ಹೌದು, ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳಿಗೇನು ಗೊತ್ತು? ಇಲ್ಲಿ ಅದಕ್ಕಿಂತಲೂ ದೊಡ್ದ ಕ್ರೂರಿಗಳಾದ ಎರಡು ಕಾಲಿನ ಪ್ರಾಣಿಗಳು ಇವೆಯೆಂದು. ಕಾಡು ಕಣ್ಮರೆಯಾಗುತ್ತಿದೆ. ಪ್ರಾಣಿಗಳ ನೈಸರ್ಗಿಕವಾದ ವಾಸಸ್ಥಾನ ಖಾಲಿಯಾಗುತ್ತಿದೆ. ಆಹಾರದ ಕೊರತೆ, ಏಕಾಂಗಿತನ, ವಾಸಕ್ಕೆ ಅನುಕೂಲವಾದ ಸ್ಥಳ ಇಲ್ಲದೇ ಇರುವುದರಿಂದ ಸಹಜವಾಗಿಯೇ ಅದು ಜನ ವಸತಿ ಪ್ರದೇಶಗಳಿಗೆ ಬರುತ್ತಿದೆ. ಈ ಪ್ರಾಣಿಗಳ ಹಸಿವಿಗೆ ನಾಯಿ, ಬೆಕ್ಕು, ಆಡು, ಹಸು ಯಾವುದೂ ಆಗುತ್ತದೆ. ಯಾವುದೂ ಸಿಗದಿದ್ದರೆ ಮನುಷ್ಯನೂ ಬಲಿಯಾಗುತ್ತಾನೆ. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಕಾಡುಗಳ ನಾಶ. ನಗರೀಕರಣದ ನೆಪದಲ್ಲಿ ನಾವು ಕಾಡಿನಲ್ಲಿರುವ ಮರಗಳನ್ನು ಕಡಿಯುತ್ತಿದ್ದೇವೆ. ಪುಟ್ಟ ಪ್ರಾಣಿಗಳಿಗೆ, ಪಕ್ಷಿಗಳಿಗೆ ಆಹಾರವಾಗುತ್ತಿದ್ದ ಪುಟ್ಟ ಪುಟ್ಟ ಹಣ್ಣುಗಳ ಮರಗಳು ಕಾಡಿನಲ್ಲಿ ಕಣ್ಮರೆಯೇ ಆಗಿವೆ. ಹೀಗೆ ದಿನಕಳೆದಂತೆ ಪ್ರಾಣಿಗಳ ಸಂತತಿ ನಶಿಸುತ್ತಿದೆ.
ಈ ಪ್ರಾಣಿಗಳ ನೆನಪಾಗಲು ಕಾರಣ ಇದೆ. ಮೊನ್ನೆ ಅಂದರೆ ಅಕ್ಟೋಬರ್ ೪ರಂದು ವಿಶ್ವ ಪ್ರಾಣಿ ದಿನ (World Animal Day). ಬಹಳಷ್ಟು ಮಂದಿಗೆ ಈ ಒಂದು ದಿನ ಮಾತ್ರ ಪ್ರಾಣಿಗಳ ನೆನಪಾಗುತ್ತದೆ. ಈ ದಿನ ಕೇವಲ ಭೂಮಿ ಮೇಲಿರುವ ಪ್ರಾಣಿಗಳನ್ನು ಸಂರಕ್ಷಣೆ ಮಾಡಲು ಇರುವ ದಿನವಲ್ಲ. ದನ, ನಾಯಿ, ಕುರಿಗಳಿಂದ ಹಿಡಿದು ಉಭಯವಾಸಿ, ಜಲಚರಗಳು ಎಲ್ಲವೂ ಈ ಪ್ರಾಣಿ ದಿನದ ಸಂರಕ್ಷಣೆ ಅಡಿಯಲ್ಲಿ ಬರುತ್ತದೆ. ಕಳೆದ ವರ್ಷವಷ್ಟೇ ನಾವು ವಿಶ್ವ ಪ್ರಾಣಿ ದಿನದ ಶತಮಾನೋತ್ಸವವನ್ನು ಆಚರಿಸಿದ್ದೇವೆ. ಬಹಳಷ್ಟು ಮಂದಿ ‘ಸೇವ್ ದಿ ಆನಿಮಲ್ಸ್’ ಎಂದು ಘೋಷಣೆಗಳನ್ನು ಕೂಗುತ್ತಾ ದೇಶ ವಿದೇಶಗಳ ಬೀದಿಗಳಲ್ಲಿ ಮೆರವಣಿಗೆ ಹೋದದ್ದನ್ನು ನೋಡಿದ್ದೇವೆ. ಒಂದೆರಡು ದಿನಗಳ ಬಳಿಕ ಅದೇ ರಾಗ ಅದೇ ಹಾಡು. ಭೂಮಿಯಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಬದುಕುವ ಹಕ್ಕು ಇದೆ. ನಾವು ಅದನ್ನು ನಗರೀಕರಣದ ನೆಪದಲ್ಲಿ ಅವುಗಳಿಂದ ಕಸಿಯುತ್ತಿದ್ದೇವೆ. ಅವುಗಳು ಈ ಬಗ್ಗೆ ತಕರಾರು ಎತ್ತುವುದಿಲ್ಲ. ಪಾಪ ! ಮೂಕ ಪ್ರಾಣಿಗಳಲ್ಲವಾ? ಆದರೆ ನಗರಕ್ಕೆ ಬಂದು ನಮ್ಮ ಮೇಲೆ ಹಾರಿದಾಗ ಮಾತ್ರ ನಮಗೆ ಕಾಡು ಇಲ್ಲ, ಆಹಾರ ಇಲ್ಲ, ಪಾಪದ ಪ್ರಾಣಿಗಳು ಏನು ಮಾಡಬೇಕು? ಅವುಗಳನ್ನು ಕೊಂದೇ ಬಿಡುವ ಎಂದು ಬಹಳಷ್ಟು ಮಂದಿಗೆ ಅನಿಸಿರಲೂ ಬಹುದು. ಸಮತೋಲಿತ ಪ್ರಕೃತಿಗೆ ಮನುಷ್ಯರು ಎಷ್ಟು ಅಗತ್ಯವೋ ಎಲ್ಲಾ ಪ್ರಾಣಿ ಪಕ್ಷಿಗಳು, ಜೀವ ಜಂತುಗಳು ಅತ್ಯಗತ್ಯ. ಈ ಸಮತೋಲನ ಒಂದೆಡೆ ತಪ್ಪಿದರೂ ಸಮಸ್ಯೆ ಗಂಭೀರವಾಗುತ್ತದೆ.
ವಿಶ್ವ ಪ್ರಾಣಿ ದಿನದ ಆರಂಭ ಮತ್ತು ಇತಿಹಾಸ
ಈ ವಿಶಿಷ್ಟ ದಿನದ ಆಚರಣೆಯ ಹಿಂದೆ ಹೆನ್ರಿಕ್ ಜಿಮ್ಮರ್ಮನ್ (Heinrich Zimmermann) ಎಂಬ ಜರ್ಮನ್ ಪ್ರಾಣಿಪ್ರಿಯ ಹಾಗೂ ಬರಹಗಾರನ ಅಪಾರ ಪರಿಶ್ರಮ ಮತ್ತು ದೂರದೃಷ್ಟಿಯಿದೆ. ವಿಶ್ವ ಪ್ರಾಣಿ ದಿನವನ್ನು ಮೊದಲ ಬಾರಿಗೆ ೧೯೨೫ ಮಾರ್ಚ್ ೪ ರಂದು ಜರ್ಮನಿಯ ಬರ್ಲಿನ್ನಲ್ಲಿರುವ 'ಸ್ಪೋರ್ಟ್ ಪ್ಯಾಲೇಸ್'ನಲ್ಲಿ ಆಚರಿಸಲಾಯಿತು. ವಾಸ್ತವವಾಗಿ, ಈ ದಿನವನ್ನು ಅಕ್ಟೋಬರ್ ೪ ರಂದೇ ನಡೆಸಲು ಯೋಜಿಸಲಾಗಿತ್ತು. ಆದರೆ ಆ ಸಮಯದಲ್ಲಿ ಆ ದಿನದಂದು ಸಭಾಂಗಣ ಲಭ್ಯವಿಲ್ಲದ ಕಾರಣ ಮಾರ್ಚ್ ೪ ರಂದು ನಡೆಸಬೇಕಾಯಿತು. ಮೊದಲ ಕಾರ್ಯಕ್ರಮಕ್ಕೇ ೫೦೦೦ಕ್ಕೂ ಹೆಚ್ಚು ಪ್ರಾಣಿಪ್ರಿಯರು ಆಗಮಿಸಿ ಬೆಂಬಲ ಸೂಚಿಸಿದರು.
ಜಿಮ್ಮರ್ಮನ್ ಅವರ ನಿರಂತರ ಪ್ರಯತ್ನದ ಫಲವಾಗಿ, ೧೯೨೯ ರಿಂದ ಈ ದಿನಾಚರಣೆಯನ್ನು ಅಧಿಕೃತವಾಗಿ ಅಕ್ಟೋಬರ್ ೪ ರಂದೇ ಆಚರಿಸಿಕೊಂಡು ಬರಲಾಗುತ್ತಿದೆ. ೧೯೩೧ ರಲ್ಲಿ ಇಟಲಿಯ ಫ್ಲಾರೆನ್ಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಕಾಂಗ್ರೆಸ್ ಸಮ್ಮೇಳನದಲ್ಲಿ, ಜಿಮ್ಮರ್ಮನ್ ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ವಸಮ್ಮತಿಯಿಂದ ಅಂಗೀಕರಿಸಲಾಯಿತು. ಅಂದಿನಿಂದ ಅಕ್ಟೋಬರ್ ೪ ಅನ್ನು ವಿಶ್ವ ಪ್ರಾಣಿ ದಿನವನ್ನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಲಾಯಿತು.
ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ೪ ರಂದೇ ಆಚರಿಸಲು ಮುಖ್ಯ ಕಾರಣ ಕ್ರೈಸ್ತ ಸಂತ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ (Saint Francis of Assisi). ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರು ಪ್ರಕೃತಿ, ಪಶು-ಪಕ್ಷಿಗಳು ಹಾಗೂ ಪ್ರತಿಯೊಂದು ಜೀವಿಯ ಬಗ್ಗೆಯೂ ಅತೀವ ಪ್ರೀತಿ, ಕರುಣೆ ಮತ್ತು ಕಾಳಜಿಯನ್ನು ಹೊಂದಿದ್ದರು. ಅವರು ಪ್ರಾಣಿಗಳನ್ನು 'ನಮ್ಮ ಸಹೋದರ-ಸಹೋದರಿಯರು' ಎಂದೇ ಭಾವಿಸುತ್ತಿದ್ದರು. ಅವರ ಜ್ಞಾಪಕಾರ್ಥವಾಗಿ ಮತ್ತು ಪ್ರಾಣಿಗಳ ಮೇಲಿನ ಅವರ ಪ್ರೀತಿಯನ್ನು ಗೌರವಿಸುವ ಉದ್ದೇಶದಿಂದ ಅವರ ಪುಣ್ಯತಿಥಿಯಾದ ಅಕ್ಟೋಬರ್ ೪ ಅನ್ನು ವಿಶ್ವ ಪ್ರಾಣಿ ದಿನವನ್ನಾಗಿ ಆಯ್ಕೆ ಮಾಡಲಾಯಿತು.
ಪ್ರಾರಂಭದಲ್ಲಿ ಜರ್ಮನಿ, ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್ ಮತ್ತು ಝೆಕೋಸ್ಲೊವಾಕಿಯಾಗಳಲ್ಲಿ ಮಾತ್ರ ಸೀಮಿತವಾಗಿದ್ದ ಈ ಆಚರಣೆ, ಇಂದು ಪ್ರಪಂಚದ ೯೦ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿ ನಡೆದುಕೊಂಡು ಬರುತ್ತಿದೆ. ಭಾರತದಲ್ಲೂ ಆಚರಣೆ: ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಈ ದಿನದಂದು ಪ್ರಾಣಿ ಕಲ್ಯಾಣ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಇದರ ಪ್ರಮುಖ ಉದ್ದೇಶಗಳೆಂದರೆ,
* ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯುವುದು.
* ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಹಾಗೂ ಪಕ್ಷಿ ಪ್ರಭೇದಗಳ ಸಂರಕ್ಷಣೆ.
* ಜೀವವೈವಿಧ್ಯದ (Biodiversity) ಸಮತೋಲನ ಕಾಯ್ದುಕೊಳ್ಳುವುದು.
* ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯನ್ನು ವೃದ್ಧಿಸುವುದು.
ಕರ್ನಾಟಕದಲ್ಲಿ ಹಲವಾರು ಬಗೆಯ ಪ್ರಾಣಿ ಸಂಕುಲಗಳಿವೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಪರೂಪದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಾಣಿಗಳಿವೆ. ಹುಲಿಗಳ ಸಂತತಿ ಪ್ರತೀ ವರ್ಷ ಕರ್ನಾಟಕದಲ್ಲಿ ಹೆಚ್ಚುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಕರ್ನಾಟಕವೊಂದರಲ್ಲೇ ಸುಮಾರು ೫೨೦ಕ್ಕೂ ಅಧಿಕ ಹುಲಿಗಳಿವೆ. ನಿಮಗೆ ಗೊತ್ತೇ? ಭಾರತದಲ್ಲೇ ಅತೀ ಹೆಚ್ಚು ಹುಲಿಗಳಿರುವುದು ಕರ್ನಾಟಕ ರಾಜ್ಯದಲ್ಲೇ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ. ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯ ಚಿರತೆಗಳು ಇವೆ. ಐದು ನೂರಕ್ಕೂ ಅಧಿಕ ಪಕ್ಷಿ ಪ್ರಬೇದಗಳಿವೆ. ಕರ್ನಾಟಕದಲ್ಲಿ ಇರುವಷ್ಟು ಅಭಯಾರಣ್ಯಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ನಾಗರಹೊಳೆ, ಬಂಡೀಪುರ, ಭದ್ರಾ, ಬನ್ನೇರುಘಟ್ಟ, ಸಕ್ರೇಬೈಲ್, ದಾಂಡೇಲಿ, ರಾಣಿಬೆನ್ನೂರು ಹೀಗೆ ಹಲವಾರು ವನ್ಯ ಸಂರಕ್ಷಣಾ ತಾಣಗಳು ಕರ್ನಾಟಕದಲ್ಲಿವೆ.
ಪ್ರಾಣಿಗಳು ಈ ಭೂಮಿಯ ಆಸ್ತಿ ಮತ್ತು ಜೀವವೈವಿಧ್ಯದ ಪ್ರಮುಖ ಅಂಗ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಸ್ವತಂತ್ರವಾಗಿ ಬಾಳುವ ಹಕ್ಕಿದೆ. ವಿಶ್ವ ಪ್ರಾಣಿ ದಿನವು ಕೇವಲ ಒಂದು ದಿನದ ಆಚರಣೆಯಾಗದೆ, ನಮ್ಮ ಸುತ್ತಲಿನ ಮೂಕ ಜೀವಿಗಳ ಪ್ರಾಣ ರಕ್ಷಣೆ, ದಯೆ ಮತ್ತು ಪ್ರೀತಿಯನ್ನು ನಿರಂತರವಾಗಿ ತೋರಲು ನಮಗೆ ನೆನಪು ಮಾಡಿಕೊಡುವ ದಿವ್ಯ ಸಂಕೇತವಾಗಲಿ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!