ಬೆಂಗಳೂರಿನ ರಾಮನಗರದ ಮಾದಾಪಟ್ಟಣದ ಸಮೀಪ ಕಲ್ಲು ಕ್ವಾರೆಯೊಂದರಲ್ಲಿ ಬಂಡೆ ಕುಸಿದ ಪರಿಣಾಮವಾಗಿ ೭ ಮಂದಿ ಕಾರ್ಮಿಕರು ಅದರಡಿಗೆ ಸಿಲುಕಿ ಸಾವಿಗೀಡಾಗಿ ಇನ್ನು ಕೆಲವರು ಗಾಯಗೊಂಡಿರುವುದು ಮನಕಲಕುವ ಘಟನೆ. ಆದರೆ ಇದು ನೈಸರ್ಗಿಕ ಪ್ರಕೋಪದಿಂದ ಉಂಟಾದ ದುರ್ಘಟನೆಯೇನೂ ಅಲ್ಲ, ಬದಲಾಗಿ ಕಲ್ಲಿನ ಕ್ವಾರಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದವರ ಘೋರ ನಿರ್ಲಕ್ಷ್ಯವೇ ಅದಕ್ಕೆ ಮುಖ್ಯ ಕಾರಣ. ಎತ್ತರದಲ್ಲಿ ಬಂಡೆ ಸಡಿಲಗೊಳಿಸುವ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಳಭಾಗದಲ್ಲಿ ಕೂಡಾ ಕಾರ್ಮಿಕರು ತಮ್ಮ ಕಾರ್ಯನಿರ್ವಹಿಸುವಂತೆ ಮಾಡಿದ ಕಾರಣದಿಂದಾಗಿ ಮೇಲಿನಿಂದ ಜಾರಿದ ಬಂಡೆ ಕೆಳಗಿದ್ದವರ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಇದು ಕ್ವಾರಿಯಲ್ಲಿ ನಡೆಯುತ್ತಿದ್ದ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರ ನಿರ್ಲಕ್ಷ್ಯ ಮತ್ತು ಹೊಣೆಗೇಡಿ ವರ್ತನೆಯ ಫಲ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ಜತೆಗೇ ಗಣಿಗಾರಿಕೆಗೆ ಕಣ್ಣುಮುಚ್ಚಿ ಅಂಗೀಕಾರ ನೀಡುವ ಹಾಗೂ ಬಳಿಕ ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಕಣ್ಣೆತ್ತಿಯೂ ನೋಡದ ಗಣಿಗಾರಿಕೆ ಇಲಾಖೆಯ ಬೇಕಾಬಿಟ್ಟಿ ಧೋರಣೆಯೂ ಈ ದುರಂತಕ್ಕೆ ಪರೋಕ್ಷ ಕಾರಣವಾಗಿದೆಯೆಂದರೆ ತಪ್ಪಾಗಲಾರದು.
ಇಂತಹ ದುರಂತಗಳು ಸಂಭವಿಸುತ್ತಿರುವುದು ಹೊಸದೇನಲ್ಲ. ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಸುವಾಗ ಸೂಕ್ತ ನಿಯಮಗಳನ್ನು ಪಾಲಿಸದಿರುವುದು, ಮುಂಜಾಗ್ರತಾಕ್ರಮಗಳನ್ನು ಅನುಸರಿಸದಿರುವುದರಿಂದಲೇ ಬಹುತೇಕ ಬಾರಿ ಇಂತಹದುರ್ಘಟನೆಗಳು ಸಂಭವಿಸುತ್ತವೆ. ಕಲ್ಲು ಒಡೆಯಲು ಸ್ಫೋಟಕಗಳನ್ನು ಬಳಸುವಲ್ಲಿ ಬಹಳಷ್ಟು ಬಾರಿ ನಿಯಮಗಳನ್ನು ಉಲ್ಲಂಘಿಸಲಾಗುತ್ತದೆ. ಮಿತಿಗಿಂತ ಹೆಚ್ಚು ಪ್ರಮಾಣದಸ್ಫೋಟಕ ಬಳಸುವುದಂತೂ ಸಾಮಾನ್ಯವಾಗಿದೆ. ಗಣಿಗಾರಿಕೆಗೆ ಅನುಮತಿ ಸಿಕ್ಕಿದ ಪ್ರದೇಶವನ್ನೂ ಮೀರಿ ಹೆಚ್ಚುವರಿ ಜಾಗದಲ್ಲಿ ಗಣಿಗಾರಿಕೆ ನಡೆಸುವುದು ಕೂಡಾ ಮಾಮೂಲಾಗಿದೆ.
ಗಣಿಗಾರಿಕೆ ನಡೆಸುವಾಗ ಸೂಕ್ತ ನಿಯಮಾವಳಿಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕಾದ ಗಣಿಗಾರಿಕೆ ಇಲಾಖೆ ಕೂಡಾ ಕಣ್ಣುಮುಚ್ಚಿ ಕೂರುವುದರಿಂದ ಇಂತಹ ದುರಂತಗಳು ನಡೆಯಲು ಕಾರಣವಾಗುತ್ತಿದೆ. ಭೂಗರ್ಭ ಶಾಸ್ತ್ರಜ್ಞರು, ಸುರಕ್ಷಾ ಇಂಜಿನಿಯರ್ಗಳು ಕ್ವಾರಿಯು ಗಣಿಗಾರಿಕೆ ನಡೆಸಲು ಸೂಕ್ತವಾಗಿದೆಯೆ ಎಂದು ಮುಂಚಿತವಾಗಿ ಪರಿಶೀಲಿಸುವುದು, ಆ ಬಳಿಕವಷ್ಟೆ ಅನುಮತಿ ನೀಡುವುದು ಕಡ್ಡಾಯವಾಗಿದ್ದರೂ ಇಂತಹ ನಿಯಮಗಳನ್ನೆಲ್ಲ ಗಾಳಿಗೆ ತೂರುವುದೂ ಸಾಮಾನ್ಯವಾಗಿದೆ. ಇಂತಹ ದುರಂತಗಳು ನಡೆದಾಗ ಮಾತ್ರ ಇವೆಲ್ಲ ಅಪಸವ್ಯಗಳ ಕುರಿತು ಚರ್ಚೆ ನಡೆಯುತ್ತದಾದರೂ ಬಳಿಕ ಮಾಮೂಲಿನಂತೆ ಮರೆತುಹೋಗುತ್ತದೆ ಎಂಬುದೇ ನಿಜವಾದ ದುರಂತ. ಗಣಿಗಾರಿಕೆ ನಡೆಸಬೇಕಾದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಸರಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅತ್ಯಗತ್ಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೪-೦೭-೨೦೨೬
ಚಿತ್ರ ಕೃಪೆ: ಡಿಡಿ ಭಾರತ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!