ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ನಡೆಸುವ 'ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ' (ನೀಟ್) ಫಲಿತಾಂಶ ಕೊನೆಗೂ ಪ್ರಕಟವಾಗಿದ್ದು, ಆಕಾಂಕ್ಷಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೇ ೩ ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಅದನ್ನು ರದ್ದುಪಡಿಸಿದ್ದ ಕೇಂದ್ರ ಸರ್ಕಾರ, ಜೂನ್ ೨೧ ರಂದು ಮರು ಪರೀಕ್ಷೆ ಆಯೋಜಿಸಿತ್ತು. ೨೦ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ೧೧.೨೧ ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ಶೇ. ೫೮ ರಷ್ಟು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಈಗ ಫಲಿತಾಂಶ ಪ್ರಕಟವಾಗಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆಯ ರಾದ್ದಾಂತ ಮಾತ್ರ ಇನ್ನೂ ನಿಗಿನಿಗಿ ಎನ್ನುತ್ತಿದೆ. ಹಿಂದೆಯೂ ಹಲವು ಬಾರಿ ಸೋರಿಕೆ ಆಗಿದ್ದರೂ ಅಲ್ಲಲ್ಲಿ ಪ್ರತಿಭಟನೆ, ವಿಪಕ್ಷಗಳ ಟೀಕೆಗೆ ಸೀಮಿತವಾಗಿ ನೇಪತ್ಯಕ್ಕೆ ಸರಿಯುತ್ತಿತ್ತು. ಆದರೆ ಕಳೆದ ಮೇ ೩ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಭಾರೀ ಸಂಚಲನ ಮೂಡಿಸಿದೆ. ವೈದ್ಯಕೀಯ ಕನಸು ಹೊತ್ತು ಹಗಲು-ರಾತ್ರಿ ಎನ್ನದೇ ಕಠಿಣ ಶ್ರಮಪಟ್ಟು ಓದಿದ್ದ ವಿದ್ಯಾರ್ಥಿಗಳ ಪರೀಕ್ಷೆ ರದ್ದಾಗಿದ್ದು ಆಘಾತವನ್ನು ಉಂಟು ಮಾಡಿತ್ತು. ಈ ಕಿಚ್ಚು ದೇಶದಾದ್ಯಂತ ಯುವಕರನ್ನು ಭುಗಿಲೇಳುವಂತೆ ಮಾಡಿತು. ವಿದೇಶದಲ್ಲಿದ್ದ ಅಭಿಜಿತ್ ದೀಪ್ಕೆ ಎಂಬ ಯುವಕ 'ಭಾರತೀಯ ಕಾಕ್ರೋಚ್ ಪಾರ್ಟಿ' ಸ್ಥಾಪಿಸಿ ಜಾಲ ತಾಣದ ಮೂಲಕ ಜೆನ್ ಜೀಗಳನ್ನು ಬಡಿದೆಬ್ಬಿಸಿದ್ದಾರೆ.
ಈ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಸಾವಿನ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ ಮಂತರ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ ೨೧ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಬೆಂಬಲಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಟುಕ್ ಅವರ ಉಪವಾಸ ಸತ್ಯಾಗ್ರಹ ೨೦ನೇ ದಿನಕ್ಕೆ ಕಾಲಿಟ್ಟಿದೆ.
ನೀಟ್ ಅವಾಂತರಕ್ಕೆ ಕಾರಣವಾದವರ ವಿರುದ್ದ ಕಠಿಣ ಕ್ರಮ ಅಗತ್ಯವಿದೆ. ಸಿಡಿದೆದ್ದಿರುವ ಯುವ ಸಮೂಹಕ್ಕೆ ಒಂದು ಆಶಾದಾಯಕ ಉತ್ತರವನ್ನು ಕೇಂದ್ರ ಸರ್ಕಾರ ನೀಡಬೇಕಿದೆ. ಎಲ್ಲದಕ್ಕೂ ಹೆಚ್ಚಾಗಿ ಮುಂದಿನ ಬಾರಿ ನೀಟ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ವಿಶ್ವಾಸ ಮೂಡಿಸಬೇಕಿದೆ. ನೀಟ್ ಪರೀಕ್ಷೆ ಸುಸೂತ್ರವಾಗುವ ದಿಸೆಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕೆ, ವಿವರಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಹೊಸ ಹೊಸ ತಂತ್ರಜ್ಞಾನ ಮತ್ತು ಪ್ರಾಮಾಣಿಕ ಅಧಿಕಾರಿಗಳ ನಿಯೋಜನೆಗೆ ಕೇಂದ್ರ ಸರ್ಕಾರ ಈಗಿನಿಂದಲೇ ಹೆಜ್ಜೆ ಇಡಬೇಕಿದೆ. ಇದು ಒಂದು ಜನಪರ ಸರ್ಕಾರದ ಕರ್ತವ್ಯ ಕೂಡ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೮-೦೭-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!