ನಮ್ಮ ಕೆಲವು ಕೃಷಿ ತಂತ್ರಜ್ಞರುಗಳಿಗೆ, ಕೃಷಿಕರ ಸಂಘಟನೆಗಳಿಗೆ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತಾ ಇರುತ್ತವೆ. ಕೆಲವರ ಚಟುವಟಿಕೆಗಳನ್ನು ನೋಡುವಾಗ ಕೆಲಸ ಇಲ್ಲದವ ಅಸಂಬದ್ಧವಾಗಿ ಏನೇನೋ ಮಾಡಿದನಂತೆ ಎಂಬ ಗಾದೆ ನೆನಪಾಗುತ್ತದೆ. ಸಂಶೋಧನೆಗಳು, ಸಂಶೋಧನೆ ಮಾಡುವವರಿಗೆ ಕೊಡುವ ಸಲಹೆಗಳು ಕನಿಷ್ಠ ಮುಂದಿನ ಹತ್ತು ವರ್ಷದ ನಂತರದ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯೋಚಿಸಿ ಅದಕ್ಕನುಗುಣವಾಗಿ ನಡೆದರೆ ಮಾತ್ರವೇ ಅದು ಪ್ರಯೋಜನಕಾರಿ. ಇಲ್ಲವಾದರೆ ಅದು ಬರೇ ತಾಕ್ಕಾಲಿಕ ಶಮನ ಎನ್ನಿಸುತ್ತದೆ.
ಕೆಲವು ಸಮಯದ ಹಿಂದೆ ಅಡಿಕೆ, ತೆಂಗಿನ ಮರ ಏರುವ, ಮದ್ದು ಬಿಡುವ ತರಬೇತಿ ಕೊಡುವ ಕಾರ್ಯಕ್ರಮಗಳು ಒಂದು ದೊಡ್ಡ ಸುದ್ದಿಯಂತೆ ಬಿಂಬಿತವಾಗುತ್ತಿದ್ದವು. ಇದು ಒಳ್ಳೆಯ ವಿಚಾರವೇ ಆಗತ್ಯವಾಗಿ ಕೃಷಿ ಕೆಲಸದ ಅನುಭವ ಉಳ್ಳ ಮಾನವ ಸಂಪನ್ಮೂಲದ ಬೇಕು. ಹೊಸ ತಲೆಮಾರಿಗೆ ಕೃಷಿ ಕೆಲಸದ ಅನುಭವ ಇಲ್ಲ. ಬರೇ ಯಾಂತ್ರಿಕ ರೀತಿಯಲ್ಲಿ ಕೆಲಸ ಮಾಡಬಲ್ಲರಷ್ಟೇ. ಈಗ ಹೊಸ ತಲೆಮಾರಿನ ಜನರಿಂದ ನಾವು ತೋಟದ ಅಲ್ಲದೆ ಕೃಷಿ ಹೊಲದ ಕೆಲಸ ಮಾಡಿಸುವುದು ಬಹಳ ಕಷ್ಟವಾಗಲಾರಂಭಿಸಿದೆ. ಮರ ಏರುವ ಮತ್ತು ಇನ್ನಿತರ ಕೃಷಿ ಕೆಲಸಗಳಲ್ಲಿ ನೈಪುಣ್ಯತೆ ಪಡೆದ, ಅವರು ನಮ್ಮ ಅಡಿಕೆ ತೆಂಗಿನ ತೋಟದ ಕೆಲಸಕ್ಕೆ ದೊರೆಯುವಂತಾಗಲಿ ಎಂಬ ಉತ್ತಮ ಆಶಯ ಈ ಕಾರ್ಯಕ್ರಮ ರೂಪಿಸಿದವರದ್ದು. ಇನ್ನೂ ಒಂದು ವಿಚಾರ ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯಗಳಿಸಬಲ್ಲ ಆರೋಗ್ಯಕರ ಉದ್ಯೋಗಾವಕಾಶಗಳು ಹೇರಳ ಇವೆ. ಆದರೆ ಕಾಲ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿ ಇದೆಯೇನೋ ಅನ್ನಿಸುತ್ತದೆ.
ಕೃಷಿ ಕ್ಷೇತ್ರಕ್ಕೆ ಸ್ಥಳೀಯವಾಗಿ ಕೆಲಸಗಾರರ ಲಭ್ಯತೆ ಕಡಿಮೆಯಾಗಲಾರಂಭಿಸಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಜನ ಕೃಷಿ ಕೆಲಸ ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಹೊರತಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಆರಾಮದ ಉದ್ಯೋಗಾವಕಾಶಗಳು ಇವರನ್ನು ಸೆಳೆಯುತ್ತಿವೆ. ಯುವ ಜನ ಮೈ-ಕೈ ಮಣ್ಣು ಮೆತ್ತಿಕೊಳ್ಳಲು, ಬೆವರು ಸುರಿಸಲು ಇಷ್ಟ ಪಡದ ಸ್ಥಿತಿ ಈಗ ಇದೆ. ಸಮಾಜವೂ ಕೃಷಿ ಕೆಲಸ ಮಾಡುವವರನ್ನು ಸ್ವಲ್ಪ ಕೀಳಾಗಿಯೇ ಕಾಣುತ್ತದೆ. ಬೇರೆ ಪ್ರದೇಶಗಳಲ್ಲೂ ಸುಮಾರಾಗಿ ಇದೇ ಪರಿಸ್ಥಿತಿ ಇದೆ. ಸಮಾಜದಲ್ಲಿ ೯೫% ಜನ ವಿದ್ಯೆ ಕಲಿಯುತ್ತಾರೆ. ಬೇರೆ ಉದ್ಯೋಗ ಅಥವಾ ಸ್ವ ಉದ್ಯೋಗ ಅರಸುತ್ತಾರೆ. ಉಳಿದ ೫% ಜನ ಎಲ್ಲಾ ಕೆಲಸಕ್ಕೆ ಆಗಬೇಕು.
ಕೆಲಸಗಾರ ವರ್ಗವನ್ನು ನಾವು ಸೆಳೆಯಬೇಕೇ ವಿನಹ ಅವರು ನಮ್ಮತ್ತ ಬರಲಾರರು. ಅವರಿಗೆ ಸಂಪಾದನೆಗೆ ಕೃಷಿ ಕ್ಷೇತ್ರವೊಂದೇ ಆಗಬೇಕಾಗಿಲ್ಲ. ಸಾಕಷ್ಟು ಆಯ್ಕೆಗಳಿವೆ. ಒಬ್ಬನನ್ನು ಕೆಲಸಕ್ಕೆ ಬಾ ಎಂದರೆ ಬಿಡುವಿಲ್ಲ ಎನ್ನುತ್ತಾನೆ. ಅದೇ ನಿನಗೆ ತಿಂಗಳ ಸಂಬಳ ಕೊಡುತ್ತೇನೆ. ಬರೇ ಮ್ಯಾನೇಜರ್ ಆಗಿ ಇದ್ದುಕೋ ಎಂದರೆ ಅದಕ್ಕೆ ಸಾಕಷ್ಟು ಜನ ಇದ್ದಾರೆ ಎಂಬುದನ್ನು ಎಲ್ಲರೂ ಗಮನಿಸಿರಬಹುದು. ಕೆಲಸಗಾರರ ಈ ಮನೋಸ್ಥಿತಿ ಈ ರೀತಿ ಬದಲಾಗುತ್ತಿರುವುದು. ಬಹುಷಃ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಲಿದೆ.
ಇದರ ಬದಲು ನಾವು ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದೇ ಇಲ್ಲ ಪ್ರಸ್ತಾಪಿಸಬೇಕಾದ ವಿಚಾರ ಮೇಲೆ ಹೇಳಿದಂತೆ ಕೆಲಸಗಾರರು ನಮಗೆ ಉದ್ಯೋಗಕ್ಕೆ ಕೃಷಿ ಕ್ಷೇತ್ರ ಆಗಬಹುದು ಎಂದು ಆಯ್ಕೆ ಮಾಡುವಷ್ಟು ನಮ್ಮ ಕೃಷಿ ಸರಳೀಕರಣ ಆಗಬೇಕಿದೆ. ಇದಕ್ಕೆ ಸಹಕಾರೀ ಮಾದರಿಯ ಕೃಷಿ ವ್ಯವಸ್ಥೆ ಅನುಕೂಲಕರ. ಇದರ ಸಾಧ್ಯಾಸಾಧ್ಯತೆ ಸದ್ಯಕ್ಕೆ ಕಷ್ಟ. ಕಾರಣ ಇಲ್ಲ ಎಲ್ಲರೂ ಕೃಷಿಕರೇ! ಭಾರತೀಯರಿಗೆ ಕೃಷಿ ಭೂಮಿಯ ಒಡೆತನ ಒಂದು ಗೌರವದ ಸಂಗತಿ. ಜೀವ ಬಿಟ್ಟರೂ ಭೂಮಿ ಬಿಡಲೊಲ್ಲೆವು ನಾವು!
ಸಧ್ಯಕ್ಕೆ ಇದಕ್ಕಿರುವ ಪರಿಹಾರ. ಬೆಳೆಗಳನ್ನು ನಿರ್ವಹಣೆಗೆ ಅನುಕೂಲವಾಗುವಂತೆ ಸರಳೀಕರಣಗೊಳಿಸುವುದು. ನೆಲದಲ್ಲೇ ನಿಂತು ಸಿಂಪರಣೆ ಮಾಡುವ. ನೆಲದಲ್ಲೇ ನಿಂತು ಫಸಲು ಕಟಾವು ಮಾಡುವ ವ್ಯವಸ್ಥೆಯು ಸರಳೀಕರಣವಾಗಬೇಕು ಆಗ ಹೆಚ್ಚಿನ ಅಡೆತಡೆ ರಹಿತವಾಗಿ ನಿರ್ವಹಣೆ ಮಾಡಲು ಸಾಧ್ಯವಿದೆ. ಇದಕ್ಕೆ ತರಬೇತು ಪಡೆದ ಕೆಲಸಗಾರರ ಅವಶ್ಯಕತೆ ಇರುವುದಿಲ್ಲ. ಕೃಷಿ ಸಂಶೋಧಕರು ಮತ್ತು ಕೃಷಿಕರ ಸಂಘಟನೆಗಳು ಇದನ್ನು ಗಮನಿಸಬೇಕು. ಕೃಷಿಕರು ಸಾಧ್ಯವಾದಷ್ಟು ಸಾಂಪ್ರದಾಯಿಕ ಬೆಳೆ ಕ್ರಮವನ್ನು ಬದಲಾಯಿಸುವತ್ತ ಗಮನ ಹರಿಸಬೇಕು.
ಕೃಷಿ ವಿಜ್ಞಾನಿಗಳು ಈಗಿನ ಮುಗಿಲೆತ್ತರದ ಅಡಿಕೆ, ತೆಂಗಿನ ಮರಗಳ ಬದಲಿಗೆ ಸಾಧ್ಯವಾದಷ್ಟು ಕಡಿಮೆ ಎತ್ತರದಲ್ಲಿ ಫಸಲು ಕೊಡಬಲ್ಲ ತಳಿಗಳ ಬಿಡುಗಡೆಗಾಗಿ ಇನ್ನಷ್ಟು ಶ್ರಮಿಸಬೇಕು. ಈಗ ಅಡಿಕೆ ಮರಗಳಲ್ಲಿ ಕುಬ್ಬ ಗುಣದಲ್ಲಿ ಮತ್ತು ಇಳುವರಿ ಉತ್ತಮ ಕ್ಷಮತೆಯಲ್ಲಿ ಹೊಂದಿರುವ ತಳಿ ಮಂಗಳ. ಇದರ ಮೂಲ ರೂಪ ನಶಿಸಿದೆ. ತಳಿ ಮಿಶ್ರಣವಾಗಿ ಅದು ಬೇರೆಯೇ ರೂಪ ತಳೆದಿರುವುದು ನಮಗೆಲ್ಲಾ ಗೊತ್ತಿದೆ. ಮಂಗಳ ಮೂಲ ತಳಿ ಸುಮಾರು ೩೦ ವರ್ಷ ಪ್ರಾಯವಾದರೂ ಸಹ ೪೦ ಅಡಿಗಿಂತ ಮೇಲೆ ಬೆಳೆಯದ ಹಲವಾರು ಮರಗಳನ್ನು ನಾವು ಗಮನಿಸಿದ್ದೇವೆ. ಇಂತಹ ತಳಿಗಳ ನಿರ್ವಹಣೆ ಸುಲಭ. ಇದಕ್ಕೆ ಏಣಿ ಇಟ್ಟೂ ಸಿಂಪರಣೆ-ಕೊಯಿಲು ಮಾಡಬಹುದು. ನಾಟಿ ಮಾಡಿ ೧೦-೧೫ ವರ್ಷ ತನಕ ನೆಲದಿಂದಲೇ ಈ ಕೆಲಸ ಮಾಡಬಹುದು. ಈ ಮೂಲ ಗುಣ ಹೊಂದಿದ ತಳಿಗಳನ್ನು ಮರಳಿ ಉತ್ಪಾದಿಸಿ ನಿಜ ಬೀಜಗಳನ್ನು ರೈತರಿಗೆ ಕೊಡುವ ಮೂಲಕ ಅಡಿಕೆ ಬೇಸಾಯದಲ್ಲಿ ನಿರ್ವಹಣೆಯ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡಬಹುದು.
ಕೃಷಿಕರ ವಿಚಾರದಲ್ಲಿ ಹೇಳುವುದಾದರೆ ತುಂಬಾ ಎತ್ತರವಾಗಿ ಬೆಳೆದಿರುವ ಅಡಿಕೆ ಮರಗಳನ್ನು ಸ್ವಲ್ಪ ಸ್ವಲ್ಪವೇ ಕಡಿದು ತೆಗೆದು ಅಲ್ಲಿಗೆ ನಿರ್ವಹಣೆಗೆ ಸುಲಭವಾಗುವ ತಳಿಗಳನ್ನು ಬೆಳೆಸಬೇಕು. ಹಳೆಯ ಮರಗಳ ವ್ಯಾಮೋಹವೇ ಕೃಷಿಯಲ್ಲಿ ನಿರ್ವಹಣೆಗೆ ಸಮಸ್ಯೆಯಾಗಿರುವುದು.
ಶುದ್ಧ ತಳಿಯ ಬೀಜೋತ್ಪಾದನೆಯನ್ನು ಸಂಶೋಧನಾ ಕೇಂದ್ರಗಳೇ ಮಾಡಬೇಕಾಗಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಶುದ್ಧ ಗುಣದ ಬೀಜಗಳನ್ನು ಉತ್ಪಾದಿಸಿ ಕೊಡುವುದು ಸುಲಭವೂ ಅಲ್ಲ. ಅದನ್ನು ರೈತ ಸಂಘಟನೆಗಳು ವಿಜ್ಞಾನಿಗಳ ಮೂಲಕ ತರಬೇತಿ ಪಡೆದು ಅದನ್ನು ಮಾಡಬಹುದು. ಬೀಜೋತ್ಪಾದನೆ. ಸದ್ಯೋತ್ಪಾದನಾ ಕ್ಷೇತ್ರವನ್ನು ಲಾಭದಾಯಕವಾಗಿ ನಡೆಸಬಹುದು. ತೆಂಗು ಬೆಳೆಯಲ್ಲಿ ಸಾಧಾರಣ ಕುಬ್ಬಗುಣದ ಮೂಲಕ ಇಳುವರಿ ಕೊಡಬಲ್ಲ ತಳಿ (DXT ಹೈಬ್ರಿಡ್ ತಳಿ) ಉತ್ಪಾದನೆಗೆ ಕೆಲವು ಖಾಸಗಿ ಸಂಸ್ಥೆಗಳು ಕೈಹಾಕಿ ಉತ್ತಮ ಕೆಲಸವನ್ನು ಮಾಡಿವೆ. ಭವಿಷ್ಯದಲ್ಲಿ ಅಡಿಕೆ ಬೆಳೆಯಲ್ಲೂ ಈ ತಂತ್ರಜ್ಞಾನದ ಮೂಲಕ ಸಷ್ಟೋತ್ಪಾದನೆ ಮಾಡುವುದಕ್ಕೆ ಹೇರಳ ಅವಕಾಶ ಇದ್ದು. ಇದು ಸಾಕಷ್ಟು ಉದ್ಯೋಗಾವಕಾಶವನ್ನೂ, ವರಮಾನವನ್ನೂ ತಂದು ಕೊಡಬಲ್ಲುದು.
ಅಡಿಕೆ-ತೆಂಗಿನ ಮರ ಏರಲು ಆಸಕ್ತರು ಇದ್ದರೆ ಅವರಿಗೆ ತರಬೇತಿ ಕೊಟ್ಟು (ಈಗಾಗಲೇ ಹಲವಾರು ಮಂದಿ ಇಂತಹ ತರಬೇತಿಯನ್ನು ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ) ಅವರನ್ನು ಕೃಷಿ ಕ್ಷೇತ್ರದಲ್ಲಿ ಉಳಿಸಿಕೊಳ್ಳುವುದು ನಡೆಯುತ್ತಲೇ ಇರಲಿ, ಯಾವುದೇ ಸಮಯದಲ್ಲೇ ಈ ಪ್ರಯತ್ನವೂ ಕೈಕೊಡುವ ಸಂದರ್ಭ ಬಂದಾಗ ಬೆಳೆಗಾರರು ತಮ್ಮ ತೋಟ ನಿರ್ವಹಣೆಗೆ ಏನು ಮಾಡುವುದು ಎಂಬ ಚಿಂತನೆಯೂ ಇರಲಿ ಕೃಷಿಕರಿಗೆ ಕೃಷಿ ಬದುಕಿಗೆ ಅನಿವಾರ್ಯ. ಆದರೆ ಕೆಲಸಗಾರರಿಗೆ ಬದುಕಲು ಕೃಷಿ ಕ್ಷೇತ್ರವೇ ಅನಿವಾರ್ಯವಲ್ಲ ಈ ಸಂಗತಿಯನ್ನು ಎಲ್ಲರೂ ತಿಳಿದು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಯನ್ನು ಯೋಚಿಸಿ ಪರಿಹಾರಕ್ಕೆ ಸಿದ್ದರಾಗಬೇಕು.
ಚಿತ್ರ : ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!