ಸುಮಾರು ೪೦ ವರ್ಷಗಳ ಹಿಂದೆ ನನ್ನ ಅಪ್ಪ ಹೊಸದಾಗಿ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿಸಿ ನೆರಳಿಗಾಗಿ ಕೆಲವು ಗಿಡಗಳನ್ನು ನೆಟ್ಟಿದ್ದರು. ಹಾಗೆ ನೆಟ್ಟ ಹಿಪ್ಪುನೇರಳೆ (Mulberry) ಗಿಡ ಕೆಲವೇ ವರ್ಷಗಳಲ್ಲಿ ಬೆಳೆದು ಮರವಾಗಿ ನಿಂತಿತ್ತು. ನಮ್ಮ ನೆರೆಮನೆಯವರೊಬ್ಬರು ಅವರ ಮನೆಯಲ್ಲಿದ್ದ ಸಸಿಯೊಂದನ್ನು ತಂದು ಆ ಮರದ ಪಕ್ಕ ನೆಟ್ಟಿದ್ದರು. ಅದು ಶರಬತ್ತು ಮಾಡುವ ಕಾಯಿಯ ಬಳ್ಳಿ ಎಂದು ಏನೋ ಹೆಸರು ಹೇಳಿದ್ದರು. ನಾನು ತುಂಬಾ ಸಣ್ಣವನಿದ್ದೆ. ನನಗೆ ಆ ಇಂಗ್ಲೀಷ್ ಹೆಸರು ಬಾಯಿಗೆ ಬರುತ್ತಲೇ ಇರಲಿಲ್ಲ. ಬಳ್ಳಿ ಬೆಳೆದು ದೊಡ್ಡದಾಗಿ ಸುಂದರವಾದ ಗಡಿಯಾರವನ್ನು ಹೋಲುವ ಹೂವು ಬಿಟ್ಟಿತು. ನೋಡ ನೋಡುತ್ತಿದ್ದಂತೆ ಗೋಲಾಕಾರದ ಹಸಿರು ಕಾಯಿಗಳು ನೇತಾಡತೊಡಗಿದವು.
ಕ್ರಮೇಣ ಹಸಿರು ಕಾಯಿಗಳು ಕ್ರಿಕೆಟ್ ಬಾಲ್ ಆಕಾರಕ್ಕೆ ಬೆಳೆದು ಹಳದಿ ಬಣ್ಣಕ್ಕೆ ತಿರುಗಿದ ಬಳಿಕ ನಾವು ಅದನ್ನು ಕಿತ್ತು ಅದನ್ನು ಕತ್ತರಿಸಿ ನೋಡಿದಾಗ ಒಳಗೆ ಪುಟ್ಟ ಚೀಲ. ಆ ಚೀಲದೊಳಗೆ ಹಲವಾರು ರಸಭರಿತ ಬೀಜಗಳು. ಆ ಬೀಜಗಳನ್ನು ಬಳಸಿ ಅದಕ್ಕೆ ಸಕ್ಕರೆ ಹಾಕಿ ಅಮ್ಮ ಚೆನ್ನಾದ ಶರಬತ್ತು ಮಾಡಿಕೊಡುತ್ತಿದ್ದರು. ಆರೋಗ್ಯಕ್ಕೆ ಎಷ್ಟು ಉತ್ತಮವೋ ಎಂಬ ಸಂಗತಿ ಗೊತ್ತಿಲ್ಲದ ಕಾಲವದು. ಸಕ್ಕರೆ ಹಾಕದಿದ್ದರೆ ಮಾತ್ರ ಕುಡಿಯಲು ಅಥವಾ ತಿನ್ನಲು ಸಾಧ್ಯವೇ ಇರಲಿಲ್ಲ. ಅಷ್ಟು ಹುಳಿಯಾಗಿತ್ತು ಆ ಕಾಯಿಯ ರಸ. ಹಲವಾರು ವರ್ಷಗಳ ಕಾಲ ಈ ಶರಬತ್ತು ಕಾಯಿ ನಮ್ಮ ಮನೆಯ ಅಂಗಳದಲ್ಲೇ ಇತ್ತು.
ಒಮ್ಮೆ ಮುಂಬಯಿಯಿಂದ ನನ್ನ ಅಮ್ಮನ ಸಂಬಂಧಿಕರು ಬಂದಾಗ ಈ ಬಳ್ಳಿಯನ್ನು ನೋಡಿ ಇದು ಪ್ಯಾಶನ್ ಫ್ರುಟ್ (Passion Fruit) ಬಳ್ಳಿ ಅಲ್ಲವಾ ಎಂದರು. ಆಗ ನನಗೆ ಈ ಪ್ಯಾಶನ್ ಫ್ರುಟ್ (Passiflora edulis) ಎಂಬ ಹಣ್ಣಿನ ಬಗ್ಗೆ ಮಾಹಿತಿ ಇರಲಿಲ್ಲ. ನಂತರ ಕ್ರಮೇಣ ಈ ಬಳ್ಳಿ ಅಳಿದು ಹೋಯಿತು. ಶರಬತ್ತು ಕಾಯಿ ಮಾತ್ರ ನೆನಪಾಗಿ ಉಳಿಯಿತು.

ನಾನು ೯ ನೇ ತರಗತಿಯಲ್ಲಿದ್ದಾಗ ಅನಿರೀಕ್ಷಿತವಾಗಿ ನಮ್ಮ ನೆರೆಮನೆಯವರೊಂದಿಗೆ ಊಟಿಯ ಸಮೀಪದ ಕೊಟಡಾ ಚಹಾ ಎಸ್ಟೇಟ್ ಗೆ ಹೋಗಿದ್ದೆ. ಅಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಒಂದು ವಾರ ಇದ್ದೆ. ಆ ಚಹಾ ತೋಟದ ಗೆಸ್ಟ್ ಹೌಸ್ ನ ಹಿಂದುಗಡೆಯಿದ್ದ ದೊಡ್ಡ ಮರವೊಂದಕ್ಕೆ ಬಳ್ಳಿಯೊಂದು ಹಬ್ಬಿತ್ತು. ಅದರಲ್ಲಿ ನಮ್ಮ ಶರಬತ್ತು ಕಾಯಿಯಂತದ್ದೇ ನೂರಾರು ಕಾಯಿಗಳು ಆದರೆ ಹೊರ ಬಣ್ಣ ಮಾತ್ರ ತಿಳಿ ನೇರಳೆ. ನಮ್ಮಲ್ಲಿ ಹಸಿರು ಮಿಶ್ರಿತ ಹಳದಿಯಾಗಿದ್ದರೆ ಅಲ್ಲಿ ನೇರಳೆ ಬಣ್ಣ. ಒಂದನ್ನು ಕಿತ್ತು ಕತ್ತರಿಸಿ ನೋಡಿದಾಗ ಒಳಗಡೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ಶರಬತ್ತು ಕಾಯಿಯ ಹಾಗೇ ಇತ್ತು. ಆದರೆ ಇದರ ರುಚಿ ಮಾತ್ರ ಬಹಳ ಸಿಹಿಯಾಗಿತ್ತು. ನಂತರ ಆ ಮರದಿಂದ ಬಳ್ಳಿಯನ್ನು ಎಳೆದು ಎಲ್ಲಾ ಕಾಯಿಗಳನ್ನು ಕಿತ್ತು ನಾವೆಲ್ಲಾ ತಿಂದದ್ದೇ ತಿಂದದ್ದು. ಆ ಪ್ಯಾಶನ್ ಫ್ರುಟ್ ಅಷ್ಟೊಂದು ಸಿಹಿಯಾಗಿತ್ತು. ಸಕ್ಕರೆ ಹಾಕಿ ಶರಬತ್ತು ಮಾಡಬೇಕಾದ ಅನಿವಾರ್ಯತೆಯೇ ಇರಲಿಲ್ಲ. ಹೀಗೆ ನನಗೆ ಎರಡು ಬಗೆಯ ಪ್ಯಾಶನ್ ಫ್ರುಟ್ ತಳಿಗಳ ಪರಿಚಯವಾಯಿತು.
ಈಗಂತೂ ಬಹುತೇಕ ಸೂಪರ್ ಮಾರ್ಕೆಟ್, ಹಣ್ಣಿನ ಅಂಗಡಿಗಳಲ್ಲಿ ಪ್ಯಾಶನ್ ಫ್ರುಟ್ ಲಭ್ಯವಿದೆ. ಮೂರು ವಿಧದ ಹಣ್ಣುಗಳು ಸಿಗುತ್ತವೆ. ಈ ಹಣ್ಣು ಅಷ್ಟಾಗಿ ಬಳಕೆಯಲ್ಲಿ ಇಲ್ಲದೇ ಇದ್ದರೂ ಇದು ಪೌಷ್ಟಿಕಾಂಶಗಳ ಖಜಾನೆ ಎನ್ನ ಬಹುದು. ಈ ಹಣ್ಣಿನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಗಮನ ಹರಿಸುವ…
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯತ್ತ ಜನರು ಹೆಚ್ಚಿನ ಗಮನ ಹರಿಸುತ್ತಿದ್ದು, ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ಅಂತಹ ಹಣ್ಣುಗಳಲ್ಲಿ ಪ್ಯಾಶನ್ ಫ್ರುಟ್ ಕೂಡ ಒಂದು. ವಿಶಿಷ್ಟ ರುಚಿ, ಸುಗಂಧ ಹಾಗೂ ಆರೋಗ್ಯಕಾರಿ ಗುಣಗಳಿಂದ – ಈ ಹಣ್ಣು ಜನಪ್ರಿಯತೆ ಪಡೆಯುತ್ತಿದೆ. ವಿಟಮಿನ್ ಸಿ. ವಿಟಮಿನ್ ಎ, ಫೈಬರ್ ಹಾಗೂ ಆ್ಯಂಟಿಆಕ್ಸಿಡೆಂಟ್ಗಳ ಸಮೃದ್ಧಿಯಾಗಿರುವ ಪ್ಯಾಶನ್ ಫ್ರುಟ್ ಹಣ್ಣು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಸಹಕಾರಿಯಾಗಿದೆ. ಸೋಂಕುಗಳು ಮತ್ತು ದೇಹದ ವಿವಿಧ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ಯಾಶನ್ ಫ್ರುಟ್ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶ (ಫೈಬರ್) ಇರುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ನಿಯಮಿತ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ. ತೂಕ ನಿಯಂತ್ರಣ ಬಯಸುವವರಿಗೂ ಈ ಹಣ್ಣು ಉತ್ತಮ ಆಯ್ಕೆಯಾಗಿದೆ. ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚು ಫೈಬರ್ ಹೊಂದಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಲು ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೂ ಪ್ಯಾಶನ್ ಫ್ರುಟ್ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದರಲ್ಲಿ ಇರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದ್ದು, ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗಬಹುದು. ಇದರ ಜೊತೆಗೆ, ಪ್ಯಾಶನ್ ಫೂಟ್ ನಲ್ಲಿರುವ ಕೆಲವು ಪೌಷ್ಟಿಕಾಂಶಗಳು ಉತ್ತಮ ನಿದ್ರೆಗೆ ಸಹಕಾರಿ ಎನ್ನಲಾಗಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿಯೂ ನೆರವಾಗುತ್ತವೆ. ವಿಟಮಿನ್ ಎ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಪ್ಯಾಶನ್ ಫ್ರುಟ್ ಅನ್ನು ಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಹಾಂ, ಅಂದ ಹಾಗೆ ಮರೆತೆ ಈ ಹಣ್ಣಿಗೆ ಕನ್ನಡದಲ್ಲೂ ಮುದ್ದಾದ ಹೆಸರಿದೆ. ಇದನ್ನು ಕೃಷ್ಣ ಫಲ ಎಂದೂ ಕರೆಯುತ್ತಾರೆ ಎಂದು ಗೆಳೆಯರೊಬ್ಬರು ಹೇಳಿದ ನೆನಪು. ಈ ಹಣ್ಣು ಸಿಕ್ಕಾಗ ಶರಬತ್ತು ಮಾಡಿ ಕುಡಿಯಿರಿ. ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣಿನ ದರ ಸ್ವಲ್ಪ ದುಬಾರಿಯೇ. ಆದರೂ ಅಪರೂಪಕ್ಕೆ ತಂದು ಬಳಕೆ ಮಾಡಬಹುದು. ನಿಮ್ಮ ಮನೆಯಂಗಳದಲ್ಲೂ ಈ ಸಸ್ಯವನ್ನು ನೆಟ್ಟು ಬೆಳೆಸಬಹುದು. ಅಲಂಕಾರಕ್ಕೂ, ಆರೋಗ್ಯಕ್ಕೂ ಸೈ ಎನ್ನುವ ಪ್ಯಾಶನ್ ಫ್ರುಟ್ ಸಸ್ಯವನ್ನು ಬೆಳೆಸಿ ನೋಡಿ.
(ಮಾಹಿತಿ ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!