ನೀವು ಪ್ರವಾಸ ಪ್ರಿಯರಾಗಿದ್ದಲ್ಲಿ ನಿಮ್ಮ ಬಳಿ ನೀವು ಹೋಗಬೇಕಾಗಿರುವ ಸ್ಥಳಗಳ ಬಹುದೊಡ್ಡ ಪಟ್ಟಿಯೇ ಇರಬಹುದು. ಹೋಗಲು ಅಸಾಧ್ಯವಾದ ಸ್ಥಳಗಳಿಗೆ ಹೋಗಬೇಕೆಂಬ ಕನಸಾದರೂ ಇರಬಹುದು. ವಿದೇಶಕ್ಕೆ ತೆರಳಿ ಅಲ್ಲಿಯ ಸ್ಥಳಗಳು, ಸಂಸ್ಕೃತಿ ಮೊದಲಾದುವುಗಳನ್ನು ತಿಳಿದುಕೊಳ್ಳಬೇಕೆಂಬ ಆಸೆಗಳು ನಮ್ಮ-ನಿಮ್ಮಲ್ಲಿ ಇರುವುದು ಸಾಮಾನ್ಯ ಸಂಗತಿ. ಕರ್ನಾಟಕ ರಾಜ್ಯದ ಬಹಳಷ್ಟು ಸ್ಥಳಗಳನ್ನು ನಾವು ನೋಡಿಯೇ ಇರುವುದಿಲ್ಲ, ಅದರಲ್ಲೂ ನಿಮ್ಮ ಊರಿನಲ್ಲೇ, ಮನೆಯ ಪಕ್ಕದಲ್ಲೇ ಇರುವ ಪ್ರೇಕ್ಷಣೀಯ, ಆಕರ್ಷಣೀಯ, ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ನೀವು ನೋಡಿರುವುದಿಲ್ಲ. 

ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಎಂಬ ಭವ್ಯವಾದ ಇತಿಹಾಸ ಪ್ರಸಿದ್ಧ ಕಟ್ಟಡದ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಭಾರತದ ಮೊದಲ ಪ್ರಜೆಯಾದ ರಾಷ್ಟ್ರಪತಿಗಳು ಈ ಭವ್ಯವಾದ ಬಂಗಲೆಯಲ್ಲಿರುತ್ತಾರೆ. ಸುಮಾರು ೩೬೦ ಕೊಠಡಿಗಳಿರುವ ಈ ಆಕರ್ಷಣೀಯ ಕಟ್ಟಡದ ಒಳಗೆ ಪ್ರವೇಶ ಅಷ್ಟೊಂದು ಸುಲಭವಲ್ಲ. ಆದರೆ ಈಗ ಅಸಾಧ್ಯವೂ ಅಲ್ಲ. ಭಾರತದಲ್ಲಿರುವ ಹಲವಾರು ಐತಿಹಾಸಿಕ ಕಟ್ಟಡ, ಸ್ಮಾರಕಗಳು ಈಗ ಸರಕಾರಿ ಕಚೇರಿ, ಗಣ್ಯ ವ್ಯಕ್ತಿಗಳ ವಾಸಸ್ಥಳವಾಗಿರುವುದರಿಂದ ಶಿಷ್ಟಾಚಾರದ ಪ್ರಕಾರ ಬಿಗಿ ಭದ್ರತೆಯ ಅಡಿಯಲ್ಲಿರುತ್ತದೆ. ಆದರೆ ಈಗ ನಾವು ಬೆಂಗಳೂರಿನ ವಿಧಾನ ಸೌಧಕ್ಕೆ ಹೇಗೆ ಭೇಟಿ ನೀಡಬಹುದೋ ಅದೇ ಪ್ರಕಾರ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಅಶೋಕ ಹಾಲ್, ದರ್ಬಾರ್ ಹಾಲ್, ಗ್ರಂಥಾಲಯ, ಮುಖ್ಯ ಕಟ್ಟಡ, ಡ್ರಾಯಿಂಗ್ ರೂಮ್, ವಸ್ತು ಸಂಗ್ರಹಾಲಯ ಇವುಗಳನ್ನು ಮೊದಲೇ ಕಾಯ್ದಿರಿಸಿದ ಟಿಕೆಟ್ ಮೂಲಕ ವೀಕ್ಷಿಸಬಹುದು. 

ರಾಷ್ಟ್ರಪತಿ ಭವನವು ಭಾರತದ ಭವ್ಯ ಕಟ್ಟಡಗಳಲ್ಲಿ ಒಂದು. ಪ್ರತಿಯೊಬ್ಬ ಭಾರತೀಯರಿಗೂ ಈ ಕಟ್ಟಡಕ್ಕೆ ಭೇಟಿ ನೀಡಬೇಕೆಂಬ ಕನಸು ಇರುವುದು ಸಹಜ. ಈ ಭವನದಲ್ಲಿ ಮೂರು ಭಾಗಗಳಿದ್ದು ಅಲ್ಲಿಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ. ಮೊದಲ ಭಾಗದಲ್ಲಿ ಅಶೋಕ ಹಾಲ್, ದರ್ಬಾರ್ ಹಾಲ್ ಮೊದಲಾದುವುಗಳು ಇದ್ದರೆ ಎರಡನೇ ಭಾಗದಲ್ಲಿ ವಸ್ತು ಸಂಗ್ರಹಾಲಯ ಇದೆ. ಮೂರನೇ ಭಾಗದಲ್ಲಿ ಮೊಘಲ್ ಉದ್ಯಾನವನ (ಗಾರ್ಡನ್) ಒಳಗೊಂಡಿದೆ. 

ಬುಕ್ ಮಾಡುವುದು ಬಹಳ ಸುಲಭ: ನೀವು ರಾಷ್ಟ್ರಪತಿ ಭವನದ ಅಧಿಕೃತ ವೆಬ್ ಸೈಟ್ ಆದ www.visit.rashtrapatibhavan.gov.in ಗೆ ತೆರಳಿ ಬುಕಿಂಗ್ ಪುಟವನ್ನು ತೆರೆದು ಅಲ್ಲಿ ರಾಷ್ಟ್ರಪತಿ ಭವನ ಅಥವಾ ವಸ್ತು ಸಂಗ್ರಹಾಲಯವನ್ನು ಆಯ್ದು ಆನ್ ಲೈನ್ ಬುಕ್ಕಿಂಗ್ ಮಾಡಬಹುದು. ಮುಂಗಡ ಬುಕ್ಕಿಂಗ್ ಇಲ್ಲದೇ ಪ್ರವೇಶ ಇರುವುದಿಲ್ಲ. ನೀವು ಬುಕ್ ಮಾಡುವಾಗ ಲಭ್ಯವಿರುವ ದಿನ ಮತ್ತು ಸಮಯ (ಸ್ಲಾಟ್)ವನ್ನು ಗಮನಿಸಿ ಆಯ್ಕೆಯನ್ನು ಮಾಡಬೇಕು. ನಂತರ ಅಲ್ಲಿರುವ ಅರ್ಜಿಯನ್ನು ತುಂಬಿಸಿ ಶುಲ್ಕವನ್ನು ಪಾವತಿ ಮಾಡಬೇಕು. ಹೀಗೆ ಶುಲ್ಕ ಹಾಗೂ ಮಾಹಿತಿಯನ್ನು ತುಂಬಿದ ಬಳಿಕ ನೀವು ಬುಕ್ ಮಾಡಿದ ದಿನದಂದು ರಾಷ್ಟ್ರಪತಿ ಭವನಕ್ಕೆ ತೆರಳಬಹುದು. 

ರಾಷ್ಟ್ರಪತಿ ಭವನಕ್ಕೆ ಪ್ರವೇಶ ಹೇಗೆ?: ಭವನಕ್ಕೆ ಹೋಗಲು ಪ್ರತೀ ದಿನ ಮೂರು ಅವಧಿ (ಸ್ಲಾಟ್) ಗಳು ಇವೆ. ಮೊದಲ ಅವಧಿ ಬೆಳಿಗ್ಗೆ ೧೦.೩೦ರಿಂದ ೧೧.೩೦ರ ತನಕ, ಎರಡನೇ ಅವಧಿ ಮಧ್ಯಾಹ್ನ ೧೨.೩೦ ರಿಂದ ೧.೩೦ರ ತನಕ ಮತ್ತು ಕೊನೆಯ ಅವಧಿ ಮಧ್ಯಾಹ್ನ ೨.೩೦ ರಿಂದ ೩.೩೦ರ ತನಕ. ಈ ಸಮಯದಲ್ಲಿ ಒಂದು ಅವಧಿಗೆ ಗರಿಷ್ಟ ೨೫ ಮಂದಿಯನ್ನು ಏಕಕಾಲದಲ್ಲಿ ಭವನದ ಒಳಗೆ ಬಿಡುತ್ತಾರೆ. ರಾಷ್ಟ್ರಪತಿ ಭವನಕ್ಕೆ ವಾರದಲ್ಲಿ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರಗಳಂದು ಭೇಟಿ ನೀಡಬಹುದು. ನೋಂದಣಿ ಶುಲ್ಕ ೫೦.೦೦ರೂ.

museum.jpeg

ವಸ್ತು ಸಂಗ್ರಹಾಲಯ ಭೇಟಿ ಹೇಗೆ?: ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ (ಮ್ಯೂಜಿಯಂ) ವಾರದಲ್ಲಿ ಸೋಮವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಸರಕಾರಿ ರಜಾ ದಿನಗಳಲ್ಲಿ ಮುಚ್ಚಿರುತ್ತದೆ. ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ನಾಲ್ಕು ಅವಧಿಗಳಿವೆ. ಮೊದಲನೆಯದ್ದು ಬೆಳಿಗ್ಗೆ ೯.೩೦ ರಿಂದ ೧೧.೦೦, ಎರಡನೇ ಅವಧಿ ೧೧.೩೦ ರಿಂದ ಮದ್ಯಾಹ್ನ ೧.೦೦, ಮೂರನೇ ಅವಧಿ ಮಧ್ಯಾಹ್ನ ೧.೩೦ ರಿಂದ ೩.೦೦ ಹಾಗೂ ಕೊನೆಯ ಅವಧಿ ಮಧ್ಯಾಹ್ನ ೩.೩೦ ರಿಂದ ಸಾಯಂಕಾಲ ೫.೦೦ರ ತನಕ. ಇಲ್ಲಿ ಪ್ರತೀ ಅವಧಿಗೆ ೫೦ ಮಂದಿಗೆ ಒಳ ಹೋಗಲು ಅನುಮತಿ ಇರುತ್ತದೆ. 

ಸುಂದರವಾದ ಹೂವುಗಳಿಂದ ಕಂಗೊಳಿಸುವ ಮೊಘಲ್ ಗಾರ್ಡನ್ ಕೂಡಾ ನೋಡಲು ಯೋಗ್ಯವಾದ ಸ್ಥಳ. ಅಲ್ಲಿ ಅರಳುವ ಟ್ಯೂಲಿಪ್ ಹೂವುಗಳ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎನ್ನುತ್ತಾರೆ. ಇನ್ನು ಮುಂದೆ ಎಂದಾದರೂ ನವದೆಹಲಿ ಹೋಗುವ ಯೋಚನೆ ಇದ್ದರೆ ಮುಂಗಡವಾಗಿ ರಾಷ್ಟ್ರಪತಿ ಭವನದ ಪ್ರವೇಶವನ್ನು ಕಾಯ್ದಿರಿಸಿ. 

ಚಿತ್ರ ಕೃಪೆ: ಅಂತರ್ಜಾಲ ತಾಣ