ಕೆಲವು ತಿಂಗಳ ಹಿಂದೆ ಕನ್ನಡದ ಸಿನಿಮಾ ಹಾಡೊಂದು ಸೃಷ್ಟಿಸಿದ ಚರ್ಚೆಯ ದಿಕ್ಕು ಗಾಬರಿ ಹುಟ್ಟಿಸುವಂತಿದೆ. ಶೃಂಗಾರ ಮತ್ತು ಕಾಮ, ನವಿರು ಮತ್ತು ಬಿಡುಬೀಸುತನದ ಭಾಷ್ಯವನ್ನೇ ಬದಲಿಸಿದಂತಾಗಿದೆ. ಈ ಹಿಂದೆ ದ್ವಂದ್ವಾರ್ಥವೇ ಚರ್ಚೆಗೀಡಾಗುತ್ತಿತ್ತು. ಈಗ ನೇರಾನೇರ ಕೀಳು ಅಭಿರುಚಿಯನ್ನೇ ಸೃಜಿಸಲಾಗುತ್ತಿದೆ.

ಸಂದರ್ಭ ಮತ್ತು ಸನ್ನಿವೇಶಕ್ಕೆ ಹೊಂದುತ್ತದೆ ಎಂಬ ಸಮಜಾಯಿಷಿಯು ಇಡೀ ಕೃತಿಯನ್ನೇ ಪ್ರಶ್ನಿಸುವಂತಾಗುತ್ತದೆ. ಈ ಹಿಂದೆ ಕನ್ನಡದಲ್ಲಿ ಬಂದ ರಸಿಕ ಸಾಲುಗಳು, ಶೃಂಗಾರದ ಚಿತ್ರಣದ ಸಾಲುಗಳೂ ಚರ್ಚೆಗೆ ಬಂದವು. ಇಲ್ಲಿ ಅಭಿವ್ಯಕ್ತಿ ಮತ್ತು ಪ್ರಸ್ತುತಿ ಎರಡೂ ಮನಕ್ಕೆ ಮುದ ಕೊಡುವಂತಿದ್ದವು. ಈ ಸಾಲುಗಳಿಗೆ, ಈ ಹೆಜ್ಜೆಗಳಿಗೆ ಉದ್ದೇಶಿತ ಪ್ರೇಕ್ಷಕರು ಯಾರು? ಈ ಪ್ರಶ್ನೆಯಿಲ್ಲದೆಯೇ ಇಂಥದ್ದೊಂದು ನಿರ್ಮಾಣ ಸಾಧ್ಯವಿದೆಯೇ? ಇಂಥ ಹಾಡುಗಳಲ್ಲಿ ಮಹಿಳೆಯರನ್ನು ಆಳುವ ಮತ್ತು ಪ್ರದರ್ಶನದ ವಸ್ತುವಂತೆಯೇ ಕಾಣುವ ಮನಸ್ಥಿತಿ ಢಾಳಾಗಿ ಎದ್ದು ಕಾಣುತ್ತದೆ.

ಹೆಣ್ಣು ಮಕ್ಕಳನ್ನು ಹೀಗಳೆಯುವ ಅವಹೇಳನ ಮಾಡುವ ಸಂಭಾಷಣೆಗಳನ್ನು ತೀರ ಸಹಜ ಮತ್ತು ಸಾಮಾನ್ಯ ಎಂಬಂತೆ ಸ್ವೀಕರಿಸಲಾಗುತ್ತಿದೆ. ಈ ಮನೋಭಾವವೇ ಇಂಥ ಸಾಹಿತ್ಯಕ್ಕೆ ಒಂದು ಹೆದ್ದಾರಿ ಹಾಕಿಕೊಟ್ಟಂತೆ ಆಗುತ್ತದೆ. ಹಿಂದಿ ಚಿತ್ರರಂಗದಲ್ಲಿಯೂ ಇಂಥ ಅನೇಕ ಹಾಡುಗಳು ವಿವಾದ ಸೃಷ್ಟಿಸಿದ್ದವು. ಹಾಡುಗಳ ಬಗೆಗೆ ವಿವಾದಗಳು ಹೊಸದೇನಲ್ಲ. ಆದರೆ ಅಂಥ ಹಾಡುಗಳಲ್ಲಿ ಒಂದು ನವಿರುತನವಿರುತ್ತಿತ್ತು ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿಯೂ ರಿಂಗ್ ರಿಂಗ್ ರಿಂಗಾ ಹಾಡು ಬಂದಾಗ, ಖಳನಾಯಕ್ ಚಿತ್ರದ ಚೋಲಿ ಕೆ ಪೀಭೆ ಕ್ಯಾ ಹೈ ಹಾಡು ವಿವಾದವೆಬ್ಬಿಸಿದಾಗಲೂ ಅದಕ್ಕೆ ವಿರೋಧ ಎಲ್ಲೆಡೆಯಿಂದ ವ್ಯಕ್ತವಾಗಿತ್ತು.

ಆದರೆ ಹಿಂದಿ ಚಿತ್ರರಂಗದಲ್ಲಿ ಅಮೀರ್ ಖಾನ್ ತಮ್ಮ ದಿಲ್ ಸಿನಿಮಾದ ನಂತರ ಮಹಿಳೆಯರನ್ನು ಕೀಳಾಗಿ ಕಾಣುವ ಹಾಡುಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿ, ಹಾಗೆಯೇ ನಡೆದುಕೊಂಡಿದ್ದಾರೆ. ನಟಿ ಶಬಾನಾ ಆಜ್ಮಿ ಸಹ ಮಹಿಳೆಯರನ್ನು ದುರ್ಬಲರಾಗಿಸುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿಯೇ ನಾಲ್ಕು ದಶಕಗಳಾಗಿವೆ. ಇಂಥ ಸ್ವಪ್ರಜ್ಞೆ ಮತ್ತು ಸಂಯಮದ ನಡೆಯನ್ನು ನಾವು ಮನರಂಜನಾ ಕ್ಷೇತ್ರದಲ್ಲಿರುವವರಿಂದ ನಿರೀಕ್ಷಿಸಬೇಕಾಗಿದೆ.

ಜನ ಬೇಡುವುದನ್ನೇ ನೀಡುವುದು ಎಂದು ಮನರಂಜನಾ ಕ್ಷೇತ್ರದಲ್ಲಿ ಹೇಳುವ ಕ್ಲೀಷೆಯ ಮಾತಾಗಿದೆ. ಈ ಕ್ಷೇತ್ರ ನೀಡಿದ್ದೇ ಅಭಿರುಚಿ ನಿರ್ಮಾಣ ಮಾಡುತ್ತದೆ. ಇವೆರಡೂ ಪ್ರಕ್ರಿಯೆಗಳಲ್ಲಿ ಎಲ್ಲವನ್ನೂ ಸ್ವೀಕರಿಸುವ ಯುವಜನಾಂಗವನ್ನು ಮರೆತಂತಾಗಿದೆ. ನಮ್ಮ ಯುವ ಪೀಳಿಗೆಗೆ ನಮ್ಮ ಅರಿವಿಗೆ ಬಾರದಂತೆಯೇ ಆಳ್ವಿಕೆಯ. ಪುರುಷಾಹಂಕಾರದ ಪಾಠಗಳನ್ನು ನೀಡುತ್ತಿದ್ದೇವೆ. ಹೆಣ್ಣುಮಕ್ಕಳಿಗೂ ಯಾರಾದರೂ ಮೆಚ್ಚಿದರಾಯಿತು, ಮೆಚ್ಚಿಸಿದರಾಯಿತು ಎಂಬ ಕೊನೆಯ ಸಾಲನ್ನು ಟಂಕಿಸಿದಂಥ ಸಿನಿಮಾಗಳನ್ನು ನೀಡುತ್ತಿದ್ದೇವೆ. ಗಂಡು ಮಕ್ಕಳಿಗೆ ಬಲವಂತದಿಂದಲಾದರೂ ಮಹಿಳೆಯರನ್ನು ಗೆಲ್ಲು ಎಂಬಂಥ ಟಾಸ್ಕುಗಳನ್ನೇ ನೀಡಲಾಗುತ್ತಿದೆ.

ಬದಲಾಗುತ್ತಿರುವ ಮಾಧ್ಯಮದ ವ್ಯಾಪ್ತಿಯಲ್ಲಿ ಇದೀಗ ಈ ಹಾಡಿಗೆ ಬಹುತೇಕ ಮಹಿಳೆಯರೇ ಟೀಕೆ. ವಿರೋಧ ಮತ್ತು ಹಿಂಪಡೆಯುವಿಕೆ ಎಲ್ಲವನ್ನೂ ಚಳವಳಿಯಂತೆ ಮುನ್ನಡೆಸಿದರು. ಆದರೆ ಎಲ್ಲದರಲ್ಲಿಯೂ ಗಟ್ಟಿದ್ದನಿಯಾಗಿ ನಿಂತಿದ್ದು ಮಹಿಳೆಯರದ್ದೇ. ಹಿಂದಿ ಭಾಷೆಗೆ ಮಾತ್ರ ಮಹಾರಾಷ್ಟ್ರದ ವಕೀಲರೊಬ್ಬರು ಹಾಡು ತೆಗೆಯುವಂತೆ ಒತ್ತಾಯಿಸಿದರು. ಆ ಸೂಕ್ಷ್ಮ ಮನಸು ಕನ್ನಡದ ಪುರುಷರಲ್ಲಿ ಕಂಡುಬರಲಿಲ್ಲ. ಇಲ್ಲಿ ಅಗೌರವದ ಭಾಷೆ ಕೇವಲ ಮಹಿಳೆಯರನ್ನು ಬಳಸಿಕೊಂಡ ಕುರಿತಲ್ಲ, ಪುರುಷರ ಅಭಿರುಚಿಯನ್ನು ಕೀಳಾಗಿಸಿರುವ ಕುರಿತೂ ಆಕ್ಷೇಪಗಳಿರಬೇಕಿತ್ತು.

ಗಂಡು ಮನಸುಗಳೆಲ್ಲವೂ ಇಂಥವನ್ನು ಆನಂದಿಸುತ್ತವೆಯೇ? ಆಕ್ಷೇಪಿಸದಿದ್ದರೂ, ಆನಂದಿಸದಿದ್ದರೂ ಆ ಬಗ್ಗೆ ಸಣ್ಣದೊಂದು ಸ್ವೀಕೃತಿ ಇದ್ದಂತೆಯೇ ಈ ಮನಸ್ಥಿತಿಯೇ ಹಾಡು ಬರೆದ ಪ್ರೇಮ್ ಅವರ ಸಮರ್ಥನೆಯಲ್ಲಿಯೂ ಕ್ಷಮಾಪಣೆಯಲ್ಲಿಯೂ ಎದ್ದು ಕಾಣುತ್ತಿತ್ತು. ನಮಗೆ ಗಾಬರಿ ಹುಟ್ಟಬೇಕಿರುವುದು ಈ ಸಾಹಿತ್ಯದ ಮೇಲಷ್ಟೇ ಅಲ್ಲ. ಇದನ್ನು ಸಮರ್ಥಿಸುವ ಮನಸ್ಥಿತಿ ನಿರ್ಮಾಣವಾಗಿರುವ ವ್ಯವಸ್ಥೆಯ ಬಗೆಯೂ ಹೌದು.

ಅಸಹನೀಯ ಭಾಷೆಯು ಸಹನೀಯವಾಗಿಸುವುದು ಕೆಲವೊಮ್ಮೆ ಚಿತ್ರೀಕರಣದ ಜವಾಬ್ದಾರಿಯೂ ಆಗಿರುತ್ತಿತ್ತು. ಆದರೆ ಈಗ ಎಲ್ಲೆಡೆಯೂ ನೇರಾನೇರ ತೋರುವಲ್ಲಿ ಮಾದಕ ಚೆಲುವೂ ಶೃಂಗಾರಕ್ಕಿಂತಲೂ ಕಾಮವನ್ನೇ ಉತ್ತೇಜಿಸುವಂತಾಗುತ್ತಿದೆ. ಮಕ್ಕಳು ಸರಳವಾಗಿ ಕಲಿತು ನೆನಪಿಟ್ಟುಕೊಂಡು ಗುನುಗುವಂತಾಗುವ ಈ ಡಿಜಿಟಲ್ ಮಾಧ್ಯಮಗಳ ಹಾವಳಿಯಲ್ಲಿ ಒಂದು ತಲೆಮಾರನ್ನು ಹಾಳುಗೆಡಹುವ ಕೆಲಸ ಸರಳವಾಗುತ್ತಿದೆ. ಇದನ್ನು ಸುಮ್ಮನಿದ್ದು ಒಪ್ಪಿಕೊಂಡವರೆಲ್ಲ ಹಾಳುಗೆಡಹುತ್ತಿರುವ ಹೊಣೆಗಾರಿಕೆಯನ್ನೂ ಹೊರಲೇಬೇಕಾಗುತ್ತದೆ.

ಮಹಿಳೆಯರೆಲ್ಲ ಈ ಕೀಳು ಅಭಿರುಚಿಯನ್ನು ಪ್ರಶ್ನಿಸಿ, ವಿರೋಧಿಸಿದಂತೆಯೇ ಪುರುಷರೂ ಧ್ವನಿ ಎತ್ತಬೇಕಿತ್ತು. ಯಾರೂ ಈ ಅಗ್ಗದ ಮನರಂಜನೆಯ ಗುರಿಯಾಗಿರುವ ಪ್ರೇಕ್ಷಕರೋ ಅವರೆಲ್ಲರೂ ವಿರೋಧಿಸಬೇಕಾಗಿತ್ತು. ಇಂಥದೊಂದು ಸೃಷ್ಟಿ ಮಹಿಳಾಕೇಂದ್ರಿತವಾಗಿದ್ದು ಅನ್ನೋದು ಸಹ ಪುರುಷಾಹಂಕಾರವನ್ನೇ ಎತ್ತಿ ಹಿಡಿದಂತಾಗುತ್ತದೆ. ಲಿಂಗ ಭೇದವಿಲ್ಲದೆ ಎಲ್ಲರೂ ವಿರೋಧಿಸಿದಾಗ ಮಾತ್ರ ಅದು ಒಳಿತು ಮತ್ತು ಕೆಡುಕಿನ ನಡುವಿನ ಆಯ್ಕೆಯ ಪ್ರಶ್ನೆಯಾಗಿ ಬದಲಾಗುತ್ತದೆ.

-ರಶ್ಮಿ ಎಸ್

(ಕೃಪೆ: ‘ಸುಧಾ’ ವಾರ ಪತ್ರಿಕೆಯ ನಿಮ್ಮೊಡನೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ