ನವರಾತ್ರಿಯ ಸಡಗರ ಮುಗಿದೀಗ ದೀಪಾವಳಿಯತ್ತ ದಿನಮಾನ ಸಾಗುತ್ತಿದೆ. ತುಳುನಾಡಿನಲ್ಲಿ ಈ ದೀಪಗಳ ಹಬ್ಬ 'ಬಲೀಂದ್ರ ಹಬ್ಬ' ವೆಂದೇ ಜನಜನಿತ. ರೈತರಿಗೆ ಬೇಸಾಯ ಮುಗಿದ ಸಂಭ್ರಮ. ತಮ್ಮ ಕೃಷಿ ಸಲಕರಣೆಗಳಿಗೆ ದೀಪಾವಳಿಯಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ಸಂಪ್ರದಾಯ. ಈ ಕೃಷಿ ಉಪಯೋಗಿ ಸಾಮಗ್ರಿಗಳನ್ನು ಅಲಂಕರಿಸಲು ಕೆಲವು ನಿರ್ದಿಷ್ಟವಾದ ಕಾಡು ಹೂಗಳ ಬಳಕೆ ನಡೆಯುತ್ತದೆ. ಈ ಹೂಗಳು ಕಾಣಿಸಿಕೊಳ್ಳುವ ಸಮಯವೂ ಇದೇ ಮಳೆಗಾಲದ ಕೊನೆಯ ದಿನಗಳು.
ನಾವು ಸಣ್ಣವರಿದ್ದಾಗ ಅಗ್ನಿಶಿಖೆ, ಇಲ್ಲ್ ಬಳ್ಳಿ, ಕುರ್ಡು ಬಳ್ಳಿ ಅಂತೆಲ್ಲ ಮೊದಲೇ ಅತ್ತಿತ್ತ ಹೋದಾಗ ಹುಡುಕಿಡುತ್ತಿದ್ದೆವು. ಅವುಗಳೆಲ್ಲವೂ ವಿಶೇಷವಾದ ಹೂ ಬಳ್ಳಿಗಳಾಗಿದ್ದವು! ಕುರ್ಡು ಹೂವು ನಮಗೆಲ್ಲ ತುಂಬಾ ಪ್ರೀತಿಯ ಬಳ್ಳಿಯಾಗಿತ್ತು. ಏಕೆಂದರೆ ಇದರಲ್ಲಿ ತೋರಣದಂತಹ ರಚನೆಯ ಹೂವಿನ ತೆನೆಗಳು ಇಳಿಬೀಳುತ್ತಿದ್ದವು. ಸಾಸಿವೆಯಂತಹ ಸಣ್ಣ ಹಸಿರು ಮಣಿಗಳ ಇಳಿಬಿದ್ದ ಗೊಂಚಲುಗಳು ಬಳ್ಳಿಯನ್ನೂ, ಆ ಮೂಲಕ ಅದು ಹಬ್ಬಿ ನಿಂತ ಮರವನ್ನೂ ಶೃಂಗಾರ ಮಾಡಿ ನಿಲ್ಲಿಸಿದಂತೆ ಕಾಣುತ್ತಿತ್ತು. ಕಾಂಡದ ಮೇಲೆ ಪರ್ಯಾಯ ಮೂರು ಎಲೆಗಳ ಸಂಯುಕ್ತ ರಚನೆಯ ಹಸ್ತದಾಕಾರದ ಎಲೆಗಳು 3ರಿಂದ 10 ಸೆಂ.ಮೀ ಉದ್ದದ ತೊಟ್ಟಿನ ಜೊತೆ ಬೆಸೆದುಕೊಂಡಿರುತ್ತದೆ. ಕ್ಲೈಂಬಿಂಗ್ ಟ್ಯೂಮರಸ್ ಜಿಯೋಫೈಟ್ ಎಂದು ಗುರುತಿಸಿಕೊಳ್ಳುತ್ತಾ , ನೆಲದ ಮೇಲೆ ಹರಡಿಕೊಳ್ಳುವ ಅಥವಾ ಸನಿಹದ ಯಾವುದೇ ಸಸ್ಯ, ಮರವನ್ನು ಆಧಾರವಾಗಿಟ್ಟುಕೊಂಡು ಅಪ್ರದಕ್ಷಿಣೆಯಾಗಿ (Counter clockwise) ಸುತ್ತಿ ಮೇಲೇರುವ ಈ ನಿಷ್ಪಾಪಿ ಸಸ್ಯದ ಮೈ ತುಂಬಾ ಒಂದಿಷ್ಟು ಕಠಿಣವಲ್ಲದ ಮುಳ್ಳುಗಳು. ಎಲೆ ಮತ್ತು ಕಾಂಡ ಸಂಧಿಸುವ ಕವಲುಗಳಲ್ಲಿ ಗಾಳಿಯಲ್ಲಿ ತೂಗಾಡುವ ಕುದುರೆ ಲಾಳದಾಕಾರದ ಕಂದು ಕಾಯಿಗಳು ಇವುಗಳ ವಿಶೇಷತೆಯೇ ಸರಿ.
ಉದ್ದನೆಯ ಗೊಂಚಲುಗಳಲ್ಲಿ ಇಳಿಬಿದ್ದ ಜಾಲರಿಯಂತಹ ತೆನೆಗಳ ಸಮೂಹ ಗಂಡು ಹೂವಿನದ್ದಾಗಿದ್ದು ಹೆಣ್ಣು ಹೂಗಳ ತೆನೆಗಳು ಬೇರೆಯೇ ಆಗಿದ್ದು ಅವುಗಳಲ್ಲಿ ವಿರಳವಾಗಿ ಬೀಜಗಳಾಗುತ್ತವೆ. ಡಯೋಸ್ಕೋರಿಯಾ ಪೆಂಟಾಫಿಲ್ಲಾ (Dioscorea Pentaphylla) ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಈ ಕುರ್ಡು ಬಳ್ಳಿ ಏಷ್ಯಾದಿಂದ ಉತ್ತರ ಆಸ್ಟ್ರೇಲಿಯಾದ ವರೆಗೆ ಹಬ್ಬಿದೆ. ಡಯೋಸ್ಕೋರೇಸಿ ಅಂದರೆ ಕುರ್ಡು ಬಳ್ಳಿ ಗೆಣಸಿನ ಕುಟುಂಬಕ್ಕೆ ಸೇರಿದೆ. ಬುಡಕಟ್ಟು ಜನಾಂಗಗಳು ಕಾಡು ತರಕಾರಿಯಾಗಿಯಲ್ಲದೆ ಔಷಧಿಯಾಗಿಯೂ ಬಳಸುವ ಬಗ್ಗೆ ದಾಖಲೆಗಳಿವೆ. ಒಂದಿಷ್ಟು ವಿಷದ ಅಂಶ ಇರುವುದರಿಂದ ಸಂಸ್ಕರಿಸಿ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ಶಿಲೀಂಧ್ರಗಳ ವಿರುದ್ಧ ಹೋರಾಡುವ ಶಕ್ತಿ ಈ ಸಸ್ಯಕ್ಕಿದ್ದು ಕ್ಯಾನ್ಸರ್ ವಿರೋಧೀ, ಉರಿಯೂತ ಶಮನಕಾರಿ, ಕೆಮ್ಮು, ಅಸ್ತಮಾ, ಕೀಲುನೋವು, ಹೊಟ್ಟೆನೋವು ಇತ್ಯಾದಿಗಳಿಗೆ ಉಪಯುಕ್ತವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಇವುಗಳಲ್ಲಿ ಐದು ಎಲೆಗಳಿರುವ ಮುಳ್ಳುಗಳಿರದ ಪ್ರಭೇದಗಳೂ ಇವೆ.
ನೀವು ಆಗಸ್ಟ್ ನಿಂದ ನವೆಂಬರ್ ವರೆಗೂ ಈ ನಿಸರ್ಗದ ತೋರಣವನ್ನು ಗುರುತಿಸಬಹುದು. ಸೌಂದರ್ಯ ಪ್ರಜ್ಞೆ ಪ್ರಾಣಿಗಳಲ್ಲಿ ಮಾತ್ರವಲ್ಲದೇ ಸಸ್ಯಗಳಲ್ಲೂ ಇದೆ ಎಂದು ಇಂತಹ ವೈಶಿಷ್ಟ್ಯ ಪೂರ್ಣ ವಿಚಾರಗಳ ಮೂಲಕ ತಿಳಿದುಕೊಳ್ಳಬಹುದು ಅಲ್ಲವೇ...?
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!