ಜೀತ ಪದ್ಧತಿ ನಿಷೇಧಗೊಂಡು ಐದು ದಶಕಗಳೇ ಕಳೆದಿದ್ದರೂ, ರಾಜ್ಯದಲ್ಲಿ ಈ ಸಾಮಾಜಿಕ ಪಿಡುಗು ಇನ್ನೂ ಜೀವಂತವಿರುವುದು ಕಳವಳಕಾರಿ ಸಂಗತಿ ಕಲ್ಲು ಗಣಿಗಾರಿಕೆ, ಇಟ್ಟಿಗೆ ಬಟ್ಟಿ ಕೃಷಿ ಹಾಗೂ ಹೋಟೆಲ್ ಉದ್ಯಮಗಳಂಥ ಕ್ಷೇತ್ರಗಳಲ್ಲಿ ಜೀತದಾಳುಗಳ ಶೋಷಣೆ ಅವ್ಯಾಹತವಾಗಿ ಮುಂದುವರಿದಿದೆ. ವಿಜಯನಗರ ಜಿಲ್ಲೆಯ ನಂದಿಬಂಡಿ ಗ್ರಾಮದಲ್ಲಿ ಒಡಿಶಾ ಮೂಲದ ೩೭ ಕಾರ್ಮಿಕರನ್ನು ಜೀತಕ್ಕಿಟ್ಟುಕೊಂಡಿದ್ದ ಘಟನೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿತ್ತು. ಸ್ವಯಂ ಸಂಸ್ಥೆಯ ದೂರಿನ ಮೇರೆಗೆ ನಡೆದ ದಾಳಿಯಲ್ಲಿ ೧೦ ಮಕ್ಕಳು ಹಾಗೂ ೧೧ ಮಹಿಳೆಯರನ್ನು ರಕ್ಷಿಸಲಾಗಿತ್ತು. ಇವರನ್ನು ಜೀತದಿಂದ ವಿಮುಕ್ತಿಗೊಳಿಸಿ ತವರೂರಿಗೆ ಕಳುಹಿಸಲಾಗಿತ್ತು. ಈ ಘಟನೆ ಹಸಿಯಾಗಿರುವಾಗಲೇ ಎರಡು ದಿನಗಳ ಹಿಂದೆ ತುಮಕೂರು ಜಿಲ್ಲೆಯಲ್ಲೂ ೯ ಜನ ಕಾರ್ಮಿಕರನ್ನು ರಕ್ಷಿಸಲಾಗಿದೆ. ಕಾಲು ಚಾಚಲೂ ಆಗದ ಪುಟ್ಟ ಶೆಡ್ ಗಳು, ಮೂಲಸೌಕರ್ಯಗಳ ಕೊರತೆ, ಅರೆಬರೆ ಊಟ ಹಾಗೂ ನರಳಾಟದ ಬದುಕು ಈ ನತದೃಷ್ಟರ ನೈಜ ಸ್ಥಿತಿಯನ್ನು ಹೇಳುತ್ತಿವೆ. ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಹೆಚ್ಚಿನ ಕೂಲಿಯ ಆಮಿಷವೊಡ್ಡಿ ಕರೆತರುವ ವಂಚಕರು, ಕಾರ್ಮಿಕರನ್ನು ನರಕಯಾತನೆಗೆ ಗುರಿಮಾಡಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಕಾರ್ಮಿಕರಾದರೆ ವಿಷಯ ಹೊರಬೀಳುತ್ತದೆ ಎಂಬ ಭೀತಿಯಿಂದ ಹೊರರಾಜ್ಯದವರನ್ನು ಗುರಿಯಾಗಿಸಲಾಗುತ್ತಿದ್ದು, ಕೊಪ್ಪಳ, ಬಾಗಲಕೋಟೆ, ಮೈಸೂರು, ಬೆಂಗಳೂರು ಹಾಗೂ ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು ಆಗಾಗ್ಗೆ ಪತ್ತೆಯಾಗುತ್ತಿರುವುದು ಜೀತ ಪದ್ಧತಿಯ ಕರಾಳ ಮುಖವನ್ನು ಅನಾವರಣಗೊಳಿಸುತ್ತಿವೆ.

ಸರಕಾರವು ೧೯೭೬ರಲ್ಲೇ ಜೀತ ಪದ್ಧತಿ ನಿರ್ಮೂಲನಾ ಕಾಯಿದೆಯನ್ನು ಜಾರಿಗೊಳಿಸಿದ್ದರೂ, ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಮಾತ್ರ ಅತ್ಯಂತ ವಿರಳವಾಗಿದೆ. ಮಾನವೀಯತೆಗೆ ಕಳಂಕಪ್ರಾಯವಾಗಿರುವ ಈ ಪಿಡುಗನ್ನು ಸಂಪೂರ್ಣವಾಗಿ ಮಟ್ಟಹಾಕಲು ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ ಅನಿವಾರ್ಯವಾಗಿದೆ. ಅಧಿಕಾರಿಗಳು ದೋಷರಹಿತ ದಾಖಲೆಗಳನ್ನು ಸಿದ್ಧಪಡಿಸಿ, ತ್ವರಿತ ವಿಚಾರಣೆ ನಡೆಸಿ ತಪ್ಪಿತಸ್ಥ ಮಾಲೀಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕ್ವಾರಿ, ಇಟ್ಟಿಗೆ ಬಟ್ಟಿ ಹಾಗೂ ಹೋಟೆಲ್‌ಗಳಂಥ ಶಂಕಿತ ಪ್ರದೇಶಗಳಲ್ಲಿ ನಿರಂತರ ತಪಾಸಣೆ ಕೈಗೊಂಡು ವಲಸೆ ಕಾರ್ಮಿಕರ ಮೇಲೆ ನಿಗಾ ವಹಿಸುವುದರೊಂದಿಗೆ ಅವರ ನೋಂದಣಿಯನ್ನು ಕಡ್ಡಾಯಗೊಳಿಸಬೇಕು. ಹೊರಗಿನ ಪ್ರಪಂಚ ತಿಳಿಯದಂತೆ ಕಾರ್ಮಿಕರ ಮೇಲೆ ಸೆಕ್ಯೂರಿಟಿಗಳನ್ನು ಕಾವಲಿಡುವ ಅಮಾನವೀಯ ಪ್ರವೃತ್ತಿ ಕೊನೆಗೊಳ್ಳಬೇಕು. ಬಹುತೇಕ ಕಡೆ ವಲಸೆ ಕಾರ್ಮಿಕರೇ ಜೀತದ ಕುಣಿಕೆಗೆ ಸಿಲುಕುತ್ತಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಜೀತ ಪದ್ಧತಿಯ ಅನಿಷ್ಠಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಕೇವಲ ಕಠಿಣ ಕಾನೂನುಗಳನ್ನು ನಂಬಿ ಕುಳಿತರೆ ಸಾಲದು; 'ನಾನು ಅತ್ತಂತೆ ಮಾಡುವೆ, ನೀನು ಸತ್ತಂತೆ ಮಾಡು' ಎನ್ನುವ ಕಣ್ಣಾಮುಚ್ಚಾಲೆ ಆಟ ಮುಂದುವರಿದರೆ ಬಡವರಿಗೆ ನ್ಯಾಯವೆಂಬುದು ಮರೀಚಿಕೆಯಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್, ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ನಿರಂತರ ಮೇಲ್ವಿಚಾರಣೆ ಹಾಗೂ ಜವಾಬ್ದಾರಿಯುತ ಹೆಜ್ಜೆಗಳಿಂದ ಮಾತ್ರ ಜೀತ ಪದ್ಧತಿಯನ್ನು ಬುಡಸಹಿತ ಕಿತ್ತೆಸೆಯಲು ಮತ್ತು ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನ್ಯಾಯ ಒದಗಿಸಲು ಸಾಧ್ಯ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೩-೦೭-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ