ಕಳೆದ ವರ್ಷ ಕಾಶ್ಮೀರದ ಪಹಲ್ಗಾಮ್ ನಲ್ಲಿ ಧರ್ಮ ಕೇಳಿ ಹಿಂದೂಗಳ ಮಾರಣಹೋಮ ನಡೆಸಲಾಗಿತ್ತು. ಅದರ ಪರಿಣಾಮ ಪಾಕಿಸ್ತಾನದ ಮೇಲೆ ಆಪರೇಶನ್ ಸಿಂದೂರ ಕಾರ್ಯಾಚರಣೆ ನಡೆಸಿದ್ದ ಭಾರತ ಸರಕಾರ ಉಗ್ರರನ್ನು ಹೊಸಕಿ ಹಾಕಿತ್ತು. ಅದೇ ರೀತಿಯಲ್ಲಿ ಧರ್ಮ ಕೇಳಿ ಚಾಕು ಇರಿದ ಘಟನೆ ಮುಂಬೈನಲ್ಲಿ ಮಂಗಳವಾರ ನಡೆದಿದೆ. ಕಲ್ಮಾ ಓದಲು ಬರುತ್ತದಾ ಎಂದು ಕೇಳಿ ಇಬ್ಬರು ಹಿಂದೂಗಳಿಗೆ ಚಾಕು ಇರಿದ ಜೈಬ್ ಜುಬೇರ್ ಅನ್ಸಾರಿಯನ್ನು ಬಂಧಿಸಲಾಗಿದೆ. ಮತದ ಹೆಸರಿನಲ್ಲಿ ಹಿಂಸಾಚಾರ ನಡೆಸುವ, ತನ್ನ ನಂಬಿಕೆಗಳಿಗೆ ವಿರುದ್ಧವಾಗಿರುವ ವ್ಯಕ್ತಿಗಳನ್ನು ಬರ್ಬರವಾಗಿ ಕೊಲ್ಲುವ ಪ್ರವೃತ್ತಿ ಜಿಹಾದಿಗಳಲ್ಲಿ ಜಾಸ್ತಿಯಾಗಿದೆ. ಮತ ದೇವರನ್ನು ಆರಾಧಿಸುವ ಒಂದು ಕ್ರಮವನ್ನು ಹೇಳುತ್ತದೆ ಅಷ್ಟೇ. ಅದೇ ಪರಮ ಸತ್ಯವೆಂದಾಗಲೀ, ಅದನ್ನೇ ಎಲ್ಲರೂ ನಂಬಬೇಕು ಎಂದಾಗಲೀ ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದು ಅಜ್ಞಾನದ ಪರಮಾವಧಿಯಾಗುತ್ತದೆ. ತಮ್ಮ ನಂಬಿಕೆ ಮಾತ್ರ ಸತ್ಯ ಎಂದು ನಿರ್ಧಾರ ಮಾಡಿಕೊಂಡು ಅಮಾಯಕರನ್ನು ಸಾವಿರಾರು ವರ್ಷಗಳಿಂದ ಕೊಲ್ಲುವ ಕಾಯಕ ನಡೆಯುತ್ತಿದೆ. ಇಂತಹ ವಿಚಾರಗಳನ್ನು ಬರೀ ಸರಕಾರವೊಂದೇ ಎದುರಿಸಲು ಸಾಧ್ಯವಿಲ್ಲ. ಜನರೇ ಎಚ್ಚೆತ್ತುಕೊಳ್ಳಬೇಕು. ಜನರೇ ಯೋಚಿಸಬೇಕು. ಜನರಲ್ಲಿ ಕನಿಷ್ಠ ಪಕ್ಷ ಹಿಂಸೆ ಮಾಡುವುದು ತಪ್ಪು ಎಂಬ ಅರಿವು ಸ್ಪಷ್ಟವಾಗಿ ಮೂಡಬೇಕು. ಮತೀಯರೊಳಗೆ ಪ್ರಬಲವಾದ ಮಥನ ನಡೆಯಬೇಕು. ತಮ್ಮ ನಂಬಿಕೆ ಸರಿಯಿರಬಹುದು. ಅದಕ್ಕಾಗಿ ಇತರರನ್ನು ಹಿಂಸೆ ಪಡಿಸುವುದು ತಪ್ಪು ಎಂಬ ತಿಳಿವಳಿಕೆಯನ್ನು ತಮ್ಮೊಳಗೇ ಮೂಡಿಸಿಕೊಳ್ಳಬೇಕು. ಇತರರು ಹೇಳುವುದೆಲ್ಲ ತಪ್ಪು ಎಂಬ ಮನೋಭಾವವನ್ನು ಮೊದಲು ತೊರೆಯಬೇಕು. ಒಂದು ವೇಳೆ ಜಿಹಾದಿಗಳು ಮತ್ತು ಅದನ್ನು ಪಾಲಿಸುವವರು ಚಿಂತನೆ ಮಾಡದೇ ಹೋದರೆ, ಒಂದಲ್ಲ ಒಂದು ದಿನ ಎಲ್ಲರೂ ಅವರ ವಿರುದ್ದ ಸಿಡಿದು ಬೀಳುವುದು ಖಚಿತ. ಆಗ ಇಡೀ ಜಗತ್ತೇ ರಣರಂಗವಾಗಬಹುದು, ರಕ್ತಪಾತವಾಗಬಹುದು. ಇದಕ್ಕೆ ನಾವು ಅವಕಾಶ ಕೊಡಬಾರದು. ಅಂತಹ ಹಿಂಸಾಚಾರಗಳಿಂದ ಇಡೀ ಮನುಕುಲದಲ್ಲಿ ದ್ವೇಷ ಆವರಿಸಿಕೊಳ್ಳುತ್ತದೆ. ಮುಂದೆಂದೂ ಸರಿಪಡಿಸಲಾಗದ ರೀತಿಯಲ್ಲಿ ಹಾನಿಗಳಾಗುತ್ತವೆ. ಪ್ರತಿಬಾರಿ ಯುದ್ಧ ಸಂಭವಿಸಿದಾಗಲೂ ಆಗುವ ಅನಾಹುತಗಳನ್ನು ಸರಿಪಡಿಸಿಕೊಳ್ಳಲು ಹತ್ತಾರು ವರ್ಷಗಟ್ಟಲೆ ಪರದಾಡಬೇಕಾಗುತ್ತದೆ. ಈ ಕಾಲದಲ್ಲೂ ಇಂತಹ ಅವಿವೇಕವನ್ನು ನಾವು ದೂರ ಮಾಡಿಕೊಳ್ಳದೇ ಹೋದರೆ, ಮುಂದೆಂದು ಸರಿ ಮಾಡಿಕೊಳ್ಳಲು ಸಾಧ್ಯ?
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೯-೦೪-೨೦೨೬
ಚಿತ್ರ ಕೃಪೆ: NDTV ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!