ಕೆಲವು ಸೈನಿಕ ಕಾರ್ಯಾಚರಣೆಗಳು ಭಾರತದ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದುದಿದೆ. ದೇಶದ ಗತಿಯನ್ನೆ ಬದಲಿಸಿದ್ದಿದೆ. ಭವಿಷ್ಯದ ಕಾರ್ಯಾಚರಣೆಗಳಿಗೆ ಮಾದರಿಯಾಗಿ ನಿಂತುದಿದೆ. 'ಅಪರೇಷನ್ ಸಿಂದೂರ್' ಕೂಡಾ ನಿಶ್ಚಿತವಾಗಿ ಅದರಲ್ಲೊಂದು. ಒಂದು ವರ್ಷದ ಹಿಂದೆ ಇದೇ ದಿನ ಆರಂಭಿಸಿದ ಅಪರೇಷನ್ ಸಿಂದೂರ್ ಕಾರ್ಯಾಚರಣೆಯು ನೆರೆಯ ಪಾಕಿಸ್ತಾನಕ್ಕೆ ಮತ್ತು ಪಾಕ್ ಪ್ರೇರಿತ ಭಯೋತ್ಪಾದಕರಿಗೆ ಎಂದೂ ಮರೆಯಲಾರದ ಪಾಠವೊಂದನ್ನು ಕಲಿಸಿದ್ದಷ್ಟೇ ಅಲ್ಲದೆ, ಜಗತ್ತಿಗೂ ಭಾರತದ ಸೈನಿಕ ಶಕ್ತಿ ಸಾಮರ್ಥ್ಯದ ಅರಿವು ಮಾಡಿಕೊಟ್ಟಿತು. ಭಾರತದ ವಿದೇಶಾಂಗ ನೀತಿಯಲ್ಲಿ ಹಾಗೂ 'ಭಯೋತ್ಪಾದನಾ ನೀತಿಯಲ್ಲಿ ಕೂಡಾ ಮಹತ್ತರ ಬದಲಾವಣೆಯನ್ನು ಸಂಕೇತಿಸಿತು. ಪಾಕಿಸ್ತಾನದ 'ಪರಮಾಣು ಬ್ಲಾಕ್ ಮೇಲ್'ನ್ನು ತಾನು ಲೆಕ್ಕಿಸುವುದೇ ಇಲ್ಲವೆಂಬ ಸ್ಪಷ್ಟ ಸಂದೇಶ ಸಾರಿತು. ದೇಶದ ಹಿತಾಸಕ್ತಿಯ ವಿಷಯ ಬಂದಾಗ ಯಾವುದೇ ಜಾಗತಿಕ ಒತ್ತಡಕ್ಕೂ ಮಣಿಯುವುದಿಲ್ಲವೆಂಬ ಗಟ್ಟಿ ನಿಲುವನ್ನು ಪ್ರದರ್ಶಿಸಿತು.
ಪಹಲ್ಗಾಮ್ ನಲ್ಲಿ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರು ೨೬ ಮಂದಿ ಅಮಾಯಕ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆಗೈದಾಗ ಭಾರತದ ತಾಳ್ಮೆಯ ಕಟ್ಟೆಯೊಡೆದುದು ಸಹಜವೇ ಆಗಿತ್ತು. ಹಾಗಾಗಿ ಭಾರತದ ಪ್ರತಿಕ್ರಿಯೆ ಕೂಡಾ ಅಷ್ಟೇ ಕಠೋರವಾಗಿತ್ತು. ೨೦೨೫ರ ಮೇ ೭ರಂದು ಪಾಕಿಸ್ತಾನದ ೯ ಭಯೋತ್ಪಾದಕರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿ ನಡೆಸಲಾಯಿತು. ಅದುವರೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾತ್ರ ಸರ್ಜಿಕಲ್ ದಾಳಿ ನಡೆಸಿದ್ದ ಭಾರತ ಈ ಬಾರಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೂ ನುಗ್ಗಿ ದಾಳಿ ನಡೆಸಿತು. ಆರಂಭದಲ್ಲಿ ಪಾಕಿಸ್ತಾನದ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಲಿಲ್ಲವಾದರೂ, ಪಾಕಿಸ್ತಾನವು ಭಾರತದ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಲಾರಂಭಿದ ಬಳಿಕ ಭಾರತವು ಪಾಕಿಸ್ತಾನದ ಮಿಲಿಟರಿ ಕೇಂದ್ರಗಳ ಮೇಲೂ ದಾಳಿ ನಡೆಸಿತು. ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಕೇಂದ್ರವಾದ ನೂರ್ ಖಾನ್ ನೆಲೆಯ ಮೇಲೂ ಕ್ಷಿಪಣಿ ದಾಳಿ ನಡೆಸಲಾಯಿತು. ಭಾರತದ ೮೮ ಗಂಟೆಗಳ ಕಾರ್ಯಾಚರಣೆ ಅದೆಷ್ಟು ಅತ್ಯುಗ್ರವಾಗಿತ್ತೆಂದರೆ ಪಾಕಿಸ್ತಾನವು ಮೊಣಕಾಲೂರಿ ಸಮರ ನಿಲ್ಲಿಸಲು ಕೋರಿಕೊಂಡಿತು. ಕದನ ವಿರಾಮ ಘೋಷಿಸುವಂತೆ ಮಾಡಲು ಅಮೆರಿಕ ಮೊದಲಾದ ರಾಷ್ಟ್ರಗಳ ಕೈಕಾಲು ಹಿಡಿಯಿತು.
ಭಾರತವು ಪಾಕಿಸ್ತಾನದ ಶಕ್ತಿ ಉಡುಗಿಸಿದ ಬಳಿಕ ಸಮರ ವಿರಾಮ ಘೋಷಿಸಿದ್ದು, ಆಕಾಲದಲ್ಲಿ ಕೆಲವರಿಂದ ಟೀಕೆಗೆ ಗುರಿಯಾಯಿತಾದರೂ ಅದು ಪ್ರಬುದ್ಧನಿಲುವಾಗಿತ್ತು ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ರಷ್ಯಾ, ಉಕ್ರೇನ್, ಇರಾನ್, ಅಮೆರಿಕಗಳು ತಾವು ಆರಂಭಿಸಿದ ಯುದ್ಧವನ್ನು ನಿಲ್ಲಿಸಲು ಹೆಣಗುತ್ತಿರುವಾಗ ಭಾರತವು ತನ್ನ 'ನಿಶ್ಚಿತ ಗುರಿ' ಸಾಧಿಸಿದೊಡನೆ ಸಮರ ನಿಲ್ಲಿಸಿ ವಿವೇಕ ಪ್ರದರ್ಶಿಸಿತು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೭-೦೫-೨೦೨೬
ಚಿತ್ರ ಕೃಪೆ: ಇಂಡಿಯಾ ಟುಡೇ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!