ದೇಶಿ ತಳಿ ಜಾನುವಾರುವಿನ ಸಗಣಿ ಶ್ರೇಷ್ಠ, ಮೂತ್ರ ಔಷಧಿಗೆ ಬಳಕೆ ಮಾಡಬಹುದು ಇತ್ಯಾದಿ ಮಾಧ್ಯಮಗಳಲ್ಲಿ ಸದಾ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಈ ರೀತಿ ಯಾವುದು ಶ್ರೇಷ್ಠ ಯಾಕೆ? ಅದರ ಹಿನ್ನೆಲೆ ಏನಿರಬಹುದು ಅಥವಾ ಒಂದು ವೇಳೆ ಶ್ರೇಷ್ಠತೆ ಇದ್ದರೆ ಅದಕ್ಕೆ ಮೂಲ ಕಾರಣ ಯಾವುದಿರಬಹುದು? ಈ ವಿಷಯಕ್ಕೆ ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿಷಯ ತಾಳೆ ಹಾಕಿ ಒಂದು ಸಣ್ಣ ಪ್ರಯತ್ನದ ಭಾಗವೇ ಈ ಲೇಖನ.
ನಮ್ಮಲ್ಲಿ ದೇಶಿ ತಳಿಗಳು ತಲೆ ತಲಾಂತರದಿಂದ ಬಂದಿರುವ ತಳಿ. ಅವುಗಳ ಸಾಕಾಣಿಕೆಗೆ ಅನುಗುಣವಾಗಿ ಹಾಲು ನೀಡಿ, ಕೃಷಿ ಕೆಲಸಕ್ಕೂ ಬಳಕೆಯಾಗುವಂತಹ ಪರಿಸ್ಥಿತಿ ಹಿಂದಿನಿಂದಲೂ ಇದೆ. ಈಗ ಅದು ಕಡಿಮೆಯಾಗುತ್ತಿದೆ. ೧೯೭೦-೮೦ರ ದಶಕದಲ್ಲಿ ಹಾಲು ಉತ್ಪಾದನೆ ಹೆಚ್ಚು ಮಾಡಬೇಕೆಂಬ ಕಾರಣದಿಂದ ತಳಿ ಸಂಕರಣ ಮಾಡಲು ಪ್ರಾರಂಭಿಸಿ ೩೦-೪೦ ವರ್ಷಗಳಲ್ಲಿ ಮಿಶ್ರತಳಿ ರೈತರ ಮನೆಮಾತಾಗಿದೆ.
ದೇಶಿ ತಳಿ ಆಕಳುಗಳಿಗೆ ಮುಖ್ಯ ಆಹಾರ ಒಣಹುಲ್ಲು ಮಾತ್ರ ಅಂದರೆ ಒಣ ಹುಲ್ಲು ಮಾತ್ರ. ಅವುಗಳಿಗೆ ಆಹಾರ ಮಿಶ್ರಣ ಎಂದು ಹಾಕುವ ಪದ್ಧತಿ ಇಲ್ಲ. ಅವುಗಳು ಪರಿಸರದಲ್ಲಿ ಅಭ್ಯವಿರುವಂತ ಒಣ ಹುಲ್ಲು, ಹಸಿಹುಲ್ಲು, ಸಸ್ಯ, ಸೊಪ್ಪು ಸದೆಯನ್ನು ತಿಂದು ಹಾಲು ಉತ್ಪಾದಿಸುತ್ತವೆ. ಅದೇ ಎಚ್.ಎಫ್. ಜರ್ಸಿ ಮಿಶ್ರತಳಿಗಳನ್ನು ನಾವು ಹಾಕುವ ಕೃತಕವಾದ ಆಹಾರ ಮಿಶ್ರಣ, ಒಂದೇ ಜಾತಿಯ ಹಸಿ ಹುಲ್ಲು, ಒಣ ಹುಲ್ಲು ಸೇವಿಸಿ ಹಾಲು ಉತ್ಪಾದಿಸುತ್ತವೆ. ಇಲ್ಲಿ ಹೆಚ್ಚು ಹಾಲು ಉತ್ಪಾದನೆಗೆ ಒತ್ತು ನೀಡುವುದರಿಂದ ಮಿಶ್ರತಳಿಯನ್ನು ಪರಿಸರದಿಂದ ದೂರ ಮಾಡಿ ಅವುಗಳಿಗೆ ನ್ಯಾಯವಾಗಿ ಏನು ಆಹಾರ ಬೇಕೋ ಅದನ್ನು ನೀಡದೇ ನಮಗೆ ಅನುಕೂಲವಾಗುವಂತಹ, ಸುಲಭವಾಗುವಂತಹ ತಯಾರಿಸಿದ ಆಹಾರ ಮಿಶ್ರಣ, ಹುಲ್ಲು ಹಾಕುವುದನ್ನು ಕಾಣುತ್ತೇವೆ.
ಜಾನುವಾರು ಜೀರ್ಣ ಕ್ರಿಯೆ ಬಗ್ಗೆ ಗಮನ ಹರಿಸೋಣ. ಜಾನುವಾರುವಿನ ಮೂಲ ಆಹಾರ ಹುಲ್ಲು ಮಾತ್ರ. ಹುಲ್ಲು ಅಂದರೆ ಹುಲ್ಲು ಮಾತ್ರ. ಹಸಿ ಹುಲ್ಲು ಸೊಪ್ಪು ನಂತರದ ಆಯ್ಕೆ. ಕೊನೆಗೆ ಬರುವುದು ಆಹಾರ ಮಿಶ್ರಣ. ಅಂದರೆ ಜಾನುವಾರುಗಳು ನಾರಿನ ಅಂಶವಿರುವ ಪದಾರ್ಥಗಳನ್ನು ಮಾತ್ರ ತಿಂದು ಬದುಕುವಂತಹ ಪ್ರಾಣಿ. ಈ ನಾರಿನ ಅಂಶ ಕಾಯ್ದುಕೊಂಡಲ್ಲಿ ಮಾತ್ರ ಜಾನುವಾರು ಆರೋಗ್ಯ ಕಾಪಾಡಿಕೊಂಡು ಹಾಲು ಉತ್ಪಾದನೆ ಸಾಧ್ಯ. ನಾರಿನ ಅಂಶ ಇಲ್ಲದೇ ಬರೀ ಆಹಾರ ಮಿಶ್ರಣ ನೀಡಿದಲ್ಲಿ ಜಾನುವಾರುಗಳು ಹೆಚ್ಚೆಂದರೆ ಒಂದು ವರ್ಷ ಬದುಕುತ್ತವೆ. ಇದಕ್ಕೆ ಉದಾಹರಣೆ ಕೋರೆ ಹಲ್ಲು ಇರುವಂತ ಜಾನುವಾರುಗಳನ್ನು ತೆಗೆದುಕೊಳ್ಳಬಹುದು. ಅವುಗಳು ಹಸಿ ಹುಲ್ಲು ತಿಂದು ಮೆಲಕು ಹಾಕುತ್ತವೆ. ಆಹಾರ ಮಿತ್ರಣ ತಿನ್ನುತ್ತವೆ. ಆದರೆ ಒಣ ಹುಲ್ಲು ತಿನ್ನಲಾಗದೇ ಸಿಂಬೆ ಮಾಡಿ ಉಗಿಯುತ್ತವೆ. ಅಂತಹ ಹಾನುವಾರುಗಳಿಗೆ ನಾವು ಉತ್ತಮ ಆಹಾರ ಮಿಶ್ರಣ ನೀಡಿದರೂ ಬಹಳ ಕಾಲ ಬದುಕುಳಿಯಲು ಸಾಧ್ಯವಿಲ್ಲ.
ಈಗ ಜಾನುವಾರುಗಳ ಮೂಲ ಆಹಾರ ಒಣ ಹುಲ್ಲು ಮಾತ್ರ ಎನ್ನುವುದನ್ನು ತಿಳಿದಾಯಿತು. ಇದು ಮೂಲ ಆಹಾರ ಮಾತ್ರ ಅಲ್ಲ ಪಾನುವಾರುಗಳ ಜೀರ್ಣಕ್ರಿಯೆಗೂ ಇದೇ ಮಹತ್ವ ಪಡೆದುಕೊಂಡಿದೆ. ಒಣ ಹುಲ್ಲು ಸೇವಿಸಿದ ಪ್ರಾಣಿಗಳಲ್ಲಿ ಹೊಟ್ಟೆಯ ರಸಸಾರ (ಪಿ.ಎಚ್) ೬-೭ ಆಸುಪಾಸು ಇರುತ್ತದೆ. ಇಂತಹ ರಸಸಾರ ವಾತಾವರಣದಲ್ಲಿ ಕ್ರಿಮಿಗಳು, ಬ್ಯಾಕ್ಟಿರಿಯಾಗಳು ಹೆಚ್ಚು ವೃದ್ಧಿಯಾಗುತ್ತದೆ. ಇದೇ ಜಾನುವಾರುವಿಗೆ ಮುಂದೆ ಎಲ್ಲಾ ಆರೋಗ್ಯ ಹಾಗೂ ಉತ್ಪಾದನೆಗೆ ಮೂಲ ಅಂಶವಾಗಿದೆ. ಸದರಿ ಕ್ರಿಮಿಗಳು, ಬ್ಯಾಕ್ಟಿರಿಯಾಗಳು ಮುಂದಿನ ಹೊಟ್ಟೆಗಳಿಗೆ ಸಾಗಿ ಅಲ್ಲಿ ಜೀರ್ಣಗೊಂಡು ಪ್ರೋಟೀನಿನ ಸಪ್ಲಿಮೆಂಟ್ ಮಾಡುತ್ತದೆ. ಕೊನೆಗೆ ಕರುಳಿನವರೆಗೂ ರಸಸಾರ ೬-೭ ಇರುವುದರಿಂದ ಕರುಳಿನಲ್ಲೂ ಸಹಕಾರಿ ಬ್ಯಾಕ್ಟಿರಿಯಾಗಳು ವೃದ್ದಿಯಾಗಿ ದ್ರವದ ಭಾಗವು ಸಂಪೂರ್ಣ ಕರುಳನ್ನು ಹೀರಿಕೊಂಡು ನಂತರ ಸಗಣಿಯಾಗಿ ಹೊರಬರುತ್ತದೆ.
ಅದೇ ಆಹಾರವನ್ನು ನಾವು ಬದಲಾಯಿಸಿ ಆಹಾರ ಮಿಶ್ರಣ ನೀಡಲು ಪ್ರಾರಂಭಿಸಿದರೆ ನಾರಿನಂಶ ಇಲ್ಲದೆ ಜಾನುವಾರುಗಳು ಪ್ರಥಮ ಹೊಟ್ಟೆಯಲ್ಲಿ (ರುಮೆನ್)ನಲ್ಲಿ ನಾರನ್ನು ಜೀರ್ಣ ಮಾಡಿ ವೃದ್ಧಿಯಾಗುವ ಬ್ಯಾಕ್ಟರಿಯಾಗಳು, ಕ್ರಿಮಿಗಳು ಆಹಾರವಿಲ್ಲದೇ ನಶಿಸಿ ಹೋಗಿ ಆಹಾರ ಮಿಶ್ರಣ ಕೊಳೆಯಲು ಪ್ರಾರಂಭಿಸಿ ಅಸಿಟಿಕ್ ಆಮ್ಲ, ಬ್ಯುಟರಿಕ್ ಆಮ್ಲ ಪ್ರೋಪಿಯೋನಿಕ್ ಆಮ್ಲದ ಬದಲು ಲ್ಯಾಕ್ಟಿಕ್ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆಯ ರಸಸಾರವನ್ನು ೫ಕ್ಕಿಂತ ಕಡಿಮೆ ಮಾಡಿ Acidosisಗೆ ಮೂಲ ಕಾರಣವಾಗುತ್ತದೆ. ಆಗ ಎಲ್ಲಾ ಪ್ರೊಬೈಯೋಟಿಕ್ಸ್ ಕ್ರಿಮಿಗಳು ನಶಿಸಿ ಹೋಗಿ ನಂತರ ಅದೇ ರಸಸಾರ ಹೊಟ್ಟೆಗಳಿಗೆ ಮುಂದುವರೆದು ಕರುಳಿನಲ್ಲಿ ಸಹ ಬ್ಯಾಕ್ಟಿರಿಯಾಗಳು ನಶಿಸಿ ಹೋಗುತ್ತದೆ. ಆಗ ನೀರಿನ ಅಂಶವನ್ನು ಸರಿಯಾಗಿ ಹೀರಿಕೊಳ್ಳಲಾಗದೇ ಸಗಣಿ ತೆಳ್ಳಗಾಗುತ್ತದೆ ಹಾಗೂ ವಾಸನೆಯುಕ್ತವಾಗಿರುತ್ತದೆ.
ಅಂದರೆ ಒಣ ಹುಲ್ಲು ಪರಿಸರದಲ್ಲಿಯ ಸೊಪ್ಪು, ಹಸಿ ಹುಲ್ಲು ತಿಂದುಕೊಂಡು ಬಂದಂತಹ ಜಾನುವಾರುಗಳಲ್ಲಿ ಸಗಣಿಯ ರಸಸಾರ ೬-೭ ರಲ್ಲೇ ಇರುತ್ತದೆ. ನಾವು ಕೃತಕವಾಗಿ ಅಹಾರ ಮಿಶ್ರಣ ಒಂದೇ ಬಗೆಯ ಹುಲ್ಲು ತಿನ್ನುವಂತೆ ಕಟ್ಟಿ ಹಾಕಿ ಯಾವುದೇ ವ್ಯಾಯಾಮವಿಲ್ಲದೇ ಗಾಳಿ ಬೆಳಕು ಸಾಕಷ್ಟು ತೆರೆದುಕೊಳ್ಳದೇ ಇರುವ ಪ್ರಾಣಿಗಳ ಸಗಣಿಯ ರಸಸಾರ ೬ ಮತ್ತು ೬ ಕ್ಕಿಂತ ಕಡಿಮೆ ಇರಲೇಬೇಕು.
ಅಂದರೆ ಆರು ರಸಸಾರ ಇರುವಂತ ಜಾನುವಾರುಗಳ ಸಗಣಿಯಲ್ಲಿ ಪರಿಸರಕ್ಕೆ ಒಳ್ಳೆಯದನ್ನು ಮಾಡುವ ಬ್ಯಾಕ್ಟಿರಿಯಾಗಳು ಸಾಕಷ್ಟು ಇರುತ್ತದೆ. ಅದೇ ರಸಸಾರ 5ಕ್ಕಿಂತ ಕಡಿಮೆ ಇರುವಲ್ಲಿ ಆಮ್ಲೀಯತೆಯಿಂದ ಬ್ಯಾಕ್ಟಿರಿಯಾಗಳು ನಶಿಸಿ ಹೋಗಿರುವುದರಿಂದ ಒಟ್ಟಾರೆ ಗೊಬ್ಬರದ ಗುಣಮಟ್ಟ (ಸಗಣಿ) ಕಡಿಮೆ ಇರುತ್ತದೆ. ಸಗಣೆಯಲ್ಲಿ ಕೋಟಿ ಕೋಟಿ ಬ್ಯಾಕ್ಟಿರಿಯಾಗಳು ವೃದ್ಧಿಯಾಗಿರುತ್ತವೆ. ಇದೇ ನಮ್ಮ ಕೃಷಿಗೆ, ಭೂಮಿಗೆ, ಮಣ್ಣಿಗೆ ಮಾತ್ರವಲ್ಲದೇ ನಮ್ಮ ಜೀವನಕ್ಕೆ ಅದ್ಭುತವಾಗಿ ಲಭ್ಯವಾಗುತ್ತದೆ. ಅದಕ್ಕೆ ನಮ್ಮ ಪೂರ್ವಜರು ಹೇಳಿರುವ ದೇಶಿ ತಳಿಗಳಲ್ಲಿ 33 ಕೋಟಿ ದೇವತೆಗಳಿರುತ್ತವೆ ಎಂದು. ಅದು ನೀಡುವ ಸಗಣಿಯಲ್ಲಿ ದೇವತೆಗಳಿಗೆ ಸಮಾನವಾದ ಅಂಶಗಳುಳ್ಳ ಕೋಟಿ ಕೋಟಿ ಬ್ಯಾಕ್ಟೀರಿಯಾಗಳೇ ನಿಜವಾದ ನಮ್ಮ ದೇವತೆಗಳಲ್ಲವೇ? ಅದೇ ಸಗಣಿಯ ಗುಣಮಟ್ಟ ಹಸಿ ಹುಲ್ಲನ್ನು ಮಾತ್ರ ತಿನ್ನುವಂತ ಪ್ರಾಣಿಗಳಲ್ಲಿ ಕಡಿಮೆಯಾಗುತ್ತ ಬರೀ ಆಹಾರ ಮಿಶ್ರಣ ಹೆಚ್ಚು ತಿನ್ನುವಂತವುಗಳಲ್ಲಿ ಅತೀ ಕಡಿಮೆ ಗುಣಮಟ್ಟದ್ದಾಗಿರುತ್ತದೆಯೆಂದು ಬೇರೆ ಹೇಳಬೇಕಾಗಿಲ್ಲ.
ಇನ್ನು ವಾಸ್ತವ ಪರಿಸ್ತಿತಿಯತ್ತ ಗಮನ ಹರಿಸೋಣ. ಈಗಿನ ದೇಶಿ ತಳಿಗಳಿಗೆ ಹಿಂದೆ ಲಭ್ಯವಾಗುತ್ತಿದ್ದಂತಹ ಒಣಹುಲ್ಲು, ಸೊಪ್ಪುಸದೆ, ಹಸಿ ಹುಲ್ಲು ಹಾಗೂ ಆಯ್ದುಕೊಂಡು ಬರುವಂತ ವಿಶಾಲ ವಾತಾವರಣ ಇದೆಯೇ ಎನ್ನುವಂತ ಪ್ರಶ್ನೆ ಎದುರಾಗುತ್ತದೆ.
ನೈಸರ್ಗಿಕ ಹುಲ್ಲು ಬೆಳೆಯುವ ಕ್ಷೇತ್ರವನ್ನು ಯುಪಟೋರಿಯಂ ಅಕ್ರಮಿಸಿಕೊಂಡಿದೆ. ಗೋಮಾಳ ಮಾಯವಾಗಿದೆ. ಅರಣ್ಯ ಇಲಾಖೆಯವರು ನಮ್ಮ ಹಸುವನ್ನು ಹೊರಗಿನವರೆಂದು ಪರಿಗಣಿಸಿ ಅಗಳ ತೋಡಿ ಕಾವಲು ಕಾಯುತ್ತಿದ್ದಾರೆ. ಕಾಡು ಜಾನುವಾರುಗಳೆಲ್ಲ ಅಲ್ಲಿಯೂ ಮೇವಿಲ್ಲದೇ ರೈತ ಜಮೀನಿಗೆ ಲಗ್ಗೆ ಇಡುತ್ತಿವೆ. (ಆಕೇಶಿಯಾ, ನೀಲಗಿರಿ ಹಾಗೂ ಸಾಗುವಾನಿ ಕಾರಣದಿಂದ). ರೈತರೆಲ್ಲಾ ತಮ್ಮ ಜಮೀನಿನಲ್ಲಿ ತೋಟ ಮಾಡಿ ಬೇಲಿ ಹಾಕಿ ರಕ್ಷಣೆ ಮಾಡಿಕೊಂಡಿದ್ದಾರೆ. ಬಡ ದೇಶಿ ಜಾನುವಾರುಗಳಿಗೆ ರಸ್ತೆಯ ಅಕ್ಕಪಕ್ಷವೇ ಗೋಮಾಳವಾಗಿದೆ. ಅವುಗಳಿಗೆ ಪ್ರಾಣ ಕಳೆದುಕೊಳ್ಳುವ ಸ್ಥಳವೂ ಅದೇ ಆಗಿದೆ.
ಈ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲಿ ಜಾನುವಾರುಗಳು ಕಸ, ಮುಸರೆ, ತ್ಯಾಜ್ಯ ವಸ್ತುಗಳನ್ನು ತಿಂದು ಬದುಕುವಂತಾಗಿದೆ. ಅಂಥಹ ದೇಶಿ ತಳಿಯ ಜಾನುವಾರುಗಳು ಯಾವ ಗುಣಮಟ್ಟದ ಸಗಣಿ, ಹಾಲು ಮತ್ತು ಮೂತ್ರ ನೀಡಲು ಸಾಧ್ಯ? ಅದೇ ರೀತಿ ಜಾನುವಾರು ಹಾಲಿನ ಗುಣಮಟ್ಟವೂ ಸಹ ಅವುಗಳು ಸೇವಿಸುವ ಆಹಾರವನ್ನು ಅವಲಂಬಿಸಿದೆ. ಈಗಿತ್ತಲಾಗಿ ರೈತರು ಅನುಭವಿಸುತ್ತಿರುವ SNF-Fat ಸಮಸ್ಯೆಗಳು ದೇಶಿ ತಳಿಗಳು ಹಾಗೂ ಎಮ್ಮೆಗಳಲ್ಲಿ ಯಾವ ಸಮಯದಲ್ಲೂ ಕಂಡು ಬಂದಿರುವುದಿಲ್ಲ. ಹೆಚ್ಚು ಹಾಲು ಪಡೆಯಬೇಕೆಂಬ ಒಂದೇ ಉದ್ದೇಶದಿಂದ ಆಹಾರ ಮಿಶ್ರಣ ನೀಡುವುದು ಇದಕ್ಕೆಲ್ಲಾ ಮೂಲ ಕಾರಣ, ದೇಶಿ ತಳಿಗಳು ಮೆಯಲು ಹೋಗುವುದರಿಂದ ಎಲ್ಲಾ ಬಗೆಯ ಔಷಧಿಯ ಗುಣಗಳುಳ್ಳ ಸಸ್ಯಗಳನ್ನು ತಿನ್ನುವುದರಿಂದ ಹಾಲು ಕಡಿಮೆ ನೀಡಿದರೂ ಗುಣಮಟ್ಟದ್ದಾಗಿರುತ್ತದೆ ಹಾಗೂ ೦-೨ ಪ್ರೋಟನ್ ದೇಶಿ ತಳಿಗಳಲ್ಲಿ ಹೆಚ್ಚು ಕಂಡುಬರುವುದಕ್ಕೆ ಬಹುಶಃ ಕಾರಣ ಇದೇ ಇರಬಹುದು.
ಇನ್ನು ಮೂತ್ರದ ವಿಷಯಕ್ಕೆ ಬರೋಣ. ಮೂತ್ರವು ಜಾನುವಾರು ದೇಹದಲ್ಲಿ ಕಲ್ಕಶ ಹೊರಹಾಕುವ ಮಾರ್ಗವಾಗಿದೆ. ದೇಶಿ ಜಾನುವಾರುಗಳ ಮೂತ್ರದಲ್ಲಿ ಹಾಗೂ ಮಿಶ್ರತಳಿ ಜಾನುವಾರುಗಳ ಮೂತ್ರದಲ್ಲಿ ವ್ಯತ್ಯಾಸದ ಬಗ್ಗೆ ವಿಶೇಷವಾಗಿ ಹೇಳಲಾಗದಿದ್ದರೂ ದೇಶಿ ತಳಿಯ ಆಹಾರ ನೈಸರ್ಗಿಕವಾಗಿರುವುದರಿಂದ ಹಾಗೂ ಔಷಧಿಯ ಸಸ್ಯಗಳನ್ನು ಸೇವಿಸುವುದರಿಂದ ಅವುಗಳ ಅಂಶಗಳು ಸಹ ಮೂತ್ರದಲ್ಲಿ ಕಂಡು ಬರುವುದು ಸಹಜ, ವಲಟೈಲ್ ಪ್ಯಾಟಿ ಆಮ್ಲಗಳು ಹಾಗೂ ಏಂಟಿ ಆಕ್ಸಿಡಂಟ್ ಪ್ರಮಾಣ ದೇಶಿ ತಳಿಯ ಮೂತ್ರದಲ್ಲಿ ಹೆಚ್ಚು ಕಂಡುಬರುತ್ತದೆಯೆಂದು ತಿಳಿಯಲಾಗಿದೆ. ಅದನ್ನೇ ಬಟ್ಟಿ ಇಳಿಸಿ ಅರ್ಕ ತಯಾರಿಸಿ ಔಷಧಕ್ಕೆ ಉಪಯೋಗಿಸುತ್ತಿರುವುದನ್ನು ನೋಡಬಹುದಾಗಿದೆ.
ಇನ್ನು ಎಮ್ಮೆಯ ವಿಷಯದ ಬಗ್ಗೆ ಗಮನ ಹರಿಸಿದರೆ ಅನಾದಿ ಅತೀ ನಿರ್ಲಕ್ಷ್ಯಕ್ಕೊಳಗಾದ ಜಾನುವಾರು ಇದು. ಉತ್ತಮ ಹಾಲಿನ ಗುಣಮಟ್ಟ, ರೋಗ ನಿರೋಧಕ ಶಕ್ತಿ ಎಲ್ಲಾ ಹೊಂದಿದ್ದರೂ ಧಾರ್ಮಿಕವಾಗಿ ತಿರಸ್ಕೃತವಾದ ತಳಿ ಇದು. ಬಹುಶಃ ಮಹಿಷಾಸುರ, ಮಹಿಷಿ ಇವರುಗಳು ಎಮ್ಮೆ- ಕೋಣದ ರೂಪದಲ್ಲಿ ನಮಗೆ ಪುರಾಣದ ಕತೆಗಳಲ್ಲಿ ಕಂಡು ಬರುತ್ತದೆ. ಹಾಗೂ ಕೃಷ್ಣನ ಗೋವುಗಳ ಗುಂಪಿನಲ್ಲಿ ಎಮ್ಮೆಗೆ ಅವಕಾಶವಿಲ್ಲದಿರುವುದು ಕಂಡು ಬರುವುದರಿಂದ ನಾವು ಎಮ್ಮೆಯನ್ನು ಅನುಕೂಲಕ್ಕಾಗಿ ಮಾತ್ರ ಬಳಸಿಕೊಂಡು ಧಾರ್ಮಿಕವಾಗಿ ದೂರ ಇರಿಸಿರುತ್ತೇವೆ. ಮೇಯಲು ಅವಕಾಶ ಹೊರಗಿನ ಪರಿಸರಕ್ಕೆ ಪೂರಕವಾಗಿ ಆಹಾರ ನೀಡಿ ಸಾಕಣೆ ಮಾಡಿದಲ್ಲಿ ಎಮ್ಮೆ ವೈಜ್ಞಾನಿಕವಾಗಿ ಅದರ ಸಗಣಿ, ಹಾಲು, ಮೂತ್ರ ದೇಶಿ ತಳಿಗೆ ಸಮಾನಾಂತರ ಮಹತ್ವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಕೊಟ್ಟಿಗೆಯಲ್ಲಿ ಉಣ್ಣೆಯನ್ನು ಹೋಗಲಾಡಿಸಲು ಔಷಧಿ ಬಳಕೆಯಾಗುತ್ತದೆ. ಪ್ರತಿಯೊಬ್ಬ ರೈತರ ಕೊಟ್ಟಿಗೆಯಲ್ಲಿ ಉಣಗಿನ ಔಷಧಿ ಖಾಯಂ ಸದಸ್ಯ. ಇಂಥಹ ಉಣಗಿನ ಔಷಧಿಯನ್ನು ಬಳಸಿ ಅದು ಸಗಣಿ ಗೊಬ್ಬರ ಸಂಗಡ ಸೇರಿದಲ್ಲಿ ಸಗಣಿಯಲ್ಲಿ ಕಂಡು ಬರುವ ಅಷ್ಟು ಬ್ಯಾಕ್ಟಿರಿಯಾಗಳು ನಶಿಸಿ' ಅದು ಕೀಟನಾಶಕವಾಗಿ ಮಾರ್ಪಾಡಾಗಿ ಪರೋಕ್ಷವಾಗಿ ಭೂಮಿಗೆ ಹಾನಿಕಾರವಾಗಿದೆ. ಇದು ದೇಶಿತಳ, ಮಿಶ್ರತಳಿ ಹಾಗೂ ಎಮ್ಮೆಯ ಕೊಟ್ಟಿಗೆಯ ಎಲ್ಲಾ ತಳಿಗೂ ಅನ್ವಯವಾಗುತ್ತದೆ.
ಹಿಂದಿನ ಕಾಲದಲ್ಲಿದ್ದಂತೆ ದೇಶಿ ಜಾನುವಾರುಗಳಿಗೆ ಇರುವ ಮೇವಿನ ಲಭ್ಯತೆ, ಪರಿಸರ, ಗೋಮಾಳ ಮತ್ತು ಅರಣ್ಯದಲ್ಲಿ ಮೇಯಲು ಅವಕಾಶ ಯಾವುದು ಇಲ್ಲದಿರುವಾಗ ಅವುಗಳ ಸಗಣಿ, ಹಾಲು ಹಾಗೂ ಮೂತ್ರ ಉತ್ತಮ ಗುಣಮಟ್ಟದಾಗಿರುತ್ತದೆಯೆಂದು ಹೇಳಲು ಕಷ್ಟಸಾದ್ಯ ಮತ್ತು ಮಿಶ್ರತಳಿ ಜಾನುವಾರುಗಳನ್ನು ಹಾಲಿನ ಉದ್ದೇಶಕ್ಕಾಗಿ ಮಾತ್ರ ಸಾಕಾಣಿಕೆ ಮಾಡುತ್ತಿರುವುದರಿಂದ ಅವುಗಳಿಂದಲೂ ಇದನ್ನು ನಿರೀಕ್ಷೆ ಮಾಡಲಾಗದು.
ಒಬ್ಬ ಮನುಷ್ಯ ಹುಟ್ಟದ ಜಾತಿಯಿಂದ ಮಾತ್ರ ಶ್ರೇಷ್ಠ ಎನಿಸಿಕೊಳ್ಳಲು ಸಾಧ್ಯವಿಲ್ಲ. ಅದು ಅವನ ಸಂಸ್ಕೃತಿ, ಸಾಧನೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಿಂದ ತಿಳಿಯಲಾಗುತ್ತದೆ, ಅದೇ ರೀತಿ ದೇಶಿ ತಳಿಯ ಜಾನುವಾರುಗಳಾದ ತಕ್ಷಣ ಅವುಗಳ ಮಲ, ಮೂತ್ರ, ಹಾಲು ಶ್ರೇಷ್ಠ ಎನಿಸಿಕೊಳ್ಳಲು ಸಾಧ್ಯವೇ? ಅವುಗಳಿಗೆ ಪೂರಕ ವಾತಾವರಣ ಉತ್ತಮ ಗುಣಮಟ್ಟದ ನಾರಿನ ಮೇವು ಮತ್ತು ಮೇಯಲು ಸಾಕಷ್ಟು ಅವಕಾಶ ನೀಡಿದರೆ ಮಾತ್ರ ಇದು ಸಾಧ್ಯ.
ಮಾಹಿತಿ ಸಹಕಾರ: ಡಾ॥ ಗೋವಿಂದ ಭಟ್ಟ, ಪಾಲಿಕ್ಲಿನಿಕ್, ಯಲ್ಲಾಪುರ
ಚಿತ್ರಗಳು : ರಾಧಾಕೃಷ್ಣ ಹೊಳ್ಳ ಮತ್ತು ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!