ಉತ್ತರ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಇತ್ತೀಚೆಗೆ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಮತ್ತೊಮ್ಮೆ ಇಡೀ ದೇಶದ ಗಮನವನ್ನು ವರದಕ್ಷಿಣೆ ಪಿಡುಗಿನ ಕುರಿತಂತೆ ಸೆಳೆದಿದೆ. ಟ್ವಿಶಾ ಶರ್ಮಾ ಎಂಬ ೩೩ರ ಮಹಿಳೆ ತನ್ನ ಪತಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಆಕೆ ತನ್ನ ತಾಯಿ ಮತ್ತು ಸ್ನೇಹಿತೆಯರೊಂದಿಗೆ ಹಂಚಿಕೊಂಡ ಮಾತುಕತೆಗಳಲ್ಲಿ ಪತಿಯ ಮನೆಯಲ್ಲಿ ತಾನು ಅನುಭವಿಸುತ್ತಿರುವ ಕಿರುಕುಳ, ಚಿತ್ರಹಿಂಸೆಯ ಕುರಿತಂತೆ ವಿವರಿಸಿದ್ದಾಳೆ. ವರದಕ್ಷಿಣೆಗಾಗಿ ತನ್ನನ್ನು ಪೀಡಿಸುತ್ತಿರುವುದನ್ನು ತಿಳಿಸಿದ್ದಾಳೆ. ಇದರ ಬೆನ್ನಿಗೇ ಮತ್ತೊಂದು ಪ್ರಕರಣದಲ್ಲಿ ದೀಪಿಕಾ ಎಂಬಾಕೆ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡುದು ವರದಿಯಾಗಿದೆ. ಆಕೆಗೆ ಕೂಡಾ ಪತಿಯ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂಬುದಾಗಿ ಆಕೆಯ ಕುಟುಂಬಸ್ಥರು ಹೇಳುತ್ತಿದ್ದಾರೆ.
ಈ ಆಧುನಿಕ ಯುಗದಲ್ಲೂ ವರದಕ್ಷಿಣೆಗಾಗಿ ಪೀಡಿಸಲಾಗುತ್ತಿದೆ ಹಾಗೂ ಮಹಿಳೆಯರು ಆತ್ಮಹತ್ಯೆಯ ದಾರಿ ತುಳಿಯಲು ಪ್ರೇರೇಪಿಸುತ್ತದೆ ಎಂಬುದು ಅಚ್ಚರಿಯಾಗಿ ಕಂಡುಬರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ವರದಕ್ಷಿಣೆಗಾಗಿ ಆಗ್ರಹಿಸಿ ಮಹಿಳೆಯನ್ನು ಆಕೆಯ ಪತಿಯ ಮನೆಯವರು ಹತ್ಯೆಗೈಯುವ ಪ್ರಸಂಗಗಳೂ ಸಂಭವಿಸುತ್ತಿವೆ. ದಿಲ್ಲಿಯಲ್ಲಿ ಪೊಲೀಸ್ ಕಮಾಂಡೋ ಆಗಿದ್ದ ಗರ್ಭಿಣಿ ಪತ್ನಿಯನ್ನು ಪತಿಯು ಡಂಬೆಲ್ ನಿಂದ ಹೊಡೆದು ಕೊಂದ ದಾರುಣ ಘಟನೆಯು ಜನವರಿಯಲ್ಲಿ ವರದಿಯಾದುದನ್ನು ಯಾರೂ ಮರೆಯಲಾರರು.
ವರದಕ್ಷಿಣೆ ಕಿರುಕುಳದ ಪ್ರಕರಣಗಳು ಹಾಗೂ ಅದರಿಂದ ಉಂಟಾಗುವ ಸಾವುಗಳು ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ವಿಪರ್ಯಾಸವೆಂದರೆ ನಮ್ಮ ಕರ್ನಾಟಕವೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ರಾಷ್ಟ್ರೀಯ ಅಪರಾಧ ಬ್ಯೂರೋದ ೨೦೨೪ರ ವರದಿಯೊಂದರ ಪ್ರಕಾರ ಮೆಟ್ರೋಪಾಲಿಟನ್ ನಗರಗಳಲ್ಲಿ ಬೆಂಗಳೂರಿನಲ್ಲೇ ಅತ್ಯಧಿಕ ವರದಕ್ಷಿಣೆ ಕಿರುಕುಳಗಳು ವರದಿಯಾಗಿರುವುದು. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ವರದಕ್ಷಿಣೆಗೆ ಸಂಬಂಧಿಸಿ ೨೫ ಸಾವುಗಳೂ ಸಂಭವಿಸಿವೆ. ೨೦೨೪ರಲ್ಲಿ ದೇಶಾದ್ಯಂತ ಒಟ್ಟು ೧.೨ ಲಕ್ಷ ವರದಕ್ಷಿಣೆ ಕಿರುಕುಳದ ಪ್ರಕರಣಗಳು ದಾಖಲಾಗಿವೆ ಎಂಬುದು ಹಾಗೂ ವಾರ್ಷಿಕವಾಗಿ ೭೦೦೦ ವರದಕ್ಷಿಣೆಗೆ ಸಂಬಂಧಿಸಿ ಸಾವುಗಳು ಸಂಭವಿಸುತ್ತಿವೆ ಎನ್ನುವುದು ಅತ್ಯಂತ ಆಘಾತಕಾರಿಯಾದ ವಿಷಯ. ಇನ್ನು ಪೊಲೀಸರಿಗೆ ದೂರು ದಾಖಲಿಸದ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿರುವ ಅದೆಷ್ಟು ಕೋಟ್ಯಂತರ ಬಡಪಾಯಿಗಳಿದ್ದಾರೋ ಅರಿತವರಾರು?
ನಿಜವಾಗಿ ವರದಕ್ಷಿಣೆ ಪಡೆಯುವುದನ್ನು ನಿಷೇಧಿಸಿ ೧೯೬೧ರಲ್ಲೇ ಕಾನೂನು ತರಲಾಗಿದೆ. ಆದರೆ ವರದಕ್ಷಿಣೆಯ ಬದಲಿಗೆ 'ಕೊಡುಗೆಗಳನ್ನು' ಕೊಡುವ ಅಥವಾ ಅದಕ್ಕಾಗಿ ಬೇಡಿಕೆಯಿಡುವ ಪದ್ಧತಿಗಳು ವರದಕ್ಷಿಣೆ ಪಿಡುಗನ್ನು ಜೀವಂತವಾಗಿರಿಸಿವೆ. ವರದಕ್ಷಿಣೆ ಪಿಡುಗು ಕೇವಲ ಶಾಸನಾತ್ಮಕವಾಗಿ ನಿವಾರಿಸಲ್ಪಡುವಂತಹುದಲ್ಲ. ಮುಖ್ಯವಾಗಿ ಜನರಲ್ಲಿ ಮಾನಸಿಕ ಬದಲಾವಣೆಯಿಂದ ಉಂಟಾಗಬೇಕಾಗಿರುವುದು ಎಂಬುದು ಸತ್ಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೦೫-೨೦೨೬
ಚಿತ್ರ ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!