ಮಧುಮೇಹ ಅಥವಾ ಡಯಾಬಿಟೀಸ್ (ಸಕ್ಕರೆ ಕಾಯಿಲೆ) ಈಗ ಎಲ್ಲೆಡೆ ಒಂದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ಈಗಿನ ಆಹಾರ ಕ್ರಮ, ಜೀವನ ಶೈಲಿಯ ಕಾರಣದಿಂದ ನಮಗೆ ಮಧುಮೇಹ ಕಾಡುತ್ತಿದೆ. ಕೆಲವರಲ್ಲಿ ಅನುವಂಶಿಕವಾಗಿಯೂ ಇದು ಕಾಣಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಧುಮೇಹ ನಿಯಂತ್ರಣಕ್ಕೆ ನೈಸರ್ಗಿಕ ಪರಿಹಾರಗಳತ್ತ ಜನರು ಹೆಚ್ಚು ಒಲವು ತೋರಿಸುತ್ತಿರುವಾಗ ನೇರಳೆ ಹಣ್ಣಿನ ಬೀಜ ಅಥವಾ ಜಾಂಬುಳ ಬೀಜ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ. ನೇರಳೆ ಬೀಜಗಳಲ್ಲಿ ಇರುವ ಜಾಂಬೋಲಿನ್ ಮತ್ತು ಜಾಂಬೋಸಿನ್ ಸಂಯುಕ್ತಗಳು ಆಹಾರದಲ್ಲಿರುವ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುವ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏಕಾಏಕಿ ಏರಿಕೆಯಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಮಧುಮೇಹಿಗಳಲ್ಲಿ ಸಕ್ಕರೆ ನಿಯಂತ್ರಣಕ್ಕೆ ಇದು ಸಹಾಯಕವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ನೇರಳೆ ಬೀಜಗಳು ಪೌಷ್ಟಿಕಾಂಶಗಳ ದೃಷ್ಟಿಯಿಂದ ನೋಡಲು ಹೋದರೆ ಅತ್ಯಂತ ಸಮೃದ್ಧವಾಗಿವೆ. ಕಡಿಮೆ ಕ್ಯಾಲೋರಿ ಹೊಂದಿರುವ ಇವುಗಳಲ್ಲಿ ವಿಟಮಿನ್ ಸಿ, ಕಬ್ಬಿಣಾಂಶ, ಪೊಟ್ಯಾಸಿಯಮ್, ಮೆಗ್ನಿಸಿಯಮ್ ಹಾಗೂ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಇವು ದೇಹದ ಇನ್ಸುಲಿನ್ ಸ್ಪಂದನಶೀಲತೆಯನ್ನು ಸುಧಾರಿಸಲು ನೆರವಾಗುತ್ತವೆ. ಜೊತೆಗೆ ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ. ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗುತ್ತವೆ.

ನೇರಳೆ ಬೀಜದ ಪುಡಿಯನ್ನು ಬಳಸುವ ವಿಧಾನವೂ ಸರಳವಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ಚಮಚ ನೇರಳೆ ಬೀಜದ ಪುಡಿಯನ್ನು ಬೆರೆಸಿ ಸೇವಿಸುವುದು ಉತ್ತಮ ಎಂದು ಆಯುರ್ವೇದ ತಜ್ಞರು ಅಭಿಪ್ರಾಯ ಪಡುತ್ತಾರೆ.

ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಸುಮಾರು ೩೦ ನಿಮಿಷಗಳ ಮೊದಲು ಇದನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಅಲ್ಲದೆ, ಸಲಾಡ್, ಮೊಸರು ಅಥವಾ ಓಟ್ಸ್‌ಗಳ ಮೇಲೆ ಸ್ವಲ್ಪ ಪುಡಿಯನ್ನು ಸಿಂಪಡಿಸಿ ಸೇವಿಸುವುದರಿಂದ ದೈನಂದಿನ ಆಹಾರದಲ್ಲೇ ಇದನ್ನು ಸೇರಿಸಿ ಕೊಳ್ಳಬಹುದು. 

ಮನೆಯಲ್ಲೇ ಪುಡಿ ತಯಾರಿಸುವುದು ಹೇಗೆ?:

* ತಾಜಾ ನೇರಳೆ ಬೀಜಗಳನ್ನು ಚೆನ್ನಾಗಿ ತೊಳೆಯಿರಿ.

* ೩ ರಿಂದ ೭ ದಿನಗಳ ಕಾಲ ಬಿಸಿಲಿನಲ್ಲಿ ಸರಿಯಾಗಿ ಒಣಗಿಸಿ.

* ಬೀಜದ ಮೇಲಿನ ಸಿಪ್ಪೆ ತೆಗೆದು, ಒಳಗಿನ ಹಸಿರು ಭಾಗವನ್ನು ನುಣ್ಣಗೆ ಬೀಸಿಕೊಳ್ಳಿ (ಪುಡಿ ಮಾಡಿ).

* ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Air-tight container) ಶೇಖರಿಸಿಟ್ಟರೆ ದೀರ್ಘಕಾಲ ಬಳಸಬಹುದು.

ಪ್ರಮುಖ ವಿಷಯವೊಂದನ್ನು ಎಲ್ಲರೂ ನೆನಪಿನಲ್ಲಿಡಬೇಕು. ಏನೆಂದರೆ ಇದನ್ನು ಬಳಸಲು ವೈದ್ಯಕೀಯ ಸಲಹೆ ಕಡ್ಡಾಯ. ಏಕೆಂದರೆ ನೇರಳೆ ಬೀಜದ ಪುಡಿಯು ಮಧುಮೇಹಕ್ಕೆ (Diabetes) ಸಂಪೂರ್ಣ ಔಷಧಿಯಲ್ಲ, ಬದಲಿಗೆ ಇದು ಒಂದು ಪೂರಕ ಚಿಕಿತ್ಸೆ (Supplement) ಮಾತ್ರ. ಈಗಾಗಲೇ ಔಷಧಿ ತೆಗೆದುಕೊಳ್ಳುತ್ತಿರುವವರು ಇದನ್ನು ಬಳಸುವ ಮುನ್ನ ಖಂಡಿತವಾಗಿ ವೈದ್ಯರ ಸಲಹೆ ಪಡೆಯಬೇಕು. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ವೈದ್ಯರ ಮಾರ್ಗದರ್ಶನದೊಂದಿಗೆ ಇದನ್ನು ಬಳಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ