ಕೇರಳದಲ್ಲಾಗುತ್ತಿರುವ ಭೂಕುಸಿತ ಈ ಕರುನಾಡಿಗೂ ಕಂಪನ ಹುಟ್ಟುಹಾಕಿದೆ ಹೆಚ್ಚುತ್ತಿರುವ ಜನಸಂಖ್ಯೆ, ಆಧುನಿಕ ಜಗತ್ತಿನ ಓಟಕ್ಕೆ ಅಭಿವೃದ್ಧಿ ಅನಿವಾರ. ರಸ್ತೆ ವಿದ್ಯುತ್, ನೀರು, ಶಾಲೆ, ಆಸ್ಪತ್ರೆ ಇವು ಎಲ್ಲರ ಮೂಲಭೂತ ಅಗತ್ಯ. ಇದನು ಪೂರೈಸುವ ಸಾಮರ್ಥ್ಯವೂ ಭೂಮಿಗಿದೆ. ಆದರೆ, ಆಸೆಗಳ ಮಿತಿ ಇಷ್ಟಕ್ಕೇ ಸೀಮಿತ ವಾಗದೆ ಐಷಾರಾಮಿ ಬದುಕಿನ ದುರಾಸೆಯಿಂದ ಭೂ ಒಡಲು ಸೀಳಲಾಗುತ್ತಿದೆ. ಲಂಗು ಲಗಾಮಿಲ್ಲದ ಅಭಿವೃದ್ಧಿ ಭೂಮಿಯೇ ಬಾಯ್ದೆರೆಯುವಂತೆ ಮಾಡುತ್ತಿದೆ. ಪಶ್ಚಿಮಘಟ್ಟದಂತಹ ಜೀವವೈವಿಧ್ಯ ತಾಣಗಳಲ್ಲಿ ಗಣಿಗಾರಿಕೆ, ಬೃಹತ್ ಅಣೆಕಟ್ಟುಗಳು, ಸುರಂಗ ಮಾರ್ಗ, ಅರಣ್ಯನಾಶ, ಅನಿಯಂತ್ರಿತ ನಿರ್ಮಾಣಗಳು ನೈಸರ್ಗಿಕ ಸಮತೋಲನ ಹಾಳು ಮಾಡುತ್ತಿವೆ. ಇದರ ಪರಿಣಾಮವೇ ಭೂಕುಸಿತ, ಪ್ರವಾಹ, ನೀರಿನ ಕೊರತೆ, ಹವಾಮಾನದಲ್ಲಿ ಬದಲಾವಣೆ. ಇದು ಮನುಷ್ಯನೇ ಸೃಷ್ಟಿಸಿಕೊಳ್ಳುತ್ತಿರುವ ಆಪತ್ತು.
ಮನುಷ್ಯನಿಗೆ ಭೂಮಿಯ ಮೇಲೆ ವಿಶೇಷ ಹಕ್ಕುಗಳೇನೂ ಇಲ್ಲ. ಭೂಮಿಯಿಂದ ಎಲ್ಲವನ್ನೂ ಪಡೆಯುತ್ತಿರುವ ಮನುಷ್ಯ ಕೃತಘ್ನನಾಗಿ ದೌರ್ಜನ್ಯ ಎಸಗುತ್ತಿದ್ದಾನೆ. ಪ್ರಾಕೃತಿಕ ಸೌಂದಯ್ಯ ಸವಿಯುವ ತಾಣಗಳಲ್ಲೇ ಕೇಬಲ್ ಕಾರುಗಳು, ಜಿಪ್‌ಲೈನ್ ಗಳು, ವೀಕ್ಷಣಾ ಗೋಪುರಗಳು, ಬೃಹತ್ ಹೋಟೆಲ್, ರೆಸಾರ್ಟ್‌ಗಳು, ಹೋಮ್ ಸ್ಟೇಗಳನ್ನು ಕಟ್ಟಿಕೊಂಡು ಮೋಜು ಮಾಡುವ ವಿಕೃತ ಮನಸ್ಥಿತಿ ಮನುಷ್ಯನದು. ಅಭಿವೃದ್ಧಿಯೆಂದರೆ ಬೆಟ್ಟಗುಡ್ಡಗಳನ್ನು ಅಗೆದು ಕಾಂಕ್ರಿಟ್ ಕಟ್ಟಡ ಕಟ್ಟುವುದು ಎಂಬ ಭಾವನೆ ಸರಕಾರಗಳದ್ದು. ಪಶ್ಚಿಮಘಟ್ಟದ ಸೂಕ್ಷ್ಮತೆಯ ಅರಿವಿಲ್ಲದೆ ಸುರಂಗ ಕೊರೆದು ಸಾಧಿಸುವ ಅಭಿವೃದ್ಧಿ ಅವನತಿಯ ಮುನ್ನುಡಿ. ಪ್ರಕೃತಿಯ ಮಡಿಲಲ್ಲಿ ಪರಿಸರ ಕೇಂದ್ರಿತ ಅಭಿವೃದ್ಧಿಯ ಚಿಂತನೆಗೆ ಒತ್ತು ಕೊಡಬೇಕು. ಇಲ್ಲದಿದ್ದರೆ ಇಂದಿನ ಪ್ರಗತಿ ನಾಳಿನ ವಿಪತ್ತಾಗುತ್ತದೆ. ಸಮತೋಲನವೇ ನಿಜವಾದ ಅಭಿವೃದ್ಧಿ ಎಂಬುದನ್ನು ಎಲ್ಲರೂ ಅರಿಯಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೯-೦೭-೨೦೨೬
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!