ಈ ವರ್ಷ ಮುಂಗಾರು ಮಾರುತಗಳು ಇನ್ನಷ್ಟೇ ಕರ್ನಾಟಕವನ್ನು ಪ್ರವೇಶಿಸಬೇಕು. ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ, ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತೀ ಸಲ ಮಳೆ ಬಂದಾಗಲೂ ನಗರ ಪ್ರದೇಶಗಳಲ್ಲಿ ಕೃತಕ ನೆರೆಯ ಪರಿಸ್ಥಿತಿ ಎದುರಾಗುತ್ತದೆ. ಮಳೆ ಬರುವುದು ಈಗ ಹೊಸತೇ? ಈ ಹಿಂದೆ ಮಳೆ ಬಂದಿಲ್ಲವೇ? ನಮ್ಮ ಹಿರಿಯರು ಹೇಳುವ ಪ್ರಕಾರ ಹಿಂದೆಲ್ಲಾ ಹಲವು ವಾರಗಳ ತನಕವೂ ಸೂರ್ಯನನ್ನು ನೋಡುವುದಕ್ಕೆ ಆಗುತ್ತಿರಲಿಲ್ಲವಂತೆ ಅಷ್ಟೂ ಮಳೆ ಬರುತ್ತಿತ್ತಂತೆ. ಹಾಗೆ ನೋಡಿದರೆ ಈಗ ಬರುವ ಮಳೆ ಕಡಿಮೆಯೇ ಎನ್ನುತ್ತಾರೆ. ಇದು ಸುಳ್ಳು ಮಾತಲ್ಲ. ಈ ವರ್ಷ ಭಾರೀ ಮಳೆ, ಮೇಘ ಸ್ಪೋಟ, ಜಲ ತಾಂಡವ ಎಂಬುದೆಲ್ಲಾ ಜನ ಆಡಿಕೊಳ್ಳುತ್ತಾರೆ. ಹಾಗೆ ನೊಡಿದರೆ ಈ ವರ್ಷದ ಮಳೆಗಿಂತ ಅಧಿಕ ಮಳೆ ಹಿಂದೆಯೂ ಆಗಿದೆ. ಆದರೆ ಕಳೆದ ವರ್ಷದಂತೆ ಉತ್ತರ ಕರ್ನಾಟಕದಲ್ಲಿ ಮಾತ್ರ ಇಂತಹ ಮಳೆಯಾಗಿರಲಿಲ್ಲ. 

ಮಳೆ ಬರುವುದು ನಮ್ಮ ಕೈಯಲ್ಲಿಲ್ಲ. ಮಳೆ ಒಂದು ವರ್ಷ ಉತ್ತಮವಾಗಿ ಬಂದರೆ ಮತ್ತೆ ಕೆಲವು ವರ್ಷ ಬಹಳ ಕಡಿಮೆ ಬರಬಹುದು. ಅದು ಪ್ರಕೃತಿ ನಿಯಮ. ಆದರೆ ಮಳೆ ಬಂದರೆ ಎಷ್ಟು ಬರಬಹುದು? ಈ ತನಕದ ದಾಖಲೆಗಳ ಪ್ರಕಾರ ಎಷ್ಟು ಗರಿಷ್ಟ, ಎಷ್ಟು ಕನಿಷ್ಟ ಎಂಬ ಲೆಕ್ಕಾಚಾರ ಮಾತ್ರ ನಮ್ಮಲ್ಲಿ ಬೇಕು. ಕಳೆದ ಕೆಲ ವರ್ಷಗಳ ಹಿಂದಿನ ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಗೋಕಾಕ್, ಶಿವಮೊಗ್ಗ ಮುಂತಾದ ಕಡೆ ಜಲ ಪ್ರಳಯಕ್ಕೆ ಮೂಲ ಕಾರಣ ಭೀಮಾ, ಕೃಷ್ಣಾ, ಮಲಪ್ರಭಾ, ತುಂಗ ಭಧ್ರಾ ನದಿಯ ಪ್ರವಾಹ ಸ್ಥಿತಿ. ಪ್ರವಾಹ ಬರಲು ಅಧಿಕ ಮಳೆಯೊಂದಿಗೆ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರ ಬಿಟ್ಟಿರುವುದೂ ಒಂದು ಕಾರಣ. ಬಹುಷಃ ನದೀ ಪಾತ್ರದಲ್ಲಿ ಹೊಲ ಮನೆ ಮಾಡಿಕೊಂಡವರಿಗೆ ಪ್ರವಾಹದ ಮುನ್ಸೂಚನೆ ಸಕಾಲದಲ್ಲಿ ದೊರೆಯದೇ ಈ ರೀತಿ, ಪ್ರಾಣ ಹಾನಿ, ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಇದು ನಾವೆಲ್ಲಾ ಬೇಸರ ಪಡುವ ಸಂಗತಿಯೇ. ಆದರೆ ಈ ವರ್ಷದ ಪ್ರವಾಹ ಸ್ಥಿತಿಯನ್ನು ಕಂಡಾದರೂ ಇನ್ನು ಮುಂದೆ ಇಂತಹ ಸ್ಥಿತಿ ಬರದಂತೆ ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಜನ ನದಿ ಉಕ್ಕಿ ಹರಿದಾಗ ಮುಳುಗಡೆಯಾಗುವ ಸ್ಥಳದಲ್ಲಿ ಮನೆ ಮಠ ಮಾಡಿಕೊಳ್ಳುವುದು ಸೂಕ್ತವಲ್ಲ.  ಪ್ರವಾಹ ಸಂಭವನೀಯ ಪ್ರದೇಶಗಳನ್ನು ಅಣೆಕಟ್ಟು ನಿರ್ಮಿಸುವಾಗಲೇ ಗುರುತಿಸಲಾಗಿರುತ್ತದೆ. ಇದು ಜನವಸತಿಗೆ ಸೂಕ್ತ ಸ್ಥಳವಲ್ಲ ಎಂದು ಗುರುತು ಮಾಡಲಾಗಿರುತ್ತದೆ. ಆದರೆ ನಮ್ಮ ಜನ ಹಾಗೆ. ಎಲ್ಲಿ ಖಾಲಿ ಸ್ಥಳ ಇರುತ್ತದೆಯೋ ಅಲ್ಲಿ ಹೊಲ ಮನೆ ಮಾಡಿಕೊಳ್ಳುತ್ತಾರೆ. ಸ್ಥಳೀಯಾಡಳಿತ ಇದಕ್ಕೆ ಯಾವುದೇ ಆಕ್ಷೇಪ ಮಾಡುತ್ತಿಲ್ಲವೋ ಆಥವಾ ಜನ ಇವರ ಆಕ್ಷೇಪವನ್ನು ಲಕ್ಷಿಸುತ್ತಿಲ್ಲವೋ? ಒಟ್ಟಾರೆಯಾಗಿ ಇಂತಹ ಪರಿಸ್ಥಿತಿ ಬಂದಾಗ ಮಾತ್ರ ಜನ ಸರಕಾರವನ್ನು ಆಶ್ರಯಿಸುತ್ತಾರೆ. ಸರಕಾರ ನಮ್ಮ ನೆರವಿಗೆ ಬರಲಿಲ್ಲ ಎಂದು ದೂಷಿಸುತ್ತಾರೆ.

ಇನ್ನು ಮುಂದೆಯಾದರೂ ಯಾವ ಪ್ರದೇಶಗಳು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಮುಳುಗಡೆಯಾಗುವಂತವುಗಳು, ಅಲ್ಲಿ ಮಳೆ ಇಲ್ಲದ ಸಮಯದಲ್ಲಿ ಮಾತ್ರ ಬೇಳೆ  ಬೆಳೆಸುವ ಅನುಮತಿಯನ್ನು ಕೊಡುವುದು ಮತ್ತು ಅಲ್ಲಿ ಯಾವುದೇ ಕಾರಣಕ್ಕೆ ಮನೆ ಮಠ ನಿರ್ಮಾಣ ಮಾಡುವುದನ್ನು ಕಡ್ದಾಯವಾಗಿ ನಿಷೇಧಿಸಬೇಕು. ಈ ವರ್ಷ ಅಧಿಕ ಮಳೆ ಬಂದು ಅಣೆಕಟ್ಟುಗಳಿಂದ ನೀರು ಹೊರ ಬಿಡುವ ಸಮಯದಲ್ಲಿ ಪರಸ್ಪರ ನೆರೆ ರಾಜ್ಯಗಳು ಮಾಹಿತಿಯ ವರ್ಗಾವಣೆ ಮಾಡಿಕೊಂಡಿಲ್ಲವೋ ಅಥವಾ ಅವರ ಮಾಹಿತಿಯನ್ನು ನಾವು ನಿಲಕ್ಷಿಸಿದ್ದೇವೆಯೋ ಏನೋ ಒಂದು ಆಗಿದೆ. ಇಂತದ್ದು ಆಗ ಬಾರದು. ನೀರು ಹೆಚ್ಚಾದುದನ್ನು ಹೊರ ಬಿಡಲೇ ಬೇಕು. ಅದನ್ನು ಹಂತ ಹಂತವಾಗಿ ಸ್ಥಿತಿಗತಿ ನೋಡಿಕೊಂಡು ಹೊರ ಬಿಡಬೇಕು. ಅದು ಮಾತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗುವ ಕಾರಣ ಈ ಮಾಹಿತಿ ವರ್ಗಾವಣೆಯನ್ನು ಗಂಭೀರವಾಗಿ ಯೋಚಿಸಿ ಕ್ರಮಕೈಗೊಳ್ಳಬೇಕು. ಈ ವರ್ಷ ಮಹಾರಾಷ್ಟ್ರದ ಮಳೆ ಮತ್ತು ಅಲ್ಲಿನ ಜಲಾಶಯಲ್ಲಿ ನೀರು ಹೊರ ಬಿಟ್ಟಿರುವುದು ಪ್ರವಾಹ ಉಂಟಾಗಲು ಒಂದು ಮುಖ್ಯ ಕಾರಣವಾಗಿತ್ತು. ಜೊತೆಗೆ ಇಲ್ಲಿಯೂ ಮಳೆರಾಯ ಎಂದಿಗಿಂತ ಹೆಚ್ಚು ಮಳೆ ಸುರಿಸಿದ್ದೂ ಒಂದು ಕಾರಣ.

ಕಳೆದ ಒಂದೆರಡು ವರ್ಷಗಳಲ್ಲಿ ಉತ್ತರ ಕರ್ನಾಟಕದ ಸ್ಥಿತಿಗಿಂತ ದಕ್ಷಿಣ ಕರ್ನಾಟಕ ಮತ್ತು ಕೇರಳದ ಸ್ಥಿತಿ ಭಿನ್ನ. ದಕ್ಷೀಣ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮುಂತಾದ ಕಡೆ ಭಾರೀ ಪ್ರವಾಹ ಸ್ಥಿತಿ ಉಂಟಾಗಿದೆ. ಅಪಾರ ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ. ಕೇರಳ, ಮಡಿಕೇರಿ ಮುಂತಾದ ಕಡೆ ಗುಡ್ಡ ಕುಸಿತ ಮುಂತಾದ ಅವಘಡಗಳು ಜಾಸ್ತಿ. ಇಲ್ಲಿನ ಮಣ್ಣಿಗೆ ಮಳೆಯನ್ನು ಆಧರಿಸುವ ಶಕ್ತಿ ಇದೆ. ಇಲ್ಲಿ ಹಿಂದೆ ಇದೇ ರೀತಿ ಕುಂಭದ್ರೋಣ ಮಳೆ ಆಗುತ್ತಿತ್ತು. ಆದರೆ ಇಂತಹ ಹಾನಿ ಸಂಭವಿಸುತ್ತಿರಲಿಲ್ಲ. ಈಗ ಮಳೆ ನೀರನ್ನು ಹಿಡಿದಿಡುವ ಪ್ರಾಕೃತಿಕ ರಕ್ಷೆಗಳು ಕಡಿಮೆಯಾದ ಕಾರಣ ಮಳೆಯ ರೂಪದಲ್ಲಿ ಬಂದ ನೀರೆಲ್ಲಾ ಪ್ರವಾಹದೋಪಾದಿಯಾಗಿ ಹರಿದು ಹಾನಿ ಮಾಡುತ್ತಿದೆ. ಜನ ಅವೈಜ್ಞಾನಿಕವಾಗಿ ಮಣ್ಣು ಅಗೆತ ಮಾಡುತ್ತಾರೆ. ರಸ್ತೆ ಮುಂತಾದ ಕಾಮಗಾರಿಗಳನ್ನು ಮಾಡಿ ಸಮರ್ಪಕ ಬಸಿ ವ್ಯವಸ್ಥೆ, ಚರಂಡಿ ವ್ಯವಸ್ಥೆ ಮಾಡದೆ ರಸ್ತೆ ಕುಸಿತ ಆಗುತ್ತಿದೆ. ಮರ ಮಟ್ಟುಗಳನ್ನು ಕಡಿಯುತ್ತಾರೆ. ಇದೆಲ್ಲಾ ಪ್ರವಾಹ ಪರಿಸ್ಥಿತಿಯನ್ನು ಉಂಟುಮಾಡಲು ಒಂದು ಪ್ರಮುಖ ಕಾರಣವಾಗಿದೆ.

ಕಳೆದ ಕೆಲವು ವರ್ಷಗಳ ನೆರೆ ನಮಗೆ ಒಂದು ಪಾಠ. ಗಾಳಿ ತಡೆಗಾಗಿ ಅರಣ್ಯಗಳು ಇರಬೇಕು. ಇದರಿಂದ ಬೆಳೆಗೆ ಗಾಳಿಯ ಹೊಡೆತ ಕಡಿಮೆಯಾಗುತ್ತದೆ. ನೀರು ಭೂಮಿಗೆ ಇಂಗಲು ಮರಮಟ್ಟುಗಳು ಇರಬೇಕು. ಇವು ಕಡಿಮೆಯಾಗಿ ಇಂದು ಆವಾಂತರಗಳಾಗುತ್ತಿವೆ. ಇದರಿಂದ ನಾವು ಬುದ್ಧಿ ಕಲಿಯಬೇಕಿದೆ. ಸರಕಾರ ಬರೇ ಪರಿಹಾರ ಕೊಡುವ ಬದಲು ಮುನ್ನೆಚ್ಚರಿಕೆಯನ್ನು ಕೊಡುವುದನ್ನು ಮಾಡಬೇಕು. ವಿಮಾ ಕಂಪೆನಿಗಳು ಭೂಕಂಪ ಸಂಭವನೀಯ ಸ್ಥಳದಲ್ಲಿ ಏನಾದರೂ ಭೂಕಂಪ ಅವಘಡ ಸಂಭವಿಸಿದಾಗ ಪರಿಹಾರ ಕೊಡಲು ನಿರಾಕರಿಸುವಂತೆ ಪ್ರವಾಹಕ್ಕೆ, ಅವಘಡಕ್ಕೆ ಆಸ್ಪದ ಇರುವ ಕಡೆ ಜನ ಮನೆ ಮಠ, ಕೃಷಿ ಮಾಡಿದಲ್ಲಿ ಪರಿಹಾರ ನಿರಾಕರಿಸಿದರೆ ಇಂತಹ ಅವಘಢಗಳಿಗೆ ಕಡಿವಾಣ ಬೀಳಬಹುದು. 

ಪ್ರಾದೇಶಿಕ ಇತಿಮಿತಿಯೊಳಗೆ ಹೇಳುವುದಾದರೆ ಕರಾವಳಿ ಮಲೆನಾಡಿನಂತಹ ಪ್ರದೇಶಗಳಲ್ಲಿ ರಬ್ಬರ್ ತೋಟಗಳಲ್ಲಿ ನೀರನ್ನು ಹಿಡಿದಿಟ್ಟು ಅದನ್ನು ಭೂಮಿಗೆ ಇಂಗುವಂತೆ ಮಾಡುವುದು, ಭೂಮಿ ವಿಪರೀತ ನೀರು ಹೀರಿಕೊಂಡು ತಾಳಭಾಗದ ಜೇಡಿ (ಶೇಡಿ) ಮಣ್ಣು ಸಡಿಲವಾಗಿ ಗುಡ್ಡ ಕುಸಿತ ಮುಂತಾದ ಅವಘಡಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ. ಅದೇ ರೀತಿಯಲ್ಲಿ ಹೊಳೆಯ ಹಳ್ಳದ ನೈಜ ಆಳ ಕಡಿಮೆಯಾಗಿ ಮರಳು ತುಂಬಿ ನೆರೆ ಪರಿಸ್ಥಿತಿ ಉಂಟಾಗುವುದೂ ಸಾಧ್ಯವಿದೆ. ಅತಿಯಾದ ಮರಳುಗಾರಿಕೆ ನಡೆದ ಕೆಲವು ಕಡೆ ಹೊಳೆಯ ಆಳ ಹೆಚ್ಚಾಗಿ ಹಿಂದೆಲ್ಲಾ ವರ್ಷಕ್ಕೆ ಹಲವಾರು ಸಾರಿ ನೆರೆ ಬರುತ್ತಿದ್ದ ಕಡೆ ಈ ವರ್ಷ, ಕಳೆದ ವರ್ಷ ಅಂತಹ ನೆರೆ ಬಂದಿಲ್ಲದ ಉದಾಹರಣೆ ಇದೆ. 

ಈ ವರ್ಷ ಮಳೆ ಕಡಿಮೆ ಎನ್ನುವುದು ಹವಾಮಾನ ತಜ್ಞರ ಅಂದಾಜು. ಎಲ್ ನೀನೋ ಪರಿಣಾಮದಿಂದ ಮಳೆ ಮಾರುತಗಳು ಕ್ಷೀಣವಾಗಿ ರಾಜ್ಯದಾದ್ಯಂತ ಮಳೆಯ ಪ್ರಮಾಣ ಕಡಿಮೆಯಾದೀತು ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು ಮೊದಲಾದ ನಗರಗಳಲ್ಲಿ ಜೋರಾಗಿ ಸುರಿಯುವ ಒಂದೇ ಮಳೆಗೆ ಕೃತಕ ನೆರೆ ಉಂಟಾಗುತ್ತದೆ. ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತವೆ. ಚರಂಡಿಗಳು ಉಕ್ಕಿ ಹರಿಯುತ್ತವೆ. ಈ ವರ್ಷವಾದರೂ ಕೃತಕ ನೆರೆಯ ಪ್ರಮಾಣ ಕಡಿಮೆಯಾಗಿರಲಿ ಎಂದು ಆಶಿಸೋಣ.

ಮಾಹಿತಿ: ರಾಧಾಕೃಷ್ಣ ಹೊಳ್ಳ 

ಚಿತ್ರ ಕೃಪೆ: AI ಚಿತ್ರ