ಕಳೆಗಟ್ಟಿದ ನಾಡ ಹಬ್ಬ 'ದಸರಾ' ಮನಸಿಗೆ ಮುದ ನೀಡಿ ಹಿಂದೆ ಸರಿದಾಯ್ತು. ಮತ್ತೆ ನಾವು ಶಾಲೆಯತ್ತ ಮುಖ ಮಾಡಿದ್ದೇವೆ. ರಜಾ ದಿನಗಳ ಸುತ್ತಾಟದಲ್ಲಿ ನೀವು ಯಾವುದೇ ನಿಷ್ಪಾಪಿ ಸಸ್ಯಗಳ ಬಗ್ಗೆ ಗಮನವೇ ನೀಡಿಲ್ಲವೇ!? ನೀವೂ ನೋಡಿದ ಸಸ್ಯಗಳ ಬಗ್ಗೆ ಬರೆಯಲಾರಂಭಿಸಿದರೆ ಸೊಗಸಾಗಿರುತ್ತದೆ. ಕೆಲವರು ವಿವಿಧ ಹೊಸ ಸಸ್ಯಗಳ ಚಿತ್ರಗಳನ್ನು ಕಳಿಸುತ್ತಾ ವಿವರಗಳನ್ನು ಕೇಳುವಾಗ ಖುಷಿಯೆನಿಸುತ್ತದೆ. ನಾನೂ ಪುನರಪಿ ನೆನಪು ಮಾಡಿಕೊಂಡಂತೆ.. ಅಥವಾ ವಿವರ ಸಂಗ್ರಹಿಸುವಂತೆ ಪ್ರಚೋದನೆ ದೊರೆತಂತಾಗುತ್ತದೆ.

ನವರಾತ್ರಿಯಲ್ಲಿ ನಮ್ಮ ಕಾಸರಗೋಡಿನತ್ತ ಹೋಗುತ್ತಿರುವಾಗ ಮಾರ್ಗದ ಬದಿಗೆ ನೆಲದಲ್ಲಿ ತೆವಳುತ್ತಾ ಚಾಚಿಕೊಂಡ ಅಂಡಾಕಾರದ ದಟ್ಟ ಹಸುರಾದ ದಪ್ಪ ಎಲೆಗಳ ಸಮೂಹ ಮಾದೇರು ಬಳ್ಳಿಯನ್ನೇ ಹೋಲುವಂತಿತ್ತು. ಹೊಸತಲ್ಲವೆನಿಸಿ ಸ್ವಲ್ಪ ಎದುರು ಹೋದ ಮೇಲೆ 'ತಾಮ್ರ ವರ್ಣದ ಹೂಗೊಂಚಲುಗಳ ರಾಶಿ' ಸಂಶಯ ಹುಟ್ಟಿಸಿತು! ಮಾದೇರು ಬಳ್ಳಿಗೆ ತೆಳುವಾದ ಹಸಿರು ಹೂಗೊಂಚಲು. ನೆಲದಲ್ಲಿ ಹರಡಿದ್ದ ಈ ಹೊಸ ಬಳ್ಳಿಯ ಎಲೆಗಳ ಕಂಕುಳಲ್ಲಿ, ಬಳ್ಳಿಗಳ ತುದಿಗಳಲ್ಲಿ ಒತ್ತೊತ್ತಾದ ಕಂದು ಬಣ್ಣದ ರಾಶಿ ರಾಶಿ ಮೊಗ್ಗುಗಳ ನಡುವೆ ಅಲ್ಲಲ್ಲಿ ನಕ್ಷತ್ರದಂತಹ ಪುಟ್ಟ ಬಿಳಿಯದಾದ ಒಂಟಿ ಹೂಗಳು. ತಾಮ್ರವರ್ಣದ ಮೊಗ್ಗುಗಳ ಸಮೂಹದೆಡೆ ಗಟ್ಟಿಯಾದ ಪುಟ್ಟ ತೊಟ್ಟಿಗೆ ಐದೆಸಳಿನ ಹೂಗಳ ಜೋಡಣೆ ಸೊಗಸಾಗಿತ್ತು. ಆ ಐದೆಸಳುಗಳೂ ಇಬ್ಭಾಗವಾಗಿ ಹತ್ತು ದಳಗಳಿವೆಯೇನೋ ಎಂದು ಭಾಸವಾಗುತ್ತಿತ್ತು. ಅಲ್ಲೇ ಹಟ್ಟಿ ಗಾಗಿ ಸೊಪ್ಪು ಸವರುತ್ತಿದ್ದ ಸರಸ್ವತಿಯವರಲ್ಲಿ ಈ ಬಳ್ಳಿಯ ಹೆಸರಿನ ಬಗ್ಗೆ ವಿಚಾರಿಸಿದಾಗ ಅದು 'ಅಂಕೋಲ ಬಳ್ಳಿ', 'ಸೆಂಗಾರ್ ಬಳ್ಳಿ' ಯೆಂದೂ ತುಳುವಲ್ಲಿ 'ಮರಬಾರೆ' ಯೆಂದೂ ತಿಳಿಸಿದರು. 

ಕಮ.jpg

ನಮ್ಮ ಕುತೂಹಲಕ್ಕೆ ಸರಸ್ವತಿಯವರು ಬಳ್ಳಿಯನ್ನೆತ್ತಿ ಅದರ ದೃಢತೆಯನ್ನು ಪರೀಕ್ಷಿಸಲು ಹೇಳಿದಾಗ ನಾವೆಲ್ಲ ಕಂದು ಬಣ್ಣದ ದಪ್ಪ ಬಳ್ಳಿಯ ಮೈ ಸವರಿದೆವು. ಕಾಷ್ಠಮಯ ದೊಡ್ಡ ಹಬ್ಬುಬಳ್ಳಿ ನಾಜೂಕಾಗಿರದೆ‌ ದಪ್ಪಗಾಗಿ ಮರದಂತೆ ಗಟ್ಟಿಯಾಗಿತ್ತು. ಅದಕ್ಕೇ ಅದನ್ನು Wood climber ಎನ್ನುವರು. ನೆರಳಲ್ಲೇ ಚಿಗುರೊಡೆದು ಬೆಳೆಯಬಲ್ಲ ತಾಕತ್ತಿನ ಅಂಕೋಲಬಳ್ಳಿ ಕಾಡಿನೊಳಗೆ ದೊಡ್ಡ ದೊಡ್ಡ ಮರಗಳನ್ನೇರುತ್ತಾ ಹತ್ತಿಪ್ಪತ್ತು ಮೀಟರ್ ಸರ್ಕಸ್ ನಡೆಸಿ ಸೂರ್ಯನ‌ ಬೆಳಕಿಗೆ ಮುಖವೊಡ್ಡುವುದಂತೆ. ಒಮ್ಮೆ ಮರ ಸಿಕ್ಕರೆ ಕಾಂಡ ದಪ್ಪಗಾಗತೊಡಗುತ್ತದೆ. ಅಳಿಲು, ಕೋತಿ, ಕೀಟ, ಸಣ್ಣ ಪುಟ್ಟ ಸಸ್ತನಿಗಳಿಗೆ ಮರದಿಂದ ಮರಕ್ಕೆ ಹಾರಲು ಅನುಕೂಲ ಮಾಡಿಕೊಡುತ್ತದೆ ಎಂದು ವಿವರಿಸಿದ ಸರಸ್ವತಿಯವರು ಹೂ ಬಿಡುವ ಕಾಲದಲ್ಲಿ ಇದರ ಸೊಪ್ಪು ಕಡಿಯುವುದಿಲ್ಲವೆಂದರು. ನಾನು ಕುತೂಹಲದಿಂದ "ಯಾಕೆ?" ಎಂದೆ. "ಏಕೆಂದರೆ ಕರಿಮೆಣಸಿನ ಗಾತ್ರದ ಅದರ ಹಣ್ಣುಗಳು ಪುಟ್ಟ ಪ್ರಾಣಿ ಪಕ್ಷಿಗಳಿಗೆ ಬಹಳ ಇಷ್ಟ.ನಾವು ಸೊಪ್ಪೆಂದು ಬಳ್ಳಿ ಸವರಿದರೆ ಹೂವಾಗಲೀ , ಹಣ್ಣಾಗಲೀ ಮೃಗಪಕ್ಷಿಗಳಿಗೆ ಸಿಗಲು ಸಾಧ್ಯವೇ? ಅದಕ್ಕಾಗಿ ಬಿಟ್ಟು ಬಿಡುತ್ತೇವೆ. ಈ ಮೃಗ ಪಕ್ಷಿಗಳ ಹಿಕ್ಕೆಯ ಮೂಲಕವೇ ಬೀಜ ಪ್ರಸಾರವಾಗಿ ಕಾಡೊಳಗೂ ಇದು ಬೆಳೆಯುವಂತಾಗುತ್ತದೆ" ಎಂದರು. ನಾವು ಮೂಕವಿಸ್ಮಿತರಾದೆವು. ಆ ನಿಷ್ಪಾಪಿ ಬಳ್ಳಿಯ ಬಗ್ಗೆ ಈ ರೈತಾಪಿ ವರ್ಗಕ್ಕೆ ಅದೆಂತಹಾ ಕಾಳಜಿ! "ಎಳೆಯ ಕೊಂಬೆ, ಚಿಗುರೆಲೆ, ಹೂವಿನ ಮೊಗ್ಗುಗಳು ದಟ್ಟವಾದ ತುಕ್ಕಿನ ಬಣ್ಣವಾಗಿದ್ದು ವೆಲ್ವೆಟ್ ನಂತೆ ಸಣ್ಣ ರೋಮಗಳಿಂದಾವೃತವಾಗಿರುವಾಗ ಅದನ್ನು ಕಡಿಯಲು ಮನಸ್ಸೇ ಬರುವುದಿಲ್ಲ" ವೆಂದರು. ಅವರ ಈ ದೊಡ್ಡ ಗುಣಕ್ಕೆ ಮನಸಾರೆ ವಂದಿಸಿ ನಾಲ್ಕಾರು ಫೋಟೋ ತೆಗೆದುಕೊಂಡು ನಾವು ಮುಂದುವರಿದವು.

ಹಿಮಾಲಯದ ತಪ್ಪಲು, ಚೀನಾ, ಏಷ್ಯಾ, ಮಲೇಷ್ಯಾ, ಆಸ್ಟ್ರೇಲಿಯಾ, ಜಪಾನ್ ಮೊದಲಾದ ಕಡೆ ಹರಡಿರುವ ಅಂಕೋಲ ಬಳ್ಳಿಯನ್ನು ಸಂಸ್ಕೃತ ದಲ್ಲಿ ಅಶೋಕರೋಹಿಣಿ, ಆಂಗ್ಲ ಭಾಷೆಯಲ್ಲಿ Neeliyar Kottam, Penciled Erycibe ಎನ್ನುವರು. Erycibe Paniculata Roxb ಎಂಬುವುದು ಸಸ್ಯ ಶಾಸ್ತ್ರೀಯ ಹೆಸರು. ಈ ಸಸ್ಯದ ಬಗ್ಗೆ ಮೊದಲಿಗೆ ಅಧಿಕೃತ ಮಾಹಿತಿ ನೀಡಿದ ವಿಲಿಯಮ್ ರೋಕ್ಸ್ ಬರ್ಗ್ ರವರ ಹೆಸರನ್ನು ಈ ಸಸ್ಯದ‌ ಹೆಸರ‌ ಜೊತೆ ಸೇರಿಸಲಾಗಿದೆ.

Convolvulaceae ಸಸ್ಯದ ಕುಟುಂಬ. ಕೀಲು ನೋವು, ವಾತ, ಕಾಲರಾ, ತೀವ್ರ ಭೇದಿ, ಚರ್ಮದ ಸಮಸ್ಯೆಗಳಿಗೆ ಉಪಯುಕ್ತವಾದ ಸಸ್ಯವಾಗಿದೆ. ತನ್ನ ನೀಳ ಕವಲುಗಳ ಮೂಲಕ ದೊಡ್ಡದಾದಂತೆ ತೂಕ ಹೆಚ್ಚುತ್ತಾ ಮರಗಳು ಸಿಗದಾಗ ನೆಲದ ಮೇಲೆಯೇ ಪವಡಿಸುವ ಈ ಅಪರೂಪದ ಸಸ್ಯವನ್ನು ನೀವು ಕಂಡರೆ ನಮಗೂ ತಿಳಿಸಿರಿ. ಸೆಪ್ಟೆಂಬರ್ ನಿಂದ ಮೇ ವರೆಗೂ ಇದರ ಹೂ ಹಣ್ಣಿನ ಕಾಲವಾಗಿದೆ.

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ