ಈಗ ಮಳೆಗಾಲವಾದರೂ ಬಿಸಿಲು ಚುರುಗುಟ್ಟುತ್ತಿದೆ. ಬೇಸಿಗೆ ಕಾಲದ ಬಿಸಿಲಿಗಿಂತಲೂ ತೀಕ್ಷ್ಣವಾದ ಬಿಸಿಲು, ಅದರ ಜೊತೆಗೆ ಸೆಖೆಯಿಂದ ಕರ್ನಾಟಕ ರಾಜ್ಯದಾದ್ಯಂತ ಜನರು ಬವಣೆ ಪಡುತ್ತಿದ್ದಾರೆ. ನೆಟ್ಟ ಬೆಳೆ ಕಟಾವಿಗೆ ಬರುತ್ತಿಲ್ಲ. ನೀರಿನ ಕೊರತೆಯಿಂದ ಹಾಳಾಗಿ ಹೋಗುತ್ತಿದೆ. ಬರ ಪೀಡಿತ ಪ್ರದೇಶ ಎಂದು ಘೋಷಣೆಗಾಗಿ ಹಲವಾರು ಜಿಲ್ಲೆಗಳು ಕಾಯುತ್ತಿವೆ. ಈ ವರ್ಷ ಮೊದಲಬಾರಿಗೆ ಎಂಬಂತೆ ಕರಾವಳಿ ಕರ್ನಾಟಕದ ಜಿಲ್ಲೆಗಳೂ ಬರ ಪೀಡಿತ ಪ್ರದೇಶವಾಗಲು ದಿನಗಣನೆ ಮಾಡುತ್ತಿದೆ. ಹಿಂದಿನ ಇಷ್ಟು ವರ್ಷಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ತಕ್ಕ ಮಟ್ಟಿನ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಹವಾಮಾನ ಕೈಕೊಟ್ಟಿದೆ. 

ಈ ಹವಾಮಾನ ಕೈಕೊಟ್ಟಿರುವುದರಿಂದ ಎಸಿ ಕಂಪೆನಿಯವರಿಗೆ ಸಖತ್ ಲಾಭವಾಗಿದೆ. ಬಿಡಿ ಭಾಗಗಳ ಬೆಲೆ ಅಧಿಕವಾದ ಕಾರಣ ಮುಂದಿನ ತಿಂಗಳಿಂದ ಹವಾನಿಯಂತ್ರಕದ (ಎಸಿ) ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವ ಲೆಕ್ಕಾಚಾರ ಆಗುತ್ತಿದೆ. ನೀವು ಈ ಬಿಸಿಲಿಗೆ ಮನೆಯಿಂದ ಹೊರಗೆ ಹೋಗಿ ಸ್ವಲ್ಪ ಸಮಯದ ನಂತರ ಹಿಂದೆ ಬಂದು ತಕ್ಷಣದ ಮನೆಯ ಎಸಿಯನ್ನು ಚಲಾಯಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಿದೆ ಒಂದು ಸಂಶೋಧನೆ. ಬನ್ನಿ, ಅದರ ಬಗ್ಗೆ ತಿಳಿದುಕೊಳ್ಳೋಣ.

ಈ ಬಿಸಿಲಿನಲ್ಲಿ ಮಧ್ಯಾಹ್ನ ವೇಳೆ ಹೊರಗೆ ಓಡಾಡುವುದೇ ಕಷ್ಟಕರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ತಂಪು ಪಾನೀಯಗಳು, ಜ್ಯೂಸ್ ಹಾಗೂ ಎಳನೀರಿನ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಹೊರಗಿನಿಂದ ಮನೆಗೆ ಬಂದ ತಕ್ಷಣ ಸೆಖೆ ತಾಳಲಾರದೇ ಹಲವರು ಫ್ಯಾನ್, ಕೂಲರ್ ಅಥವಾ ಎಸಿ ಆನ್ ಮಾಡಿ ಅದರ ಎದುರು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಬಿಸಿಲಿನಿಂದ ಬಂದ ಕೂಡಲೇ ಎಸಿ ಮುಂದೆ ಕುಳಿತುಕೊಳ್ಳುವುದು ದೇಹಕ್ಕೆ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಮಾನವ ದೇಹ ತನ್ನ ತಾಪಮಾನವನ್ನು ಸಮತೋಲನದಲ್ಲಿಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಈ ವೇಳೆ ದೇಹದಿಂದ ಬೆವರು ಹೊರಬಂದು ದೇಹವನ್ನು ತಂಪಾಗಿಡುವ ಪ್ರಯತ್ನ ಮಾಡುತ್ತದೆ. ಆದರೆ ಇಂತಹ ಸಮಯದಲ್ಲಿ ಹಠಾತ್ ತಣ್ಣನೆಯ ಎಸಿಗೆ ಮೈ ಒಡ್ಡುವುದರಿಂದ ದೇಹದ ತಾಪಮಾನದಲ್ಲಿ ಏಕಾಏಕಿ ಬದಲಾವಣೆ ಉಂಟಾಗುತ್ತದೆ. ಇದು ದೇಹದ ಸಹಜ ಪ್ರಕ್ರಿಯೆಗೆ ಅಡ್ಡಿಪಡಿಸಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ವಿಶೇಷವಾಗಿ ಬಿಸಿಲಿನಿಂದ ಬಂದ ತಕ್ಷಣ ಎಸಿ ಮುಂದೆ ಕುಳಿತುಕೊಳ್ಳುವುದರಿಂದ ಶೀತ, ತಲೆನೋವು, ಗಂಟಲು ನೋವು ಹಾಗೂ ದೇಹದ ದಣಿವು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರಲ್ಲಿ ಸ್ನಾಯು ನೋವು ಹಾಗೂ ಜ್ವರದಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ದೇಹ ಹೆಚ್ಚು ಬಿಸಿಯಾಗಿರುವ ಸಂದರ್ಭದಲ್ಲಿ ತಣ್ಣನೆಯ ಗಾಳಿ ತಾಗುವುದರಿಂದ ರಕ್ತನಾಳಗಳಲ್ಲಿ ಹಠಾತ್ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಸ್ತಮಾ, ಅಲರ್ಜಿ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಎಸಿ ಗಾಳಿಗೆ ಹಠಾತ್ ಒಳಗಾದರೆ ಉಸಿರಾಟದ ತೊಂದರೆ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ರಾತ್ರಿಯಿಡೀ ಎಸಿ ಬಳಕೆ ಮಾಡುವವರಲ್ಲಿ ಒಣ ಕಣ್ಣು, ಒಣ ಮೂಗು ಹಾಗೂ ಗಂಟಲು ಒಣಗುವ (Dryness) ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಆರೋಗ್ಯ ತಜ್ಞರ ಸಲಹೆಯಂತೆ, ಹೊರಗಿನಿಂದ ಮನೆಗೆ ಬಂದ ತಕ್ಷಣ ನೇರವಾಗಿ ಎಸಿ ಕೋಣೆಗೆ ಹೋಗುವುದನ್ನು ತಪ್ಪಿಸಬೇಕು. ಮೊದಲು ಸಾಮಾನ್ಯ ತಾಪಮಾನ ಇರುವ ಸ್ಥಳದಲ್ಲಿ ೧೦ ರಿಂದ ೧೫ ನಿಮಿಷ ವಿಶ್ರಾಂತಿ ಪಡೆಯುವುದು ಉತ್ತಮ. ಮುಖ, ಕೈ ಹಾಗೂ ಕಾಲುಗಳನ್ನು ತಣ್ಣೀರು ಬಳಸಿ ತೊಳೆಯುವುದರಿಂದ ದೇಹದ ಉಷ್ಣಾಂಶ ಸ್ವಲ್ಪ ಮಟ್ಟಿಗೆ  ಕಡಿಮೆಯಾಗುತ್ತದೆ. ದೇಹದ ಬೆವರು ಕಡಿಮೆಯಾದ ನಂತರವೇ ಎಸಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಎಂದು ಹೇಳಲಾಗಿದೆ. ಎಸಿ ಬಳಸುವಾಗಲೂ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಎಸಿಯ ತಾಪಮಾನವನ್ನು ಅತಿಯಾಗಿ ಕಡಿಮೆ ಮಾಡದೇ ೨೪ ರಿಂದ ೨೬ ಡಿಗ್ರಿ ಸೆಲ್ಸಿಯಸ್ ನಡುವೆಯೇ ಇಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದರಿಂದ ದೇಹಕ್ಕೆ ಅತಿಯಾದ ತಂಪು ತಾಗುವುದಿಲ್ಲ ಹಾಗೂ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಇದರ ಜೊತೆಗೆ ಎಸಿ ಜೊತೆ ಫ್ಯಾನ್ ಬಳಸುವುದರಿಂದ ಕೋಣೆಯೊಳಗೆ ತಂಪು ಗಾಳಿ ಸಮವಾಗಿ ಈ ಹರಡುತ್ತದೆ. ಇದರಿಂದ ಎಸಿಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ವಿದ್ಯುತ್ ಉಳಿತಾಯವೂ ಆಗುತ್ತದೆ. ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿಡುವುದು ಮತ್ತು ಮನೆಯೊಳಗೆ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದಲೂ ಮನೆ ತಂಪಾಗಿರಲು ಸಹಾಯವಾಗುತ್ತದೆ. ಬೇಸಿಗೆಯಲ್ಲಿ ಎಸಿ ಬಳಕೆ ಹಲವಾರು ಬಾರಿ ಅನಿವಾರ್ಯವಾದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಬಹಳ ಮುಖ್ಯವಾಗಿದೆ. ಬಿಸಿಲಿನಿಂದ ಬಂದ ತಕ್ಷಣ ಎಸಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆದ ನಂತರವೇ ಎಸಿ ಬಳಸುವುದು ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ