ಈ ಚಿತ್ರ ಬಿಡುಗಡೆಯಾದ ವರ್ಷ ೨೦೦೭. ಬಕೆಟ್ ಲಿಸ್ಟ್ ಎಂದರೆ ಸಾಯುವ ಮೊದಲು ಆ ವ್ಯಕ್ತಿ ಇಷ್ಟ ಪಟ್ಟು ಮಾಡಬಯಸುವ ಕೆಲಸಗಳ ಪಟ್ಟಿ ಎಂದು ಸರಳವಾಗಿ ಹೇಳಬಹುದು. ವಿದೇಶಗಳಲ್ಲಿ ಹೆಚ್ಚಾಗಿ ಕ್ಯಾನ್ಸರ್ ರೋಗಿಗಳು ಇನ್ನು ಸಾವು ಸಮೀಪದಲ್ಲಿದೆ ಎಂದು ವೈದ್ಯರು ತಿಳಿಸಿದಾಗ ಮಾಡಿಕೊಳ್ಳುವ ವ್ಯವಸ್ಥೆ. ಕೆಲವರಿಗೆ ಅವರ ಇಷ್ಟದ ಸ್ಥಳಗಳಿಗೆ ಪ್ರವಾಸ ಹೋಗಬೇಕು, ಇನ್ನು ಕೆಲವರಿಗೆ ಇಷ್ಟದ ತಿಂಡಿಯನ್ನು ತಿನ್ನಬೇಕು, ಹಳೆಯ ಗೆಳೆಯರ ಬಳಿ ಮಾತನಾಡಬೇಕು, ನೋವು ಮಾಡಿದವರಿಗೆ ಒಂದು ‘ಸಾರಿ’ ಹೇಳಬೇಕು ಮತ್ತು ಕೆಲವರಿಗೆ ಅಪರೂಪದ ಜನರನ್ನು ಭೇಟಿಯಾಗಬೇಕು ಎನ್ನುವ ಬಹಳಷ್ಟು ಆಕಾಂಕ್ಷೆಗಳಿರುತ್ತವೆ. ಈ ಚಿತ್ರದಲ್ಲಿ ಇರುವುದು ಗುಣಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿರುವ ಇಬ್ಬರು ವ್ಯಕ್ತಿಗಳು. ಇವರಲ್ಲಿರುವ ಸಾಮಾನ್ಯ ಸಂಗತಿ ಎಂದರೆ ಇಬ್ಬರಿಗೂ ಗುಣವಾಗದ ಕ್ಯಾನ್ಸರ್ ಇರುವುದು ಮತ್ತು ಸಾವು ಖಚಿತ ಎಂದು ವೈದ್ಯರು ಹೇಳಿರುವುದು.

ಸಾಯುವುದು ಹೇಗೂ ಖಚಿತ ಎಂದಾದಾಗ ಈ ಇಬ್ಬರಲ್ಲಿ ಕಾರ್ಟರ್ ಎನ್ನುವ ವ್ಯಕ್ತಿ ತಾನು ಮಾಡಬೇಕಾದ ಕೆಲಸಗಳ ‘ಬಕೆಟ್ ಲಿಸ್ಟ್’ ತಯಾರಿಸುತ್ತಾನೆ. ಆತನ ಬಳಿ ಅದನ್ನೆಲ್ಲಾ ಪೂರೈಸಲು ಹಣ ಇರುವುದಿಲ್ಲ. ಆದರೆ ಇನ್ನೊಬ್ಬ ವ್ಯಕ್ತಿ ಎಡ್ವರ್ಡ್ ಆತನ ಕನಸುಗಳನ್ನು ನನಸಾಗಿಸಲು ಹಣ ಕೊಡಲು ಮುಂದೆ ಬರುತ್ತಾನೆ. ಭಿನ್ನ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ‘ಬಕೆಟ್ ಲಿಸ್ಟ್’ ಹಿಡಿದು ಕೊಂಡು ಹೋಗುವ ಪ್ರಯಾಣ ಇದೆಯಲ್ಲಾ, ಇದು ನಿರಾಶಾವಾದಿಯಲ್ಲೂ ಆಶಾಭಾವನೆ ಚಿಗುರಿಸುತ್ತದೆ. ಸಾವು ಹತ್ತಿರ ಇದೆ ಎಂದಾಕ್ಷಣ ಇಬ್ಬರಲ್ಲೂ ಒಬ್ಬರನೊಬ್ಬರು ಬಿಟ್ಟಿರಲಾರದ ನಂಟು ಚಿಗುರಿಕೊಳ್ಳುತ್ತದೆ. ಒಬ್ಬರಿಗಾಗಿ ಒಬ್ಬರು ಬದುಕಲು ತೊಡಗುತ್ತಾರೆ.

ಆಕಾಶದಿಂದ ಧುಮುಕುವುದು, ಚೀನಾದ ಮಹಾಗೋಡೆಯ ಮೇಲೆ ಮೊಟಾರ್ ಬೈಕ್ ಓಡಿಸುವುದು, ಹಿಮಾಲಯದ ತುತ್ತ ತುದಿಯಲ್ಲಿ ನಿಂತು ಅಲ್ಲಿನ ಸೌಂದರ್ಯವನ್ನು ಆಸ್ವಾದಿಸುವುದು, ತಾಜ್ ಮಹಲ್ ನೋಡುವುದು ಹೀಗೆ ಹತ್ತು ಹಲವು ಸಂಗತಿಗಳನ್ನು ಮಾಡುತ್ತಾರೆ. ಇದು ಕೇವಲ ಸಾವಿನಂಚಿನಲ್ಲಿ ಚಿಗುರುವ ಸ್ನೇಹ ಸಂಬಂಧ ಎನ್ನ ಬಹುದೇನೋ? ಪರಸ್ವರರಲ್ಲಿ ಹಲವಾರು ಭಿನ್ನ ಸಂಗತಿಗಳು ಇದ್ದರೂ ಒಬ್ಬರ ‘ಬಕೆಟ್ ಲಿಸ್ಟ್’ ಪೂರೈಸಲು ಮತ್ತೊಬ್ಬ ಬದುಕುವ ಕಥೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ವಿಮರ್ಶಕರು ಈ ಚಿತ್ರಕ್ಕೆ ಹಾಸ್ಯ-ನಾಟಕ ಎನ್ನುವ ಲೇಬಲ್ ಹಚ್ಚಿದ್ದರೂ ಇದೊಂದು ಭಾವನಾತ್ಮಕ ಸಂಗತಿಯುಳ್ಳ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಹಾಲಿವುಡ್ ಚಿತ್ರ ರಂಗದ ಇಬ್ಬರು ದಿಗ್ಗಜರಾದ ಜ್ಯಾಕ್ ನಿಕೋಲ್ಸನ್ ಮತ್ತು ಮಾರ್ಗನ್ ಫ್ರೀಮನ್ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಜಸ್ಟಿನ್ ಜ್ಯಾಕ್ ಹ್ಯಾಮ್ ಈ ಸಿನೆಮಾದ ಚಿತ್ರ ಕಥೆ ಬರೆದಿದ್ದಾರೆ. ಈ ಇಬ್ಬರು ದಿಗ್ಗಜ ನಟರ ನಟನೆ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ, ವಿಷಾದ ಭಾವವನ್ನೂ ಮೂಡಿಸುತ್ತದೆ. ಆದರೆ ಸಾವು ಕಣ್ಣೆದುರು ಇರುವಾಗಲೂ ಬದುಕನ್ನು ಅತ್ಯಂತ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಕಳೆಯ ಬೇಕು ಎನ್ನುವ ಸಂದೇಶವನ್ನು ನೀಡುತ್ತದೆ. ಬಿಡುವು ಮಾಡಿಕೊಂಡು ಒಮ್ಮೆ ‘ದಿ ಬಕೆಟ್ ಲಿಸ್ಟ್’ ಸಿನೆಮಾ ನೋಡಿ.

ಚಿತ್ರ ಕೃಪೆ: ಅಮೆಜಾನ್ ಪ್ರೈಮ್ ತಾಣ