ನಮ್ಮ ದೇಶ ಸಂಸ್ಕೃತಿಯ, ಸಂಸ್ಕಾರದ ಆಡೊಂಬಲ. ಸಾಲು ಸಾಲು ಹಬ್ಬಗಳ ಆಚರಣೆಯ ಆರಂಭವಿನ್ನು. ಹಬ್ಬಗಳು, ವ್ರತಗಳು ಆಡಂಬರಕ್ಕೆ ಮೀಸಲಲ್ಲ. ಶ್ರದ್ಧಾಭಕ್ತಿ ಮುಖ್ಯ. ಮುಂದಿನ ಪೀಳಿಗೆಗೆ ಆಚರಣೆಗಳ ವರ್ಗಾವಣೆಯೂ ಈ ಮೂಲಕ ಆಗಲಿದೆ.
ಆಷಾಢ ಮಾಸದ ಮೊದಲ ಅಮಾವಾಸ್ಯೆಯಂದು ವಿವಾಹಿತ ಮಹಿಳೆಯರು, ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಕೈಗೊಳ್ಳುವ ವ್ರತವೇ 'ಜ್ಯೋತಿರ್ಭೀಮೇಶ್ವರ ವ್ರತ. ಈ ವ್ರತಕ್ಕೆ ಕೆಲವೊಂದು ಪ್ರಾಂತ್ಯದಲ್ಲಿ ಬೇರೆ ಬೇರೆ ಹೆಸರಿದೆ. ಪತಿಸಂಜೀವಿನಿ ಪೂಜೆ, ಭಂಡಾರದ ಪೂಜೆ, ಪತಿಯ ಆಯುಷ್ಯ ಪೂಜೆ, ಜ್ಯೋತಿಸ್ತಂಭ ಗೌರೀ ಪೂಜೆ ಇತ್ಯಾದಿ. ದಕ್ಷಿಣಕನ್ನಡದಲ್ಲಿ(ತುಳುನಾಡಿನಲ್ಲಿ) ಆಟಿ ಅಮಾವಾಸ್ಯೆ ಹೇಳುತ್ತಾರೆ. ಈ ದಿನ ಮುಂಜಾವದಲಿ ರೋಗನಿರೋಧಕ ಶಕ್ತಿಯ, ದೈವಿಕ ಶಕ್ತಿಯ ಹಾಲೆಮರದ (ಸಪ್ತಪರ್ಣಿ ಮರ) ಕೆತ್ತೆಯ ಕಷಾಯ ಕುಡಿಯುವ ಸಂಪ್ರದಾಯವಿದೆ.
ಪತಿಯ ಪಾದಪೂಜೆಯೆಂಬ ಪ್ರತೀತಿ ಇದೆ. ಕೆಲವೆಡೆ ಅವಿವಾಹಿತ ಮಹಿಳೆಯರೂ ಸಹ ಈ ವ್ರತವನ್ನು ಮಾಡುವರೆಂಬ ಉಲ್ಲೇಖವಿದೆ. ಆಷಾಢ ಮಾಸದ ಮೊದಲ ಅಮಾವಾಸ್ಯೆಯಂದು ಪತಿಯ ಆಯುಷ್ಯ, ಆರೋಗ್ಯ, ಮಾನಸಿಕ ನೆಮ್ಮದಿ, ಸಂತಾನಪ್ರಾಪ್ತಿಗಾಗಿ ಈ ವ್ರತವನ್ನು ಮಾಡುವರು. ಆಷಾಢದಲ್ಲಿ ತವರಿಗೆ ಹೋದ ಹೆಣ್ಣು ಮಕ್ಕಳು ಪುನ: ಪತಿಯ ಮನೆಗೆ ಹಿಂದಿರುಗುವ ದಿನ.
ಪತಿಯ ಪಾದಪೂಜೆಯೊಂದಿಗೆ ಶಿವ ಪಾರ್ವತಿಯರ ಪೂಜೆಯನ್ನೂ ಮಾಡುವರು. ಶಿವ ಪಾರ್ವತಿಯರ ಮಣ್ಣಿನ ಮೂರುತಿ ಅಥವಾ ಭಾವಚಿತ್ರವನ್ನಿಟ್ಟು, ಧೂಪ ದೀಪ, ಹಣ್ಣುನೈವೇದ್ಯ, ಹೂವಿನರ್ಚನೆಯೊಂದಿಗೆ, ಶಿವ ಅಷ್ಟೋತ್ತರ, ಲಲಿತಾ ಸಹಸ್ರನಾಮ ಪಠಣ, ಗೌರೀ ಅಷ್ಟೋತ್ತರ ಸ್ತೋತ್ರ ಹೇಳುವರು. ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸುವರು. ಉಪವಾಸವಿದ್ದು ಚಂದ್ರದರ್ಶನವಾದ ಮೇಲೆ ಆಹಾರ ಸೇವಿಸುವರು.
ಪೌರಾಣಿಕ ಹಿನ್ನೆಲೆಯಂತೆ ಮಹಾಭಾರತದಲ್ಲಿ ಉಲ್ಲೇಖವಾದಂತೆ ಪಾಂಡವರೈವರ ಮಡದಿ ದ್ರೌಪದಿ(ಸೈರಂಧ್ರಿ)ಯನ್ನು ಕಾಮದೃಷ್ಟಿಯಿಂದ ನೋಡಿ ಬಯಸಿದ ಕೀಚಕನನ್ನು ಭೀಮಸೇನನು ವಧಿಸಿದ ದಿನವಿದು. ಹಾಗಾಗಿ ಭೀಮನ ಅಮಾವಾಸ್ಯೆಯೆಂದು ಹೆಸರಾಯಿತು.
ಇನ್ನೊಂದು ಕಥೆಯಂತೆ ಅರಸನೋರ್ವ ತನ್ನ ಮರಣಿಸಿದ ಮಗನ ಶವಕ್ಕೆ ಬ್ರಾಹ್ಮಣ ಕನ್ಯೆಯನ್ನು ವಿವಾಹ ಮಾಡಿಸಿದನಂತೆ. ಶವ ಸಂಸ್ಕಾರಕ್ಕಾಗಿ ನದಿತಟದಲ್ಲಿ ವ್ಯವಸ್ಥೆ ಮಾಡುತ್ತಿರುವಾಗ ಜೋರಾಗಿ ಮಳೆ ಸುರಿಯಲು ಬಂದವರೆಲ್ಲ ಶವವನ್ನು ಬಿಟ್ಟು ಓಡಿದರಂತೆ. ಆ ದಿನ ಅಮಾವಾಸ್ಯೆ, ತನ್ನ ತಾಯಿ ಗಂಡನ ಪಾದಪೂಜೆ ಮಾಡುವುದನ್ನು ನೋಡಿದ ಆ ಹೆಣ್ಣುಮಗಳು ಉಸಿರಿಲ್ಲದ ಪತಿಯ ಪಾದಪೂಜೆ ಮಾಡಿದಳಂತೆ. ಭಕ್ತಿ ಹಾಗೂ ಆಕೆಯ ಶುದ್ಧ ಮನದ ಸರಳತೆಗೆ ಒಲಿದ ಶಿವ ಪಾರ್ವತಿ ವರವಾಗಿ ಪತಿಗೆ ಜೀವದಾನ ಮಾಡಿದರಂತೆ ಎನುವ ದಂತಕಥೆಯಿದೆ. ಪಾರ್ವತಿ-ಪರಮೇಶ್ವರರು ಪ್ರಕೃತಿ ಪುರುಷರು,ಒಂದಾಗಿ ಭಕ್ತರಿಗೆ ಹರಸಿದರೆ ಅದರಿಂದ ದೊಡ್ಡ ಸೌಭಾಗ್ಯ ಬೇರೊಂದಿಲ್ಲ. ಶಿವನ ಕರುಣಾಕಟಾಕ್ಷ, ಒಲುಮೆ ಸಿಗುವುದೆಂಬ ನಂಬಿಕೆ, ಕಷ್ಟಗಳ ಪರಿಹಾರ, ಭಯನಿವಾರಕನಾತ. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸೋಣ. ಏನೇ ಇರಲಿ, ಮನೆಯ ಹೆಣ್ಣುಮಕ್ಕಳು ಒಗ್ಗಟ್ಟಾಗಿ ಆಚರಿಸುವ ಈ ಹಬ್ಬ ಎಲ್ಲರಿಗೂ ಶುಭವನ್ನು ತರಲಿ.
(ಮಾಹಿತಿ ಸಂಗ್ರಹ)
-ರತ್ನಾ ಕೆ ಭಟ್ಟ, ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!