ಮುಸುಕಿನ ಜೋಳವನ್ನು ಮಾತ್ರ ನೋಡಿ ಗೊತ್ತಿದ್ದ ಜನರು ಈಗ ಬೇಬಿ ಕಾರ್ನ್ ಎನ್ನುವ ಜೋಳದ ವಿಧಕ್ಕೆ ಮಾರುಹೋಗಿದ್ದಾರೆ. ಬೇಬಿ ಕಾರ್ನ್ ಸೂಪ್, ಮಂಚೂರಿ, ಫ್ರೈ ಹೀಗೆ ಹತ್ತು ಹಲವಾರು ಖಾದ್ಯಗಳನ್ನು ಮಾಡಿ ಬಾಯಿ ಚಪ್ಪರಿಸುವಂತೆ ತಿನ್ನುತ್ತಿದ್ದಾರೆ. ಗೋವಿನ ಜೋಳದ ಎಳೆಯ ತೆನೆಯನ್ನು ಬೇಬಿ ಕಾರ್ನ್ ಎನ್ನುತ್ತಾರೆ. ಗೋವಿನ ಜೋಳ ಬೆಳೆದ ಮೇಲೆ ಅದನ್ನು ಪಶು ಆಹಾರವಾಗಿ ಬಳಕೆ ಮಾಡುತ್ತಾರೆ. ಇದು ಅತ್ಯಂತ ಪೌಷ್ಟಿಕ ಆಹಾರ. ಅದರ ಸಸ್ಯವನ್ನು ಮೇವಾಗಿಯೂ ಬಳಕೆ ಮಾಡುತ್ತಾರೆ. ತೆನೆ ಬಲಿಯುತ್ತಿರುವಾಗಿ ಸಸ್ಯಸಮೇತವಾಗಿ ಪಶುಗಳಿಗೆ ಹಸುರಾದ ಇದೇ ಜೋಳದ ತೀರಾ ಎಳೆಯ ತೆನೆಯನ್ನು ಮತ್ತು ಸ್ವಲ್ಪ ಬಲಿತು ಹಾಲು ತುಂಬಿದ ಕಾಳು ರೂಪಕ್ಕೆ ಬಂದ ತೆನೆಯನ್ನು ಮನುಷ್ಯರು ಬೇರೆ ಬೇರೆ ಅಡುಗೆಗಳಲ್ಲಿ ಬಳಕೆ ಮಾಡುತ್ತಾರೆ. ಇದು ಉತ್ತಮ ಪೌಷ್ಟಿಕ ತರಕಾರಿಯಾಗಿದೆ.

ಜೋಳದ ಸಸ್ಯದಲ್ಲಿ ತೆನೆ ಮೂಡಿ ಅದರಲ್ಲಿ ರೇಷ್ಮೆಯಂತಹ ಎಳೆಗಳು ಹೊರ ಬರುವ ಹಂತದಲ್ಲಿ ಅದನ್ನು ಕೊಯಿದಾಗ ಅದಕ್ಕೆ ಬೇಬಿ ಕಾರ್ನ್ ಎಂದು ಹೆಸರು, ಅದರ ಒಳಗೆ ಕಾಳುಗಳು ಅಲ್ಪ ಸ್ವಲ್ಪ ಮಾತ್ರ ಮೂಡಿರುತ್ತವೆ. ಇದನ್ನು ಮಂಚುರಿ ಮಾಡಲು, ಪಕೋಡಾ ಮಾಡಲು ಅದೇ ರೀತಿ ಪಲ್ಯ ಮಾಡಲು ಬಳಕೆ ಮಾಡುತ್ತಾರೆ. ಇದಕ್ಕೆ ಉತ್ತಮ ಬೇಡಿಕೆಯೂ ಇದೆ.

10 (1).jpg

ಸ್ವಲ್ಪ ಬೆಳೆದು ಹಾಲು ತುಂಬಿರಬೇಕು. ಹೂವು ಅರಳಿ ಅದು ಪರಾಗಸ್ಪರ್ಷ ಆದ ೨ ವಾರಗಳ ತರುವಾಯ ಅದನ್ನು ಕಟಾವು ಮಾಡಿದಾಗ ಅದರ ಒಳಗಿನ ಕಾಳುಗಳು ಸ್ವಲ್ಪ ದೊಡ್ಡದಾಗಿ ಕೈಯಲ್ಲಿ ಹಿಚುಕಿದರೆ ಹಚ್ಚಿಕೊಳ್ಳುತ್ತದೆ. ಹಲ್ಲಿನಲ್ಲಿ ಜಗಿಯಲಿಕ್ಕಾಗುತ್ತದೆ. ಈ ಹಂತದ ಜೋಳ ಸಲಾಡ್, ಸ್ವೀಟ್ ಕಾರ್ನ್, ಮಸಾಲೆ ಕಾರ್ನ್ ಮುಂತಾದ ಬಳಕೆಗೆ ಹೊಂದಿಕೆಯಾಗುತ್ತದೆ. ಈಗ ಪೇಟೆ ಪಟ್ಟಣಗಳಲ್ಲಿ ಈ ರೀತಿಯ ಜೋಳದ ಬಳಕೆ ಹೆಚ್ಚಾಗಿದ್ದು ಅದಕ್ಕೆ ಬಹಳಷ್ಟು ಪ್ರಮಾಣದಲ್ಲಿ ಜೋಳದ ಕಾಳು ಬೇಕಾಗುತ್ತದೆ. ಇದನ್ನು ಕ್ಯಾನಿಂಗ್ ಸಹ ಮಾಡುತ್ತಾರೆ. ಪ್ಯಾಕೆಟ್ ಮಾಡಿ ಶೀತಲೀಕರಣದಲ್ಲಿಟ್ಟು ಮಾರಾಟ ಮಾಡುತ್ತಾರೆ. ಸ್ಥಳೀಯ ಉತ್ಪಾದನೆಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಕಾಳು ಮೂಡುತ್ತಿರುವ ಹಂತದಲ್ಲಿ ಕಟಾವು ಮಾಡಿದ ಜೋಳವನ್ನು ಉಪ್ಪು ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿ ತಿನ್ನುವುದು ಈಗ ಸಾಮಾನ್ಯವಾಗಿದೆ. ಇದು ಉತ್ತಮ ಪೌಷ್ಟಿಕ ಆಹಾರವಾಗಿದ್ದು, ಎಳೆಯ ಮಕ್ಕಳಿಂದ ಹಿಡಿದು ಎಲ್ಲಾ ಪ್ರಾಯದವರೂ ಸೇವಿಸಬಹುದು.

ಬರೇ ಕಾಲಿನ ಉದ್ದೇಶಕ್ಕೆ ಜೋಳ ಬೆಳೆಯುವ ಬದಲಿಗೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಈ ಉದ್ದೇಶಕ್ಕೂ ಬೆಳೆಯನ್ನು ಬೆಳೆಸಬಹುದು. ಚಳಿಗಾಲದ ಹಂಗಾಮಿನಲ್ಲಿ ಉದ್ದು, ಹೆಸರು, ತಿಂಗಳ ಹುರುಳಿ, ತರಕಾರಿಗಳನ್ನು ಬೆಳೆಯುವಾಗ ಎಡೆ ಎಡೆಯಲ್ಲಿ ಒಂದೊಂದು ಸಾಲು ಇದನ್ನು ಬೆಳೆಸಿ ಸಮೀಪದ ಪೇಟೆಗಳಿಗೆ ಇದನ್ನು ಮಾರಾಟ ಮಾಡಬಹುದು. ವಿಶೇಷವಾಗಿ ಗೋವಿನ ಜೋಳದ ಬೆಳೆ ಕರಾವಳಿಯಲ್ಲಿ ಕಡಿಮೆ. ಇಲ್ಲಿ ಚಳಿಗಾಲ ಮತ್ತು ಬೇಸಿಗೆಯ ಹಂಗಾಮಿನಲ್ಲಿ ಜೋಳದ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಲವರು ಪಶು ಮೇವಿಗಾಗಿ ಬೆಳೆ ಬೆಳೆಸಲು ಪ್ರಾರಂಭಿಸಿದ್ದಾರೆ. ಉತ್ತಮ ಇಳುವರಿಯನ್ನೂ ಪಡೆದಿದ್ದಾರೆ. ಬಹಳಷ್ಟು ಜನ ಭತ್ತದ ಗದ್ದೆಯಲ್ಲಿ ಹುರುಳಿ, ಅಲಸಂಡೆ, ತರಕಾರಿ ಬೆಳೆಸುವವರಿದ್ದು ಅವರು ಇದನ್ನೂ ಒಂದು ಎಡೆ ಬೆಳೆಯಾಗಿ ಬೆಳೆಸಿದರೆ ತರಕಾರಿಗಳೊಂದಿಗೆ ಇದೂ ಲಾಭದಾಯಕವಾಗಬಲ್ಲುದು. ಇದರ ಸಸ್ಯ ಉಳಿಕೆ ವಸ್ತು ಪಶುಗಳಿಗೆ ಮೇವಾಗಿ ಬಳಕೆ ಮಾಡಬಹುದು.

ಬೇಬಿ ಕಾರ್ನ್ ಅನ್ನು ಶೀತಲೀಕರಣದಲ್ಲಿ ತಿಂಗಳು ಗಟ್ಟಲೆ ದಾಸ್ತಾನು ಇಡಬಹುದು. ಇದರ ಸೂಪ್ ಮಾಡಬಹುದು, ಮಸಾಲೆ ಹಾಕಿ ಉಪ್ಪಿನಕಾಯಿಯಂತೆ ದಾಸ್ತಾನು ಇಡಬಹುದು. ನಿಪ್ಪಟ್ಟು ಮಾಡಬಹುದು. ರೊಟ್ಟಿ, ಉಪ್ಪಿನಕಾಯಿಗಳನ್ನೂ ಮಾಡಬಹುದು. ಇದರ ಬೇರೆ ಬೇರೆ ತಯಾರಿಕೆಗಳನ್ನು ಮಾಡುವ ಗೃಹ ಉದ್ದಿಮೆಗಳು ಇವೆ.

ಬೇಬಿ ಕಾರ್ನ್ ಬೇಸಾಯಕ್ಕೆ ಅಲ್ಪಾವಧಿ ಹೈಬ್ರಿಡ್ ತಳಿಗಳು ಸೂಕ್ತ. ಬಿಳಿ ಜೋಳದ ತಳಿ ಹಾಗೂ ಹಳದಿ ಜೋಳ ಎರಡೂ ಹೊಂದಿಕೆಯಾಗುತ್ತದೆ ಸಾಲು ಮಾಡಿ ಬಿತ್ತನೆ ಮಾಡಿದರೆ ಸಡಿಲ ಮಣ್ಣು ದೊರೆತು ಸಸ್ಯ ಬೆಳವಣಿಗೆ ಉತ್ತಮವಾಗಿರುತ್ತದೆ. ಬೀಜ ಬಿತ್ತಿ ಮೊಳಕೆ ಬಂದು ತೆನೆ ಅಭಿವೃದ್ಧಿಯಾಗುವ ತನಕ ನೀರಿನ ಕೊರತೆ ಆಗದಂತೆ ನೊಡಿಕೊಳ್ಳಬೇಕು. ನೆಡುವಾಗ ಕೊಡುವ ಗೊಬ್ಬರವಲ್ಲದೆ ಮಣ್ಣು ಏರಿಸುವಾಗ ಸ್ವಲ್ಪ ಗೊಬ್ಬರವನ್ನು ಕೊಡಬೇಕು. ಆಗ ಉತ್ತಮ ಗುಣಮಟ್ಟದ ಬೇಬಿ ಕಾರ್ನ್ ಉತ್ಪಾದನೆಯಾಗುತ್ತದೆ. ಗೊಂಡೆ ಬಂದ ನಂತರ ಅದನ್ನು ತೆಗೆದರೆ ಪರಾಗಸ್ಪರ್ಶ ಆಗದೆ ಕಾಳಿನ ಬೆಳವಣಿಗೆ ಆಗದೆ ಉತ್ತಮ ಗುಣಮಟ್ಟದ ಬೇಬಿ ಕಾರ್ನ್ ದೊರೆಯುತ್ತದೆ. ರೇಷ್ಮೆ ಎಳೆಯಂತ ಬೆಳವಣಿಗೆ ಬಂದ ದಿನವೇ ಅಥವಾ ಎರಡನೇ ದಿನಕ್ಕೇ ಅದನ್ನು ತೆಗೆಯಬೇಕು. ಪರಾಗಸ್ಪರ್ಶ ಆದರೆ ಕಾಳು ತಕ್ಷಣ ಬೆಳವಣಿಗೆಯಾಗುತ್ತದೆ. ಕಾರ್ನ್ ಗುಣಮಟ್ಟ ಕಡಿಮೆಯಾಗುತ್ತದೆ. ಕಟಾವು ಮಾಡಿದಂದೇ ಅದನ್ನು ಮಾರಾಟ. ಮಾಡಬೇಕು. ಯಾವಾಗಲೂ ಬೇಬಿ ಕಾರ್ನ್ ಬೆಳೆಸುವಾಗ ಸ್ವಲ್ಪ ಸ್ವಲ್ಪವೇ ಬಿತ್ತನೆ ಮಾಡುತ್ತಿದ್ದರೆ ಒಳ್ಳೆಯದು. ಬೀಜ ಬಿತ್ತಿ ೫೦-೬೦ ದಿನದಲ್ಲಿ ಕಟಾವಿಗೆ ಬರುತ್ತದೆ. ಅದಕ್ಕನುಗುಣವಾಗಿ ಬಿತ್ತನೆ ಮಾಡಬೇಕು.

ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ