ಇತ್ತೀಚೆಗೆ ನನ್ನ ಅಪ್ಪ ನಡುರಾತ್ರಿಯಲ್ಲಿ ಎದ್ದು ಬಾಳೆ ಹಣ್ಣು ತಿನ್ನುತ್ತಾ ಕುಳಿತಿದ್ದರು. ಅದೇ ಸಮಯಕ್ಕೆ ನಾನೂ ಎದ್ದಿದ್ದೆ. ಕೇಳಿದಾಗ ‘ಶುಗರ್ ಇದೆಯಲ್ಲಾ, ರಾತ್ರಿ ಕೆಲವೊಮ್ಮೆ ಹಸಿವಾಗುತ್ತದೆ. ಆಗ ಬ್ರೆಡ್ಡೋ, ಬಾಳೆಹಣ್ಣೋ ತಿನ್ನುತ್ತೇನೆ. ಆಗ ಸರಿಯಾಗುತ್ತೆ’ ಎಂದರು. ಶುಗರ್ ಅಥವಾ ಮಧುಮೇಹ ಇದ್ದವರಿಗೆಲ್ಲಾ ಹೀಗೇ ಆಗುತ್ತದೆಯಾ ಗೊತ್ತಿಲ್ಲ. ಆದರೆ ಮಧುಮೇಹಿಗಳಿಗೆ ಆಗಾಗ ಹಸಿವು ಕಾಡುತ್ತದೆ. ಆದರೆ ನಡುರಾತ್ರಿಯ ಹಸಿವಿನ ಮೂಲವೇನು? ಇದು ಮಾಮೂಲಿ ಸಂಗತಿಯಾ? ನಿದ್ರೆಯಿಂದ ಎಚ್ಚರವಾದ ಬಹುತೇಕರಿಗೆ ಹಸಿವು ಕಾಡುತ್ತದೆಯೇ? ನಿದ್ರೆಯಲ್ಲೇ ಇದ್ದರೆ ಗೊತ್ತಾಗುವುದಿಲ್ಲವೋ? ಈ ಬಗ್ಗೆ ಒಂದಿಷ್ಟು ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ರಾತ್ರಿ ಸಮಯದಲ್ಲಿ ಪದೇಪದೇ ಹಸಿವಾಗುವ ಸಮಸ್ಯೆ ಕಂಡು ಬರುತ್ತಿದೆ. ದಿನಪೂರ್ತಿ ಸರಿಯಾಗಿ ಆಹಾರ ಸೇವಿಸಿದ್ದರೂ ಕೂಡ ಮಧ್ಯರಾತ್ರಿ ಎದ್ದು ಏನಾದರೂ ತಿನ್ನಬೇಕು ಎನ್ನುವ ಭಾವನೆ ಉಂಟಾಗುವುದು ಅಪರೂಪಕ್ಕಾದರೆ ಸಾಮಾನ್ಯವೆನಿಸಬಹುದು. ಆದರೆ ಇದು ಪ್ರತಿದಿನವೂ ನಡೆಯುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿ ಸಮಯದಲ್ಲಿ ಹಸಿವು ಕಾಣಿಸಿಕೊಳ್ಳುವುದು ದೇಹಕ್ಕೆ ಇನ್ನೂ ಶಕ್ತಿ ಅಗತ್ಯವಿದೆ ಎಂಬ ಸೂಚನೆಯಾಗಿರಬಹುದು. ನಮ್ಮ ಮೆದುಳು ದೇಹದ ಶಕ್ತಿಯ ಮಟ್ಟವನ್ನು ಪರಿಶೀಲಿಸಿ, ಅವಶ್ಯಕತೆ ಇದ್ದರೆ ಹಸಿವಿನ ಸೂಚನೆಗಳನ್ನು ಕಳುಹಿಸುತ್ತದೆ. ದಿನದಲ್ಲಿ ಸಮರ್ಪಕ ಪೌಷ್ಟಿಕಾಂಶ ಸಿಗದಿದ್ದರೆ ಅಥವಾ ಊಟದ ಸಮಯ ಅಸ್ಥಿರವಾಗಿದ್ದರೆ, ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಇದು 'ನೈಟ್ ಈಟಿಂಗ್ ಸಿಂಡೋಮ್' ಎಂಬ ಸ್ಥಿತಿಯ ಲಕ್ಷಣವಾಗಿರಬಹುದು. ಈ ಸಮಸ್ಯೆ ಇರುವವರು ರಾತ್ರಿ ವೇಳೆ ಹೆಚ್ಚಾಗಿ ಹಸಿವಾಗುವುದರ ಜೊತೆಗೆ ಪದೇಪದೇ ಎದ್ದು ಆಹಾರ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಇಂತಹ ಅನುಭವ ಸಾಮಾನ್ಯವಾಗಿದ್ದರೂ, ಪ್ರತಿದಿನವೂ ಇದೇ ರೀತಿ ನಡೆಯುತ್ತಿದ್ದರೆ ವೈದ್ಯಕೀಯ ಪರಿಶೀಲನೆ ಅಗತ್ಯವಾಗುತ್ತದೆ. ನಿದ್ರೆ ಮತ್ತು ಹಸಿವಿನ ನಡುವೆ ನಿಕಟ ಸಂಬಂಧವಿದೆ ಎಂಬುದೂ ಅಧ್ಯಯನಗಳಿಂದ ತಿಳಿದುಬಂದಿದೆ. ತಡವಾಗಿ ಮಲಗುವ ಅಭ್ಯಾಸ ಅಥವಾ ನಿದ್ರೆಯ ಕೊರತೆ ಇದ್ದರೆ, 'ಪೊಲಿನ್' ಎಂಬ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಈ ಹಾರ್ಮೋನ್ ಹಸಿವನ್ನು ಹೆಚ್ಚಿಸುವುದರಿಂದ ರಾತ್ರಿ ವೇಳೆ ಹೆಚ್ಚಾಗಿ ತಿನ್ನಬೇಕೆಂಬ ಆಸೆ ಮೂಡುತ್ತದೆ. ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ತೂಕ ಹೆಚ್ಚಳ, ಮೆಟಾಬಾಲಿಕ್ ಸಮಸ್ಯೆಗಳು ಹಾಗೂ ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು.
ಈ ಸಮಸ್ಯೆಯನ್ನು ನಿಯಂತ್ರಿಸಲು ತಜ್ಞರು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸಮತೋಲನ ಆಹಾರ ಸೇವಿಸುವುದು, ರಾತ್ರಿ ಕಡಿಮೆ ಊಟ ಮಾಡುವುದು, ತಡವಾಗಿ ಮಲಗುವ ಅಭ್ಯಾಸವನ್ನು ತಪ್ಪಿಸುವುದು ಮತ್ತು ಒತ್ತಡವನ್ನು ನಿಯಂತ್ರಿಸುವುದು ಮುಖ್ಯ. ಸಮಸ್ಯೆ ನಿರಂತರವಾಗಿ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಮಧ್ಯರಾತ್ರಿ ಹಸಿವು ಕೆಲವೊಮ್ಮೆ ಸಾಮಾನ್ಯವಾದದ್ದಾಗಿದ್ದರೂ, ಇದು ಪದೇಪದೇ ಆಗುತ್ತಿದ್ದರೆ ದೇಹದ ಒಳಗಿನ ಬದಲಾವಣೆಗಳ ಸೂಚನೆಯಾಗಿರಬಹುದು. ಹೀಗಾಗಿ ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಪಾಲಿಸುವುದು ಆರೋಗ್ಯಕರ ಜೀವನಕ್ಕೆ ಅಗತ್ಯವಾಗಿದೆ. ಅದರಲ್ಲೂ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವಾಗಿ ಗಮನ ಹರಿಸಬೇಕು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!